ಬಿಎಂಟಿಸಿಗೆ ಖಾಸಗಿ ಬಸ್‌ ವಿರೋಧಿಸಿ 5ಕ್ಕೆ ಧರಣಿ

| Published : Mar 02 2024, 01:46 AM IST

ಸಾರಾಂಶ

ಬಿಎಂಟಿಸಿಗೆ ಖಾಸಗಿ ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯುವುದಕ್ಕೆ ರಾಜ್ಯ ಸಾರಿಗೆ ನಿಗಮಗಳ ನೌಕರರ ಫೆಡರೇಷನ್‌ ವಿರೋಧ ವ್ಯಕ್ತಪಡಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಎಂಟಿಸಿ ಪಡೆಯುತ್ತಿರುವ ಎಲೆಕ್ಟ್ರಿಕ್‌ ಬಸ್‌ಗಳನ್ನು ಗ್ರಾಸ್‌ ಕಾಂಟ್ರ್ಯಾಕ್ಟ್ಖಾ ಕಾಸ್ಟ್‌ (ಜಿಸಿಸಿ) ಅಡಿಯಲ್ಲಿ ಖಾಸಗಿಯವರಿಂದ ಪಡೆಯುವ ಮೂಲಕ ನಿಗಮವನ್ನು ಖಾಸಗೀಕರಣಗೊಳಿಸುತ್ತಿರುವುದನ್ನು ವಿರೋಧಿಸಿ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಷನ್‌ ಮಾ.5ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಫೆಡರೇಷನ್‌ನ ಅಧ್ಯಕ್ಷ ಎಚ್‌.ಡಿ.ರೇವಪ್ಪ, ಸದ್ಯ ಬಿಎಂಟಿಸಿಯಲ್ಲಿ 470 ಎಲೆಕ್ಟ್ರಿಕ್‌ ಬಸ್‌ಗಳು ಕಾರ್ಯಾಚರಣೆಯಲ್ಲಿದೆ. ಜತೆಗೆ ಶೀಘ್ರದಲ್ಲಿ 921 ಎಲೆಕ್ಟ್ರಿಕ್‌ ಬಸ್‌ಗಳನ್ನು ಸೇರ್ಪಡೆ ಮಾಡಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ 1500ಕ್ಕೂ ಹೆಚ್ಚಿನ ಎಲೆಕ್ಟ್ರಿಕ್‌ ಬಸ್‌ಗಳನ್ನು ಸೇರ್ಪಡೆ ಮಾಡಲು ನಿಗಮ ನಿರ್ಧರಿಸಿದೆ. ಆದರೆ, ಈ ಬಸ್‌ಗಳನ್ನು ಖಾಸಗಿಯವರಿಂದ ಗುತ್ತಿಗೆ ಆಧಾರದಲ್ಲಿ ಪಡೆದು ಖಾಸಗಿ ಚಾಲಕರನ್ನು ನಿಯೋಜಿಸಲಾಗುತ್ತಿದೆ. ಹೀಗೆ ಮುಂದುವರಿದರೆ ಬಿಎಂಟಿಸಿ ಖಾಸಗೀಕರಣವಾಗಲಿದೆ. ಹೀಗಾಗಿ ಖಾಸಗಿಯವರಿಂದ ಗುತ್ತಿಗೆ ಆಧಾರದಲ್ಲಿ ಬಸ್‌ಗಳನ್ನು ಪಡೆಯುವ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಈ ಕ್ರಮದ ವಿರುದ್ಧ ಈಗಾಗಲೇ ಸರ್ಕಾರ ಹಾಗೂ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಕ್ರಿಯೆ ಸ್ಥಗಿತಗೊಳಿಸಿಲ್ಲ. ಹೀಗಾಗಿ ಫೆಡರೇಷನ್‌ ವತಿಯಿಂದ ಮಾ.5ರಂದು ಬೆಳಗ್ಗೆ 11ರಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲಾಗುವುದು. ಒಂದು ವೇಳೆ ಸರ್ಕಾರ ಮತ್ತು ನಿಗಮ ಖಾಸಗಿಯವರಿಂದ ಗುತ್ತಿಗೆ ಆಧಾರದಲ್ಲಿ ಬಸ್‌ಗಳನ್ನು ಪಡೆಯುವುದನ್ನು ನಿಲ್ಲಿಸದಿದ್ದರೆ, ಮುಂದಿನ ದಿನಗಳಲ್ಲಿ ಸಾರಿಗೆ ನೌಕರರು ಕರ್ತವ್ಯ ಬಹಿಷ್ಕರಿಸಿ ಮುಷ್ಕರ ನಡೆಸುವ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಫೆಡರೇಷನ್‌ ಉಪಾಧ್ಯಕ್ಷ ಡಾ। ಕೆ.ಪ್ರಕಾಶ್‌ ಇದ್ದರು.