ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ 69ನೇ ಪರಿನಿರ್ವಾಣ ದಿನ ಆಚರಿಸದೇ ನಿರ್ಲಕ್ಷ್ಯ ತೋರಿದ ಪೊಲೀಸ್ ಇಲಾಖೆ ಮೇಲೆ ದಲಿತ ಸಂಘಟನೆಗಳ ಮುಖಂಡರಿಂದ ಅಸಮಾಧಾನ ವ್ಯಕ್ತವಾಗಿದೆ.
ಸವಣೂರು: ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ 69ನೇ ಪರಿನಿರ್ವಾಣ ದಿನ ಆಚರಿಸದೇ ನಿರ್ಲಕ್ಷ್ಯ ತೋರಿದ ಪೊಲೀಸ್ ಇಲಾಖೆ ಮೇಲೆ ದಲಿತ ಸಂಘಟನೆಗಳ ಮುಖಂಡರಿಂದ ಅಸಮಾಧಾನ ವ್ಯಕ್ತವಾಗಿದೆ.ಪೊಲೀಸ್ ಠಾಣೆಗೆ ತೆರಳಿದ ದಲಿತ ಮುಖಂಡರು ಪಿ.ಐ. ದೇವಾನಂದ ಅವರನ್ನು ತರಾಟೆಗೆ ತೆಗೆದುಕೊಂಡು, ಪೊಲೀಸ್ ಇಲಾಖೆ ಸಂವಿಧಾನ ಶಿಲ್ಪಿಯ ನೆನಪು ದಿನವನ್ನು ನಿರ್ಲಕ್ಷ್ಯ ವಹಿಸಿದ್ದು ಅತ್ಯಂತ ಖಂಡನೀಯ ಎಂದು ಆಕ್ರೋಶ ಹೊರಹಾಕಿದರು.
ದೇಶದ ಸಂವಿಧಾನವನ್ನು ರಚಿಸಿದ ಮಹಾನಾಯಕನಿಗೆ ಗೌರವ ಸಲ್ಲಿಸುವುದು ಪ್ರತಿಯೊಂದು ಸರ್ಕಾರಿ ಇಲಾಖೆಯ ಕರ್ತವ್ಯವಾಗಿದ್ದು, ಅದರಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಡಾ. ಅಂಬೇಡ್ಕರ್ ಅವರ ಕೊಡುಗೆ ಇಲ್ಲದೇ ಇಂದಿನ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿರುತ್ತಿರಲಿಲ್ಲ. ಅವರ ಪರಿನಿರ್ವಾಣ ದಿನವನ್ನು ಸರ್ಕಾರದ ಇಲಾಖೆಗಳಲ್ಲಿ ಆಚರಿಸದಿರುವುದು ಸಂವಿಧಾನಕ್ಕೂ ಅವರ ತತ್ವಗಳಿಗೆ ಮಾಡುವ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.ದಲಿತ ಮುಖಂಡರನ್ನು ಸಮಾಧಾನಪಡಿಸಿದ ಪಿ.ಐ. ದೇವಾನಂದ, ನಾನು ರಾತ್ರಿ ಡ್ಯೂಟಿಯಲಿದ್ದೆ, ಆದ್ದರಿಂದ ಠಾಣೆಗೆ ಬರುವುದು ವಿಳಂಬವಾಯಿತು. ಠಾಣೆಯ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ನಾನು ನಿಮ್ಮಲ್ಲಿ ಕ್ಷಮೆ ಯಾಚಿಸುತ್ತೇನೆ. ಮುಂಬರುವ ದಿನಗಳಲ್ಲಿ ಈ ರೀತಿ ತಪ್ಪುಗಳು ನಡೆಯದಂತೆ ನೋಡಿಕೊಳ್ಳುವ ಭರವಸೆ ನೀಡಿದ ಬಳಿಕ ದಲಿತ ಮುಖಂಡರು ಇದೆ ರೀತಿ ಪುನರಾವರ್ತನೆಗೊಂಡರೆ, ಠಾಣೆಯ ಎದುರು ಹಲಗೆ ಹೊಡೆಯುವ ಮೂಲಕ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಬಳಿಕ ಠಾಣೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ದಲಿತ ಮುಖಂಡರನ್ನು ಮನವೊಲಿಸಲಾಯಿತು.ಮುಖಂಡರಾದ ಲಕ್ಷ್ಮಣ ಕನವಳ್ಳಿ, ಪ್ರವೀಣ ಬಾಲೆಹೊಸೂರ, ರಂಗಪ್ಪ ಮೈಲೆಮ್ಮನವರ, ರಾಮಣ್ಣ ಅಗಸರ, ಮಲ್ಲೇಶ ಹರಿಜನ, ಪರಮೇಶ ಮಲ್ಲಮ್ಮನವರ ಇದ್ದರು.