ಸಾರಾಂಶ
ಪಟ್ಟಣದ ಕಾಳಿ ಕಾಂಪ್ಲೆಕ್ಸ್ ನಲ್ಲಿ ಕೇಂದ್ರ ಸರ್ಕಾರದ ಪಿ.ಎಂ.ವಿಶ್ವಕರ್ಮ ಯೋಜನೆ ಮೊದಲ ವರ್ಷದ ವಾರ್ಷಿಕೋತ್ಸವ
ಕನ್ನಡಪ್ರಭ ವಾರ್ತೆ, ಕಡೂರುಕುಶಲಕರ್ಮಿಗಳನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡಲು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ ಕೌಶಲ್ಯ ತರಬೇತಿ ನೀಡಿ ಲಕ್ಷಾಂತರ ಕುಶಲಕರ್ಮಿಗಳ ಉತ್ತಮ ಬದುಕಿಗೆ ದಾರಿ ಮಾಡಿ ಕೊಟ್ಟಿದೆ ಎಂದು ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಎಚ್.ಸಿ. ಪ್ರಶಾಂತ್ ಹೇಳಿದರು.
ಪಟ್ಟಣದ ಕಾಳಿ ಕಾಂಪ್ಲೆಕ್ಸ್ ನಲ್ಲಿ ಕೇಂದ್ರ ಸರ್ಕಾರದ ಪಿಎಂವಿಶ್ವಕರ್ಮ ಯೋಜನೆ ಪ್ರಥಮ ವಾರ್ಷಿಕೋತ್ಸವದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಪಿಎಂ ವಿಶ್ವಕರ್ಮ ಯೋಜನೆಯಡಿ ಕುಶಲಕರ್ಮಿಗಳಿಗೆ ಅವರವರ ಕುಲ ಕಸುಬು ಆಧರಿಸಿ ತರಬೇತಿ ನೀಡುವ ಜೊತೆಗೆ ಉಚಿತ ಸಾಲ, ಕೌಶಲ್ಯ ತರಬೇತಿ, ಆಧುನಿಕ ಉಪಕರಣ, ಡಿಜಿಟಲ್ ವಹಿವಾಟು ಮತ್ತು ಅವರು ತಯಾರಿಸಿದ ವಸ್ತುಗಳಿಗೆ ಮಾರುಕಟ್ಟೆ ಕಲಪಿಸಿ ಪ್ರೋತ್ಸಾಹಿಸುವ ಮಹತ್ವದ ಯೋಜನೆಯಾಗಿದೆ ಎಂದರು. ಜಿಲ್ಲೆಯಲ್ಲಿಯೇ ಯೋಜನೆ ಮೊದಲ ತರಬೇತಿ ಕೇಂದ್ರವಾದ ಕಡೂರು ಪಟ್ಟಣದ ರೋಮನ್ ಸೆಂಟರ್ ತರಬೇತಿ ನೀಡುತ್ತಿದೆ. ಈ ಕೇಂದ್ರದಲ್ಲಿ ಈಗಾಗಲೇ 1,500ಕ್ಕೂ ಹೆಚ್ಚಿನ ಕುಶಲಕರ್ಮಿಗಳಿಗೆ ಟೈಲರಿಂಗ್, ವಿಶೇಷ ಹೂವಿನ ಹಾರ ತಯಾರಿಕೆ, ಮರಗೆಲಸದ ಬಗ್ಗೆ ತರಬೇತಿ ನೀಡಲಾಗುತ್ತಿದೆ. ತರಬೇತಿ ಅವಧಿಯ 6 ದಿನಗಳಲ್ಲಿ ಅವರಲ್ಲಿರುವ ಕೌಶಲ್ಯ ಗುರುತಿಸಿ ಪ್ರಮಾಣಪತ್ರ ನೀಡಲಾಗುತ್ತದೆ. ಜೊತೆಗೆ ವೃತ್ತಿಗೆ ಬಳಸುವ 15 ಸಾವಿರ ರು. ಗಳ ಟೂಲ್ ಕಿಟ್ ಉಚಿತವಾಗಿ ನೀಡಿ, ₹ 4 ಸಾವಿರ ಸಹಾಯ ಧನ, ಜಿಲ್ಲೆಯ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಶೇ 5 ರ ಬಡ್ಡಿ ದರದಲ್ಲಿ 3 ಲಕ್ಷ ರು. ಸಾಲ ಕೊಡಿಸಿ ಅವರು ಸ್ವಾವಲಂಬಿ ಜೀವನ ನಡೆಸಲು ಯೋಜನೆ ಸಹಕಾರಿ ಆಗಲಿದೆ ಎಂದರು.ರೋಮನ್ ತರಬೇತಿ ಕೇಂದ್ರದ ನಿರ್ದೇಶಕಿ ಶೈಲಾ ಮೋಹನ್ ಮಾತನಾಡಿ, ಜಿಲ್ಲೆಯಲ್ಲಿ ಏಕೈಕ ತರಬೇತಿ ಕೇಂದ್ರ ಇದಾಗಿದ್ದು ಕಡೂರಿನ ಕಾಳಿ ಕಾಂಪ್ಲೆಕ್ಸ್ ನಲ್ಲಿ ಕಳೆದ ಒಂದು ವರ್ಷ ಹಿಂದೆ ಆರಂಭವಾಗಿ ಇದೀಗ ಮೊದಲ ವಾರ್ಷಿಕೋತ್ಸವ ನಡೆಯುತ್ತಿದೆ. ಇಲ್ಲಿ ತರಬೇತಿ ಪಡೆದ 500ಕ್ಕೂ ಹೆಚ್ಚಿನವರಿಗೆ ಸಾಲ ಸೌಲಭ್ಯ ನೀಡಲಾಗಿದೆ.
ಜಿಲ್ಲೆಯಲ್ಲಿನ ಪುರುಷರು-ಮಹಿಳೆಯರು 18 ವರ್ಷ ಮೇಲ್ಪಟ್ಟವರು ತರಬೇತಿಗೆ ಅರ್ಹ. ಕೇಂದ್ರ ಸರ್ಕಾರದ ಈ ಯೋಜನೆ ಕುಶಲಕರ್ಮಿಗಳಿಗೆ ವರದಾನ. ತಾವು ಕಲಿತ ಕುಲ ಕಸುಬು ಉಳಿಸುವ ಜೊತೆಗೆ ಸಾಲ ಕೊಡಿಸಿ ಬದಲಾದ ಜೀವನ ರೂಪಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾ ವಿಶ್ವಕರ್ಮ ಯುವ ಘಟಕದ ಅಧ್ಯಕ್ಷ ಗೋಪಾಲಾಚಾರ್, ಕಡೂರು ತಾ. ವಿಶ್ವಕರ್ಮ ಸಮಾಜದ ಅಧ್ಯಕ್ಷ ತೀರ್ಥಾಚಾರ್ , ಮಹೇಶ್‍ಆಚಾರ್ ಹಾಗೂ ತರಬೇತುದಾರ ಹರಿಪ್ರಸಾದ್ ತರಬೇತಿ ಪಡೆವ ವೃತ್ತಿ ಶಿಬಿರಾರ್ಥಿಗಳು ಮತ್ತಿತರು ಇದ್ದರು.
-- ಬಾಕ್ಸ್ --ತರಬೇತಿ ಪಡೆದ ಸಾವಿರಾರು ಕುಶಲಕರ್ಮಿಗಳಲ್ಲಿ ತರೀಕೆರೆಯ ಕೆ.ಹೊಸೂರಿನ ಎಚ್.ಡಿ.ಶಿವಕುಮಾರ್ ಮತ್ತು ಕಡೂರಿನ ಅಲಘಟ್ಟ ಗ್ರಾಮದ ಪರ್ವತಾಚಾರ್ ಅತ್ಯುತ್ತಮ ಕೌಶಲ್ಯ ನೀಡಿ ಬೆಂಗಳೂರಿನ ಎಂಎಸ್‍ಎಂಇ ಸಂಸ್ಥೆಯ ಕೌಶಲ್ಯ ತರಬೇತಿ ಪ್ರದರ್ಶನ ದಿಂದ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಯಾಗಿ, ದೆಹಲಿಯ ಪಿಎಂ ವಿಶ್ವಕರ್ಮ ಯೋಜನೆ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
-- ಶೈಲಾ ಮೋಹನ್,ಪ್ರಾಚಾರ್ಯರು, ರೋಮನ್ ತರಬೇತಿ ಕೇಂದ್ರ.21ಕೆಕೆಡಿಯು1.
ಕಡೂರು ಪಟ್ಟಣದ ಕಾಳಿ ಕಾಂಪ್ಲೆಕ್ಸ್ ನಲ್ಲಿ ಕೇಂದ್ರ ಸರ್ಕಾರದ ಪಿ.ಎಂ.ವಿಶ್ವಕರ್ಮ ಯೋಜನೆಯ ಮೊದಲ ವರ್ಷದ ವಾರ್ಷಿಕೋತ್ಸವದ ತರಬೇತಿ ಸಭೆಯನ್ನು ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಎಚ್.ಸಿ. ಪ್ರಶಾಂತ್ ಉದ್ಘಾಟಿಸಿದರು. ಶೈಲಾಮೋಹನ್ ಮತ್ತಿತರರು ಇದ್ದರು.