ಪಿಎಂ ಸ್ವನಿಧಿ ಯೋಜನೆ: ಉಡುಪಿ ಜಿಲ್ಲೆ ರಾಜ್ಯಕ್ಕೆ ಪ್ರಥಮ

| Published : Feb 10 2024, 01:47 AM IST

ಪಿಎಂ ಸ್ವನಿಧಿ ಯೋಜನೆ: ಉಡುಪಿ ಜಿಲ್ಲೆ ರಾಜ್ಯಕ್ಕೆ ಪ್ರಥಮ
Share this Article
  • FB
  • TW
  • Linkdin
  • Email

ಸಾರಾಂಶ

ಪಿ.ಎಂ. ಸ್ವನಿಧಿ ಯೋಜನೆಯ 2ನೇ ಹಂತದಲ್ಲಿ 2101 ಜನರಿಗೆ ಸಾಲ ವಿತರಿಸುವ ಗುರಿ ಇದ್ದು, ಈಗಾಗಲೇ 2504 ಜನರಿಗೆ ಸಾಲ ವಿತರಿಸಲಾಗಿದೆ. ಇನ್ನೂ 390 ಅರ್ಜಿಗಳಿವೆ.

ಕನ್ನಡಪ್ರಭ ವಾರ್ತೆ ಉಡುಪಿ

ಪಿ.ಎಂ. ಸ್ವನಿಧಿ ಯೋಜನೆಯಡಿಯಲ್ಲಿ ಉಡುಪಿ ಜಿಲ್ಲೆ ಶೇ.158 ಸಾಧನೆ ಮಾಡಿದ್ದು, ಈ ಯೋಜನೆಯಡಿ 2819 ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ನೀಡುವ ಗುರಿಯನ್ನು ದಾಟಿ 4462 ವ್ಯಾಪಾರಿಗಳಿಗೆ ಸಾಲ ನೀಡಲಾಗಿದೆ ಮತ್ತು ಜಿಲ್ಲೆಯು ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಹೇಳಿದರು.

ಅವರು ಶುಕ್ರವಾರ ರಜತಾದ್ರಿಯ ಜಿ.ಪಂ.ನ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಗ್ರಣಿ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಪಿ.ಎಂ. ಸ್ವನಿಧಿ ಯೋಜನೆಯ 2ನೇ ಹಂತದಲ್ಲಿ 2101 ಜನರಿಗೆ ಸಾಲ ವಿತರಿಸುವ ಗುರಿ ಇದ್ದು, ಈಗಾಗಲೇ 2504 ಜನರಿಗೆ ಸಾಲ ವಿತರಿಸಲಾಗಿದೆ. ಇನ್ನೂ 390 ಅರ್ಜಿಗಳಿದ್ದು, ಅವುಗಳಿಗೂ ಸಾಲ ವಿತರಿಸಿ, ಜಿಲ್ಲೆಯ ಮೊದಲ ಸ್ಥಾನವನ್ನು ಉಳಿಸಬೇಕು ಎಂದವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ದುರ್ಬಲ ವಲಯಕ್ಕೆ ವಿಶೇಷ ಗಮನ ಕಾರ್ಯಕ್ರಮದಡಿ 2661 ಕೋಟಿ ರು., ಉನ್ನತ ವ್ಯಾಸಾಂಗಕ್ಕೆ 545 ಕೋಟಿ ರು., ವಸತಿ ವಲಯಗಳ ಅಭಿವೃದ್ಧಿಗೆ 2015 ಕೋಟಿ ರು. ಗಳ ಸಾಲ ವಿತರಣೆ ಮಾಡಲಾಗಿದೆ ಎಂದವರು ಮಾಹಿತಿ ನೀಡಿದರು.

* ಸಿಡಿಆರ್ ಶೇ.48.41ಕ್ಕೆ ಏರಿಕೆ

ಕೆನರಾ ಬ್ಯಾಂಕ್‌ನ ಪ್ರಾದೇಶಿಕ ಪ್ರಬಂಧಕಿ ಶೀಬಾ ಶೆಹಜಾನ್, ಕಳೆದ ವರ್ಷಕ್ಕೆ ಹೋಲಿಸಿದ್ದಲ್ಲಿ ಜಿಲ್ಲೆಯ ಬ್ಯಾಂಕುಗಳಲ್ಲಿ ಸಾಲ - ಠೇವಣಿ ಅನುಪಾತ (ಸಿಡಿಆರ್) ವು ಶೇ. 48.41ರಷ್ಟು ಬೆಳವಣಿಗೆಯಾಗಿದೆ. ಜಿಲ್ಲೆಯ ಬ್ಯಾಂಕ್‌ಗಳಲ್ಲಿ 56,191 ಕೋಟಿ ರು. ವ್ಯವಹಾರ ನಡೆದಿದ್ದು, ಸಾಲ ವಿತರಣೆಯಲ್ಲಿ 12.19 ರಷ್ಟು ಬೆಳೆವಣಿಗೆಯಾಗಿದೆ ಎಂದು ಜಿಲ್ಲೆಯ ಆರ್ಥಿಕ ಬೆಳವಣಿಗೆ ಸುಧಾರಿಸಲು ಸಹಕಾರ ನೀಡಿದ ಎಲ್ಲಾ ಬ್ಯಾಂಕುಳಿಗೆ ಅಭಿನಂದನೆ ಸಲ್ಲಿಸಿದರು.

ಸಭೆಯಲ್ಲಿ ಬೆಂಗಳೂರಿನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿ ಮುರಳಿ ಮೋಹನ್ ಪಾಥಕ್, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಪಿ.ಎಂ ಪಿಂಜಾರ, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಸಹಾಯಕ ಉಪ ಪ್ರಬಂಧಕ ನಿತ್ಯಾನಂದ ಶೇರಿಗಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.