ಸಾರಾಂಶ
ಅಜಿತ್ ಕುಮಾರ್
ಕನ್ನಡಪ್ರಭ ವಾರ್ತೆ ಮಂಡ್ಯಕವಿತೆಯ ರೂಪದಲ್ಲಿ ಕನ್ನಡ ಜಾಗೃತಿ ಜತೆಗೆ ಪರಿಸರ ಪ್ರಜ್ಞೆಯನ್ನೂ ಬೆಳೆಸುವ ವಿಶಿಷ್ಟ ಪ್ರಯತ್ನವೊಂದು 87ನೇ ಸಾಹಿತ್ಯ ಸಮ್ಮೇಳನದಲ್ಲಿ ಸದ್ದಿಲ್ಲದೆ ನಡೆಯುತ್ತಿದೆ. ವೃತ್ತಿಯಲ್ಲಿ ಬಿಎಂಟಿಸಿ ಮೆಕ್ಯಾನಿಕ್ ಆಗಿರುವ ಸಂತೋಷ್ ಮಡೇನೂರು ಅವರು ಈ ಮಹತ್ಕಾರ್ಯದ ರೂವಾರಿ. ಸ್ವಂತ ಹಣ ಹಾಗೂ ಗೆಳೆಯರ ಸಹಾಯಹಸ್ತದೊಂದಿಗೆ ಸಂತೋಷ್ ಅವರು ಸ್ವರಚಿತ ಕವನ ಓದಿದವರಿಗೆ ಉಚಿತವಾಗಿ ಔಷಧೀ ಸಸ್ಯಗಳನ್ನು ವಿತರಿಸುತ್ತಿದ್ದಾರೆ.
1 ಸಾವಿರ ಗಿಡ ವಿತರಿಸುವ ಗುರಿ:ಸಾಹಿತ್ಯ ಸಮ್ಮೇಳನದ ವಾಣಿಜ್ಯ ಮಳಿಗೆಯಲ್ಲಿ ಸ್ಟಾಲ್ ಇಟ್ಟುಕೊಂಡಿರುವ ಸಂತೋಷ್ ಅವರು ಮೂರು ದಿನಗಳಲ್ಲಿ1 ಸಾವಿರಕ್ಕೂ ಹೆಚ್ಚು ಗಿಡ ವಿತರಿಸುವ ಗುರಿ ಇಟ್ಟುಕೊಂಡಿದ್ದಾರೆ. ಆರು ಸಾವಿರ ಕೊಟ್ಟು ಮಳಿಗೆ ಹಾಕಿರುವ ಇವರು, ಮೊದಲ ದಿನ ಸ್ವರಚಿತ ಕವನ ಓದಿದ 291 ಮಂದಿಗೆ ಉಚಿತ ಗಿಡ ವಿತರಿಸಿದ್ದಾರೆ. ಐಐಎಚ್‌ಆರ್‌ನಿಂದ ಗಿಡ ಖರೀದಿಸಿ ಇಲ್ಲಿ ವಿತರಿಸುತ್ತಿದ್ದಾರೆ.
ಕನ್ನಡ-ಕವಿತೆ-ಪರಿಸರ:ಕನ್ನಡ ಪ್ರಜ್ಞೆ ಮತ್ತು ಕವಿತೆಗಳ ಕುರಿತ ಆಸಕ್ತಿ ಸಂತೋಷ್ ಅವರಿಗೆ ಹುಟ್ಟಿದ್ದು ಹೋರಾಟದಿಂದ. ಆದರೆ, ಪರಿಸರ ಪ್ರಜ್ಞೆ ಬಾಲ್ಯದಲ್ಲಿ ನಡೆದ ಘಟನೆಯೊಂದು ಬಿತ್ತಿದ ಬೀಜದ ಫಲ. ಇದೀಗ ಅದು ಹೆಮ್ಮರವಾಗಿ ಬೆಳೆಯುತ್ತಿದೆ, ಇತರಲ್ಲೂ ಕನ್ನಡ, ಕವಿತೆ ಮತ್ತು ಪರಿಸರ ಕುರಿತು ಕಾಳಜಿ ಬೆಳೆಸುವಂತೆ ಮಾಡುತ್ತಿದೆ.
ಸಂತೋಷ್ ಅವರು ಹಿಂಜದೆ ಕೆಜಿಎಫ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಅಲ್ಲಿ ತಮಿಳರ ವಿರುದ್ಧದ ಹೋರಾಟದ ಅಸ್ತ್ರವಾಗಿದ್ದು ಕನ್ನಡ ಪ್ರಜ್ಞೆ ಮತ್ತು ಕವಿಕತೆಗಳು. ಕನ್ನಡಪರ ಹೋರಾಟದಿಂದಲೇ ಕವಿತೆಯತ್ತ ಆಸಕ್ತಿ ಬೆಳೆಸಿಕೊಂಡ ಅವರು ಅನೇಕ ಕವನಗಳನ್ನು ರಚಿಸಿದರು. ಮುಂದೆ ಅವರು ಬಿಎಂಟಿಎಂಸಿಯಲ್ಲಿ ಮೆಕ್ಯಾನಿಕ್ ಆಗಿ ಕೆಲಸಕ್ಕೆ ಸೇರಿದಾಗ ಅಲ್ಲಿ ಅವರ ಕವಿತಾಸಕ್ತಿಗೆ ಹೆಚ್ಚಿನ ಪ್ರೋತ್ಸಾಹ ಸಿಕ್ಕಿತು. ತಾವು ಬರೆದು ಕವನಗಳನ್ನು ಬಿಎಂಟಿಸಿಯಲ್ಲಿ ಬರೆದಾಗ ಅದರಿಂದ ವ್ಯಕ್ತವಾದ ಬೆಂಬಲದಿಂದ ಉಮೇದುಗೊಂಡ ಅವರು ರಾಗಿಹೊಲ, ಹಡೆದವ್ವ, ಹಸಿರಿಲ್ಲದ ನಾಡಿನತ್ತ ಎಂಬ ಕವನ ಸಂಕಲಗಳನ್ನು ಇವರು ರಚಿಸಿದ್ದಾರೆ. ಕವನ ಓದು ಸೇರಿದಂತೆ ವಿವಿಧ ಕನ್ನಡಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ.ಇನ್ನು ಸಂತೋಷ್ ಅವರ ಮೂಲ ತಿಪಟೂರು. ಅಲ್ಲಿ ಕಟ್ಟಿಸಿದ್ದ ರಾಮಣ್ಣನ ಕಟ್ಟೆಯನ್ನು ಕಾರಣಾಂತರಗಳಿಂದ ಒಡೆದು ಹಾಕಿದಾಗ ಪಕ್ಷಿಗಳು ನೆಲೆ ಕಳೆದುಕೊಂಡದನ್ನು ನೋಡಿ ಇವರು ತೀವ್ರ ನೊಂದಿದ್ದರಂತೆ. ಆಗಲೇ ಇವರಲ್ಲಿ ಪರಿಸರಕ್ಕಾಗಿ ಏನಾದರೂ ಮಾಡಬೇಕು, ಮರ-ಗಿಡ ಬೆಳೆಸಬೇಕೆಂಬ ತುಡಿತ ಹುಟ್ಟಿಕೊಂಡಿತ್ತು. ಅದರ ಭಾಗವಾಗಿಯೇ ಆರಂಭವಾದ ಪರಿಸರ ಕಾಳಜಿ ಈಗ "ಸಸ್ಯ ಯಜ್ಞ''''ದ ರೂಪ ಪಡೆದಿದೆ.
ಪರಿಸರ ಕಾಳಜಿಯ ಉಮೇದಿನಿಂದ 2003ರಲ್ಲಿ ಸಂತೋಷ್ ಅವರು ಸಸ್ಯಯಜ್ಞ ತಂಡಕೊಟ್ಟಿಕೊಂಡುಬೆಂಗಳೂರು ಸೇರಿ ನಾಡಿನೆಲ್ಲೆಡೆ ಗಿಡಗಳನ್ನು ವಿತರಿಸುವ ಕಾರ್ಯ ಶುರುವಿಟ್ಟುಕೊಂಡರು.
ಸದ್ಯ ಅವರ ಈ ತಂಡದಲ್ಲಿ 300 ಮಂದಿ ಸ್ವಯಂಸೇವಕರಿದ್ದಾರೆ. ಮೊದಲಿಗೆ ತಾವು ಕೆಲಸ ಮಾಡುವ ಬಿಎಂಟಿಸಿಯನ್ನೇ ತಮ್ಮ ಸಸ್ಯ ಯಜ್ಞದ ಭಾಗವಾಗಿ ಆಯ್ಕೆ ಮಾಡಿಕೊಂಡರು. ಬಿಎಂಟಿಸಿಯ ಡಿಪೋಗಳಲ್ಲೇ ಗಿಡನೆಡುವ, ಬಿಎಂಟಿಸಿ ನೌಕರರಿಗೆ ಉಚಿತವಾಗಿ ಔಷಧೀಯ ಸಸ್ಯಗಳನ್ನು ವಿತರಿಸುವ ಕೆಲಸ ಆರಂಭಿಸಿದರು. ಸಿಬ್ಬಂದಿಯ ತಂದೆ-ತಾಯಿ ಹೆಸರಲ್ಲೇ ಈ ಗಿಡಗಳನ್ನು ಬೆೆಳೆಸುವುದು ಇವರ ವಿಶೇಷ. ಈ ಮೂಲಕ ಗಿಡದ ಆರೈಕೆ ಪ್ರೀತಿಪಾತ್ರರ ಹೆಸರಲ್ಲಾದರೂ ನಿರಂತರವಾಗಿ ನಡೆಯುತ್ತಿರಲಿ ಎಂಬ ದೂರೋದ್ದೇಶ ಇವರದ್ದು.ಈವರೆಗೆ ಇವರ ತಂಡ 20 ಸಾವಿರಕ್ಕೂ ಹೆಚ್ಚು ಗಿಡಗಳನ್ನು ವಿತರಿಸಿದೆ. ಸುಮಾರು 10 ವರ್ಷಗಳಿಂದ ಕನ್ನಡ ಕಾಳಜಿ, ಕವಿತೆ ಹಾಗೂ ಪರಿಸರ ಈ ಮೂರನ್ನೂ ಜೋಡಿಸಿಕೊಂಡು ಸಸ್ಯಯಜ್ಞ ಎಂಬ ಮಹಾಯಜ್ಞ ಮಾಡುತ್ತಿದ್ದಾರೆ. ಸಾಹಿತ್ಯ ಸಮ್ಮೇಳನಗಳಲ್ಲಿ ಉಚಿತವಾಗಿ ಗಿಡ ವಿತರಿಸುವ ಜತೆಗೆ ಕವಿತೆ ಮತ್ತು ಕನ್ನಡ ಭಾಷೆಗೆ ತನ್ನದೇ ಆದ ಕೊಡುಗೆ ನೀಡುತ್ತಿದ್ದಾರೆ.
ಸದ್ಯ ಇವರು ಪಡೆಯುವ ವೇತನದಲ್ಲೇ ಒಂದಷ್ಟು ಭಾಗವನ್ನು ಪ್ರತಿ ತಿಂಗಳು ಗಿಡ ವಿತರಣೆಗೆಂದೇ ಮೀಸಲಿಡುತ್ತಾರೆ. ಯಾರಿಂದಲೂ ಇದಕ್ಕಾಗಿ ದೇಣಿಗೆ ಪಡೆಯದ ಇವರು ಯಾವುದೇ ಸಂಘ-ಸಂಘಟನೆಗಳ ಸಹವಾಸವೇ ಬೇಡ ಸರ್.., ಅದನ್ನೆಲ್ಲ ಕಟ್ಟಿಕೊಂಡರೆ ಅಧ್ಯಕ್ಷರು, ಉಪಾಧ್ಯಕ್ಷರು ಅಂತ ಹೇಳಿಕೊಂಡು ಕಿತ್ತಾಡಿಕೊಂಡು ಮೂಲ ಉದ್ದೇಶವನ್ನೇ ಮರೆಯಬೇಕಾಗುತ್ತದೆ ಎನ್ನುತ್ತಾರೆ.ಕನ್ನಡಪರ ಕಾಳಜಿಗಾಗಿ ಅರಳು ಸಾಹಿತ್ಯ ಪ್ರಶಸ್ತಿ ಸೇರಿ ಅನೇಕ ಗೌರವಗಳಿಗೆ ಪಾತ್ರರಾಗಿರುವ ಇವರು ಅದರಿಂದ ಬಂದ ಹಣವನ್ನು ಗಿಡವಿತರಣೆಗೇ ಮೀಸಲಿಡುತ್ತಾರೆ.