ಮಠದಲ್ಲಿ ರಾಜಕೀಯ, ಜಾತಿ ಸುಳಿಯದಿರಲಿ: ಗವಿ ಶ್ರೀ

| Published : Feb 10 2025, 01:45 AM IST

ಸಾರಾಂಶ

ಮಠದಲ್ಲಿ ಯಾವತ್ತೂ ಜಾತಿ ಮತ್ತು ರಾಜಕಾರಣ ಸುಳಿಯದಂತೆ ನೋಡಿಕೊಳ್ಳಬೇಕು.

ಬೂದುಗಂಪಾದಲ್ಲಿ ಧಾರ್ಮಿಕ ಕಾರ್ಯಕ್ರಮ: ಐದು ಸಾವಿರ ಮುತ್ತೈದೆಯರಿಗೆ ಉಡಿಕನ್ನಡಪ್ರಭ ವಾರ್ತೆ ಕಾರಟಗಿ

ಅನ್ನ, ಅಕ್ಷರ, ಆರೋಗ್ಯ ದಾಸೋಹ ನೀಡುವ ಶರಣ ಪರಂಪರೆಯ ಮಠಗಳು ವೈಭಯುತವಾಗಿ ಜನ ಸೇವೆ ಮಾಡುತ್ತಿದ್ದರೆ, ಅಲ್ಲಿ ಯಾವತ್ತೂ ಜಾತಿ ಮತ್ತು ರಾಜಕಾರಣ ಸುಳಿಯದಂತೆ ನೋಡಿಕೊಳ್ಳಬೇಕು ಎಂದು ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ತಾಲೂಕಿನ ಬೂದುಗುಂಪಾ ಗ್ರಾಮದ ಕೊಟ್ಟೂರು ಸ್ವಾಮಿ ಗುರುಪರಂಪರೆಯ ಶಾಖಾ ವಿರಕ್ತಮಠದ ಸಿದ್ದೇಶ್ವರ ದೇಶಿಕರ ನಿರಂಜ ಚರಪಟ್ಟಾಧಿಕಾರ ಮಹೋತ್ಸವ ನಿಮಿತ್ತ ಭಾನುವಾರ ಶ್ರೀಮಠದ ಆವರಣದಲ್ಲಿ ನಡೆದ ೫೦೦೧ ಮುತ್ತೈದೆಯರಿಗೆ ಉಡಿ ತುಂಬುವ ಹಾಗೂ ವಿವಿಧ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹೂವಿನ ಹಾರ ತರಲಿಲ್ಲ, ವೇದಿಕೆಗೆ ಕರೆಯಲಿಲ್ಲವೆಂದು ಎಷ್ಟೋ ಕಡೆ ಮಠದ ಸ್ವಾಮೀಜಿಗಳನ್ನು ಮಠ ಬಿಡಿಸಿದ ಜನರು ಇದ್ದಾರೆ. ಆದ್ದರಿಂದ ಮೊದಲು ಜನ ಸೇವೆ ಮಾಡುವ ಜನರಿಗಾಗಿ ಹಗಲಿರುಳು ದುಡಿಯುವ ಗುರುಪರಂಪರೆಯ ಮಠಗಳಲ್ಲಿ ಯಾವತ್ತೂ ಜಾತಿ ಮತ್ತು ರಾಜಕಾರಣ ಸುಳಿಯದಂತೆ ಗ್ರಾಮಸ್ಥರು ನೋಡಿಕೊಳ್ಳಬೇಕೆಂದರು.

ಬೂದುಗುಂಪಾ, ತಿಮ್ಮಾಪುರ ಮತ್ತು ಹಾಲಸಮುದ್ರ ಗ್ರಾಮ ನೀರಾವರಿ ಭಾಗದಲ್ಲಿದೆ. ಇಲ್ಲಿನ ಜನರ ಸೇವೆಗೆ ಹಿರಿಯ ಶ್ರೀಗಳು ಸಿದ್ಧೇಶ್ವರ ಶ್ರೀಗಳನ್ನು ಕಳುಹಿಸಿದ್ದಾರೆ. ಸಮಾಜದ ಕೆಲಸಕ್ಕಾಗಿ, ಸದಾ ಭಕ್ತರಿಗಾಗಿ ಟೊಂಕ ಕಟ್ಟಿ ನಿಲ್ಲಲು ಸಿದ್ಧ ಇರುವವರೆ ಸಿದ್ಧೇಶ್ವರ ಎಂದರ್ಥ. ಸಿದ್ಧೇಶ್ವರ ಶ್ರೀಗಳು ಭಕ್ತರ ಏಳ್ಗಿಗಾಗಿ ಸದಾ ಕೆಲಸವನ್ನು ಮಾಡಲಿ ಎಂದು ಹಾರೈಸಿದರು.

ಒಬ್ಬ ಸಂಸಾರಿಗೆ ಜೀವನ ನಡೆಸುವುದು ಹೂವಿನ ಹಾಸಿಗೆ ಅಲ್ಲ. ಸನ್ಯಾಸಿಯ ಜೀವನ ಮುಳ್ಳಿನ ಮೇಲೆ ನಡೆಯುವುದು. ಸಂಸಾರಿ ಕೋಟೆಯಲ್ಲಿ ಯುದ್ಧ ಮಾಡುತ್ತಾನೆ. ಆತನಿಗೆ ಸಂಸಾರ ಎನ್ನುವ ಕೋಟೆ ರಕ್ಷಣೆ ಮಾಡುತ್ತದೆ. ಆದರೆ ಸನ್ಯಾಸಿಗೆ ಇದು ಯಾವುದೊ ಇರುವುದಿಲ್ಲ. ಒಬ್ಬ ವ್ಯಕ್ತಿ ಸನ್ಯಾಸಿಯಾಗಿ ಸಮಾಜದ ಉಡಿಯೊಳಗೆ ಯಾವಾಗ ಬಿದ್ದನೋ ಅವರು ಅತ್ಯಂತ ಪುಣ್ಯವಂತ. ತಂದೆ- ತಾಯಿಗೆ ಒಬ್ಬರೆ ಮಗ. ಅವನಿಗೆ ತಂದೆ-ತಾಯಿ ಇಬ್ಬರೆ ಆಸರೆ, ಆದರೆ ಒಬ್ಬ ಸನ್ಯಾಸಿ ಸಮಾಜದ ಸಾವಿರಾರು ತಂದೆ-ತಾಯಿಗಳಿಗೆ ಮಗನಾಗಿ ಇರುತ್ತಾನೆ. ಇದು ಸನ್ಯಾಸಿಯ ಪುಣ್ಯ ಎಂದರು.

ಒಬ್ಬ ಸನ್ಯಾಸಿ ಎಲ್ಲವನ್ನೂ ಬಿಟ್ಟು ಊರಿಗೆ ಬರುತ್ತಾನೆ. ಸಮಾಜ ಸೇವೆಯೇ ಆತನ ಮುಂದಿನ ಗುರಿ. ಬೂದುಗುಂಪಾ ಭಾಗದ ಜನರ ಸೇವೆಗೆ, ಬೆಳಕಾಗಿ ಸಿದ್ಧೇಶ್ವರ ಶ್ರೀಗಳು ಬರುತ್ತಿದ್ದಾರೆ. ಧಾರ್ಮಿಕ, ದಾಸೋಹ ಸಮಾಜ ಸೇವೆಗೆ ಭಕ್ತರು ಕೈ ಜೋಡಿಸಿ ಎಂದರು.

ಶಿರಹಟ್ಟಿಯ ಫಕೀರೇಶ್ವರ ದಿಂಗಾಲೇಶ್ವರ ಶ್ರೀಗಳು ಮಾತನಾಡಿ, ಈ ಪಟ್ಟಾಭಿಷೇಕ ಕಾರ್ಯಕ್ರಮ ತ್ರಿವಳಿ ಗ್ರಾಮದಲ್ಲಿ ದೊಡ್ಡ ಕಾಂತ್ರಿ ಮಾಡಿದೆ. ಈಗ ನಡೆಯುತ್ತಿರುವ ಕಾರ್ಯಕ್ರಮ ಈ ಹಿಂದೆ ಎಂದೂ ನಡೆದಿಲ್ಲ. ಸಿದ್ದೇಶ್ವರ ದೇಶಿಕರನ್ನು ಕೊಟ್ಟಿದ್ದು ಒಂದು ದೊಡ್ಡ ಕೊಡುಗೆ. ಐದು ಸಾವಿರ ಮುತ್ತೈದೆಯರಿಗೆ ಉಡಿ ತುಂಬಿದ ಕಾರ್ಯಕ್ರಮವೇ ಗ್ರಾಮದ ತಾಕತ್ತು ಎಂಥದ್ದು ಎಂದು ತೋರಿಸುತ್ತದೆ. ಮಠಗಳಿಗೆ ಕಿಂಚಿತ್ತೂ ಧಕ್ಕೆ ಬಾರದಂತೆ ಪೀಠಾಧಿಪತಿಗಳು ನೋಡಿಕೊಳ್ಳಬೇಕೆಂದು ಹೇಳಿದರು.

ವಿಧಾನಪರಿಷತ್ ಸದಸ್ಯ ಬಸವನಗೌಡ ಬಾದರ್ಲಿ ಮಾತನಾಡಿದರು.

ಮುತ್ತೈದೆಯರಿಗೆ ಸೀರೆ, ಅಕ್ಕಿ ದಾನ ಮಾಡಿದ ಉದ್ಯಮಿಗಳಾದ ಕೆ.ನಾಗೇಶ್ವರರಾವ್, ಶಂಬಣ್ಣ ಸಾಹುಕಾರ ಹಂಚಿನಾಳ ಮತ್ತು ವೆಂಕಾರೆಡ್ಡಪ್ಪ ಚೆನ್ನಳ್ಳಿ, ಜಿ.ಲಿಂಗರಾಜ, ಸೇರಿದಂತೆ ಇತರರಿಗೂ ಶ್ರೀಗಳು ಸನ್ಮಾನಿಸಿದರು. ವಿವಿಧ ಮಠಾಧೀಶರು ಮಾತನಾಡಿದರು.

ಕೊಟ್ಟೂರು ಬಸವಲಿಂಗ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಇದಕ್ಕೂ ಮುನ್ನ ವಿವಿಧೆಡೆಯಿಂದ ಆಗಮಿಸಿದ್ದ ೫೦೦೦ಕ್ಕೂ ಹೆಚ್ಚು ಮುತ್ತೈದೆಯರಿಗೆ ಕಾರ್ಯಕ್ರಮದಲ್ಲಿ ಉಡಿತುಂಬಲಾಯಿತು. ಕಾರ್ಯಕ್ರಮಕ್ಕೆ ಗ್ರಾಮದ ಯುವಕರ ತಂಡ ಅಚ್ಚುಕಟ್ಟಾಗಿ ನಿರ್ವಹಿಸಿತ್ತು. ಗಂಗಮ್ಮ ಹಿರೇಮಠ ಮತ್ತು ಅನ್ನಪೂರ್ಣ ಸಜ್ಜನ್ ಕಾರ್ಯಕ್ರಮ ನಿರ್ವಹಿಸಿದರು.ಇಂದು ಪಟ್ಟಾಧಿಕಾರ ಮಹೋತ್ಸವ:

ಫೆ.೧೦ರಂದು ಬೆಳಗ್ಗೆ ಬ್ರಾಹ್ಮಿಮುಹೂರ್ತದಲ್ಲಿ ಪಟ್ಟಾಧಿಕಾರದ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ವಿವಿಧ ಮಠಾಧೀಶರ ಸಾನಿಧ್ಯದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆಯಲಿವೆ.