ಸಾರಾಂಶ
ಹುಬ್ಬಳ್ಳಿ ತಾಲೂಕಿನ ಕಿರೇಸೂರ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿರುವ ಅರಳಿಕಟ್ಟೆಯ ಕೆಳಗೆ ನ. 14ರಿಂದ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಬೆಂಗಳೂರು, ಐಎಫ್‌ಎ ಸಹಯೋಗದಲ್ಲಿ ಕಲಿ-ಕಲಿಸು ಶಾಲಾ ಅಂತರ್ಗತ ಯೋಜನೆಯ ಅಡಿ "ಅರಳಿಕಟ್ಟೆ ತೆರೆದ ವಾಚನಾಲಯ " ಆರಂಭವಾಗಿದೆ.
ಅಜೀಜಅಹ್ಮದ ಬಳಗಾನೂರ
ಹುಬ್ಬಳ್ಳಿ:ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಗೀಳು ತಪ್ಪಿಸಲು ಪ್ರೌಢಶಾಲಾ ಸಹ ಶಿಕ್ಷಕರೋರ್ವರು ಶಾಲಾ ಆವರಣದಲ್ಲೇ ವಿದ್ಯಾರ್ಥಿಗಳಿಗೆ ಅರಳಿಕಟ್ಟೆ ವಾಚನಾಲಯ ಆರಂಭಿಸಿ ಮಾದರಿ ಎನಿಸಿದ್ದಾರೆ.
ಈ ವಾಚನಾಲಯ ಭಾನುವಾರವೂ ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳು ಪತ್ರಿಕೆ, ಕಥೆ, ಕಾದಂಬರಿ ಓದಿನತ್ತ ಆಸಕ್ತಿ ತೋರುತ್ತಿರುವುದಕ್ಕೆ ಪಾಲಕರು ಖುಷಿಯಾಗಿದ್ದಾರೆ.ತಾಲೂಕಿನ ಕಿರೇಸೂರ ಗ್ರಾಮದಲ್ಲಿ ಇರುವ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿರುವ ಅರಳಿಕಟ್ಟೆಯ ಕೆಳಗೆ ನ. 14ರಿಂದ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಬೆಂಗಳೂರು, ಐಎಫ್‌ಎ (India Foundation for the Arts) ಸಹಯೋಗದಲ್ಲಿ ಕಲಿ-ಕಲಿಸು ಶಾಲಾ ಅಂತರ್ಗತ ಯೋಜನೆಯ ಅಡಿ "ಅರಳಿಕಟ್ಟೆ ತೆರೆದ ವಾಚನಾಲಯ " ಆರಂಭವಾಗಿದೆ.
ನಿತ್ಯವೂ ಇಲ್ಲಿಗೆ ಆಗಮಿಸುವ ನೂರಾರು ಮಕ್ಕಳು ದಿನಪತ್ರಿಕೆ, ಕಥೆ, ಕವನ, ಕಾದಂಬರಿ ಪುಸ್ತಕಗಳನ್ನು ಉತ್ಸಾಹದಿಂದ ಓದುತ್ತಿದ್ದಾರೆ. ಈ ಮಾದರಿಯ ವಾಚನಾಲಯ ರಾಜ್ಯದಲ್ಲಿಯೇ ಮೊದಲು ಎಂಬುದು ವಿಶೇಷ.ಮರದ ಕೆಳಗೆ ವಾಚನಾಲಯ:
ನಮ್ಮ ಪೂರ್ವಜರು ಮೊದಲು ಶಿಕ್ಷಣ ಪಡೆಯುತ್ತಿದ್ದು ಇದೇ ಅರಳಿಕಟ್ಟೆಯ ಕೆಳಗೆ. ಈ ಅರಳಿ ಮರದಲ್ಲಿ ಶುದ್ಧವಾದ ಆಮ್ಲಜನಕವು ಹೇರಳವಾಗಿ ದೊರೆಯುತ್ತದೆ. ಮಕ್ಕಳು ಕಲಿಕೆಯ ನೆಪದಲ್ಲಿ ಇದರ ಆಶ್ರಯ ಪಡೆಯುವುದರಿಂದ ಹಲವು ರೀತಿಯ ಕಾಯಿಲೆಗಳಿಂದ ಮುಕ್ತಿ ದೊರೆಯಬಹುದಾಗಿದೆ. ಹಾಗಾಗಿ ಈ ಮರದ ಕೆಳಗೆ ನಿತ್ಯವೂ ಮಕ್ಕಳನ್ನು ಸೇರಿಸಿ ಒಂದಿಲ್ಲೊಂದು ಚಟುವಟಿಕೆ ನಡೆಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.ಈ ಶಾಲೆಯ ಸಹ ಶಿಕ್ಷಕ ಡಾ. ಲಿಂಗರಾಜ ರಾಮಾಪುರ ಅವರ ಹಲವು ವರ್ಷಗಳ ಕಲ್ಪನೆ ಈಗ ಸಾಕಾರಗೊಂಡಿದೆ. ಇದಕ್ಕೆ ಕೈಜೋಡಿಸಿದ್ದು ಐಎಫ್‌ಐ. ಸಾಹಿತ್ಯ, ಸಂಗೀತ, ಚಿತ್ರಕಲೆ, ಅಭಿನಯ, ಪೇಪರ್ ಕ್ರಾಪ್ಟ್ ಇತ್ಯಾದಿ ಚಟುವಟಿಕೆಯನ್ನು ಪ್ರತಿ ಶನಿವಾರ ಮತ್ತು ಭಾನುವಾರ ನಡೆಸಲಾಗುತ್ತದೆ.
ನಿತ್ಯವೂ ಬೆಳಗ್ಗೆ 9.30ರಿಂದ ಸಂಜೆ 5.30ರ ವರೆಗೆ ಕಾರ್ಯ ನಿರ್ವಹಿಸುವ ಈ ವಾಚನಾಲಯದ ಸಂಪೂರ್ಣ ನಿರ್ವಹಣೆ ವಿದ್ಯಾರ್ಥಿಗಳಿಂದಲೇ. ಶಾಲೆ ಆರಂಭವಾಗುವ ಪೂರ್ವ, ಶಾಲಾ ಮಧ್ಯದ ಬಿಡುವಿನ ವೇಳೆ ಹಾಗೂ ಶಾಲಾ ಅವಧಿಯ ಬಳಿಕ ಮಕ್ಕಳು ಇಲ್ಲಿಗೆ ಆಗಮಿಸಿ ವ್ಯಾಸಂಗ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ.ಪಕ್ಷಿಗಳ ಕುರಿತು ಅಧ್ಯಯನ:
ಕಲಿಕೆಯೊಂದಿಗೆ ಈ ಅರಳಿಮರ ಹಾಗೂ ಶಾಲಾ ಆವರಣದಲ್ಲಿರುವ ಹಲವು ಜಾತಿಯ ಮರಗಳಲ್ಲಿ ವಾಸಿಸುವ ಬಗೆ-ಬಗೆಯ ಪಕ್ಷಿಗಳು ಹಾಗೂ ಜೀವವೈವಿಧ್ಯತೆಯ ಕುರಿತು ಮಕ್ಕಳಿಗೆ ಅಧ್ಯಯನದ ಮೂಲಕ ಅರಿವು ಮೂಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಗ್ರಾಮದಲ್ಲಿರುವ ವಿವಿಧ ಜಾತಿಯ ಮರಗಳ ಕುರಿತು ಸಮೀಕ್ಷೆ ನಡೆಯುವ ಉದ್ದೇಶವನ್ನೂ ಹೊಂದಲಾಗಿದೆ.ಐಎಫ್‌ಎನಿಂದ ಪ್ರೋತ್ಸಾಹ:
ಸ್ಥಳೀಯ ಸಂಪನ್ಮೂಲ ಬಳಸಿಕೊಂಡು ವಿಶಿಷ್ಟ ರೂಪದಲ್ಲಿ ಮಕ್ಕಳಿಗೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆ ಕುರಿತು ಕಲಿಸುವ 6 ಜನ ಶಿಕ್ಷಕರನ್ನು ಗುರುತಿಸಿ ತಲಾ ₹1 ಲಕ್ಷ ಪ್ರೋತ್ಸಾಹಧನ ನೀಡಿದೆ. ಇದರಲ್ಲಿ ಡಾ. ಲಿಂಗರಾಜ ರಾಮಾಪುರ ಅವರೂ ಒಬ್ಬರು ಎಂದು ಐಎಫ್‌ಎನ ನಿರ್ದೇಶಕ ಕೃಷ್ಣಮೂರ್ತಿ ''''ಕನ್ನಡಪ್ರಭ''''ಕ್ಕೆ ತಿಳಿಸಿದರು.ಶಾಲಾ ಆವರಣದಲ್ಲಿಯೇ ಅರಳಿಕಟ್ಟೆಯ ಕೆಳಗೆ ಈ ರೀತಿಯ ತೆರೆದ ವಾಚನಾಲಯ ನಿರ್ಮಿಸಬೇಕು ಎಂಬುದು ಹಲವು ವರ್ಷಗಳ ಕನಸು ಈಗ ನನಸಾಗಿದೆ. ಮುಂದಿನ ದಿನಗಳಲ್ಲೂ ಈ ಯೋಜನೆ ಮುಂದುವರಿಸಲಾಗುವುದು ಎಂದು ಸಹ ಶಿಕ್ಷಕ ಡಾ. ಲಿಂಗರಾಜ ರಾಮಾಪುರ ಹೇಳಿದರು.