ಟೆಕ್‌ ಸಿಟಿ ಬೆಂಗಳೂರನ್ನು ಟ್ಯಾಂಕರ್‌ ಸಿಟಿ ಮಾಡಿದ ಕಾಂಗ್ರೆಸ್‌: ಮೋದಿ ಕಿಡಿ

| Published : Apr 21 2024, 02:20 AM IST / Updated: Apr 21 2024, 08:35 AM IST

ಟೆಕ್‌ ಸಿಟಿ ಬೆಂಗಳೂರನ್ನು ಟ್ಯಾಂಕರ್‌ ಸಿಟಿ ಮಾಡಿದ ಕಾಂಗ್ರೆಸ್‌: ಮೋದಿ ಕಿಡಿ
Share this Article
  • FB
  • TW
  • Linkdin
  • Email

ಸಾರಾಂಶ

ಟ್ಯಾಂಕರ್‌ ಮಾಫಿಯಾ ಕೈಗೆ ರಾಜಧಾನಿ ಒಪ್ಪಿಸಿದ ಸಿದ್ದು ಸರ್ಕಾರ ಎಂದು ಪ್ರಧಾನಿ ಮೋದಿ ಕಿಡಿ ಕಾರಿದ್ದಾರೆ. ಬೆಂಗಳೂರು, ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ, ಜೆಡಿಎಸ್‌ ಅಭ್ಯರ್ಥಿ ಪರ ಪ್ರಚಾರ ನಡೆಸಿ ಭರ್ಜರಿ ರ್‍ಯಾಲಿಯಲ್ಲಿ ಪಾಲ್ಗೊಂಡರು.

 ಬೆಂಗಳೂರು :  ನಾಡಪ್ರಭು ಕೆಂಪೇಗೌಡರ ದೂರದೃಷ್ಟಿಯನ್ನು ಹಾಳು ಮಾಡಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ ಟೆಕ್ ಸಿಟಿಯನ್ನು ಟ್ಯಾಂಕರ್ ಸಿಟಿಯನ್ನಾಗಿ ಪರಿವರ್ತಿಸಿ ಟ್ಯಾಂಕರ್ ಮಾಫಿಯಾಕ್ಕೆ ಬಿಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಮೂಲಕ ಬೇಸಿಗೆಯಲ್ಲಿ ಬೆಂಗಳೂರು ನಗರ ಎದುರಿಸುತ್ತಿರುವ ನೀರಿನ ಸಮಸ್ಯೆ ಹಾಗೂ ನಿರ್ವಹಣಾ ವೈಫಲ್ಯಕ್ಕೆ ಕಾಂಗ್ರೆಸ್‌ ಸರ್ಕಾರವೇ ಕಾರಣ ಎಂದು ಆರೋಪಿಸಿದ್ದಾರೆ.

ರಾಜ್ಯದ ಕಾಂಗ್ರೆಸ್ ಸರ್ಕಾರದ ಗಮನ ಭ್ರಷ್ಟಾಚಾರದ ಕಡೆಗೇ ಹೊರತು ಅಭಿವೃದ್ಧಿಯ ಕಡೆಗೆ ಅಲ್ಲ ಎಂದೂ ಅವರು ಆಪಾದಿಸಿದ್ದಾರೆ.ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ನಗರದ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬೆಂಗಳೂರಿನ ನಾಲ್ಕು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ ‘ವಿಜಯ ಸಂಕಲ್ಪ’ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಕೃಷಿ ಇರಲಿ ಅಥವಾ ನಗರ ಮೂಲಸೌಕರ್ಯ ಇರಲಿ, ಕರ್ನಾಟಕದಲ್ಲಿ ಪ್ರತಿ ಕ್ಷೇತ್ರದ ಅನುದಾನ ಕಡಿತಗೊಳಿಸಲಾಗಿದೆ. ರೈತರಿಗೆ ಕೇಂದ್ರ ಸರ್ಕಾರ ವರ್ಷಕ್ಕೆ 6 ಸಾವಿರ ರು. ನೀಡುತ್ತಿದೆ. ಹಿಂದಿನ ಬಿಜೆಪಿ ರಾಜ್ಯ ಸರ್ಕಾರ ತನ್ನ ಪಾಲಿನ 4 ಸಾವಿರ ರು. ನೀಡುತ್ತಿದ್ದವು. ಈಗಿನ ಕಾಂಗ್ರೆಸ್‌ ಸರ್ಕಾರ 4 ಸಾವಿರ ರು. ನೀಡಿಕೆ ನಿಲ್ಲಿಸಿದೆ. ಕೇವಲ ಕೇಂದ್ರ ಸರ್ಕಾರದ ಯೋಜನೆಗಳು ಮಾತ್ರ ರಾಜ್ಯದಲ್ಲಿ ತ್ವರಿತಗತಿಯಲ್ಲಿ ಸಾಗುತ್ತಿವೆ. ರಾಜ್ಯದ ಕಾಂಗ್ರೆಸ್ ಸರ್ಕಾರದ ಗಮನ ಏನಿದ್ದರೂ ಭ್ರಷ್ಟಾಚಾರದ ಕಡೆಗೆ ಮಾತ್ರ ಎಂದು ತಿಳಿಸಿದರು.ಬೆಂಗಳೂರು ಮೂಲದ ರಕ್ಷಣಾ ಉದ್ಯಮ ಎಚ್‌ಎಎಲ್‌ಗೆ ಸಂಬಂಧಿಸಿದಂತೆ ದೇಶಾದ್ಯಂತ ಮೋದಿ ವರ್ಚಸ್ಸಿಗೆ ಧಕ್ಕೆ ತರಲು ಕಾಂಗ್ರೆಸ್ ಪ್ರಯತ್ನಿಸಿತು. 

ಆದರೆ, ಇವತ್ತು ಎಚ್ಎಎಲ್‌ ಸಂಸ್ಥೆ ವಹಿವಾಟು, ಆದಾಯ ಹಾಗೂ ಉತ್ಪಾದನೆಯಲ್ಲಿ ದಾಖಲೆ ಸಾಧಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.ಕಾಂಗ್ರೆಸ್ ಮತ್ತು ಇಂಡಿ (ಇಂಡಿಯಾ) ಮೈತ್ರಿಕೂಟದ ಪಕ್ಷಗಳು ತಂತ್ರಜ್ಞಾನದ ವಿರೋಧಿ ಎಂದು ಆಪಾದಿಸಿದ ಪ್ರಧಾನಿ ಮೋದಿ, ಕಾಂಗ್ರೆಸ್ ಪಕ್ಷವು ಆಧಾರ್ ಮತ್ತು ಜನಧನ್ ಖಾತೆಯನ್ನು ವಿರೋಧಿಸಿತ್ತು. ಡಿಜಿಟಲ್ ಪೇಮೆಂಟ್ ಬಗ್ಗೆ ತಮಾಷೆ ಮಾಡಿತ್ತು. ಕೊರೋನಾ ಲಸಿಕೆ ಬಗ್ಗೆಯೂ ಲಘುವಾಗಿ ಮಾತನಾಡಿತ್ತು.

ದೇಶವನ್ನು ಹಸಿರು ಶಕ್ತಿಯ ಕೇಂದ್ರವನ್ನಾಗಿ, ಔಷಧ ಉತ್ಪಾದನಾ ಕೇಂದ್ರವನ್ನಾಗಿ, ಎಲೆಕ್ರ್ಟಾನಿಕ್ಸ್ ಕೇಂದ್ರವನ್ನಾಗಿ, ವಿದ್ಯುತ್‌ಚಾಲಿತ ವಾಹನ ಕೇಂದ್ರವನ್ನಾಗಿ, ಸೆಮಿಕಂಡಕ್ಟರ್‌ ಕೇಂದ್ರವನ್ನಾಗಿ ಮಾಡುವ ಮೂಲಕ ಜಾಗತಿಕ ಮಟ್ಟದ ಆರ್ಥಿಕ ಕೇಂದ್ರವನ್ನಾಗಿ ಮಾಡಬೇಕು ಎಂಬುದಾಗಿ ನಾವು ಹೇಳಿದರೆ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳ ಮೋದಿಯನ್ನು ಬದಲಾಯಿಸುತ್ತೇವೆ ಎನ್ನುತ್ತಾರೆ ಎಂದು ಕಿಡಿಕಾರಿದರು.ಕಾಂಗ್ರೆಸ್‌ ಪಕ್ಷ ಯುವಜನತೆಯ ವಿರೋಧಿ, ಬಂಡವಾಳ ಹೂಡಿಕೆಯ ವಿರೋಧಿ, ತೆರಿಗೆ ಪಾವತಿ ವಿರೋಧಿ, ಉದ್ಯಮಶೀಲತೆಯ ವಿರೋಧಿ ಮತ್ತು ಸಂಪತ್ತಿನ ಸೃಷ್ಟಿಯ ವಿರೋಧಿ. ಮೋದಿ ಗ್ಯಾರಂಟಿ ಹಾಗಲ್ಲ.

 5ಜಿ ಬಳಿಕ 6ಜಿ ತಂತ್ರಜ್ಞಾನ ತರುತ್ತೇವೆ. ಚಂದ್ರಯಾನ ಬಳಿಕ ಗಗನಯಾನ, ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನ ರೂಪಿಸುತ್ತೇವೆ ಎಂದು ಹೇಳಿದರು.ಹತ್ತು ವರ್ಷಗಳ ಹಿಂದೆ ಭಾರತದ ಬ್ಯಾಂಕ್‌ಗಳು ಸಂಕಷ್ಟದಲ್ಲಿದ್ದವು. ಇಂದು ವಿಶ್ವದ ಬೇರೆ ರಾಷ್ಟ್ರಗಳು ಭಾರತದೊಂದಿಗೆ ಸ್ನೇಹ ಮಾಡಲು ಬಯಸುತ್ತಿವೆ. ಅನೇಕ ದೇಶಗಳು ಹೂಡಿಕೆಗೆ ಮುಂದೆ ಬರುತ್ತಿವೆ. ಅಂದು ಜಾಗತಿಕ ಮಟ್ಟದ ಆರ್ಥಿಕತೆಯಲ್ಲಿ ಭಾರತ 11ನೇ ಸ್ಥಾನದಲ್ಲಿತ್ತು. ಈಗ 5ನೇ ಸ್ಥಾನಕ್ಕೆ ತಲುಪಿದೆ. ಈ ಬದಲಾವಣೆ ಈ ಹತ್ತು ವರ್ಷಗಳಲ್ಲಿ ಆಗಿದೆ. ಇದಕ್ಕೆ ಕಾರಣ ನಿಮ್ಮ ಒಂದು ಮತ ಎಂದರು.ಕಾಂಗ್ರೆಸ್ ಮತ್ತು ಇಂಡಿ (ಇಂಡಿಯಾ) ಮೈತ್ರಿಕೂಟದ ಪ್ರಚಾರ ಮೋದಿ ಮತ್ತು ಪರಿವಾರದ ವಿರುದ್ಧ. ಆದರೆ, ಮೋದಿ ಗುರಿ ಭಾರತದ ಸಮೃದ್ಧಿ, ಅಭಿವೃದ್ಧಿ, ಭಾರತದ ಜಾಗತಿಕ ವರ್ಚಸ್ಸು.

 ನನ್ನ ಭಾರತ ನನ್ನ ಪರಿವಾರ. ನಾನು ಬಡ ಕುಟುಂಬದಿಂದ ಬಂದವನು. ಬದುಕಿನ ಸಮಸ್ಯೆಗಳ ಬಗ್ಗೆ ಗೊತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ ಬೆಂಗಳೂರಿನಲ್ಲಿ ಸರ್ಕಾರದ ಕಡೆಯಿಂದ 84 ಸಾವಿರ ಮನೆಗಳನ್ನು ಬಡವರಿಗೆ ನೀಡಲಾಗಿದೆ. ರೇರಾ ಕಾಯ್ದೆ ಜಾರಿಗೆ ತಂದಿದ್ದು, 3 ಸಾವಿರ ವಸತಿ ಯೋಜನೆಗಳು ರೇರಾ ಕಾಯ್ದೆ ಅಡಿಯಲ್ಲಿ ಕಾಮಗಾರಿ ನಡೆಯುತ್ತಿವೆ ಎಂದು ವಿವರಿಸಿದರು.

ಭಾರತದ ಜನರು ಶೀಘ್ರದಲ್ಲೇ ಮೇಡ್ ಇನ್ ಭಾರತ್ ವಿಮಾನಗಳಲ್ಲಿ ಸಂಚರಿಸುತ್ತಾರೆ. ಕರ್ನಾಟಕಕ್ಕೆ ಬುಲೆಟ್ ರೈಲಿನ ವೇಗ ಸಿಗಲಿದೆ. ದೇಶದ ಸಮಗ್ರ ಅಭಿವೃದ್ಧಿಗೆ ನಾವು ಬದ್ಧರಿದ್ದೇವೆ. ಇಲ್ಲಿ ಮೆಟ್ರೋ ವಿಸ್ತರಣೆ ನಡೆದಿದ್ದು, ಹಳದಿ ಲೈನ್ ಕೂಡ ಕಾರ್ಯಾರಂಭ ಮಾಡಲಿದೆ. ಸಾಧನೆಯ ಟ್ರ್ಯಾಕ್ ರೆಕಾರ್ಡ್ ಮೂಲಕ ಮತ್ತೆ ಮತ ಕೇಳಲು ಬಂದಿದ್ದೇನೆ. ಎನ್‍ಡಿಎ ಮತ್ತು ಇಂಡಿ ಒಕ್ಕೂಟದ ಪ್ರಚಾರ ನೋಡಿದ್ದೀರಿ ಎಂದರು.ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌, ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಡಾ.ಸಿ.ಎನ್‌.ಮಂಜುನಾಥ್, ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ, ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ, ಬೆಂಗಳೂರು ಕೇಂದ್ರ ಕ್ಷೇತ್ರದ ಅಭ್ಯರ್ಥಿ ಪಿ.ಸಿ.ಮೋಹನ್ ಸೇರಿದಂತೆ ಹಲವು ಮುಖಂಡರು ವೇದಿಕೆ ಮೇಲಿದ್ದರು.