ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಉಳ್ಳಾಲದಲ್ಲಿ ಮೊಗವೀರರು ಹಾಗೂ ಮುಸ್ಲಿಂ ಬಾಂಧವರು ಹಿಂದಿನಿಂದಲೂ ಅನ್ಯೋನ್ಯವಾಗಿದ್ದಾರೆ. ಆದರೆ ಅಲ್ಲಿ ನಡೆಯುವ ಸಣ್ಣ ಪುಟ್ಟ ಘಟನೆಗಳಿಗೆ ಕೋಮು ಬಣ್ಣ ಹಚ್ಚಿ ಆ ಪ್ರದೇಶವನ್ನು ಕೋಮು ಸೂಕ್ಷ್ಮ ಪ್ರದೇಶ ಎಂದು ಪ್ರಚಾರ ಮಾಡಲಾಗುತ್ತಿದೆ. ಈ ಹಣೆಪಟ್ಟಿಯನ್ನು ಹೋಗಲಾಡಿಸಲು ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯ ನಾಗರಿಕರೊಬ್ಬರು ಆಗ್ರಹಿಸಿದರು.ಮಂಗಳೂರಿನ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಶನಿವಾರ ಕಮಿಷನರ್ ಅನುಪಮ್ ಅಗರ್‌ವಾಲ್ ಅಧ್ಯಕ್ಷತೆಯಲ್ಲಿ ನಡೆದ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದ ನಾಗರಿಕರೊಬ್ಬರು, ನಮ್ಮ ಪ್ರದೇಶದಲ್ಲಿ ಸಂಭವಿಸುವ ಸಾವಿನ ಪ್ರಕರಣಗಳಲ್ಲಿ ಹೆಚ್ಚಿನವು ಕ್ಯಾನ್ಸರ್‌ನಿಂದ ಮೃತಪಟ್ಟಿರುವುದು ಕಂಡು ಬಂದಿರುತ್ತದೆ. ಅಂತಹ ಸಾವಿಗೆ ಏನು ಕಾರಣ ಎಂಬ ಬಗ್ಗೆಯೂ ಪರಿಶೀಲನೆಯ ಅಗತ್ಯವಿದೆ ಎಂದರು.
ಅವೈಜ್ಞಾನಿಕ ವೃತ್ತ ಕಾಮಗಾರಿ:ಸುಮಾರು ಏಳು ತಿಂಗಳ ಹಿಂದೆ ಉದ್ಘಾಟನೆಗೊಂಡಿರುವ ಬೊಂದೇಲ್‌ನ ಸರ್ವಜ್ಞ ವೃತ್ತ ಕಾಮಗಾರಿ ಅವೈಜ್ಞಾನಿಕವಾಗಿದೆ. 45 ಲಕ್ಷ ರು. ವೆಚ್ಚದಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ವೃತ್ತ ನಿರ್ಮಾಣವಾಗಿದೆ. ಹಸಿರು ಹುಲ್ಲಿನ ಬದಲು ಪ್ಲಾಸ್ಟಿಕ್ ಹುಲ್ಲು ಬಳಸಲಾಗಿದೆ. ಕಾರಂಜಿಯೇ ಇಲ್ಲ ಎಂಬ ದೂರು ವ್ಯಕ್ತವಾಯಿತು.
ಈ ಅವ್ಯವಸ್ಥೆಯನ್ನು ಸರಿಪಡಿಸಲು ಸಂಬಂಧಪಟ್ಟವರ ಗಮನಕ್ಕೆ ತರುವುದಾಗಿ ಕಮಿಷನರ್ ಭರವಸೆ ನೀಡಿದರು.ಸಮಾಲೋಚನೆಗೆ ಅವಕಾಶ ನೀಡಿ:
ವರದಕ್ಷಿಣೆ ಪ್ರಕರಣಗಳಲ್ಲಿ ಕೆಲವೊಂದು ಕ್ಷುಲ್ಲಕ ಕಾರಣಗಳಿಂದ ನಡೆದಿರುತ್ತದೆ. ಇಂತಹ ಪ್ರಕರಣಗಳಲ್ಲಿ ಪರಸ್ಪರ ಸಮಾಲೋಚನೆಗೆ ಅವಕಾಶ ನೀಡದೆ ತ್ರಿವಳಿ ತಲಾಕ್ ಆಧಾರದಲ್ಲಿ ಕೇಸು ದಾಖಲಿಸಲಾಗುತ್ತಿದೆ. ಈ ಬಗ್ಗೆ ಗಮನ ಹರಿಸಬೇಕು ಎಂದು ಜೋಕಟ್ಟೆ ನಾಗರಿಕರೊಬ್ಬರು ಆಗ್ರಹಿಸಿದರು.ಕುಂದುಕೊರತೆಯಲ್ಲೇ ಟ್ರಾಫಿಕ್‌ನದ್ದೇ ಅಧಿಕ ಸಮಸ್ಯೆಗಳು!
ನಗರದ ರಸ್ತೆಗಳಲ್ಲಿ ಹೊಂಡ, ಸರ್ವಿಸ್ ರಸ್ತೆಯಲ್ಲಿ ಬಸ್ಸುಗಳು ನಿಲುಗಡೆಯಾಗದೆ ಹೈವೇಯಿಂದಲೇ ಚಲಿಸುವುದು, ಬಾವುಟಗುಡ್ಡ ಬಳಿಯ ಬಸ್ ನಿಲ್ದಾಣ ಬಂದ್ ಆಗಿರುವುದು, ಅಪಾರ್ಚ್‌ಮೆಂಟ್‌ಗಳಿಂದ ಪಾರ್ಕಿಂಗ್ ಜಾಗದ ಉಲ್ಲಂಘನೆ, ಮೀನಿನ ಲಾರಿಗಳಿಂದ ಕೊಳಚೆ ನೀರು ಚೆಲ್ಲುವುದು, ಬಸ್‌ಗಳಲ್ಲಿ ಹಿರಿಯ ನಾಗರಿಕರು ಹಾಗೂ ವಿಕಲಚೇತನರಿಗೆ ಕಾಯ್ದಿರಿಸಿದ ಆಸನ ನೀಡಲು ಹಿಂದೇಟು, ಬಸ್‌ಗಳ ಫುಟ್‌ಬೋರ್ಡ್‌ನಲ್ಲಿ ನೇತಾಡುವುದು ಸೇರಿದಂತೆ ಟ್ರಾಫಿಕ್‌ಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ದೂರುಗಳು ವ್ಯಕ್ತವಾದವು.ರಾಬರ್ಚ್ ಫ್ರಾಂಕ್ಲಿನ್ ರೇಗೋ, ಜಿ.ಕೆ. ಭಟ್, ಹನುಮಂತ ಕಾಮತ್, ಬಶೀರ್, ಚೂಡಾಮಣಿ, ಸಂಶಾದ್, ಸುಮಂತ್ ರಾವ್, ಜಯಕೃಷ್ಣನ್, ಭಗವಾನ್‌ದಾಸ್, ಪ್ರಶಾಂತ್ ಕುಮಾರ್, ವಾಲ್ಟರ್, ಎಂ.ಪಿ. ಶೆಣೈ, ರೊನಾಲ್ಡ್ ಸೆರಾವೊ, ಫೈಜಲ್, ಹರಿಪ್ರಸಾದ್, ಸುಷ್ಮಾ ಅತ್ತಾವರ ಮತ್ತಿತರರು ಅಹವಾಲು ತೋಡಿಕೊಂಡರು.
ಡಿಸಿಪಿಗಳಾದ ಸಿದ್ಧಾರ್ಥ ಗೋಯಲ್, ದಿನೇಶ್ ಕುಮಾರ್ ಇದ್ದರು.ಡ್ರಗ್ಸ್ ಹಾವಳಿ ವ್ಯಾಪಕ:
ದ.ಕ. ಜಿಲ್ಲೆಯಲ್ಲಿ ಡ್ರಗ್ಸ್ ಹಾವಳಿ ಮಿತಿ ಮೀರುತ್ತಿದ್ದು, ಯುವಜನತೆ ಹಾದಿ ತಪ್ಪುತ್ತಿದ್ದಾರೆ. ಪೋಷಕರಾಗಲಿ, ಸಾರ್ವಜನಿಕರಾಗಲಿ ಈ ವ್ಯಸನಕ್ಕೆ ಒಳಗಾದವರಿಗೆ ಬುದ್ದಿವಾದ ಹೇಳಲು ಭಯ ಪಡುವಂತಾಗಿದೆ. ಡ್ರಗ್ಸ್ ಪೂರೈಕೆ ಮಾಡುವವರನ್ನು ಆಗಾಗ್ಗೆ ಪೊಲೀಸರು ಬಂಧಿಸಿರುವುದಾಗಿ, ಇಷ್ಟೊಂದು ಪ್ರಮಾಣದ ಮಾದಕ ವಸ್ತು ವಶಪಡಿಸಿಕೊಂಡಿರುವುದಾಗಿ ಹೇಳುತ್ತಾರೆ. ಆದರೆ ಮೂಲವನ್ನು ಕಂಡು ಹಿಡಿಯಲಾಗುತ್ತಿಲ್ಲ ಎಂದು ತಲಪಾಡಿಯ ನಾಗರಿಕರೊಬ್ಬರು ದೂರಿದರು.ಈ ಸಂದರ್ಭ ಪ್ರತಿಕ್ರಿಯಿಸಿದ ಕಮಿಷನರ್ ಅನುಪಮ್ ಅಗರ್‌ವಾಲ್, ಕಳೆದ 10 ದಿನಗಳಲ್ಲಿ ಡ್ರಗ್ಸ್ ಪೂರೈಕೆ, ಮಾರಾಟ ಹಾಗೂ ಸೇವನೆಗೆ ಸಂಬಂಧಿಸಿ 60ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಮುಂಬೈ, ಬೆಂಗಳೂರು ಸೇರಿದಂತೆ ವಿವಿಧ ರಾಜ್ಯಗಳಿಂದ ಈ ಡ್ರಗ್ಸ್ ಪೂರೈಕೆದಾರರನ್ನು ಬಂಧಿಸಿ ತರಲಾಗುತ್ತಿದೆ. ಡ್ರಗ್ಸ್ ನಿಯಂತ್ರಣಕ್ಕೆ ಪೊಲೀಸರ ಜತೆ ಸಾರ್ವಜನಿಕರ ಸಹಕಾರವೂ ಅಗತ್ಯ. ಆದರೆ ಪೋಷಕರು ಅಥವಾ ಸಾರ್ವಜನಿಕರಿಂದ ಈ ನಿಟ್ಟಿನಲ್ಲಿ ಹೆಚ್ಚಿನ ಬೆಂಬಲ ಸಿಗುತ್ತಿಲ್ಲ. ತಮ್ಮ ಆಸುಪಾಸಿನಲ್ಲಿ ಡ್ರಗ್ಸ್ ಸಂಬಂಧಿತ ಚಟುವಟಿಕೆ ಕಂಡಾಗ ಪೊಲೀಸರಿಗೆ ಮಾಹಿತಿ ನೀಡಿ ಎಂದು ಹೇಳಿದರು.
ಆ ರೀತಿ ಮಾಡಿದರೆ, ಅಂತಹವರನ್ನು ಟಾರ್ಗೆಟ್ ಮಾಡಲಾಗುತ್ತದೆ ಎಂಬ ಭಯದ ಮಾತು ನಾಗರಿಕರಿಂದ ವ್ಯಕ್ತವಾದಾಗ, ಅಂತಹ ಯಾವುದೇ ಭಯ ಬೇಡ. ಮಾಹಿತಿ ನೀಡುವವರ ಗೌಪ್ಯತೆಯನ್ನು ಕಾಪಾಡಿಕೊಳ್ಳಲಾಗುವುದು ಎಂದು ಕಮಿಷನರ್ ಭರವಸೆ ನೀಡಿದರು.