ಸಂತಸ, ನೋವು ಸೇರಿದಂತೆ ಮನದಾಳದ ಭಾವನೆಗಳನ್ನು ಅಭಿವ್ಯಕ್ತಪಡಿಸಲು ಕವಿತೆ ಅತ್ಯಂತ ಸುಂದರ ಮಾಧ್ಯಮ. ಬದುಕಿನ ಸವಾಲುಗಳನ್ನು ಎದುರಿಸಿ ಮುನ್ನಡೆಯಲು ಕವಿತೆಗಳು ಆತ್ಮಸ್ಥೈರ್ಯ ತುಂಬುತ್ತವೆ.
ಅಶ್ರು ದರ್ಪಣ ಕೃತಿ ಬಿಡುಗಡೆಗೊಳಿಸಿದ ಜಿಲ್ಲಾಧಿಕಾರಿ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಸಂತಸ, ನೋವು ಸೇರಿದಂತೆ ಮನದಾಳದ ಭಾವನೆಗಳನ್ನು ಅಭಿವ್ಯಕ್ತಪಡಿಸಲು ಕವಿತೆ ಅತ್ಯಂತ ಸುಂದರ ಮಾಧ್ಯಮ. ಬದುಕಿನ ಸವಾಲುಗಳನ್ನು ಎದುರಿಸಿ ಮುನ್ನಡೆಯಲು ಕವಿತೆಗಳು ಆತ್ಮಸ್ಥೈರ್ಯ ತುಂಬುತ್ತವೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಹೇಳಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಈಚೆಗೆ ಆಯೋಜಿಸಿದ್ದ ಸಮಾರಂಭದಲ್ಲಿ ಉಮಾದೇವಿ ಸುರ್ಪೂರ ಅವರು ರಚಿಸಿರುವ 135 ಕವಿತೆಗಳ ಸಂಕಲನ "ಅಶ್ರು ದರ್ಪಣ " ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು."ಅಶ್ರು ದರ್ಪಣ " ಕೇವಲ ಕವಿತೆಗಳ ಸಂಕಲನವಲ್ಲ. ನಷ್ಟ, ಏಕಾಂತ, ನೋವು ಹಾಗೂ ಆತ್ಮಸ್ಥೈರ್ಯದ ಮೂಲಕ ಸಾಗಿದ ಮಹಿಳೆಯೊಬ್ಬರ ಭಾವನಾತ್ಮಕ ಬದುಕಿನ ಪಯಣದ ಅನಾವರಣವಾಗಿದೆ. ಕೇವಲ 33ನೇ ವಯಸ್ಸಿನಲ್ಲಿ ಪತಿಯನ್ನು ಕಳೆದುಕೊಂಡ ಉಮಾದೇವಿ ಅವರು, ವಿಧವೆಯ ಬದುಕಿನ ಸಾಮಾಜಿಕ ಹಾಗೂ ಭಾವನಾತ್ಮಕ ಸವಾಲುಗಳ ನಡುವೆಯೇ ಮಕ್ಕಳನ್ನು ಬೆಳೆಸುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ತಮ್ಮ ಬದುಕಿನ ಅನುಭವ, ಅಂತರಂಗದ ಭಾವನೆ ಹಾಗೂ ವರ್ಷಗಳ ಜೀವನಾನುಭವದಿಂದ ದೊರೆತ ಒಳನೋಟಗಳನ್ನು ಕವಿತೆಗಳ ಮೂಲಕ ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು.
ಬದುಕಿನ ಪ್ರತಿಯೊಂದು ಹಂತದಲ್ಲಿಯೂ ಕವಿತೆ ಮನಸ್ಸಿಗೆ ಸಾಂತ್ವನ ನೀಡುವ, ಭಾವನೆಗಳನ್ನು ವ್ಯಕ್ತಪಡಿಸುವ ಹಾಗೂ ಸ್ಫೂರ್ತಿ ತುಂಬುವ ಶಕ್ತಿಯಾಗಿದೆ. ಧೈರ್ಯ, ಪರಿಶ್ರಮ ಮತ್ತು ದೃಢಸಂಕಲ್ಪವಿದ್ದರೆ ಸಾಮಾನ್ಯ ವ್ಯಕ್ತಿಗಳೂ ಅಸಾಮಾನ್ಯ ಸಾಧನೆ ಮಾಡಬಹುದು ಎಂಬುದಕ್ಕೆ ಉಮಾದೇವಿ ಅವರ ಬದುಕೇ ಸಾಕ್ಷಿ. ಮಕ್ಕಳ ಭವಿಷ್ಯ ರೂಪಿಸುವಲ್ಲಿ ತಾಯಿಯ ಪಾತ್ರ ಮಹತ್ವದ್ದಾಗಿದ್ದು, ಇಂತಹ ಛಲಗಾತಿಯರ ಜೀವನಗಾಥೆಗಳು ಸಮಾಜದ ಮಹಿಳೆಯರಿಗೆ ಪ್ರೇರಣೆಯಾಗಬೇಕು ಎಂದರು.ಹಣಕಾಸು ಮತ್ತು ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ವಿಶಾಲ್ ರವಿ, ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಹೇಮಂತ್, ಮೇಜರ್ ಸಿದ್ದಲಿಂಗಯ್ಯ ಹಿರೇಮಠ, ಪಾಲಿಕೆ ಉಪ ಆಯುಕ್ತೆ (ಆಡಳಿತ) ಅನುರಾಧಾ ವಸ್ತ್ರದ, ಡಾ. ಸರ್ವಮಂಗಳ, ಡಾ. ವೀರಣ್ಣ ಮುಧೋಳ, ಡಾ. ರಮೇಶ, ಡಾ. ನಿತಿನ್ ಹಟ್ಟಿಕಾಳ, ಎಸ್ಡಿಎಂ ದಂತ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ. ಮಹಾಂತೇಶ, ಡಾ. ಸಮೀರ್ ದೇಸಾಯಿ, ಡಾ. ವೃಂದಾ, ಡಾ. ವಿದ್ಯಾ, ಡಾ. ಭೂಷಣ ಗ್ರಾಮೋಪಾಧ್ಯಾಯ ಹಾಗೂ ಡಾ. ಅಂಬೇಶ ಮೊಹಿತೆ ಇದ್ದರು.