ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ನಗರದ ಹೊರವಲಯದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಹುಕ್ಕಾಬಾರ್ ಮೇಲೆ ಪೋಲಿಸರು ದಾಳಿ ಮಾಡಿರುವ ಘಟನೆ ವರದಿಯಾಗಿದೆ.ದಾಳಿಯಲ್ಲಿ ಅಪ್ರಾಪ್ತ ವಿದ್ಯಾರ್ಥಿಗಳೂ ಸೇರಿ ಸುಮಾರು ಹನ್ನೊಂದಕ್ಕಿಂತಲೂ ಹೆಚ್ಚು ಗ್ರಾಹಕರು ಪತ್ತೆಯಾಗಿದ್ದಾರೆ. ಪೊಲೀಸ್ ಪಡೆ ಕಾಣುತ್ತಲೇ ಹುಕ್ಕಾಬಾರ್ ಮಾಲಿಕ ಸೇರಿ ನಾಲ್ವರು ಪರಾರಿಯಾಗಿದ್ದಾರೆ.
ಸುತ್ತಮುತ್ತ ಕಾಲೇಜುಗಳು- ನಡುವಿತ್ತು ಗುಲ್ಬರ್ಗ ರಾಕ್ಸ್:ನಗರದ ಆಜಾದಪೂರ್ ಮಾರ್ಗದಲ್ಲಿನ ನಿಂಬಾಳ್ಕರ್ ಹಿಲ್ಸ್‌ನ 1ನೇ ಕ್ರಾಸ್‍ನಲ್ಲಿ ಗುಲ್ಬರ್ಗ ರಾಕ್ಸ್ ಹೆಸರಿನಲ್ಲಿತ್ತು ಹುಕ್ಕಾಬಾರ್. ಸುತ್ತಮುತ್ತ ಶಿಕ್ಷಣ ಸಂಸ್ಥೆಗಳು, ನಡುವೆಯೇ ಈ ಬಾರ್, ಅಕ್ರಮ ದಂಧೆ ಎಗ್ಗಿಲ್ಲದೆ ಸಾಗಿತ್ತೆಂಬುದು ಗೊತ್ತಾಗಿದೆ. ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಗಳಿಗೆ ಹುಕ್ಕಾ ಸೇದಲು ಹಚ್ಚಿ, ಹೆಚ್ಚಿನ ಹಣ ಅವರಿಂದ ವಸೂಲಿ ಮಾಡಲಾಗುತ್ತಿತ್ತು. ಯಾವುದೇ ನಿಯಮಗಳನ್ನು ಪಾಲಿಸದೆ ಅಕ್ರಮ ಚಟುವಟಿಕೆಗಳ ಅಡ್ಡೆ ಇದಾಗಿತ್ತು.
ಗುಲ್ಬರ್ಗ ರಾಕ್ಸ್ ಮೇಲೆ ನಡೆದ ದಾಳಿ ಕಾಲದಲ್ಲಿ ಪಿಐ ದಿಲೀಪಕುಮಾರ್ ಬಿ. ಸಾಗರ್, ಸಿಬ್ಬಂದಿ ಸಮವಸ್ತ್ರದಲ್ಲಿರುವುದನ್ನು ಕಂಡು ಮೂವರು ಕಟ್ಟಡದ ಹಿಂಬದಿಯಿಂದ ಪರಾರಿಯಾಗಿದ್ದಾರೆ. ಪೊಲೀಸರು ಪರಾರಿಯಾಗುತ್ತಿದ್ದ ಮೂವರನ್ನು ಬೆನ್ನಟ್ಟಿದರೂ ಕೈಗೆ ಸಿಗಲಿಲ್ಲ.ಮೂರು ಶೆಟ್ಟರ್ ಕೋಣೆ, ಹುಕ್ಕಾಬಾರ್ ರಾಶಿ:
ಕಟ್ಟಡದಲ್ಲಿ ಮೂರು ಶೆಟರ್‌ಗಳಿರುವ ಕೋಣೆಗಳಿದ್ದು, 6 ಗಾದಿಗಳು, ಸೋಫಾ ಸೆಟ್ಟುಗಳು, ಕ್ಯಾಶ್ ಕೌಂಟರ್, ಹುಕ್ಕಾಗಳು, ಹುಕ್ಕಾ ತಯಾರಿಸಲು ಬೇಕಾಗುವ ಸಾಮಗ್ರಿಗಳು ಪತ್ತೆಯಾಗಿವೆ. ಕೋಣೆಯಲ್ಲಿದ್ದವರನ್ನು ವಿಚಾರಿಸಿದಾಗ ಅವರು ಲಾಲ್‍ಗಿರಿ ಕ್ರಾಸ್ ನಿವಾಸಿ ಶೇಖ್ ಮೋಸಿನ್ (19) ಹಾಗೂ ಎಂಎಸ್‍ಕೆ ಮಿಲ್ ಪ್ರದೇಶದ ನಿವಾಸಿ ನವೀದ್ ಅಹ್ಮದ್ (18), 2ನೇ ಕೋಣೆಯಲ್ಲಿ ಲಾಲ್‍ಗಿರಿ ಕ್ರಾಸ್‍ನ ಫೈಜುದ್ದೀನ್ ಕೈಫ್ (18), ಎಂಎಸ್‍ಕೆ ಮಿಲ್ ಜಿಲಾನಾಬಾದ್ ಗಾಲಿಬ್ ಕಾಲೋನಿಯ ಫಾರ್ಚ್‍ನರ್ ಶಾಲೆಯ ಹತ್ತಿರದ ನಿವಾಸಿ ಮೊಹ್ಮದ್ ಅಬ್ದುಲ್ ಅಪಾಫ್, ಎಂಎಸ್‍ಕೆ ಮಿಲ್ ಜಿಲಾನಾಬಾದ್ ಗಾಲಿಬ್ ಕಾಲೋನಿಯ ಗುಲಾಮ್ ಮೋಹಿಯೋದ್ದೀನ್, ಮೊಹ್ಮದ್ ಜುಬೇರ್ಪಾಶಾ (19), ಚಿತ್ತಾಪುರ ತಾಲೂಕಿನ ಶಹಾಬಾದ್‌ನ ಮಜಿದ್ ಚೌಕ್‍ನ ಮಹ್ಮದ್ ಶಹಬಾಸ್ತಂ (19), ಟಿಪ್ಪು ಚೌಕ್‍ನ ಆಜಾದ್ ರಸ್ತೆಯ ನಿವಾಸಿ ರಿಯಾಜ್ ಗೌಸ್ (19) ಪತ್ತೆಯಾಗಿದ್ದಾರೆ.6 ತಿಂಗಳಿಂದ ಹುಕ್ಕಾಬಾರ್ ಗ್ರಾಹಕರಾಗಿದ್ದವರು:
ಗ್ರಾಹಕರಿಗೆ ಪೋಲಿಸರು ವಿಚಾರಿಸಿದಾಗ ಕಳೆದ 6 ತಿಂಗಳಿನಿಂದ ಹುಕ್ಕಾ ಸೇವಿಸಲು ಬರುತ್ತಿರುವ ಕುರಿತು ಮಾಹಿತಿ ನೀಡಿದ್ದಾರೆ. ಇಡೀ ಹುಕ್ಕಾಬಾರ್ ಜಾಲಾಡಿದರೂ ಬಾರ್ ತೆರೆಯೋದಕ್ಕೆ ಅಗತ್ಯವಾಗಿರುವ ದಾಖಲೆ, ಪರವಾನಗಿ ಪತ್ರಗಳು ಯಾವುದೂ ಪೊಲೀಸರಿಗೆ ದೊರಕಿಲ್ಲ.ಪೋಲಿಸರು ಹುಕ್ಕಾ ತಯಾರಿಸಿ ಪೂರೈಸುತ್ತಿದ್ದ ಮೊಹ್ಮದ್ ರೆಹಾನ್‍ನಿಗೆ ವಿಚಾರಣೆ ಮಾಡಿದಾಗ ಮಾಲಿಕರು ಒಂದು ಹುಕ್ಕಾಕ್ಕೆ 300 ರು. ನಿಗದಿಪಡಿಸಿರುವ ಕುರಿತು ವಿವರಿಸಿದ. 300 ರು.ಗಳ 7 ಚಿಕ್ಕ, 7000 ರು. ಮೌಲ್ಯದ 7 ದೊಡ್ಡವು ಸೇರಿ ಒಟ್ಟು 9100 ರು. ಮೌಲ್ಯದ 14 ಹುಕ್ಕಾ ಪಾಟ್, ಒಂದು ಬಳಸದಿರುವ ಹುಕ್ಕಾ ಪಾಟ್, ಬ್ರೀಕ್ ಕೂಲ್‍ನ 60 ತುಣುಕುಗಳು, 6 ತುಂಬಿದ, 2 ಖಾಲಿ ಡಬ್ಬಿಗಳು, ವಿವಿಧ ಕಂಪೆನಿಯ ಪ್ಲೇವರ್‌ಗಳಿರುವ ರಾಸಾಯನಿಕದ 21 ಡಬ್ಬಿಗಳು (13 ಡಬ್ಬಿಗಳು ಬಳಕೆಯಾಗಿಲ್ಲ), 1000 ರು. ಮೌಲ್ಯದ ಇಂಡೆನ್ ಗ್ಯಾಸ್ ಸಿಲೆಂಡರ್, 200 ರು. ಮೌಲ್ಯದ ಒಂದು ಕಬ್ಬಿಣದ ಸ್ಟ್ಯಾಂಡ್, 2 ಕ್ಯೂಆರ್ ಕೋಡ್ ಸ್ಕ್ಯಾನರ್, 5 ಚಿಲುಮೆಗಳೂ ಸೇರಿದಂತೆ ಹುಕ್ಕಾ ಪೈಪ್‍ಗಳು ಹಾಗೂ 1700 ರೂರು. ನಗದನ್ನು ವಶಕ್ಕೆ ಪಡೆದಿದ್ದಾರೆ.
ದಾಳಿಯಲ್ಲಿ ಮೂವರು ಅಪ್ರಾಪ್ತ ವಿದ್ಯಾರ್ಥಿಗಳು ಪತ್ತೆಯಾಗಿದ್ದಲ್ಲದೇ ಹುಕ್ಕಾ ಬಾರ್ ಕೇವಲ 70 ಮೀಟರ್ ಅಂತರದಲ್ಲಿಯೇ ಆಯೇಶಾ ಸ್ಕೂಲ್ ಆಫ್ ನರ್ಸಿಂಗ್ ಮತ್ತು ಅಲ್ ನಜರ್ ಡಿ.ಎಡ್ ಕಾಲೇಜು ಹಾಗೂ 75 ಮೀ. ಅಂತರದಲ್ಲಿ ವಿಪಿ ಕಾನ್ವೆಂಟ್ ಇಂಗ್ಲೀಷ್ ಮಾಧ್ಯಮ ಹೈಸ್ಕೂಲ್ ಇರುವುದು ಕಂಡು ಬಂದಿದೆ. ಈ ಕುರಿತು ಗುಲಬರ್ಗಾ ವಿಶ್ವವಿದ್ಯಾಲಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.6 ತಿಂಗಳಿಂದ ಹುಕ್ಕಾಬಾರ್ ಬಗ್ಗೆ ಪೊಲೀಸರಿಗೆ ಗೊತ್ತಿರಲಿಲ್ಲವೆ?:
ನಗರದ ಅಜಾದ್‌ಪುರ ರಸ್ತೆಯಲ್ಲಿ ಶಿಕ್ಷಣ ಸಂಸ್ಥೆಗಳ ಮಧ್ಯದಲ್ಲಿಯೇ ರಾಜಾರೋಶವಾಗಿ ಹುಕ್ಕಾಬಾರ್ ನಡೆಯುತ್ತಿದ್ದರೂ ನಗರ ಪೊಲೀಸರಿಗೆ ಅದು ಗೊತ್ತೇ ಆಗಿರಲಿಲ್ಲವೆಂಬ ಸಂಗತಿ ಚರ್ಚೆಗೆ ಗ್ರಾಸವಾಗಿದೆ. ಫಲಕಗಳೂ ಸಹ ಎಲ್ಲಾಕಡೆ ರಾರಾಜಿಸುತ್ತಿದ್ದರೂ ಪೊಲೀಸರು ಈ ಬಗ್ಗೆ ಜಾಣ ಕುರುಡುತನ ತೋರಿದರೆ? ಚಲ್ತೇ ಹೈ ನೀತಿ ತಳೆದರೆ? ಎಂಬ ಶಂಕೆ ಕಾಡುತ್ತಿದೆ.