ಕವಿಗಳು ಸಮಾಜದಲ್ಲಿನ ಅನ್ಯಾಯ, ದೌರ್ಜನ್ಯ, ದಬ್ಬಾಳಿಕೆ ಶೋಷಣೆ ಪ್ರತಿಭಟಿಸಬೇಕು: ಟಿ.ಸತೀಶ್ ಜವರೇಗೌಡ

| Published : Nov 25 2024, 01:05 AM IST

ಕವಿಗಳು ಸಮಾಜದಲ್ಲಿನ ಅನ್ಯಾಯ, ದೌರ್ಜನ್ಯ, ದಬ್ಬಾಳಿಕೆ ಶೋಷಣೆ ಪ್ರತಿಭಟಿಸಬೇಕು: ಟಿ.ಸತೀಶ್ ಜವರೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಕವಿಗಳು ಜಾತ್ಯತೀತ ಮತ್ತು ಧರ್ಮಾತೀತವಾಗಿ ಬರೆದರೆ ಸಾಲದು. ಅದರಂತೆ ತನ್ನ ಬದುಕಿನಲ್ಲಿಯೂ ಇರಬೇಕು. ಸಮಾಜದ ಎಲ್ಲ ಅನ್ಯಾಯಗಳನ್ನು ಕಾವ್ಯದ ಮೂಲಕ ಪ್ರತಿಭಟಿಸಿ ಮನೆಯಲ್ಲಿ ತಣ್ಣಗೆ ಕೂರದೆ ಅನ್ಯಾಯ ನಡೆದಾಗ ಪಾಲಾಯನ ಮಾಡದೆ ಪರಿಸ್ಥಿತಿಗೆ ಸ್ಪಂದಿಸಿ ಜನರೊಂದಿಗೆ ಬೆರೆತು ಹೋರಾಟ ನಡೆಸಬೇಕಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಕವಿಗಳು ತಮ್ಮ ಕಾವ್ಯದ ಮೂಲಕ ಸಮಕಾಲೀನ ಸಮಾಜದಲ್ಲಿ ನಿರಂತರವಾಗಿ ನಡೆಯುತ್ತಿರುವ ಅನ್ಯಾಯ, ದೌರ್ಜನ್ಯ, ದಬ್ಬಾಳಿಕೆ, ಶೋಷಣೆಯನ್ನು ಪ್ರತಿಭಟಿಸುವ ಮನೋಭಾವ ಬೆಳೆಸಿಕೊಳ್ಳಬೇಕಿದೆ ಎಂದು ಜಿಲ್ಲಾ ಯುವ ಬರಹಗಾರರ ಬಳಗದ ಅಧ್ಯಕ್ಷ ಹಾಗೂ ಕವಿ ಟಿ.ಸತೀಶ್ ಜವರೇಗೌಡ ಹೇಳಿದರು.

ಪಟ್ಟಣದ ಶ್ರೀಬಾಲಶನೇಶ್ವರಸ್ವಾಮಿ ಭಕ್ತ ಮಂಡಳಿಯಿಂದ ಕಾರ್ತಿಕ ಮಾಸದ ಲಕ್ಷ ದೀಪೋತ್ಸವ ಅಂಗವಾಗಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ, ಕಾವ್ಯಸಂಗಮ-ಕವಿಗೋಷ್ಠಿ ಮತ್ತು ಸರಿತಾ ಎಚ್.ಕಾಡುಮಲ್ಲಿಗೆ ಅವರ ಕ್ರೂರ ಕಣ್ಣು ಪುಸ್ತಕ ಲೋಕಾರ್ಪಣೆ ಸಮಾರಂಭ ಉದ್ಫಾಟಿಸಿ ಮಾತನಾಡಿದರು.

ಕವಿಗಳು ಜಾತ್ಯತೀತ ಮತ್ತು ಧರ್ಮಾತೀತವಾಗಿ ಬರೆದರೆ ಸಾಲದು. ಅದರಂತೆ ತನ್ನ ಬದುಕಿನಲ್ಲಿಯೂ ಇರಬೇಕು. ಸಮಾಜದ ಎಲ್ಲ ಅನ್ಯಾಯಗಳನ್ನು ಕಾವ್ಯದ ಮೂಲಕ ಪ್ರತಿಭಟಿಸಿ ಮನೆಯಲ್ಲಿ ತಣ್ಣಗೆ ಕೂರದೆ ಅನ್ಯಾಯ ನಡೆದಾಗ ಪಾಲಾಯನ ಮಾಡದೆ ಪರಿಸ್ಥಿತಿಗೆ ಸ್ಪಂದಿಸಿ ಜನರೊಂದಿಗೆ ಬೆರೆತು ಹೋರಾಟ ನಡೆಸಬೇಕಿದೆ ಎಂದರು.

ಕವಿಯ ಪ್ರತಿಭಟನೆ ಆವೇಶ ಮತ್ತು ಕಾವು ಬರೀ ಕಾವ್ಯದಲ್ಲದೆ ವೈಯಕ್ತಿಕ ಬದುಕಿನಲ್ಲಿಯೂ ಇರಬೇಕು. ಕವಿ, ಕತೆಗಾರ, ಕಾದಂಬರಿಕಾರ, ನಾಟಕಕಾರನಾದವನು ಸಮಾಜದ ಎಲ್ಲಾ ಅನ್ಯಾಯಗಳ ವಿರುದ್ಧ ಗಟ್ಟಿಯಾಗಿ ದನಿ ಎತ್ತಬೇಕಿದೆ ಎಂದು ಸಲಹೆ ನೀಡಿದರು.

ನಮ್ಮ ಸಾಹಿತ್ಯ ಪ್ರಾರಂಭವಾದದ್ದೇ ಕಾವ್ಯ ಪರಂಪರೆಯಿಂದ. ಆದಿ ಕವಿ ಪಂಪರ ಮನುಷ್ಯ ಜಾತಿ ತಾನೊಂದೇ ವೊಲಂ ಎಂಬ ಆಶಯ ಕನ್ನಡ ಕಾವ್ಯ ಪರಂಪರೆಯ ಒಂದು ಚಾರಿತ್ರಿಕ ಮೌಲ್ಯ. ಇಂತಹ ಪರಂಪರೆ ಮುಂದುವರಿಸಿದ ರಾಷ್ಟ್ರಕವಿ ಕುವೆಂಪು ವಿಶ್ವ ಮಾನವತ್ವದ ದೃಷ್ಟಿಯಿಂದ ತಮ್ಮ ಸಾಹಿತ್ಯ ಸೃಷ್ಟಿಸುತ್ತಾ ಹೋದರು ಎಂದರು.

ದೇಶಿಯ ಭಾಷೆಗಳಲ್ಲೇ ತಮಿಳು ಭಾಷೆ ನಂತರ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನದ ಮನ್ನಣೆ ದೊರೆತಿದೆ. ಕನ್ನಡ ಸಾಹಿತ್ಯದ ಸಂಪನ್ನತೆ ಇಮ್ಮಡಿಯಾಗಲು ಸಮಾಜದ ಎಲ್ಲಾ ಜನವರ್ಗಗಳು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಸಾಮಾನ್ಯನಿಂದ ದೇಶದ ಪ್ರಧಾನಿಯವರೆಗೂ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ ಎಂಬುದನ್ನು ಅರಿಯಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಲೇಖಕ ಮತ್ತು ಪ್ರಾಧ್ಯಾಪಕ ಹಳ್ಳಿವೆಂಕಟೇಶ್ ಮಾತನಾಡಿ, ಕಾವ್ಯ ರಚನೆಯೊಂದು ದಿವ್ಯವಾದ ಸಾಧನೆ. ಅದನ್ನು ಸಿದ್ಧಿಸಿಕೊಳ್ಳಲು ತ್ಯಾಗವೂ ಬೇಕು. ಮನಸ್ಸಿನ ಶುದ್ಧತೆ, ಗುರುಪರಂಪರೆ, ನಿರಂತರ ಓದು ಬೇಕು. ಕವಿಗೆ ನೋಡುವ ಒಳಗಣ್ಣು ಮತ್ತು ಕೇಳುವ ಕಿವಿ ಎರಡು ಇರಬೇಕು ಎಂದರು.

ವಾಲ್ಮೀಕಿಯೊಬ್ಬರೇ ಕವಿ, ನಾವ್ಯಾರು ಕವಿಗಳಲ್ಲ. ಅವರು ಬರೆಯದೇ ಬಿಟ್ಟಿದ್ದನ್ನು ನಾವು ಬರೆಯುವುದಕ್ಕೆ ಪ್ರಯತ್ನಿಸಬೇಕು. ಇಂಥ ಪ್ರಯತ್ನದಲ್ಲಿ ಗೆದ್ದವರು ಕವಿ ಕುವೆಂಪು ಮಾತ್ರ. ಕವಿ ಜೇಡರ ಬಲೆಯಂತೆ, ರೇಷ್ಮೆಯ ಹುಳುವಿನಂತೆ ಬದುಕಿದರೂ ಅವನು ಕಟ್ಟುವ ಕಾವ್ಯದ ಬಲೆ ಮತ್ತು ನೂಲಿಗೆ ತುಂಬಾ ಮೌಲ್ಯವಿರುತ್ತದೆ. ಸಮಾಜದಲ್ಲಿ ನಡೆಯುವ ಹೊಸ ಹೊಸ ಘಟನೆಗಳಿಗೆ ನಮ್ಮನ್ನು ತೆರೆದುಕೊಳ್ಳಬೇಕು. ನಾಡು ನುಡಿ, ತಾಯಿ, ಪ್ರೇಮ, ಕಾಮದ ಬಗ್ಗೆ ನಾವೆಷ್ಟೇ ಬರೆದರೂ ಅವೆಲ್ಲ ನಮ್ಮ ಆತ್ಮತೃಪ್ತಿಗಷ್ಟೇ. ಸಹೃದಯನ ತೃಪ್ತಿಗೆ ಹೊಸ ಕಾವ್ಯದ ಸಮೃದ್ಧ ಫಸಲು ಬರಬೇಕು ಎಂದರು.

ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ‌‌‌‌‌.‌ಶಿವಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕವಯಿತ್ರಿ ನಿಶಾ ಮುಳಗುಂದ, ಕೃತಿಕಾರ್ತಿ ಸರಿತಾ ಎಚ್.ಕಾಡುಮಲ್ಲಿಗೆ, ಸಾಹಿತಿ ದೇವಪ್ಪ, ಪುರಸಭೆ ಸದಸ್ಯ ಎ.ಕೃಷ್ಣ ಅಣ್ಣಯ್ಯ, ಲಿಂಗಾಯುತ ಮಹಾಸಭಾದ ಜಿಲ್ಲಾಧ್ಯಕ್ಷ ಎಂ.ಎಸ್.ಮಂಜುನಾಥ್, ಬಾಲಶನೇಶ್ವರಸ್ವಾಮಿ ಭಕ್ತ ಮಂಡಳಿ ಧರ್ಮದರ್ಶಿ ರವಿತೇಜ, ಅಭಿನವಶ್ರೀ ಪ್ರಶಸ್ತಿ ಪುರಸ್ಕೃತ ಕಟ್ಟೆ ಕೃಷ್ಣಸ್ವಾಮಿ ಉಪಸ್ಥಿತರಿದ್ದರು. ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ 50ಕ್ಕೂ ಹೆಚ್ಚು ಕವಿಗಳು ಕವಿತೆಗಳನ್ನು ವಾಚಿಸಿ ಗಮನಸೆಳೆದರು.