ಹೊಸಪೇಟೆ ನಗರದ 13 ಕೇಂದ್ರಗಳಲ್ಲಿ ಭಾರಿ ಪೊಲೀಸ್ ಭದ್ರತೆ ನಡುವೆ ಭಾನುವಾರ ಸಿವಿಲ್ ಪೊಲೀಸ್ ಕಾಸ್ಟೇಬಲ್ ನೇಮಕಾತಿ ಲಿಖಿತ ಪರೀಕ್ಷೆ ನಡೆಯಿತು.
ಹೊಸಪೇಟೆ: ನಗರದ 13 ಕೇಂದ್ರಗಳಲ್ಲಿ ಭಾರಿ ಪೊಲೀಸ್ ಭದ್ರತೆ ನಡುವೆ ಭಾನುವಾರ ಸಿವಿಲ್ ಪೊಲೀಸ್ ಕಾಸ್ಟೇಬಲ್ ನೇಮಕಾತಿ ಲಿಖಿತ ಪರೀಕ್ಷೆ ನಡೆಯಿತು.
ಹೊಸಪೇಟೆ ನಗರದಲ್ಲಿ 13 ಪರೀಕ್ಷಾ ಕೇಂದ್ರಗಳಲ್ಲಿ 6098 ಅಭ್ಯರ್ಥಿಗಳು ಹಾಗೂ ಮಧ್ಯಾಹ್ನ 12 ಪರೀಕ್ಷಾ ಕೇಂದ್ರಗಳಲ್ಲಿ ನಡೆಯುವ ಪರೀಕ್ಷೆಯಲ್ಲಿ 5775 ಅಭ್ಯರ್ಥಿಗಳು ಸೇರಿದಂತೆ 11,773 ಅಭ್ಯರ್ಥಿಗಳು ಪರೀಕ್ಷೆ ಎದುರಿಸಿದರು. ಎಲ್ಲ ಕೇಂದ್ರಗಳ ಸುತ್ತಮುತ್ತ ಪೊಲೀಸ್ ಸರ್ಪಗಾವಲು ಏರ್ಪಡಿಸಲಾಗಿತ್ತು. ಅಭ್ಯರ್ಥಿಗಳನ್ನು ಪರಿಶೀಲನೆ ನಡೆಸಿ ಪರೀಕ್ಷೆ ಹಾಲ್ ಗೆ ಬಿಡಲಾಯಿತು. ಬ್ಯಾಗ್, ಕಿವಿ ಓಲೆ, ಬಳೆಗಳನ್ನು ಸ್ವಪ್ರೇರಿತವಾಗಿ ಹೊರಗೆ ಇಟ್ಟು ಪರೀಕ್ಷೆ ಹಾಲ್ ಗೆ ಮಹಿಳಾ ಅಭ್ಯ ರ್ಥಿಗಳು ತೆರಳುತ್ತಿದ್ದು ಕಂಡು ಬಂದಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ ಅವರ ಮಾರ್ಗದರ್ಶನದಲ್ಲಿ ಮೂವರು ಡಿವೈಎಸ್ಪಿ, 15 ಪಿಐ, 28 ಪಿಎಸ್‌ಐ ಹಾಗೂ ಎ.ಎಸ್.ಐ. ಸೇರಿದಂತೆ 400ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿತ್ತು ಎಂದು ವಿಜಯನಗರ ಜಿಲ್ಲಾ ಎಸ್ಪಿ ಎಸ್.ಜಾಹ್ನವಿ ತಿಳಿಸಿದರು.ಜಿಲ್ಲಾಧಿಕಾರಿ ಭೇಟಿ: ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರು ನಗರದ ಥಿಯಾಸಾಫಿಕಲ್ ಮಹಿಳಾ ಕಾಲೇಜು, ವಿಜಯನಗರ ಕಾಲೇಜು, ಶಂಕರ್ ಆನಂದ್ ಸಿಂಗ್ ಸರ್ಕಾರಿ ಪದವಿ ಕಾಲೇಜು ಸೇರಿದಂತೆ ವಿವಿಧ ಕೇಂದ್ರಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಪರೀಕ್ಷೆ ಮುಗಿದ ಬಳಿಕ ತಮ್ಮೂರಿ ತೆರಳಲು ಬಸ್‌ಗಳಿಗೆ ಮುಗಿಬಿದಿದ್ದರು. ಹೊಸಪೇಟೆ ಬಸ್ ನಿಲ್ದಾಣದಲ್ಲಿ ಪೊಲೀಸ್ ಪರೀಕ್ಷೆಗಾಗಿ ಬಂದಿದ್ದ ಅಭ್ಯರ್ಥಿಗಳು ಬಸ್ ಗಾಗಿ ಕಾಯುತ್ತಿದ್ದರು.ಪೊಲೀಸ್ ಕಾನ್‌ಸ್ಟೇಬಲ್ ಪರೀಕ್ಷೆ ಸುಗಮ
ಸಂಡೂರು: ಪಟ್ಟಣದ ಬಿಕೆಜಿ ಗ್ಲೋಬಲ್ ಶಾಲೆ, ಶ್ರೀಶೈಲೇಶ್ವರ ವಿದ್ಯಾಕೇಂದ್ರ, ಎಸ್‌ಇಎಸ್ ವಿದ್ಯಾಮಂದಿರ, ಎಪಿಎಂಸಿ ಬಳಿಯ ಸರ್ಕಾರಿ ಪ್ರೌಢ ಶಾಲೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿನ ಒಟ್ಟು 7 ಪರೀಕ್ಷಾ ಕೇಂದ್ರಗಳಲ್ಲಿ ಭಾನುವಾರ ಪೊಲೀಸ್ ಇಲಾಖೆಯ ನಾಗರಿಕ ಪೊಲೀಸ್ ಕಾನ್‌ಸ್ಟೇಬಲ್ ಪರೀಕ್ಷೆಗಳು ಸುಗಮವಾಗಿ ಜರುಗಿದವು.ತಾಲೂಕಿನ ಪರೀಕ್ಷಾ ಕೇಂದ್ರಗಳಲ್ಲಿ ನೋಂದಣಿಯಾಗಿದ್ದ 4036 ಅಭ್ಯರ್ಥಿಗಳಲ್ಲಿ 3346 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 690 ಅಭ್ಯರ್ಥಿಗಳು ಗೈರಾಗಿದ್ದರು.ಅಭ್ಯರ್ಥಿಗಳಿಗೆ ವಸತಿ ನಿಲಯಗಳಲ್ಲಿ ವಸತಿ, ಊಟ, ಉಪಹಾರದ ವ್ಯವಸ್ಥೆ- ವಿಜಯಪುರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಶನಿವಾರವೇ ಸಂಡೂರಿಗೆ ಆಗಮಿಸಿದ್ದರಿಂದ ಇಲ್ಲಿರುವ ಲಾಡ್ಜ್‌ಗಳು ಅಭ್ಯರ್ಥಿಗಳಿಗೆ ಸಾಲದಾದವು. ಇದರಿಂದ ಅಭ್ಯರ್ಥಿಗಳು ವಸತಿಗಾಗಿ ಕೆಲ ಸಮಯ ಪರದಾಡುವಂತಾಯಿತು. ವಿಷಯ ತಿಳಿದು ಸಂಸದ ಈ. ತುಕಾರಾಂ ಅವರ ಪುತ್ರ ರಘುನಂದನ್ ಹಾಗೂ ಹಲವು ಮುಖಂಡರು ಮಹಿಳಾ ಅಭ್ಯರ್ಥಿಗಳಿಗೆ ಬಾಲಕಿಯರ ಹಾಸ್ಟೆಲ್‌ಗಳಲ್ಲಿ ಹಾಗೂ ಪುರುಷ ಅಭ್ಯರ್ಥಿಗಳಿಗೆ ವಾಲ್ಮೀಕಿ, ಆದರ್ಶ, ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ಹಾಗೂ ಗುರುಭವನದಲ್ಲಿ ತಂಗಲು ವ್ಯವಸ್ಥೆ ಮಾಡಿಕೊಟ್ಟು, ರಾತ್ರಿ ಊಟ ಮತ್ತು ಬೆಳಗ್ಗೆ ಉಪಹಾರದ ವ್ಯವಸ್ಥೆಯನ್ನು ಕಲ್ಪಿಸಿದರು.
ಬಿಕೆಜಿ ಗ್ಲೋಬಲ್ ಶಾಲೆಯ ಬಳಿಯಲ್ಲಿ ಪರೀಕ್ಷೆಗೆ ಬಂದಿದ್ದ ಅಭ್ಯರ್ಥಿಗಳಿಗೆ ಹಾಗೂ ಅವರ ಜೊತೆಗೆ ಬಂದಿದ್ದ ಅವರ ಪೋಷಕರಿಗೆ ಕೆಲ ಮುಸ್ಲಿಂ ಸಮಾಜದ ಮುಖಂಡರು ಭಾನುವಾರ ಬೆಳಗ್ಗೆ ಉಪಹಾರ ಹಾಗೂ ಕುಡಿಯುವ ನೀರಿನ ಬಾಟಲ್‌ಗಳನ್ನು ವಿತರಿಸಿದರು.ಪರೀಕ್ಷೆಯ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳ ಬಳಿಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪರೀಕ್ಷಾ ಕೇಂದ್ರಗಳ ಸುತ್ತಲಿನ ಪ್ರದೇಶದಲ್ಲಿದ್ದ ಝೆರಾಕ್ಸ್ ಶಾಪ್‌ಗಳನ್ನು ಬಂದ್ ಮಾಡಲಾಗಿತ್ತು. ಪರೀಕ್ಷೆಯ ಹಿನ್ನೆಲೆಯಲ್ಲಿ ಸಂಡೂರಿನ ಹೋಟೆಲ್‌ಗಳು ಹಾಗೂ ಬಸ್ ನಿಲ್ದಾಣಗಳಲ್ಲಿ ಜನದಟ್ಟಣೆ ಅಧಿಕವಾಗಿತ್ತು.