ಸಾರಾಂಶ
ರಾಣಿಬೆನ್ನೂರು: ಜನರಿಗೆ ಮೂಲಸೌಕರ್ಯ ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು. ತಾಲೂಕಿನ ಮಾಕನೂರ ಗ್ರಾಮದಲ್ಲಿ ಮಂಗಳವಾರ ಹಾವೇರಿ ಜಿಪಂ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ತಾಲೂಕಿನ ಕರಲಗೇರಿ ಮತ್ತು ಇತರೆ 37 ಗ್ರಾಮಗಳ ಬಹು ಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಪುನಶ್ಚೇತನ ಕಾಮಗಾರಿಗೆ ಭೂಮಿ ಪೂಜೆ, ಸ್ವಚ್ಛತಾ ಹಿ ಸೇವಾ ಅಭಿಯಾನ ಹಾಗೂ ಶ್ರಮದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಹಿಂದೆ ಕೆ.ಬಿ. ಕೋಳಿವಾಡರು ಸಚಿವರಾಗಿದ್ದಾಗ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೆ ತಂದಿದ್ದರು. ಗ್ರಾಮದ ಜನರ ಬಹುದಿನಗಳ ಅಪೇಕ್ಷೆಯಂತೆ ಗ್ರಾಮಕ್ಕೆ ಯೋಜನೆ ಜಾರಿಯಿಂದ ನದಿ ಮೂಲದ ಶುದ್ಧ ಕುಡಿಯುವ ಲಭಿಸಲಿದೆ. ತ್ವರಿತಗತಿಯಲ್ಲಿ ಕಾಮಗಾರಿ ಮುಗಿಸಿ ಬೇಗನೇ ಗ್ರಾಮೀಣ ಭಾಗದ ಜನರಿಗೆ ನೀರು ಕೊಡಬೇಕು. ಯಾವುದೇ ಯೋಜನೆಯಿರಲಿ ಅದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುದಾನವಿರುತ್ತದೆ. ಆದರೆ ಇಂದಿನ ಸಮಾರಂಭಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಆಹ್ವಾನಿಸದಿರುವುದು ತಪ್ಪಾಗಿದೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳು ಶಿಷ್ಟಾಚಾರ ಪಾಲನೆ ಮಾಡಬೇಕು. ಗ್ರಾಮದ ಪ್ರತಿಯೊಬ್ಬರೂ ತಮ್ಮ ಮನೆಯನ್ನು ಸ್ವಚ್ಛವಾಗಿರಿಸಿಕೊಳ್ಳುವಂತೆ ಗ್ರಾಮದ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದರು. ತಾಪಂ ಇಒ ಪರಮೇಶಪ್ಪ ಮಾತನಾಡಿ, ತಾಪಂ ಇಓ, ಸ್ವಚ್ಚತೆಗೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅವಶ್ಯವಾಗಿದೆ. ಮಹಾತ್ಮ ಗಾಂಧೀಜಿ ಜಯಂತಿ ಪ್ರಯುಕ್ತ ಅ.2ರವರೆಗೆ ಸ್ವಚ್ಚತೆ ಬಗ್ಗೆ ಗಮನ ಕೊಡಲಾಗುವುದು. ಗ್ರಾಪಂ ವಾಪ್ತಿಯಲ್ಲಿ ಸ್ವಚ್ಚತೆಗೆ ಕಾಳಜಿ ವಹಿಸಬೇಕು, ಸ್ವಚ್ಚತೆ ಮಾಡದೆ ಹೋದರೆ ರೋಗಗಳಿಗೆ ದಾರಿ ಮಾಡಿಕೊಡುತ್ತದೆ. ನಮ್ಮ ಊರು, ನಮ್ಮ ಸ್ವಚ್ಛತೆ ಸೇವಾ ಕಾರ್ಯಕ್ರಮ ಯೋಜನೆ ಮೂಲಕ ಎಲ್ಲರೂ ಕೆಲಸ ಮಾಡೋಣ ಎಂದರು.ಗ್ರಾಪಂ ಅಧ್ಯಕ್ಷ ದೇವೇಂದ್ರಪ್ಪ ಯಲಜಿ, ತಾಪಂ ಮಾಜಿ ಅಧ್ಯಕ್ಷ ನೀಲಕಂಠಪ್ಪ ಕುಸಗೂರ, ಗ್ರಾಪಂ ಸದಸ್ಯ ಕೆಂಚನಗೌಡ ಮುದಿಗೌಡ್ರ, ರೈತ ಮುಖಂಡ ಈರಣ್ಣ ಹಲಗೇರಿ, ಗ್ರಾಪಂ ಉಪಾಧ್ಯಕ್ಷರು, ಸರ್ವ ಸದಸ್ಯರು, ಜಿಪಂ ಇಲಾಖೆ ಗ್ರಾಮೀಣ ಕುಡಿಯುವ ನೀರು ಇಲಾಖೆ ಸಕಾನಿ ಎಂಜಿನಿಯರ್ ಜಯರಾಂ ಮತ್ತಿತರರಿದ್ದರು. ಪಿಡಿಒ ನಾಗರಾಜ ಸ್ವಚ್ಛತೆಯ ಪ್ರತಿಜ್ಞಾವಿಧಿ ಬೋಧಿಸಿದರು. ಆರೋಗ್ಯ ಇಲಾಖೆಯ ರಾಘವೇಂದ್ರ ಕೈ ತೊಳೆಯುವ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು. ಕಾರ್ಯಕ್ರಮದ ನಂತರ ಶಾಸಕರು, ಅತಿಥಿಗಳು, ಸಾರ್ವಜನಿಕರು ಶ್ರಮದಾನ ಕೈಗೊಂಡರು.