ಅರಣ್ಯ ಅತಿಕ್ರಮಣ ಮಂಜೂರಿಗೆ ರಾಜಕೀಯ ಇಚ್ಛಾಶಕ್ತಿ ಮುಖ್ಯ: ಶಾಂತಾರಾಮ ನಾಯಕ

| Published : Jan 10 2025, 12:47 AM IST

ಅರಣ್ಯ ಅತಿಕ್ರಮಣ ಮಂಜೂರಿಗೆ ರಾಜಕೀಯ ಇಚ್ಛಾಶಕ್ತಿ ಮುಖ್ಯ: ಶಾಂತಾರಾಮ ನಾಯಕ
Share this Article
  • FB
  • TW
  • Linkdin
  • Email

ಸಾರಾಂಶ

ಮೂರು ಸಲ ಸಭೆ ಕರೆದಾಗಲೂ 1930ಕ್ಕಿಂತ ಹಿಂದಿನ ದಾಖಲೆ ಒದಗಿಸದೇ ಇದ್ದರೆ ಅರಣ್ಯ ಅತಿಕ್ರಮಣ ಖುಲ್ಲಾಪಡಿಸಲು ಆದೇಶಿಸುವುದಾಗಿ ಬೆದರಿಕೆವೊಡ್ಡುತ್ತಿದ್ದಾರೆ. ಇದು ಅಪ್ರಜಾಸತ್ತಾತ್ಮಕ ನಿಲುವಾಗಿದೆ.

ಅಂಕೋಲಾ: ಅರಣ್ಯ ಅತಿಕ್ರಮಣದಾರರಿಗೆ ಪದೇ ಪದೇ 1930ಕ್ಕಿಂತ ಹಿಂದಿನ ದಾಖಲೆ ಸಲ್ಲಿಸಿ ಎಂದು ಉಪವಿಭಾಗಾಧಿಕಾರಿಗಳಿಂದ ನೋಟಿಸ್ ಬರುತ್ತಿದ್ದು, ತೀವ್ರ ಕಳವಳಕ್ಕೆ ಕಾರಣವಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ ತಿಳಿಸಿದರು.ಗುರುವಾರ ತಹಸೀಲ್ದಾರ್ ಕಚೇರಿ ಎದುರು ನಡೆದ ಅರಣ್ಯ ಅತಿಕ್ರಮಣದಾರರ ಸಭೆಯಲ್ಲಿ ಮಾತನಾಡಿ, ಈಸ್ಟ್ ಇಂಡಿಯಾ ಕಂಪನಿ ಬ್ರಿಟಿಷ್ ಸರ್ಕಾರ ಇದ್ದಾಗಿನ ದಾಖಲೆ ಒದಗಿಸಲು ಬಡ ಅತಿಕ್ರಮಣದಾರರಿಗೆ ಸಾಧ್ಯವಾಗುವುದಿಲ್ಲ. ಆದರೂ ಅಧಿಕಾರಿಗಳು ಪದೇ ಪದೇ ಪರಿಶೀಲನಾ ಸಭೆಗೆ ಕರೆಯುತ್ತಿದ್ದಾರೆ.

ಮೂರು ಸಲ ಸಭೆ ಕರೆದಾಗಲೂ 1930ಕ್ಕಿಂತ ಹಿಂದಿನ ದಾಖಲೆ ಒದಗಿಸದೇ ಇದ್ದರೆ ಅರಣ್ಯ ಅತಿಕ್ರಮಣ ಖುಲ್ಲಾಪಡಿಸಲು ಆದೇಶಿಸುವುದಾಗಿ ಬೆದರಿಕೆವೊಡ್ಡುತ್ತಿದ್ದಾರೆ. ಇದು ಅಪ್ರಜಾಸತ್ತಾತ್ಮಕ ನಿಲುವಾಗಿದ್ದು, ಜನಪ್ರತಿನಿಧಿಗಳಿಲ್ಲದ ಸಮಿತಿ ಯಾವುದೇ ತೀರ್ಮಾನವನ್ನು ಕೈಗೊಳ್ಳಲು ಬರುವುದಿಲ್ಲ. ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಸದಸ್ಯರಿಲ್ಲದೇ ಸಮಿತಿ ಕೆಲಸ ನಿರ್ವಹಿಸುವುದನ್ನು ನಿಲ್ಲಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ ಒತ್ತಾಯಿಸುತ್ತದೆ ಎಂದರು. ಇಚ್ಛಾಶಕ್ತಿ ಬೇಕು: ಅರಣ್ಯ ಅತಿಕ್ರಮಣದಾರರಿಗೆ ಸಮಸ್ಯೆ ಪರಿಹರಿಸಲು ರಾಜಕೀಯ ಇಚ್ಛಾಶಕ್ತಿ ಬೇಕು. ಹಿಂದಿನ ಬಿಜೆಪಿ ಈಗಿನ ಕಾಂಗ್ರೆಸ್ ಆಡಳಿತ ನಡೆಸುವ ಪಕ್ಷಗಳು ಚುನಾವಣೆಯಲ್ಲಿ ಅತಿಕ್ರಮಣ ಮಂಜೂರು ಮಾಡುವುದಾಗಿ ಆಶ್ವಾಸನೆ ಕೊಟ್ಟಿದ್ದವು. ಆದರೆ ಅಧಿಕಾರಕ್ಕೆ ಬಂದ ನಂತರ ಆ ಪಕ್ಷಗಳಿಗೆ ಜಾಣಮರೆವು ಆಗಿದೆ. ಮಧ್ಯಪ್ರವೇಶಿಸಲಿ: ಶಾಸಕ ಸತೀಶ ಸೈಲ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ಕೂಡಲೇ ಮಧ್ಯಪ್ರವೇಶಿಸಿ ಅರಣ್ಯ ಅತಿಕ್ರಮಣದಾರರ ಅರ್ಜಿಯನ್ನು ಅಪ್ರಜಾಸತ್ತಾತ್ಮಕವಾಗಿ ಪರಿಶೀಲನೆ ನಡೆಸುವ ಪ್ರಕ್ರಿಯೆ ತಡೆಹಿಡಿಯುವಂತೆ ನೋಡಿಕೊಳ್ಳಬೇಕು. ಹಾಗೂ ಮುಖ್ಯಮಂತ್ರಿಗಳ ಜತೆಗೆ ಕೂಡಲೇ ಚರ್ಚಿಸಿ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರು ನೀಡಿದ ಆದೇಶ ತಡೆಹಿಡಿಯುವಂತೆ ನೋಡಿಕೊಳ್ಳಬೇಕೆಂದು ಒತ್ತಾಯಿಸಿದರು.ಕಾನೂನಿಗೆ ತಿದ್ದುಪಡಿ ಅವಶ್ಯ: ಅರಣ್ಯ ಹಕ್ಕು ಕಾನೂನಿಗೆ ತಿದ್ದುಪಡಿ ಅವಶ್ಯವಿರುತ್ತದೆ. 3 ತಲೆಮಾರು ಅಥವಾ 75 ವರ್ಷಗಳ ದಾಖಲೆ ಒದಗಿಸಬೇಕೆನ್ನುವ ಮಾನದಂಡವನ್ನು ವಾಪಸ್ ಪಡೆಯಲು ಕೇಂದ್ರ ಸರ್ಕಾರದ ಮೇಲೆ ರಾಜಕೀಯ ಒತ್ತಡ ತರಬೇಕು. ಮುಖ್ಯಮಂತ್ರಿಗಳು ಸರ್ವಪಕ್ಷಗಳ ಮತ್ತು ರೈತ ನಾಯಕರ ರಾಜ್ಯಮಟ್ಟದ ನಿಯೋಗವನ್ನು ಪ್ರಧಾನಮಂತ್ರಿಗಳ ಬಳಿ ಕರೆದೊಯ್ದು ಅರಣ್ಯ ಹಕ್ಕು ಕಾನೂನಿನಲ್ಲಿರುವ ನ್ಯೂನತೆಗಳನ್ನು ಎತ್ತಿ ತೋರಿಸಬೇಕು ಎಂದರು.ಅರಣ್ಯ ಭೂಮಿ ಹಕ್ಕು ಪಡೆಯಲು ಕೇವಲ ಕಾನೂನು ಹೋರಾಟದಿಂದ ಸಾಧ್ಯವಿಲ್ಲ. ಕಾನೂನು ಹೋರಾಟ ಮಾಡುತ್ತೇವೆಂದು ಕೆಲವರು ಬಡ ಅತಿಕ್ರಮಣದಾರರ ದಾರಿ ತಪ್ಪಿಸುತ್ತಿದ್ದಾರೆ. ಆ ಮೂಲಕ ಅತಿಕ್ರಮಣದಾರರಿಂದ ಹಣ ಕೇಳುತ್ತಿರುವ ಬಗ್ಗೆಯೂ ವರದಿ ಇದೆ. ಆದರೆ ಯಾರೂ ಈ ಆಮಿಷಕ್ಕೆ ಒಳಗಾಗದೇ ಸಾಮೂಹಿಕ ಹೋರಾಟ ಮತ್ತು ಬಡ ಅತಿಕ್ರಮಣದಾರರಿಗೆ ಭೂಮಿ ಕೊಡಲು ಸರ್ಕಾರಗಳು ರಾಜಕೀಯ ಇಚ್ಛಾಶಕ್ತಿ ತೋರುವ ಮೂಲಕ ಈ ಸಮಸ್ಯೆ ಬಗೆಹರಿಸಲು ಸಾಧ್ಯವೆಂದು ಎಂದರು. ತಾಲೂಕು ಕಾರ್ಯದರ್ಶಿ ಸಂತೋಷ ನಾಯ್ಕ, ಸಹಕಾರ್ಯದರ್ಶಿ ಉದಯ ನಾಯ್ಕ, ಸಮಿತಿ ಸದಸ್ಯರಾದ ವೆಂಕಟರಮಣ ಗೌಡ, ಶಿವರಾಮ ಪಟಗಾರ, ತಿಮ್ಮಪ್ಪ ರಾಮ ಗೌಡ, ಸುಕ್ರು ಗಂಗ ಗೌಡ, ತುಳಸು ಹರಿಕಾಂತ, ಗೋವಿಂದ ಗೌಡ ಹೊನ್ನಳ್ಳಿ ಮುಂತಾದವರು ಉಪಸ್ಥಿತರಿದ್ದರು.