ಸಾರಾಂಶ
ಶ್ರೀಶೈಲ ಮಠದ
ಕನ್ನಡಪ್ರಭ ವಾರ್ತೆ ಬೆಳಗಾವಿನಾಗರಿಕರೇ ನಿಮ್ಮ ಸಮಸ್ಯೆ, ದೂರುಗಳಿದ್ದರೇ ನೀವು ಪೊಲೀಸ್ ಠಾಣೆಗೆ ಹೋಗಿ ದೂರು ನೀಡುವ ಅಗತ್ಯವಿಲ್ಲ. ಏಕೆಂದರೆ ಪೊಲೀಸ್ ಸಿಬ್ಬಂದಿಯೇ ನಿಮ್ಮ ಸಮಸ್ಯೆ, ಅಹವಾಲು ಆಲಿಸಲು ನಿಮ್ಮ ಮನೆ ಬಾಗಿಲಿಗೆ ಬರುತ್ತಿದ್ದಾರೆ.
ಹೌದು, ನಾಗರಿಕರ ಸಮಸ್ಯೆ, ಸಲಹೆ, ದೂರು ಆಲಿಸಲು ಪೊಲೀಸ್ ಸಿಬ್ಬಂದಿಯೇ ಮನೆ ಬಾಗಿಲಿಗೆ ಬರುವಂಥ ವಿನೂತನ ಪರಿಕಲ್ಪನೆಯಾದ ಮನೆ-ಮನೆಗೆ ಪೊಲೀಸ್ ಭೇಟಿ ಕಾರ್ಯಕ್ರಮವನ್ನು ಬೆಳಗಾವಿ ನಗರ ಪೊಲೀಸ್ ಇಲಾಖೆ ಅನುಷ್ಠಾನಗೊಳಿಸಿದೆ. ಪ್ರಸ್ತುತ ಪೊಲೀಸ್ ವ್ಯವಸ್ಥೆಯು ಬಹುತೇಕವಾಗಿ ಪ್ರತಿಕ್ರಿಯೆ ಸೇವೆಯನ್ನು ಮಾತ್ರವೇ ಈವರೆಗೆ ಒದಗಿಸುತ್ತಿತ್ತು. ಅಂದರೆ ಸಾರ್ವಜನಿಕರು ನೀಡುವ ದೂರುಗಳ ಆಧಾರದ ಮೇಲೆ ಪ್ರತಿಕ್ರಿಯಿಸುತ್ತಿತ್ತು. ಈ ವ್ಯವಸ್ಥೆಯನ್ನುಸಕ್ರಿಯ ಸೇವೆಯನ್ನಾಗಿಸಿ ಜನ ಸ್ನೇಹಿಯನ್ನಾಗಿಸುತ್ತ ಹೆಜ್ಜೆ ಇಡಲಾಗುತ್ತಿದೆ. ಜನರು ಮತ್ತು ಪೊಲೀಸರು ನಡುವೆ ನಿಕಟ ಸಂಬಂಧ ಮೂಡಲಿದೆ.ಸಮಾಜದಲ್ಲಿ ಗಂಭೀರ ಸಮಸ್ಯೆ ಉದ್ಭವಿಸುವ ಮೊದಲೇ ಪರಿಹಾರೋಪಾಯಗಳೊಂದಿಗೆ ಸನ್ನದ್ಧರಾಗಿಸುವ ಕಾರ್ಯಕ್ರಮ ಇದಾಗಿದೆ.ಬೆಳಗಾವಿ ಪೊಲೀಸ್ ಆಯುಕ್ತರ ಕಚೇರಿ ವ್ಯಾಪ್ತಿಯಲ್ಲಿರುವ ಪ್ರತಿಯೊಂದು ಪೊಲೀಸ್ ಠಾಣೆಗಳ ಸರಹದ್ದುಗಳ ಭೌಗೋಳಿಕ ಪ್ರದೇಶಗಳನ್ನು ವಿಂಗಡಿಸಿಕೊಳ್ಳುವುದು (ಇ-ಬೀಟ್ ವ್ಯವಸ್ಥೆ) ಮತ್ತು ಮನೆಗಳನ್ನು ಪಟ್ಟಿ ಮಾಡಿಕೊಳ್ಳುವುದು, ನಂತರ 50 ಮನೆಗಳ ಸಮೂಹವನ್ನು ರಚಿಸಿಕೊಂಡು ಬೀಟ್ ಪೊಲೀಸ್ ಸಿಬ್ಬಂದಿ ಎಲ್ಲ ಮನೆಗಳಿಗೆ ಭೇಟಿ ನೀಡುವ ಉದ್ದೇಶ ಹೊಂದಿದ್ದಾರೆ. ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಪೊಲೀಸ್ ಠಾಣೆ ಮತ್ತು ಪೊಲೀಸ್ ಅಧಿಕಾರಿಗಳ ದೂರವಾಣಿ ಸಂಖ್ಯೆ, ನಿಯಂತ್ರಣ ಕೊಠಡಿ ಸಂಖ್ಯೆ ನೀಡಿ, ಎಂತಹದ್ದೇ ಪರಿಸ್ಥಿತಿಯಲ್ಲಿ ಪೊಲೀಸ್ ಇಲಾಖೆಗೆ ಕರೆ ಮಾಡುವಂತೆ ಪ್ರೋತ್ಸಾಹಿಸಲಾಗುತ್ತಿದೆ. ಠಾಣಾಧಿಕಾರಿಗಳು ತಮ್ಮ ಬೀಟ್ ಅಧಿಕಾರಿ ಮತ್ತು ಸಿಬ್ಬಂದಿ ಸಂವಹಿಸುವ ಸಾರ್ವಜನಿಕ ಅಹವಾಲುಗಳಿಗೆ ಸೂಕ್ತವಾಗಿ ಸ್ಪಂದಿಸಬೇಕು. ಪರಿಹಾರ ಒದಗಿಸಲು ಸ್ಥಳಕ್ಕೆ ಭೇಟಿ ನೀಡಬೇಕು. ಬೇರೆ ಇಲಾಖೆಗೆ ಸಂಬಂಧಿಸಿದ ಅಹವಾಲು ಇದ್ದರೆ, ಆಯಾಯ ಇಲಾಖೆಗೆ ಕಳುಹಿಸಿಕೊಡಲಾಗುವುದು ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ಕನ್ನಡಪ್ರಭಕ್ಕೆ ತಿಳಿಸಿದರು.ಪೊಲೀಸರೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಅವಕಾಶ ಕಲ್ಪಿಸಲಾಗುತ್ತದೆ. ಸಮಾಜ ಘಾತುಕ ಶಕ್ತಿಗಳವಿರುದ್ಧ ದೂರು ನೀಡುವ ವ್ಯಕ್ತಿಗಳ ಹೆಸರನ್ನು ಗುಪ್ತವಾಗಿಡಲಾಗುತ್ತದೆ. ನಾಗರಿಕ ಸ್ನೇಹಿಯಾಗಿ ಪೊಲೀಸ್ ಇಲಾಖೆ ಕಾರ್ಯನಿರ್ವಹಿಸಲಿದೆ.ಮಹಿಳೆ, ಮಕ್ಕಳ ಸುರಕ್ಷತೆಗೆ ಒತ್ತು:
ಮಹಿಳೆ ಮತ್ತು ಮಕ್ಕಳ ಸುರಕ್ಷತೆಗೆ ಗರಿಷ್ಠ ಒತ್ತು ನೀಡಬೇಕು. ಒಂಟಿ ಮಹಿಳೆಯರು ಏಕಾಂಗಿ ಹಿರಿಯ ನಾಗರಿಕರು ವಿಶೇಷ ಚೇತನರು ಅನಾರೋಗ್ಯ ಪೀಡಿತ ವ್ಯಕ್ತಿಗಳಿಗೆ ಹೆಚ್ಚಿನ ಬೆಂಬಲ ಸಹಾಯದ ಅವಶ್ಯಕತೆ ಇರುತ್ತದೆ. ಇಂತಹವರು ವಾಸಿಸುವ ಮನೆಗಳಿಗೆ ಪೊಲೀಸ್ ಸಿಬ್ಬಂದಿ ಸಾಧ್ಯವಾದಷ್ಟು ಭೇಟಿ ನೀಡಬೇಕು. ಜನರು ನಿರ್ಭಯವಾಗಿ ವಾಸಿಸುವ ವಾತಾವರಣ ಕಲ್ಪಿಸಬೇಕು. ಮನೆ ಮನೆಗಳಲ್ಲಿ ಸ್ವೀಕೃತವಾಗುವ ಎಲ್ಲ ಅಹವಾಲು, ದೂರುಗಳ ಪಟ್ಟಿಯನ್ನು ಒಂದು ರಿಜಿಸ್ಟರ್‌ನಲ್ಲಿ ದಾಖಲಿಸಬೇಕು. ಅಹವಾಲುಗಳ ವಿವರ ದೂರುದಾರರ ಹೆಸರು ಸಂಪರ್ಕ ಸಂಖ್ಯೆ , ವಿಳಾಸ ಕೈಗೊಂಡ ಕ್ರಮಗಳು ಒದಗಿಸಲಾದ ಪರಿಹಾರ ಮುಂತಾದ ಮಾಹಿತಿಯನ್ನು ನಮೂದಿಸಬೇಕು. ಬಳಿಕ ಕ್ರೂಡೀಕೃತ ಅಂಕಿ ಅಂಶಗಳ ಮಾಹಿತಿಯನ್ನು ನೀಡುವಂತೆ ಸೂಚಿಸಲಾಗಿದೆ. ಮನೆ ಮನೆ ಪೊಲೀಸ್ ಕಾರ್ಯಕ್ರಮದ ಪರಿಣಾಮಕಾರಿ ಜಾರಿಗಾಗಿ ಬೆಳಗಾವಿ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ 55 ಬೀಟ್‌ಗಳ ಪೊಲೀಸ್ ಸಿಬ್ಬಂದಿ ಈಗಾಗಲೇ ಮನೆ ಮನೆಗೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಅಹವಾಲು ಆಲಿಸುತ್ತಿದ್ದಾರೆ.ಜನಜಾಗೃತಿ:ಮನೆ ಭೇಟಿಗಳ ಸಮಯದಲ್ಲಿ, ಅಧಿಕಾರಿಗಳು ಸೈಬರ್ ಅಪರಾಧಗಳು, ಮಾದಕ ದ್ರವ್ಯ ಮತ್ತು ಮಾದಕ ದ್ರವ್ಯ ಸೇವನೆ, ಬಾಲಾಪರಾಧಿಗಳು, ಪೋಕ್ಸೊ ಕಾಯ್ದೆ, ಮನೆ ಕಳ್ಳತನಗಳು, ಸರಗಳ್ಳತನ, ಸಂಚಾರ ನಿಯಮಗಳು ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ಸಾರ್ವಜನಿಕರೊಂದಿಗೆ ತೊಡಗಿಸಿಕೊಂಡಿದ್ದಾರೆ. ನಿವಾಸಿಗಳ ಹೆಸರುಗಳು ಮತ್ತು ಮೊಬೈಲ್ ಫೋನ್ ಸಂಖ್ಯೆಗಳನ್ನು ಸಂಗ್ರಹಿಸಲಾಗುವುದು ಮತ್ತು ಅವರ ದೂರುಗಳು, ಕುಂದುಕೊರತೆಗಳು ಮತ್ತು ವಿನಂತಿಗಳನ್ನು ಮುಂದಿನ ಕ್ರಮಕ್ಕಾಗಿ ದಾಖಲಿಸಲಾಗುತ್ತಿದೆ. ಪ್ರತಿಯೊಂದು ಠಾಣೆಯಲ್ಲಿ ಪಿಐ,ಪಿಎಸ್‌ಐಗಳು, ಎಎಸ್‌ಐಗಳು ಮತ್ತು ಪುರುಷ ಮತ್ತು ಮಹಿಳಾ ಸಿಬ್ಬಂದಿಯನ್ನು ಒಳಗೊಂಡ ಮೀಸಲಾದ ತಂಡವನ್ನು ರಚಿಸಲಾಗಿದೆ.ಬೆಳಗಾವಿ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಜನರಲ್ಲಿ ವಿಶ್ವಾಸ ಮೂಡಿಸುವ ಹಾಗೂ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮನೆ ಮನೆಗೆ ಪೊಲೀಸ್ ಭೇಟಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದೆ. ಜನರ ಸಮಸ್ಯೆ ಆಲಿಸಲು ಪೊಲೀಸರೇ ಮನೆ ಮನೆಗೆ ಭೇಟಿ ನೀಡುವರು.ಭೂಷಣ ಬೊರಸೆ, ಪೊಲೀಸ್ ಆಯುಕ್ತರು, ಬೆಳಗಾವಿ