ಪೌರ ಕಾರ್ಮಿಕರ ರಕ್ಷಣೆಯ ಹೊಣೆ ಪೊಲೀಸರದ್ದು: ದಯಾನಂದ್‌

| Published : Oct 27 2024, 02:22 AM IST / Updated: Oct 27 2024, 02:23 AM IST

ಪೌರ ಕಾರ್ಮಿಕರ ರಕ್ಷಣೆಯ ಹೊಣೆ ಪೊಲೀಸರದ್ದು: ದಯಾನಂದ್‌
Share this Article
  • FB
  • TW
  • Linkdin
  • Email

ಸಾರಾಂಶ

ಪೌರ ಕಾರ್ಮಿಕರ ರಕ್ಷಣೆ ಪೊಲೀಸರ ಹೊಣೆಯಾಗಿದೆ. ಅವರ ಮೇಲೆ ಹಲ್ಲೆ ಮಾಡಿದರೆ ತಕ್ಷಣ ಪೊಲೀಸ್‌ ಠಾಣೆಗೆ ದೂರು ನೀಡಿ ಎಂದು ಬೆಂಗಳೂರು ಪೊಲೀಸ್‌ ಆಯುಕ್ತ ಬಿ.ದಯಾನಂದ ಅವರು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪೌರ ಕಾರ್ಮಿಕರು ಕರ್ತವ್ಯದ ವೇಳೆ ಸಮಸ್ಯೆಗಳಾದರೆ ಸಮೀಪದ ಪೊಲೀಸ್‌ ಠಾಣೆಗೆ ತೆರಳಿ ದೂರು ನೀಡುವಂತೆ ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ತಿಳಿಸಿದ್ದಾರೆ.

ಸಂಜಯನಗರದ ಸೆಂಟ್ರಲ್‌ ಎಕ್ಸೈಸ್‌ ಬಡಾವಣೆಯ ಊರ್ವಿ ಕನ್ವೆನ್ಷನ್‌ ಸೆಂಟರ್‌ನಲ್ಲಿ ಶನಿವಾರ ನಡೆದ ಉತ್ತರ ವಿಭಾಗದ ಮಾಸಿಕ ಜನಸಂಪರ್ಕ ಸಭೆಯಲ್ಲಿ ಇತ್ತೀಚೆಗೆ ನಗರದಲ್ಲಿ ಪೌರಕಾರ್ಮಿಕರ ಮೇಲೆ ನಡೆದ ಹಲ್ಲೆಗಳ ಬಗ್ಗೆ ಪ್ರಸ್ತಾಪಿಸಿದಾಗ, ಪೌರ ಕಾರ್ಮಿಕರಿಗೆ ರಕ್ಷಣೆ ನೀಡುವುದು ನಮ್ಮ ಕರ್ತವ್ಯ. ಸಮಸ್ಯೆಗಳಾದರೆ ಸಮೀಪದ ಪೊಲೀಸ್‌ ಠಾಣೆಗೆ ತೆರಳಿ ದೂರು ನೀಡಿದರೆ, ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

ಸಂಚಾರ ಸಮಸ್ಯೆಗಳ ಬಗ್ಗೆ ಅಹವಾಲು:

ಸಭೆಯಲ್ಲಿ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಆರ್‌.ಟಿ.ನಗರ, ಸಂಜಯನಗರ, ಹೆಬ್ಬಾಳ, ಸುಲ್ತಾನ್‌ಪಾಳ್ಯ, ಯಶವಂತಪುರ, ಗಂಗಮ್ಮನಗುಡಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ, ರಸ್ತೆ ಗುಂಡಿ, ಪಾರ್ಕಿಂಗ್‌ ಒತ್ತುವರಿ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ಸ್ಥಳ ಪರಿಶೀಲಿಸಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಪರಿಹರಿಸುವಂತೆ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದರು.

ಠಾಣೆಗಳಲ್ಲಿ ಮಹಿಳಾ ಕೌನ್ಸೆಲರ್‌ ನೇಮಿಸಿ:

ಮಹಿಳೆಯರು ಎಲ್ಲ ವಿಚಾರಗಳನ್ನು ಪುರುಷ ಅಧಿಕಾರಿಗಳೊಂದಿಗೆ ಹೇಳಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಪೊಲೀಸ್‌ ಠಾಣೆಗಳಲ್ಲಿ ಮಹಿಳಾ ಆಪ್ತ ಸಮಾಲೋಚಕರನ್ನು ನೇಮಿಸುವಂತೆ ಮಹಿಳೆಯೊಬ್ಬರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನಗರ ಪೊಲೀಸ್‌ ಆಯುಕ್ತರು, ಸೇಫ್‌ ಸಿಟಿ ಯೋಜನೆಯಡಿ ನಗರದ ಎಲ್ಲ ಪೊಲೀಸ್‌ ಠಾಣೆಗಳಿಗೆ ತಲಾ ಇಬ್ಬರು ಮಹಿಳಾ ಆಪ್ತ ಸಮಾಲೋಚಕರನ್ನು ನಿಯೋಜಿಸಲಾಗಿತ್ತು. ಇದೀಗ ಆ ಯೋಜನೆ ಅಂತ್ಯವಾಗಿದೆ. ಇತ್ತೀಚೆಗೆ ಪೊಲೀಸ್‌ ಠಾಣೆಗಳಲ್ಲಿ ಮಹಿಳಾ ಸಿಬ್ಬಂದಿ ಹಾಗೂ ಅಧಿಕಾರಿಗಳೂ ಇದ್ದಾರೆ. ಅವರ ಬಳಿಯೂ ಮಹಿಳೆಯರು ತಮ್ಮ ಅಹವಾಲು ಹೇಳಿಕೊಳ್ಳಬಹುದು. ಅಂತೆಯೇ ಪ್ರತಿ ವಿಭಾಗಕ್ಕೆ ಒಂದೊಂದು ಮಹಿಳಾ ಠಾಣೆ ತೆರೆಯಲಾಗಿದೆ. ಈ ಮಹಿಳಾ ಠಾಣೆಗಳಲ್ಲಿಯೂ ಮಹಿಳೆಯರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು ಎಂದರು.ಉತ್ತರ ವಿಭಾಗದ ಡಿಸಿಪಿ ಸೈದುಲ್‌ ಅದವಾತ್‌, ಎಸಿಪಿಗಳು, ಇನ್‌ಸ್ಪೆಕ್ಟರ್‌ಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ಮಾದಕವಸ್ತು ನಿರ್ಮೂಲನೆ ನಿಟ್ಟಿನಲ್ಲಿ ಪೊಲೀಸರಿಗೆ ಸಾರ್ವಜನಿಕರ ಸಹಕಾರವೂ ಬೇಕಿದೆ. ನಿಮ್ಮ ಸುತ್ತಮುತ್ತ ಮಾದಕವಸ್ತು ಮಾರಾಟ ದಂಧೆ ಕಂಡು ಬಂದಲ್ಲಿ ಕೂಡಲೇ ಸ್ಥಳೀಯ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿ.

-ಬಿ.ದಯಾನಂದ್‌, ಪೊಲೀಸ್ ಆಯುಕ್ತ.