ಪೋಕ್ಸೋ ಕೇಸ್‌: ಮುರುಘಾ ಸ್ವಾಮೀಜಿ ಮತ್ತೆ ಜೈಲುಪಾಲು

| Published : Apr 30 2024, 02:09 AM IST / Updated: Apr 30 2024, 06:05 AM IST

ಪೋಕ್ಸೋ ಕೇಸ್‌: ಮುರುಘಾ ಸ್ವಾಮೀಜಿ ಮತ್ತೆ ಜೈಲುಪಾಲು
Share this Article
  • FB
  • TW
  • Linkdin
  • Email

ಸಾರಾಂಶ

ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಡಾ.ಶಿವಮೂರ್ತಿ ಮುರುಘಾ ಶರಣರು ಸೋಮವಾರ ಚಿತ್ರದುರ್ಗದ ಕೋರ್ಟ್‌ಗೆ ಶರಣಾಗಿದ್ದಾರೆ. ಬಳಿಕ ನ್ಯಾಯಾಲಯ ಅವರನ್ನು ಮೇ 27ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿತು.

 ಚಿತ್ರದುರ್ಗ :  ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಡಾ.ಶಿವಮೂರ್ತಿ ಮುರುಘಾ ಶರಣರು ಸೋಮವಾರ ಚಿತ್ರದುರ್ಗದ ಕೋರ್ಟ್‌ಗೆ ಶರಣಾಗಿದ್ದಾರೆ. ಬಳಿಕ ನ್ಯಾಯಾಲಯ ಅವರನ್ನು ಮೇ 27ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿತು.

ಫೋಕ್ಸೋ ಪ್ರಕರಣದಲ್ಲಿ ಈ ಮೊದಲು ಹೈಕೋರ್ಟ್ ಜಾಮೀನು ನೀಡಿದ್ದು, ಇದನ್ನು ಪ್ರಶ್ನಿಸಿ ಸಂತ್ರಸ್ತ ಬಾಲಕಿಯ ತಂದೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಸುಪ್ರೀಂಕೋರ್ಟ್ ಜಾಮೀನು ರದ್ದುಗೊಳಿಸಿ ವಾರದೊಳಗೆ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಮುರುಘಾಶ್ರೀಗೆ ನಿರ್ದೇಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನ ದಾವಣಗೆರೆಯಿಂದ ನೇರವಾಗಿ ಚಿತ್ರದುರ್ಗ ನ್ಯಾಯಾಲಯಕ್ಕೆ ಬಂದು ಮುರುಘಾಶ್ರೀ ಶರಣಾದರು. ದಾವಣಗೆರೆ ವಿರಕ್ತಮಠದ ಬಸವಪ್ರಭುಶ್ರೀ, ಹಾವೇರಿ ಮಠದ ಬಸವ ಶಾಂತಲಿಂಗ ಶ್ರೀ ಈ ವೇಳೆ ಮುರುಘಾಶ್ರೀ ಜೊತೆಗಿದ್ದರು.

ಮುರುಘಾಶ್ರೀಗೆ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್ ಮೇ 27ಕ್ಕೆ ಪ್ರಕರಣ ವಿಚಾರಣೆಗೆ ದಿನಾಂಕ ನಿಗದಿ ಮಾಡಿತು. ಜಿಲ್ಲಾಸ್ಪತ್ರೆಯಲ್ಲಿ ಮುರುಘಾಶ್ರೀಗೆ ಆರೋಗ್ಯ ತಪಾಸಣೆ ಬಳಿಕ ಪೊಲೀಸರು ಚಿತ್ರದುರ್ಗ ಜೈಲಿಗೆ ಕರೆದೊಯ್ದರು. ಡಿವೈಎಸ್ಪಿ ದಿನಕರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಮುರುಘಾಶ್ರೀ ಕೋರ್ಟ್‌ಗೆ ಹಾಜರಾಗಲಿದ್ದಾರೆ ಎನ್ನುವ ಸುದ್ದಿ ತಿಳಿದು ನೂರಾರು ಭಕ್ತರು ನ್ಯಾಯಾಲಯದ ಆವರಣಕ್ಕೆ ಧಾವಿಸಿ ಬಂದಿದ್ದರು. ಏತನ್ಮಧ್ಯೆ ಬಸವಜಯಂತಿ ಆಚರಣೆ ಸಂಬಂಧ ಮುರುಘಾಮಠದಲ್ಲಿ ವೀರಶೈವ ಸಮಾಜ ಸೇರಿ ಇತರೆ ಸಮಾಜದ ಮುಖಂಡರ ಸಭೆ ಕರೆಯಲಾಗಿತ್ತು. ಶ್ರೀಗಳು ಜೈಲಿಗೆ ಹೋಗುತ್ತಿದ್ದಂತೆ ಎಲ್ಲರೂ ಮುರುಘಾಮಠಕ್ಕೆ ತೆರಳಿ ಬಸವ ಜಯಂತಿ ಪೂರ್ವ ಸಿದ್ದತಾ ಸಭೆಯಲ್ಲಿ ಪಾಲ್ಗೊಂಡರು.