ಉಳವಿಯ ನೂರಾರು ಎಕರೆಯಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ

| Published : Mar 02 2024, 01:46 AM IST

ಉಳವಿಯ ನೂರಾರು ಎಕರೆಯಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಜೋಯಿಡಾ ತಾಲೂಕಿನ ಸುಪ್ರಸಿದ್ಧ ಉಳವಿ ಚೆನ್ನಬಸವೇಶ್ವರ ಜಾತ್ರೆ ಮುಗಿದು ವಾರ ಕಳೆದಿದೆ. ಆದರೆ ಈ ವರೆಗೆ ತ್ಯಾಜ್ಯ ತೆರವು ಕಾರ್ಯ ಮುಗಿಯುತ್ತಿಲ್ಲ. ನೂರಾರು ಎಕರೆ ಜಾಗದಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ತುಂಬಿಕೊಂಡಿದೆ.

ಜೋಯಿಡಾ: ತಾಲೂಕಿನ ಸುಪ್ರಸಿದ್ಧ ಉಳವಿ ಚೆನ್ನಬಸವೇಶ್ವರ ಜಾತ್ರೆ ಮುಗಿದು ವಾರವೇ ಸಮೀಪಿಸಿದರೂ ಸ್ವಚ್ಛತೆ ಮರೀಚಿಕೆಯಾಗಿದೆ. ಹತ್ತಾರೂ ಕಿಲೋ ಮೀಟರ್‌ ವರೆಗೂ ಎಲ್ಲಂದರಲ್ಲಿ ಕಾಣಿಸುವ ಪಾಸ್ಟಿಕ್‌ ತ್ಯಾಜ್ಯ, ಕೊಳೆತು ನಾರುತ್ತಿರುವ ಚೆಲ್ಲಿದ ಆಹಾರ, ಚರಂಡಿಯಲ್ಲಿ ಕೊಳಚೆ ತುಂಬಿ ದುರ್ನಾತ ಬೀರುತ್ತಿದೆ. ಇದರಿಂದ ಈ ಭಾಗದಲ್ಲಿರುವ ಶಾಲೆಗಳಿಗೂ ಬೀಗ್‌ ಹಾಕಲಾಗಿದೆ.

ಲಕ್ಷಾಂತರ ಜನರು: ಪ್ರತಿ ವರ್ಷದಂತೆ ಈ ವರ್ಷವೂ ಚಕ್ಕಡಿಗಳಲ್ಲಿ ಬಂದ ಭಕ್ತರು ವಾರಗಳ ಕಾಲ ದೇವಾಲಯದ ಪ್ರಾಂಗಣದಲ್ಲೇ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಬೀಡು ಬಿಟ್ಟಿದ್ದರು. 1400ಕ್ಕೂ ಹೆಚ್ಚು ಚಕ್ಕಡಿ ಆಗಮಿಸಿದ್ದು 2800ಕ್ಕೂ ಹೆಚ್ಚು ಎತ್ತುಗಳ ಆಗಮಿಸಿದ್ದವು. ಇದರೊಂದಿಗೆ ಲಕ್ಷಾಂತರ ಭಕ್ತರು ಶ್ರೀಕ್ಷೇತ್ರಕ್ಕೆ ಆಗಮಿಸಿದ್ದರು. ಜಾತ್ರೆ ಆರಂಭದಲ್ಲಿ ಜಿಲ್ಲಾ ಪಂಚಾಯಿತಿ ಈ ಬಾರಿ ಪ್ಲಾಸ್ಟಿಕ್‌ ಮುಕ್ತ ಜಾತ್ರೆ ನಡೆಸಲಾಗುವುದು ಎಂದು ಹೇಳಿಕೆ ನೀಡಿತೆ ವಿನಃ ಅದನ್ನು ಆಚರಣೆಗೆ ತರಲಿಲ್ಲ. ಹೀಗಾಗಿ ಹಲವಾರು ಟನ್‌ಗಟ್ಟಲೆ ಪ್ಲಾಸ್ಟಿಕ್ ಮತ್ತು ಕಸದ ರಾಶಿ ಬಿದ್ದಿದೆ. ಪ್ಲಾಸ್ಟಿಕ್ ಆಯ್ದು ಒಯ್ಯಲು ಪಟ್ಟಣಗಳಿಂದ ಜನ ಬಂದಿದ್ದು ಅವರಿಂದಲೂ ಎತ್ತಲು ಸಾಧ್ಯವಾಗದ ರೀತಿಯಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ಬಿದ್ದಿವೆ. ತ್ಯಾಜ್ಯ ಹಾಕಲು ತೊಟ್ಟಿ ಇಲ್ಲದ ಕಾರಣ ಜಾತ್ರೆ ನಡೆದ ಪ್ರದೇಶವೆಲ್ಲ ಕಸಮಯವಾಗಿದೆ. ಪ್ರತಿ ದಿನ ನೂರಾರು ಜನರು ಸ್ವಚ್ಛತೆ ಮಾಡಿದರೂ ವಾರಗಳ ಕಾಲ ಬೇಕಾದ ಸ್ಥಳದಲ್ಲಿ ಬೆರಳೆಣಿಕೆಯಷ್ಟು ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.

ಶಾಲೆಗಳು ಬಂದ್‌: ಜಾತ್ರೆ ನಡೆದ ಸ್ಥಳದಲ್ಲಿ ಪ್ರಾಥಮಿಕ, ಪ್ರೌಢಶಾಲೆ, ಉರ್ದು ಶಾಲೆಗಳಿದ್ದರೂ ಎಲ್ಲವೂ ಬಂದಾಗಿವೆ. ಇವು ಆರಂಭವಾಗಲು ಸ್ವಚ್ಛತೆಯ ಸಮಸ್ಯೆ ಕಾಡುತ್ತಿದೆ. ಶಾಲೆ ಪ್ರೌಢಶಾಲೆಗಳಲ್ಲಿ ಭಕ್ತರು ವಾರಗಳ ಕಾಲ ವಾಸ ಮಾಡಿದ ಪರಿಣಾಮ ಗಬ್ಬೆದ್ದು ನಾರುತ್ತಿವೆ. ಹೀಗಾಗಿ ಯಾವ ವಿದ್ಯಾರ್ಥಿಗಳೂ 15 ದಿನಗಳ ಕಾಲ ಇತ್ತ ಸುಳಿಯುವುದಿಲ್ಲ. ಅವರ ಆರೋಗ್ಯದ ಹಿತದೃಷ್ಟಿಯಿಂದ ಇದು ಸರಿಯಾದರೂ ಶಾಲೆಗಳ ಅಭ್ಯಾಸದ ವ್ಯವಸ್ಥೆ ಆಗಬೇಕು.

ಸ್ವಚ್ಛತೆ ಯಾರು ಮಾಡಬೇಕು?: ಜಾತ್ರೆಯ ನಂತರ ಪ್ರತಿ ವರ್ಷ ಇದೇ ಕತೆ. ಪ್ರತಿ ನಿತ್ಯ ಸ್ವಚ್ಛತಾ ಕೆಲಸ ನಡೆದರೆ ಈ ಸ್ಥಿತಿ ಬರುತ್ತಿರಲಿಲ್ಲ. ಆದರೆ ಸ್ವಚ್ಛತೆಯನ್ನು ಯಾರು ಮಾಡಬೇಕು ಎಂದು ಟ್ರಸ್ಟ್ ಕಮಿಟಿ, ಗ್ರಾಮ ಪಂಚಾಯಿತಿ ನಿರ್ಧರಿಸಿ ಆರಂಭದಿಂದಲೂ ಸ್ವಚ್ಛತಾ ಕೆಲಸ ಮಾಡಬೇಕಿತ್ತು ಎಂಬ ಮಾತು ಕೇಳಿಬಂದಿದೆ. ಸ್ವಚ್ಛತೆ ಇಲ್ಲದ ಕಾರಣ ಅಕ್ಕ ಪಕ್ಕದ ಹಳ್ಳಿಗಳ ಜನರು ಉಳವಿಯತ್ತ ಮುಖ ಹಾಕುವುದಿಲ್ಲ. ಇಲ್ಲಿನ ಹೋಟೆಲ್‌ಗಳಲ್ಲಿ ಸದ್ಯ ಏನೂ ಸ್ವೀಕರಿಸುವುದಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.

ಅತ್ಯಂತ ತ್ವರಿತಗತಿಯಲ್ಲಿ ಇಲ್ಲಿ ಸ್ವಚ್ಛತಾ ಕಾರ್ಯ ನಡೆಯಬೇಕಿತ್ತು. ಆದರೆ ಕೇವಲ ಬೆರಳಣಿಕೆಯಷ್ಟಿರುವ ಕಾರ್ಮಿಕರಿಂದ ಈ ಕೆಲಸ ಸದ್ಯ ಮುಗಿಯುವ ಲಕ್ಷಣಗಳಿಲ್ಲ. ಹತ್ತಾರು ಕಿಮೀ ರಸ್ತೆ ಅಕ್ಕ-ಪಕ್ಕ ನೀರಿನ ತೊರೆ, ಹೊಳೆ, ಹಳ್ಳ ಎಲ್ಲಿ ನೋಡಿದರೂ ಪ್ಲಾಸ್ಟಿಕ್ ಇನ್ನಿತರ ತ್ಯಾಜ್ಯಗಳು ಕಾಣಿಸುತ್ತಿವೆ. ಅರಣ್ಯ ಇಲಾಖೆ ಕೂಡ ಈಗ ಸ್ವಚ್ಛತೆಗೆ ಮುಂದಾದರೆ ಮಾತ್ರ ಉಳವಿಯ ಪರಿಸರದ ಸುಂದರತೆ ಮತ್ತೆ ಮರುಕಳಿಸಬಹುದು.

ಮಾಲು ಸಹಿತ ಕಳ್ಳನ ಬಂಧನ: ಜಾತ್ರೆಯಲ್ಲಿ ಸರಗಳ್ಳತನ ಮಾಡಿದ್ದ ಕಳ್ಳನನ್ನು ಪೊಲೀಸರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಮಹಾರಾಷ್ಟ್ರ ಮೂಲದ ವ್ಯಕ್ತಿಯನ್ನು ಪೊಲೀಸರು ಸೆರೆಹಿಡಿದಿದ್ದು, ಇನ್ನೂ ಹಲವರು ಈ ಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಸಂಶಯವಿದ್ದು ಅವರಿಗಾಗಿ ಹುಡುಕಾಟ ನಡೆದಿದೆ‌. ಸಾಗರದ ಬಸವರಾಜ್ ಮಲ್ಲಪ್ಪ ಮಂಚಿನಮನಿ ಎಂಬುವರಿಗೆ ಒಂದು ತೊಲೆ ಬಂಗಾರದ ಸರವನ್ನು ಪೊಲೀಸರು ಮರಳಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಸಿಪಿಐ ಚಂದ್ರಶೇಖರ ಹರಿಹರ ಮಾರ್ಗದರ್ಶನದಲ್ಲಿ ಪಿಎಸ್‌ಐ ಮಹೇಶ ಮಾಳಿ ಮತ್ತು ಅವರ ತಂಡ ಸಹಕರಿಸಿದ್ದರು.