ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯಾವಳಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪೊಲೀಸ್ ತಂಡ 10 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 131 ರನ್‌ಗಳ ಬೃಹತ್ ರನ್ ಗಳಿಸಿತು. ಇದನ್ನು ಬೆನ್ನಟ್ಟಿದ ಮಾಧ್ಯಮ ತಂಡವು 10 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 128 ರನ್ ಗಳಿಸಿ ಕೇವಲ 3 ರನ್‌ಗಳಿಂದ ವಿರೋಚಿತ ಸೋಲನ್ನು ಕಂಡಿತು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಜಿಲ್ಲಾ ಪತ್ರಕರ್ತರ ನಡುವೆ ನಡೆದ ಸೌಹಾರ್ಧ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪೊಲೀಸ್ ಇಲಾಖೆಯ ತಂಡ 3 ರನ್ ಗಳ ಅಂತರದಿಂದ ಗೆಲುವು ಸಾಧಿಸಿದ್ದು ಮಾಧ್ಯಮ ತಂಡ ವಿರೋಚಿತ ಸೋಲನ್ನು ಕಂಡಿತು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯಾವಳಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪೊಲೀಸ್ ತಂಡ 10 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 131 ರನ್‌ಗಳ ಬೃಹತ್ ರನ್ ಗಳಿಸಿತು. ಇದನ್ನು ಬೆನ್ನಟ್ಟಿದ ಮಾಧ್ಯಮ ತಂಡವು 10 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 128 ರನ್ ಗಳಿಸಿ ಕೇವಲ 3 ರನ್‌ಗಳಿಂದ ವಿರೋಚಿತ ಸೋಲನ್ನು ಕಂಡಿತು.

ಮಾಧ್ಯಮ ವಿಭಾಗದ ದಾಂಡಿಗ ರಮೇಶ್ 32 ಬಾಲ್‌ಗಳಲ್ಲಿ 63 ರನ್‌ಗಳ ಗಳಿಸಿ ಅಜೇಯರಾಗಿ ಉಳಿದರು. ಇವರ ಆಟದ ವೈಖರಿಯಲ್ಲಿ 2 ಬೌಂಡರಿ, 7 ಭರ್ಜರಿ ಸಿಕ್ಸ್ ಬಂದವು. ಪೊಲೀಸ್ ವಿಭಾಗದಲ್ಲಿ ಬಾಗೇಪಲ್ಲಿ ಠಾಣೆಯ ಪಿಎಸ್‌ಐ ಸುನಿಲ್ 23 ಬಾಲುಗಳಲ್ಲಿ 43 ರನ್‌ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಬಾಗೇಪಲ್ಲಿ ಡಿ.ಎ.ಆರ್. ಪೊಲೀಸ್ ಪೇದೆ ರಾಜು 19 ಬಾಲ್‌ಗಳಲ್ಲಿ 43 ರನ್ ಸಿಡಿಸಿ ರಾಮದಾಸ್ ಬೌಲಿಂಗ್‌ನಲ್ಲಿ ಕ್ಯಾಚಿತ್ತರು.

ಯಾವುದೇ ರಾಷ್ಟ್ರೀಯ ಆಟಗಳಿಗೂ ಕಡಿಮೆಯಿಲ್ಲದಂತೆ ರಣರೋಚಕವಾಗಿ ನಡೆದ ಕ್ರಿಕೆಟ್ ಪಂದ್ಯಾವಳಿ ಪೊಲೀಸ್ ಇಲಾಖೆ ಮತ್ತು ಮಾಧ್ಯಮದವರ ನಡುವೆ ನಡೆದಿದ್ದು ಉತ್ತಮ ಬಾಂಧವ್ಯಕ್ಕೆ ಭದ್ರ ಬುನಾದಿ ಹಾಕಿತು.

ಪಂದ್ಯಾವಳಿ ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ ಮಾತನಾಡಿ, ಮಾಧ್ಯಮ ವಿಭಾಗ ಮತ್ತು ಪೊಲೀಸ್ ಇಲಾಖೆ ನಡುವೆ ದಶಕಗಳಿಗೂ ಹೆಚ್ಚು ಕಾಲದಿಂದ ಕ್ರಿಕೆಟ್ ಪಂದ್ಯಾವಳಿ ನಡೆದುಕೊಂಡು ಬರುತ್ತಿದೆ. ಎರಡೂ ವಿಭಾಗಗಳೂ ಕೂಡ ಸದಾಕಾಲ ಒತ್ತಡದಲ್ಲಿಯೇ ಸಾರ್ವಜನಿಕರ ಸೇವೆಯಲ್ಲಿ ತೊಡಗಿರುತ್ತವೆ. ಈ ನಡುವೆ ಇಂತಹ ಸೌಹಾರ್ಧ ಆಟಗಳ ಮೂಲಕ ಕೊಂಚ ಮಟ್ಟಿಗೆ ಒತ್ತಡದ ಬದುಕಿನಿಂದ ಬಿಡುಗಡೆ ಪಡೆದು ಸಂತೋಷದಿಂದ ಕಾಲಕಳೆಯುವುದನ್ನು ನೋಡುವುದೇ ಚೆಂದ. ಈ ರಣರೋಚಕ ಪಂದ್ಯದಲ್ಲಿ ನಮ್ಮ ತಂಡ 3 ರನ್‌ಗಳ ಅಂತರದಿಂದ ಗೆಲುವು ಸಾಧಿಸಿದ್ದು, ಅತ್ಯಂತ ಖುಷಿಯ ಸಂಗತಿ. ಈ ಬಾಂಧವ್ಯ ಹೀಗೆ ಮುಂದುವರಿಯಲಿ ಎಂದು ಹಾರೈಸಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಗನ್ನಾಥರೈ ಮಾತನಾಡಿ, ಮಾಧ್ಯಮ ಮತ್ತು ಪೊಲೀಸ್ ಇಲಾಖೆ ನಡುವೆ ನಡೆದ ಕ್ರಿಕೆಟ್ ಆಟ ತುಂಬಾ ಚೆನ್ನಾಗಿ ಮೂಡಿಬಂದಿತು. ನಿಮ್ಮ ಕೆಲಸ ನಮ್ಮಷ್ಟೇ ಮಹತ್ವದ್ದಾಗಿದ್ದು ರಾತ್ರಿ- ಹಗಲು ಕೆಲಸ ಮಾಡುವಂತಹದ್ದು. ಇಂತಹ ಒತ್ತಡದ ನಡುವೆ ಬಿಡುವು ಮಾಡಿಕೊಂಡು ಕ್ರಿಕೆಟ್ ಆಡಿದ್ದೇವೆ. ರಮೇಶ್ ಅವರ ಅಮೋಘ ಆಟದ ನಡುವೆ ನಮ್ಮ ತಂಡ ಗೆಲುವು ಕಂಡಿದೆ. ಇದು ವರ್ಷಕ್ಕೆ ಒಮ್ಮೆ ಆಡುವ ಬದಲು ಆಗಾಗ ನಡೆಯಲಿ ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ವಿ.ರವಿಕುಮಾರ್ ಮಾತನಾಡಿ, ಜಿಲ್ಲಾ ಪತ್ರಕರ್ತರ ತಂಡ ಮತ್ತು ಪೊಲೀಸ್ ಇಲಾಖೆ ನಡುವೆ ಪ್ರತಿವರ್ಷ ನಡೆಯುವ ಕ್ರಿಕೆಟ್ ಪಂದ್ಯಾವಳಿ ನೋಡುವುದೇ ಚೆಂದ. ಈ ಬಾರಿ ಹೆಚ್ಚು ಮಂದಿ ಮಾಧ್ಯಮದವರು ಕ್ರಿಕೆಟ್ ವೀಕ್ಷಣೆ ಮಾಡಿ ತಂಡವನ್ನು ಹುರಿದುಂಬಿಸಿದ್ದು ವಿಶೇಷ. 131 ರನ್‌ಗಳ ಬೆನ್ನಟ್ಟಿದ ನಮ್ಮ ತಂಡ ಕೇವಲ 3 ರನ್‌ಗಳಿಂದ ವಿರೋಚಿತ ಸೋಲು ಕಂಡಿದೆ. ನನ್ನ ಪ್ರಕಾರ ಇದು ಸೋಲಲ್ಲ, ಗೆಲುವೆಂದೇ ಭಾವಿಸುತ್ತೇನೆ. ಜಿಲ್ಲಾ ಪೊಲೀಸ್ ಇಲಾಖೆ ಜತೆಗೂಡಿ ಡಿಸೆಂಬರ್ 12 ರಿಂದ ಕಡ್ಡಾಯ ಹೆಲ್ಮೆಟ್ ಜಾರಿಯ ಯಶಸ್ಸಿಗೆ ಜಿಲ್ಲಾ ಪತ್ರಕರ್ತರ ಸಂಘವೂ ಕೂಡ ಕೈಜೋಡಿಸಲಿದೆ ಎಂದರು.

ಈ ವೇಳೆ ಡಿವೈಎಸ್ಪಿ ಶಿವಕುಮಾರ್, ಸಬ್ ಇನ್ಸ್ಪೆಕ್ಟರ್ ಶರಣಪ್ಪ, ನಗರಠಾಣೆಯ ಅಮರ್ ಮೊಗಳಿ, ನಂದಿಗಿರಿಧಾಮದ ಸಬ್ ಇನ್ಸ್ಪೆಕ್ಟರ್ ಹರೀಶ್, ಹಿರಿಯ ಪತ್ರಕರ್ತರಾದ ಸೋಮಶೇಖರ್, ದಯಾಸಾಗರ್, ಬಾಲಕೃಷ್ಣ,ಕೆನಡಿ,, ಜಿಲಾನಿ, ಕಾರ್ಯದರ್ಶಿ ಆನಂದ್, ಉಪಾಧ್ಯಕ್ಷ ಮುಬಾಷಿರ್, ಸಂಘದ ಪ್ರಧಾನ ಕಾರ್ಯದರ್ಶಿ ಕಾಗತಿ ನಾಗರಾಜ್,ಖಜಾಂಚಿ ಮುದ್ದುಕೃಷ್ಣ, ಕಾರ್ಯಕಾರಿ ಸಮಿತಿ ಸದಸ್ಯ ಚಂದ್ರೇಗೌಡ ಮತ್ತಿತರರು ಇದ್ದರು.

------