ಸನ್ನೆ ಭಾಷೆಯಲ್ಲಿ ಪೊಲೀಸ್‌ ಆಯುಕ್ತರ ಸುದ್ದಿಗೋಷ್ಠಿ

| Published : Sep 24 2024, 02:01 AM IST

ಸನ್ನೆ ಭಾಷೆಯಲ್ಲಿ ಪೊಲೀಸ್‌ ಆಯುಕ್ತರ ಸುದ್ದಿಗೋಷ್ಠಿ
Share this Article
  • FB
  • TW
  • Linkdin
  • Email

ಸಾರಾಂಶ

ಅಂತಾರಾಷ್ಟ್ರೀಯ ಸನ್ನೆ ಭಾಷೆ ದಿನಾಚರಣೆ ಪ್ರಯುಕ್ತ ನಗರ ಪೊಲೀಸರು ‘ವಿಶೇಷ’ ಎಂಬ ಸರ್ಕಾರೇತರ ಸಂಸ್ಥೆಯ ಸಹಯೋಗದಲ್ಲಿ ಸೋಮವಾರ ಸನ್ನೆ ಭಾಷೆ ಕುರಿತು ಡಿಸಿಪಿ ಮಟ್ಟದ ಅಧಿಕಾರಿಗಳಿಗೆ ಕಾರ್ಯಾಗಾರ ಆಯೋಜಿಸಿದ್ದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಂತಾರಾಷ್ಟ್ರೀಯ ಸನ್ನೆ ಭಾಷೆ ದಿನಾಚರಣೆ ಪ್ರಯುಕ್ತ ನಗರ ಪೊಲೀಸರು ‘ವಿಶೇಷ’ ಎಂಬ ಸರ್ಕಾರೇತರ ಸಂಸ್ಥೆಯ ಸಹಯೋಗದಲ್ಲಿ ಸೋಮವಾರ ಸನ್ನೆ ಭಾಷೆ ಕುರಿತು ಡಿಸಿಪಿ ಮಟ್ಟದ ಅಧಿಕಾರಿಗಳಿಗೆ ಕಾರ್ಯಾಗಾರ ಆಯೋಜಿಸಿದ್ದರು.

ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ನಡೆದ ಕಾರ್ಯಾಗಾರದಲ್ಲಿ ಡಿಸಿಪಿ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. ವಿಶೇಷ ಎನ್‌ಜಿಓ ಸನ್ನೆ ಭಾಷೆ ತಜ್ಞರು ಸನ್ನೆ ಭಾಷೆ, ಸನ್ನೆ ಭಾಷೆ ಸಂವಹನ ಕುರಿತು ಉಪನ್ಯಾಸ ನೀಡಿದರು.

ಸನ್ನೆ ಭಾಷೆಯಲ್ಲಿ ಸುದ್ದಿಗೋಷ್ಠಿ:

ಇದಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ಅವರ ನಗರದ ವಿವಿಧ ಠಾಣೆಗಳ ಪೊಲೀಸರು ಪತ್ತೆ ಮಾಡಿದ ಅಪರಾಧ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ವಿಶೇಷ ಎನ್‌ಜಿಓದ ಸನ್ನೆ ಭಾಷೆ ತಜ್ಞೆ ಮೋಕ್ಷಾ ಅವರು ನಗರ ಪೊಲೀಸ್‌ ಆಯುಕ್ತರ ಮಾತುಗಳನ್ನು ಸನ್ನೆ ಭಾಷೆಯಲ್ಲೇ ವಿವರಿಸಿದರು.

ಈ ವೇಳೆ ಮಾತನಾಡಿದ ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ, ಸನ್ನೆ ಭಾಷೆ ಕೂಡ ಒಂದು ಸಂವಹನ ಮಾಧ್ಯಮವಾಗಿದೆ. ಎಲ್ಲ ಮಾಹಿತಿ, ಸಂದೇಶ ಎಲ್ಲರಿಗೂ ತಲುಪಬೇಕು. ಈ ನಿಟ್ಟಿನಲ್ಲಿ ಅರ್ಥವಾಗುವ ಭಾಷೆಯಲ್ಲಿ ಸಂವಹನ ನಡೆಸಲು ಪ್ರಯತ್ನಿಸುತ್ತಿದ್ದೇವೆ. ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟವಾಗಿದೆ. ಎಲ್ಲ ಜನರ ಗುಣ-ಅವಗುಣಗಳ ನಡುವೆ ದೈಹಿಕ ವಿಶಿಷ್ಟತೆ, ಬಲ-ದುರ್ಬಲಗಳ ನಡುವೆ ನಾವು ಎಲ್ಲರ ರಕ್ಷಣೆಗೆ ಇದ್ದೇವೆ ಎಂಬ ಸಂದೇಶ ನೀಡಬೇಕು. ಈ ನಿಟ್ಟಿನಲ್ಲಿ ಡಿಸಿಪಿ ಮಟ್ಟದ ಅಧಿಕಾರಿಗಳಿಗೆ ಸನ್ನೆ ಭಾಷೆ ಕುರಿತು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಾಗಾರದಲ್ಲಿ ಸನ್ನೆ ಭಾಷೆ ಬಳಕೆ, ಸಂವಹನ, ಸಮಸ್ಯೆಗಳು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಲಾಗುತ್ತಿದೆ ಎಂದು ಹೇಳಿದರು.