ಹೊಸಕೋಟೆ: ಸಮಾಜದ ಅಭಿವೃದ್ಧಿಗೆ ಶಿಕ್ಷಣ, ಸಂಘಟನೆ ಹಾಗೂ ರಾಜಕೀಯ ಪ್ರಾತಿನಿಧ್ಯ ಅಗತ್ಯ, ಗಾಣಿಗ ಸಮುದಾಯಕ್ಕೆ ರಾಜಕೀಯ ಅವಕಾಶ ಕಲ್ಪಿಸಲು ತಾವು ಬದ್ಧ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ನಗರದಲ್ಲಿ ಗಾಣಿಗ ಸಂಘದ 4ನೇ ವಾರ್ಷಿಕೋತ್ಸವ, ಸಮುದಾಯದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಆರೋಗ್ಯ ಮೇಳದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕೌಶಲ್ಯಾಭಿವೃದ್ಧಿಗೆ ಒತ್ತು ನೀಡಬೇಕು. ಎಐ ಸೇರಿದಂತೆ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಭವಿಷ್ಯದ ಸವಾಲುಗಳನ್ನು ಎದುರಿಸಲು ಸಿದ್ಧರಾಗಬೇಕು ಎಂದು ಕರೆ ನೀಡಿದರು.

ಸಮುದಾಯದ ಮನವಿಯಂತೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ೪೦ ಲಕ್ಷ ವೆಚ್ಚದಲ್ಲಿ ಗಾಣಿಗ ಸಮುದಾಯದ ರುದ್ರಭೂಮಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಸಮುದಾಯ ಭವನಕ್ಕೆ ಜಾಗ ಒದಗಿಸುವ ಕುರಿತು ಸಮಾಜದ ಮುಖಂಡರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಮುಂದಿನ ಚುನಾವಣೆಗಳಲ್ಲಿ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಲಾಗುವುದು ಎಂದರು.

ನೆಲಮಂಗಲದ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿ ಪೂರ್ಣಾನಂದಪುರಿ ಸ್ವಾಮೀಜಿ ಮಾತನಾಡಿ, ಗಾಣಿಗ ಸಮುದಾಯವು ಶಿಕ್ಷಣ, ಸಂಘಟನೆ ಹಾಗೂ ಸಂಸ್ಕಾರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸಮಾಜದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಆಡಳಿತ, ರಾಜಕೀಯ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಸಮುದಾಯದ ಹೆಸರನ್ನು ಎತ್ತರಕ್ಕೆ ಕೊಂಡೊಯ್ಯಬೇಕು. ಯುವಕರಿಗೆ ಅವಕಾಶ ಕಲ್ಪಿಸಬೇಕು. ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಗುವುದು ಅಗತ್ಯವಾಗಿದ್ದು, ಜನಪ್ರತಿನಿಧಿಗಳು ಸಹಕರಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿಎಂಆರ್‌ಡಿಎ ಅಧ್ಯಕ್ಷ ಕೇಶವಮೂರ್ತಿ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೃಷ್ಣಮೂರ್ತಿ, ತಾಲೂಕು ಗಾಣಿಗರ ಸಂಘದ ಅದ್ಯಕ್ಷ ರಾಘವೇಂದ್ರ, ಕೆಆರ್‌ಪುರಂ ಅಧ್ಯಕ್ಷ ನಾರಾಯಣಪ್ಪ, ಸೂಲಿಬೆಲೆ ಹೋಬಳಿ ಅಧ್ಯಕ್ಷ ಸೋಮಶೇಖರ್, ಹಿರಿಯ ಮುಖಂಡ ರಾಜ್ ಕುಮಾರ್ ಹಾಜರಿದ್ದರು.


ಫೋಟೋ: 27 ಹೆಚ್‌ಎಸ್‌ಕೆ 3

ಹೊಸಕೋಟೆಯಲ್ಲಿ ಗಾಣಿಗರ ಸಂಘದ ವಾರ್ಷಿಕೋತ್ಸವ, ಸಮುದಾಯದ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ಶಾಸಕ ಶರತ್ ಬಚ್ಚೇಗೌಡ ಪ್ರದಾನ ಮಾಡಿದರು.