ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ಸಮಾಜದಲ್ಲಿ ಮಾನವೀಯತೆ ಬದಲಾಗುತ್ತಿದ್ದು, ಸಂಬಂಧಗಳು ನಶಿಸುತ್ತಿರುವ ಇಂದಿನ ದಿನಮಾನಗಳಲ್ಲಿ ಕವಿಗಳು ಸಂಬಂಧಗಳನ್ನು ಬೆಸೆಯುವ ಸೂಜಿಯಾಗಿ ಕವಿತೆ ಹೆಣೆಯಬೇಕು ಎಂದು ಹಿರಿಯ ಸಾಹಿತಿ ಡಾ.ಬಾಳಾಸಾಹೇಬ ಲೋಕಾಪುರ ಸಲಹೆ ನೀಡಿದರು.ಕವಿ ಅಪ್ಪಾಸಾಹೇಬ ಅಲಿಬಾದಿ ಅವರ ಸಮಗ್ರ ಕಾವ್ಯ ಕೃತಿಗಳ ಕಾವ್ಯಾವಲೋಕನ ಹಾಗೂ ಕವಿಗೋಷ್ಠಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕವಿತೆಗಳಿಗೆ ಒಂದು ಸಾಮರ್ಥ್ಯ ಇರುತ್ತದೆ. ಒಂದೇ ಪದದಲ್ಲಿ ಹಲವು ಭಾವಾರ್ಥ ಕಟ್ಟಿಕೊಡಬಹುದು. ಸಾಮಾಜಿಕ ಪರಿವರ್ತನೆ ಕವಿತೆಯ ಉದ್ದೇಶವಾಗಿರಬೇಕು. ಭಾವನೆಯಿಂದಷ್ಟೆ ಕವಿತೆ ಬರೆದರೇ ಸಾಲದು, ಕವಿತೆಗಳಲ್ಲಿ ಸಾಮಾಜಿಕ ಸ್ಪಂದನೆ ಇರಬೇಕು. ಕವಿಗಳು ವಿನಯ, ವಿಸ್ಮಯ ಮತ್ತು ವೈಕರಿ ಸ್ವಭಾವ ಹೊಂದಿರಬೇಕು ಎಂದು ಕಿವಿಮಾತು ಹೇಳಿದರು.
ವಿಜ್ಞಾನ, ತಂತ್ರಜ್ಞಾನ ಬೆಳದಂತೆ ಅನೇಕ ಕವಿಗಳು ಮತ್ತು ಸಾಹಿತಿಗಳು ಸಾಮಾಜಿಕ ಜಾಲತಾಣಗಳನ್ನು ಹೆಚ್ಚಿಗೆ ಬಳಸುತ್ತಿದ್ದಾರೆ. ಕವಿಗಳು ಸದಾ ಅಧ್ಯಯನ ಶೀಲರಾಗಬೇಕು. ಬರಹಗಾರರು ಓದಿದಷ್ಟೂ ಕವಿತೆಗಳು ಪರಿಣಾಮಕಾರಿಯಾಗಿ ಮೂಡಲು ಸಾಧ್ಯ ಎಂದು ತಿಳಿಸಿದರು.ಹಿರಿಯ ವೈದ್ಯ ಡಾ.ಎ.ಎ.ಪಾಂಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕವಿಗಳಿಗೆ ಸಂತೃಪ್ತಿಗಿಂತ ಅತೃಪ್ತಿ ಇರಬೇಕು. ಅತೃಪ್ತಿಯಿದ್ದರೇ ಮಾತ್ರ ಹೆಚ್ಚೆಚ್ಚು ಕವಿತೆಗಳನ್ನು ಹಾಗೂ ಪರಿಣಾಮಕಾರಿ ಕವನಗಳನ್ನು ಬರೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾದ ಸಮಾಜ ಸೇವಕ ರವಿ ಪೂಜಾರಿ, ನ್ಯಾಯವಾದಿ ಹಾಗೂ ರಂಗಭೂಮಿ ಕಲಾವಿದ ಕೆ.ಎಲ್.ಕುಂದರಗಿ ಮಾತನಾಡಿದರು.ಕವಿ ಅಪ್ಪಾಸಾಹೇಬ ಅಲಿಬಾದಿ ಅವರ ಕಾವ್ಯ ಕೃತಿಗಳ ಕುರಿತು ಡಾ.ಪ್ರಿಯಂವಧಾ ಹುಲಗಬಾಳಿ, ಚುಟುಕು ಚೇತನ ಕುರಿತು ದೇವೇಂದ್ರ ಬಿಸ್ವಾಗರ, ವಚನ ಬೆಳಕು ಕುರಿತು ಎಸ್.ಎ.ಗೋಟೆ, ಕೃಷ್ಣೆಯ ಮಡಿಲು ಕುರಿತು ಎನ್.ಬಿ.ಝಾರೆ, ಶ್ರಾವಣ ಸಿಂಚನ ಕುರಿತು ರೋಹಿಣಿ ಯಾದವಾಡ ಸಬಿಕರಿಗೆ ಮನಮುಟ್ಟುವಂತೆ ವಿವರಿಸಿದರು.
ಕವಿ ಅಪ್ಪಾಸಾಹೇಬ ಅಲಿಬಾದಿ ಮಾತನಾಡಿದರು. ನಂತರ ನಡೆದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ 15 ಜನ ಕವಿಗಳು ತಮ್ಮ ಕವನಗಳನ್ನು ಮಂಡಿಸಿದರು. ಈ ಸಂದರ್ಭದಲ್ಲಿ ಸಾಹಿತಿ ಜೆ.ಪಿ.ದೊಡ್ಡಮನಿ, ದೇವೇಂದ್ರ ಬಿಸ್ವಾಗರ, ಡಾ.ಪ್ರಿಯಂವದಾ ಹುಲಗಬಾಳಿ, ರೋಹಿಣಿ ಯಾದವಾಡ, ಧರೆಪ್ಪ ಟಕ್ಕಣ್ಣವರ, ಗಿರೀಶ್ ಬುಠಾಳಿ, ಸಂಪತ್ ಕುಮಾರ್ ಶೆಟ್ಟಿ, ಎಸ್.ಕೆ.ಹೊಳೆಪ್ಪನವರ, ನಾರಾಯಣ ಆನೆ ಕಿಂಡಿ, ಡಾ.ಆರ್.ಎಸ್.ದೊಡ್ಡನಿಂಗಪ್ಪಗೋಳ, ಎಂ.ಸಿ.ಗಂಗಾಧರ, ಎಲ್.ವಿ.ಕುಲಕರ್ಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಡಾ.ಆರ್.ಎಸ್.ದೊಡ್ಡ ನಿಂಗಪ್ಪಗೋಳ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರೇಶ ವಾಘಮೋಡೆ ಕಾರ್ಯಕ್ರಮ ನಿರೂಪಿಸಿದರು. ಭಾರತಿ ಅಲಿಬಾದಿ ವಂದಿಸಿದರು.ಕವಿ ಅಪ್ಪಾಸಾಹೇಬ ಅಲಿಬಾದಿ ಅವರು ಭಾರತೀಯ ಜೀವ ವಿಮಾ ಕಂಪನಿಯ ಕರ್ತವ್ಯದ ಜೊತೆಗೆ ಒಬ್ಬ ಸಾಹಿತಿಯಾಗಿ, ಸಂಘಟಿಕರಾಗಿ, ಚಿಂತಕ, ಪ್ರಕಾಶಕ ಅಷ್ಟೇ ಅಲ್ಲ ಒಬ್ಬ ಪ್ರಗತಿಪರ ಕೃಷಿಕರಾಗಿ ಗಡಿನಾಡಿನಲ್ಲಿ ಸಾಂಸ್ಕೃತಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕವಿತೆಗಳ ಮೂಲಕ ಸಮಾಜ ತಿದ್ದುವ ಕೆಲಸ ಮಾಡುತ್ತಿದ್ದು, ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನೆಗಳ ಅಧ್ಯಕ್ಷರಾಗಿ, ವಿವಿಧ ಸಮ್ಮೇಳನಗಳಲ್ಲಿ ಸರ್ವಾಧ್ಯಕ್ಷರಾಗಿ ನಾಡು, ನುಡಿ ಸಂರಕ್ಷಣೆಗಾಗಿ ಶ್ರಮಿಸುತ್ತಿದ್ದಾರೆ.-ಡಾ.ಬಾಳಾಸಾಹೇಬ ಲೋಕಾಪುರ, ಹಿರಿಯ ಸಾಹಿತಿ.
ಅಥಣಿ ಸಾಹಿತ್ಯ ಕ್ಷೇತ್ರದಲ್ಲಿ ಕವಿ ಅಪ್ಪಾಸಾಹೇಬ ಅಲಿಬಾದಿ ವಿಶೇಷ ಕೊಡುಗೆ ನೀಡಿದ್ದಾರೆ. ಅವರು ನನಗೂ ಕೂಡ ಸಾಹಿತ್ಯದ ಅಭಿರುಚಿ ಹುಟ್ಟಿಸಿದವರು. ಇಂದಿನ ಅನೇಕ ಯುವ ಪೀಳಿಗೆಗೆ ಅವರು ಪ್ರೇರಣೆಯಾಗಿದ್ದಾರೆ.- ಡಾ.ಎ.ಎ.ಪಾಂಗಿ, ಹಿರಿಯ ವೈದ್ಯರು.
ಇತ್ತೀಚಿನ ದಿನಗಳಲ್ಲಿ ಹುಟ್ಟುಹಬ್ಬಗಳ ಆಚರಣೆ ತನ್ನ ಮಹತ್ವವನ್ನು ಕಳೆದುಕೊಳ್ಳುತ್ತಿದೆ. ನನ್ನ 64ನೇ ಹುಟ್ಟುಹಬ್ಬವನ್ನು ನನ್ನ ಬದುಕಿನಲ್ಲಿ ಸಾಹಿತ್ಯ ಕೃಷಿ ಮಾಡಿದ ಸಮಗ್ರ ಕಾವ್ಯ ಕೃತಿಗಳ ಕಾವ್ಯಾವಲೋಕನ ಮತ್ತು ಕವಿಗೋಷ್ಠಿ ಹಮ್ಮಿಕೊಳ್ಳುವ ಮೂಲಕ ಆಚರಿಸಿಕೊಳ್ಳಬೇಕೆಂಬ ಸಂಕಲ್ಪ ಹೊಂದಿದೆ. ಆ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಅನೇಕ ಜನ ಅಭಿಮಾನಿಗಳು ಮತ್ತು ಸಾಹಿತಿಗಳು, ಪತ್ರಕರ್ತರು ಮತ್ತು ಕನ್ನಡಪರ ಸಂಘಟನೆಯ ಎಲ್ಲ ಪದಾಧಿಕಾರಿಗಳಿಗೆ ಮತ್ತು ಇಂದಿನ ಕಾರ್ಯಕ್ರಮದ ಎಲ್ಲ ಅತಿಥಿಗಳಿಗೆ ಚಿರಋಣಿಯಾಗಿದ್ದೇನೆ. ಎಲ್ಲರಿಗೂ ಧನ್ಯವಾದಗಳು.-ಕವಿ ಅಪ್ಪಾಸಾಹೇಬ ಅಲಿಬಾದಿ, ಸಾಹಿತಿ ಅಥಣಿ