ಸಾರಾಂಶ
ಮೈಸೂರು : ಇತ್ತೀಚೆಗೆ ಹೆಚ್ಚುತ್ತಿರುವ ಸೈಬರ್ ಅಪರಾಧಗಳನ್ನು ಪತ್ತೆಹಚ್ಚಿ ನಿಭಾಯಿಸುವ ಶಕ್ತಿ ಯುವ ಅಧಿಕಾರಿಗಳಲ್ಲಿ ಇರಬೇಕು ಎಂದು ನಿವೃತ್ತ ಪೊಲೀಸ್ ಅಧಿಕಾರಿ ಪುಟ್ಟಮಾದಯ್ಯ ತಿಳಿಸಿದರು
.ನಗರ ಶಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೊಲೀಸ್ ಧ್ವಜ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿ, ಕರ್ನಾಟಕ ಏಕೀಕರಣದ ನಂತರ ಮೈಸೂರು ರಾಜ್ಯದಲ್ಲಿ ಪೊಲೀಸ್ ಧ್ವಜ ವಿಭಿನ್ನವಾಗಿದ್ದವು. ಅದನ್ನು ಮಾರ್ಪಡಿಸಿ 1960ರಲ್ಲಿ ರಾಜ್ಯ ಪೊಲೀಸ್ ಕಾಯ್ದೆ ಜಾರಿಗೊಳಿಸಿ ನಿವೃತ್ತ ಪೊಲೀಸರ ಕಲ್ಯಾಣ ನಿಧಿ ಜಾರಿಗೊಳಿಸಲಾಯಿತು ಎಂದರು.
ಬೇರೆ ಇಲಾಖೆಗಳಿಗಿಂತ ಪೊಲೀಸ್ ಇಲಾಖೆ ಭಿನ್ನ. ಇಲ್ಲಿ ಕೆಲಸಕ್ಕೆ ನಿರ್ದಿಷ್ಟ ಸಮಯ ಇರುವುದಿಲ್ಲ. ಎಲ್ಲಾ ಸಂದರ್ಭದಲ್ಲೂ ತಯಾರಿರಬೇಕು. ಆರೋಗ್ಯ ಸಮಸ್ಯೆಗಳೂ ಬೇಗ ಬರುತ್ತವೆ. ಹೀಗಾಗಿ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಸಾರ್ವಜನಿಕ ಜೀವನದಲ್ಲಿ ನಡೆದುಕೊಳ್ಳುವ ರೀತಿ ಮುಖ್ಯ. ಈ ದಿನಗಳಲ್ಲಿ ರಾಜಕೀಯ ಗೊಂದಲ, ಸೈಬರ್ ಅಪರಾಧ ನಿಭಾಯಿಸುವ ಶಕ್ತಿ ಯುವ ಅಧಿಕಾರಿಗಳಲ್ಲಿ ಇರಬೇಕು. ನಿವೃತ್ತ ಅಧಿಕಾರಿಗಳ ಪಟ್ಟಿ ಠಾಣಾ ಮಟ್ಟದಲ್ಲಿ ನಿರ್ವಹಣೆ ಆಗಬೇಕು. ನಿವೃತ್ತರನ್ನು ಗೌರವಿಸಬೇಕು ಎಂದು ಅವರು ತಿಳಿಸಿದರು.
ಪ್ರಧಾನ ದಳಪತಿ ಸಹಾಯಕ ಕಮಾಂಡರ್ ಎಂ. ರಾಜು ತುಕಡಿಗಳ ಪರಿವೀಕ್ಷಣೆಗೆ ಕರೆದೊಯ್ದರು. ತೆರೆದ ವಾಹನದಲ್ಲಿ ಪರಿವೀಕ್ಷಣೆ ಮಾಡಲಾಯಿತು. ನಗರ, ಜಿಲ್ಲಾ ಶಸಸ್ತ್ರ ಮೀಸಲು ಪಡೆ, ನಗರ ನಾಗರಿಕ ಪೊಲೀಸ್, ಸಂಚಾರ ವಿಭಾಗ, ಅಶ್ವರೋಹಿ ದಳದಿಂದ 10 ತಂಡಗಳಿಂದ ಪಥಸಂಚಲನ ನಡೆಯಿತು.ದಕ್ಷಿಣ ವಲಯ ಡಿಐಪಿ ಬೋರಲಿಂಗಯ್ಯ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಎಸ್ಪಿ ಎನ್. ವಿಷ್ಣುವರ್ಧನ್, ನಗರ ಡಿಸಿಪಿ ಮುತ್ತುರಾಜ್, ಎಸ್. ಜಾಹ್ನವಿ, ಎಎಸ್ಪಿ ನಾಗೇಶ್, ಕಮಾಂಡೆಂಟ್ ಶೈಲೇಂದ್ರ, ಕೆಪಿಎ ನಿರ್ದೇಶಕ ಚನ್ನಬಸವಣ್ಣ, ಸೆಸ್ಕ್ ನ ಎಸ್ಪಿ ಸವಿತಾ ಹೂಗಾರ್ ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.