ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುವಿಶ್ವಕರ್ಮ ಸಮುದಾಯದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಶ್ವಕರ್ಮ ಸಮುದಾಯಕ್ಕೆ ಸೇರಿದ ಆರ್ಥಿಕವಾಗಿ ಹಿಂದುಳಿದ ಫಲಾನುಭವಿಗಳಿಗೆ ಆದ್ಯತೆ ನೀಡಬೇಕೆಂದು ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ಹಾಗೂ ಸಂಸದ ವಿ. ಸೋಮಣ್ಣ ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾ ವಿಶ್ವಕರ್ಮ ಸೇವಾ ಸಮಿತಿ ಸಹಯೋಗದಲ್ಲಿ ನಗರದ ಡಾ: ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಾಂಪ್ರದಾಯಿಕ ವೃತ್ತಿಯಲ್ಲಿ ತೊಡಗಿಕೊಂಡು ಸಮಾಜದಲ್ಲಿ ದನಿಯಿಲ್ಲದ ವಿಶ್ವಕರ್ಮ ಸಮುದಾಯದವರನ್ನು ಪಿಎಂ ವಿಶ್ವಕರ್ಮ ಯೋಜನೆಗೆ ಪರಿಗಣಿಸಬೇಕು. ಯೋಜನೆ ಅನುಷ್ಠಾನದಲ್ಲಿ ಲೋಪ ಕಂಡು ಬಂದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಸ್ಥಳದಲ್ಲಿದ್ದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಲಿಂಗರಾಜು ಅವರಿಗೆ ಸೂಚಿಸಿದರು. ವಿಶ್ವಕರ್ಮ ಸಮುದಾಯವು ಹಿಂದೂ ಧರ್ಮಕ್ಕೆ ನೀಡಿರುವ ಕೊಡುಗೆ ಅಪಾರವಾದದು. ಸನಾತನ ಕಾಲದಿಂದಲೂ ಶಿಲ್ಪಿಗಳು, ಸ್ವರ್ಣಕಾರರು ಸೇರಿದಂತೆ ವಿಶ್ವಕರ್ಮ ಸಮುದಾಯದವರು ಪಂಚ ಕಸುಬುಗಳ ನೈಪುಣ್ಯತೆಯನ್ನು ಸಮಾಜಕ್ಕೆ ನೀಡಿದ್ದಾರೆ ಎಂದರು. ವಿಶ್ವದ ಯಾವುದೇ ಕೆತ್ತನೆ, ಕುಸುರಿ, ಆಭರಣಗಳಲ್ಲಿ ವಿಶ್ವಕರ್ಮ ಸಮುದಾಯದವರ ಸ್ಪರ್ಶವನ್ನು ಕಾಣಬಹುದಾಗಿದೆ. ವಿಶ್ವಕರ್ಮರ ಸ್ಪರ್ಶವಿಲ್ಲದ ವಡವೆಗಳಿಲ್ಲ, ಗುಡಿ-ಗೋಪುರಗಳಿಲ್ಲ, ಮಠ-ಮಂದಿರಗಳಿಲ್ಲ, ಕೃಷಿ-ಸಲಕರಣೆಗಳಿಲ್ಲ, ಸಂಗೀತ-ಸಾಧನಗಳಿಲ್ಲ, ಜೀವಕಳೆ ಕೊಡುವ ದೇವತಾ ಮೂರ್ತಿಗಳಿಲ್ಲ ಎಂದು ವಿಶ್ವಕರ್ಮ ಸಮುದಾಯದ ಕುಲ ಕಸುಬಿನ ಬಗ್ಗೆ ಬಣ್ಣಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡುತ್ತಾ, ವಿಶ್ವಕರ್ಮ ಸಮುದಾಯದವರು ಸ್ವಾವಲಂಬಿಗಳು. ಪರಾವಲಂಬಿಯಾಗದೆ ಸ್ವಯಂ ಉದ್ಯೋಗ ಕೈಗೊಂಡು ಪ್ರಾಮಾಣಿಕವಾಗಿ ಬದುಕುವವರು. ಶಿಲ್ಪಕಲೆಯನ್ನು ದೇವರೆಂದು ಭಾವಿಸುವ ಈ ಜನಾಂಗ ವಾಸ್ತುಶಿಲ್ಪ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀಡಿದೆ. ವಿಜಯನಗರ ಸಾಮ್ರಾಜ್ಯದ ಹಂಪಿ, ಜಿಲ್ಲೆಯ ತಿಪಟೂರು ತಾಲ್ಲೂಕು ಅರಳುಗುಪ್ಪೆ ಹಾಗೂ ಕೈದಾಳದ ಚೆನ್ನಕೇಶವ ದೇವಸ್ಥಾನಗಳಲ್ಲಿರುವ ಶಿಲ್ಪಕಲೆಗಳು ಇವರ ವಾಸ್ತುಶಿಲ್ಪ ಕೌಶಲ್ಯಕ್ಕೆ ಸಾಕ್ಷಿಯಾಗಿವೆ ಎಂದು ತಿಳಿಸಿದರು. ಸರ್ಕಾರ ವಿಶ್ವಕರ್ಮ ಸಮುದಾಯಕ್ಕೆ ನೀಡಿರುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಅಭಿವೃದ್ಧಿ ಹೊಂದಬೇಕು. ಜಿಲ್ಲಾಡಳಿತದಿಂದ ಪಿಎಂ ವಿಶ್ವಕರ್ಮ ಯೋಜನೆಯಡಿ ೧೮ ಕಲೆಗಳಲ್ಲಿ ತೊಡಗಿಸಿಕೊಂಡಿರುವ ೧೭೪೮೩೧ ಜನರನ್ನು ನೋಂದಣಿ ಮಾಡಲಾಗಿದ್ದು, ಅತಿ ಹೆಚ್ಚು ನೋಂದಣಿ ಮಾಡಿಕೊಳ್ಳುವ ಮೂಲಕ ಜಿಲ್ಲೆಯು ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಈ ಕುರಿತು ಕೇಂದ್ರ ಸರ್ಕಾರ ಮೆಚ್ಚುಗೆಯನ್ನು ಸೂಚಿಸಿದೆ ಎಂದು ಸಂತಸ ಹಂಚಿಕೊಂಡರಲ್ಲದೆ ಈವರೆಗೆ ಯೋಜನೆಯಡಿ ೮೦೨೫ ಫಲಾನುಭವಿಗಳಿಗೆ ತರಬೇತಿ, ೧೮೮೧೨ ಫಲಾನುಭವಿಗಳಿಗೆ ಟೂಲ್ ಕಿಟ್ ವಿತರಿಸಲಾಗಿದೆ ಎಂದು ತಿಳಿಸಿದರು. ಕೆತ್ತನೆ-ಕುಸುರಿ ಸೇರಿದಂತೆ ಪಂಚ ವೃತ್ತಿಗಳ ಕೌಶಲ್ಯ ಹೊಂದಿದವರು ಸ್ವಯಂ ಪ್ರೇರಿತರಾಗಿ ಮುಂದೆ ಬಂದು ಆಸಕ್ತ ಯುವ ಜನತೆಗೆ ತರಬೇತಿ ನೀಡಬೇಕು. ಇದರಿಂದ ಪುರಾತನ ಕಲೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದಲ್ಲದೆ ಉಳಿಸಿ ಬೆಳೆಸಿದಂತಾಗುತ್ತದೆ ಎಂದು ತಿಳಿಸಿದರು. ಅಧ್ಯಕ್ಷತೆವಹಿಸಿ ಮಾತನಾಡಿದ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು, ವಿಶ್ವಕರ್ಮ ಸಮುದಾಯದಲ್ಲಿರುವ ಸಮಸ್ಯೆಗಳನ್ನು ಪರಿಶೀಲಿಸಿ ನ್ಯಾಯ ಒದಗಿಸುವ ಆಶ್ವಾಸನೆಯನ್ನು ಸಂಸದರು ನೀಡಿದ್ದಾರೆ ಎಂದರಲ್ಲದೆ, ವಿಶ್ವಕರ್ಮ ಸಮುದಾಯದ ಅಭಿವೃದ್ಧಿಯ ಚಿಂತನೆಗಳು ನಡೆಯಬೇಕು. ಸಮುದಾಯದ ಅಭಿವೃದ್ಧಿಗಾಗಿ ಕೈಜೋಡಿಸಲು ನಾವಿದ್ದೇವೆ ಎಂಬ ಭರವಸೆಯ ಮಾತುಗಳನ್ನಾಡಿದರು. ಜ್ಞಾನಬುತ್ತಿ ಸತ್ಸಂಗ ಕೇಂದ್ರದ ಅಧ್ಯಕ್ಷ ಟಿ. ಮುರಳಿಕೃಷ್ಣಪ್ಪ ಮಾತನಾಡಿ, ವಿಶ್ವಕರ್ಮ ಸಮುದಾಯದ ಕೊಡುಗೆಗಳ ಬಗ್ಗೆ ಉಲ್ಲೇಖಿಸಿರುವ ಸ್ವಾಮಿ ಶಿವಾತ್ಮಾನಂದ ಸರಸ್ವತೀ ಅವರ ವಿರಚಿತ ಹಾಗೂ ಕನ್ನಡಕ್ಕೆ ಅನುವಾದಿಸಿದ ಡಾ. ವೃಷಭೇಂದ್ರಾಚಾರ್ ಅರ್ಕಸಾಲಿ ಅವರ ಪಂಚವೇದ ಸಂಹಿತಾ ವೇದ ಭಗವಾನ್ ಗ್ರಂಥ ಕುರಿತು ಉಪನ್ಯಾಸ ನೀಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ಮಾತನಾಡಿ, ವಿಶ್ವಕರ್ಮರು ವಿಶ್ವದ ಮೂಲ ಸೃಷ್ಟಿಕರ್ತರು. ಎಲ್ಲರೂ ಒಂದೇ ಎಂಬ ಭಾವದೊಂದಿಗೆ ಪಂಚ ಕರ್ಮಗಳನ್ನು ಅನುಸರಿಕೊಂಡು ವಿಶ್ವಕರ್ಮ ಸಮುದಾಯವು ಸಮಾಜಕ್ಕೆ ಮಾದರಿಯಾಗಿದೆ. ಸಾಂಪ್ರದಾಯಿಕ ಕಸುಬಿನ ಜೊತೆಗೆ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿದಾಗ ಮಾತ್ರ ಉನ್ನತ ಸ್ಥಾನ ಹೊಂದಲು ಸಾಧ್ಯ ಎಂದರು.ಕಾರ್ಯಕ್ರಮವನ್ನು ವಿಶ್ವಕರ್ಮ ಯಜ್ಞ ಮಹೋತ್ಸವ ಸಮಿತಿ ಕಾರ್ಯದರ್ಶಿ ಜೆ.ಎನ್.ಗೋಪಾಲಕೃಷ್ಣಚಾರ್ ನಿರೂಪಣೆ ಮಾಡಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ. ಗೌಡ, ತಹಶೀಲ್ದಾರ್ ರಾಜೇಶ್ವರಿ, ಜಿಲ್ಲಾ ವಿಶ್ವಕರ್ಮ ಸೇವಾ ಸಮಿತಿ ಅಧ್ಯಕ್ಷ ಹೆಚ್.ಪಿ. ನಾಗರಾಜು, ಚಿನ್ನ-ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಕೆ.ಬಿ. ಗಜೇಂದ್ರಾಚಾರ್, ಚಿಕ್ಕಪೇಟೆ ಶ್ರೀ ಕಾಳಿಕಾಂಬ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ವಿ.ಗಂಗರಾಜಾಚಾರ್, ಕಾಳಿಕಾಂಬ ಶ್ರೀ ವಿಶ್ವಕರ್ಮ ಶ್ರೀ ಗಾಯತ್ರಿ ಶ್ರೀ ವೀರಬ್ರಹ್ಮೇಂದ್ರ ಸ್ವಾಮಿ ದೇವಾಲಯ ಅಧ್ಯಕ್ಷ ಹೆಚ್.ಆರ್. ಚಂದ್ರಶೇಖರಾಚಾರ್, ಎಸ್. ಹರೀಶ್ ಆಚಾರ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಕು ಮಿರ್ಜಿ ಮತ್ತಿತರರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಆರು ಮಂದಿ ವಿಶ್ವಕರ್ಮ ಸಮುದಾಯದ ಎನ್. ವಿಶ್ವಮೂರ್ತಿ, ಎನ್.ಎಸ್. ರವಿ, ಎಲ್. ರವಿ, ವಿ.ಎ. ವಿನಯ್‌ಕುಮಾರ್, ಜಿ. ಲೀಲಾ, ಎಲ್.ಎನ್. ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು ಹಾಗೂ ವಿಶ್ವಕರ್ಮ ಸಮುದಾಯದ ೧೬ ಪ್ರತಿಭಾವಂತ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.