ಮತದಾನ ಬಹಿಷ್ಕರಿಸಿ, ಗ್ರಾಮಸ್ಥರಿಂದ ಮತಗಟ್ಟೆ ದ್ವಂಸ

| Published : Apr 27 2024, 01:15 AM IST

ಸಾರಾಂಶ

ಲೋಕಸಭಾ ಚುನಾವಣೆ ಮತದಾನ ಬಹಿಷ್ಕರಿಸಿದ್ದ ಗ್ರಾಮಸ್ಥರಿಂದ ಮತಗಟ್ಟೆಯನ್ನೇ ದ್ವಂಸಗೊಳಿಸಿರುವ ಘಟನೆ ತಾಲೂಕಿನ ಇಂಡಿಗನತ್ತ ಗ್ರಾಮದಲ್ಲಿ ಜರುಗಿದೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಲೋಕಸಭಾ ಚುನಾವಣೆ ಮತದಾನ ಬಹಿಷ್ಕರಿಸಿದ್ದ ಗ್ರಾಮಸ್ಥರಿಂದ ಮತಗಟ್ಟೆಯನ್ನೇ ದ್ವಂಸಗೊಳಿಸಿರುವ ಘಟನೆ ತಾಲೂಕಿನ ಇಂಡಿಗನತ್ತ ಗ್ರಾಮದಲ್ಲಿ ಜರುಗಿದೆ.

ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣಾ ಸರಹದ್ದಿನ ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆಯ ಬಾಗಿಲು, ಮೇಜು, ಕಿಟಕಿ, ಕುರ್ಚಿ, ಇವಿಎಂ ಯಂತ್ರ ಪರಿಕರಗಳನ್ನು ದ್ವಂಸ ಮಾಡಿ ಜೊತೆಗೆ ಕೇಂದ್ರದ ಕಾಂಪೌಂಡ್ ಸಹ ವಿರೂಪಗೊಳಿಸಿ ಚುನಾವಣೆಗೆ ಬಳಸಿಕೊಳ್ಳಲಾಗಿದ್ದ ಮೂರು ಸರ್ಕಾರಿ ವಾಹನಗಳನ್ನು ಸಹ ಜಖಂಗೊಳಿಸಿದ್ದಾರೆ. ಅಧಿಕಾರಿಗಳು, ಸಿಬ್ಬಂದಿ, ಗ್ರಾಮಸ್ಥರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮಲೆ ಮಾದೇಶ್ವರ ಬೆಟ್ಟ ಗ್ರಾಮ ಪಂಚಾಯತಿಗೆ ಸೇರಿದ ಇಂಡಿಗನತ್ತ, ಮೇದರ, ತುಳಸಿಕೆರೆ, ಪಡಸಲತ್ತ ಗ್ರಾಮದಲ್ಲಿ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸದೆ ಗ್ರಾಮಸ್ಥರು ದೂರ ಉಳಿದಿದ್ದರು. ಮಾದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಗೆ ಬರುವ ತುಳಸಿಕೆರೆಯ ಮತಗಟ್ಟೆ ವ್ಯಾಪ್ತಿಯಲ್ಲಿ 480 ಮತದಾರರು, ಇಂಡಿಗನತ್ತ ಮೆಂದರೆ ಗ್ರಾಮಗಳ ವ್ಯಾಪ್ತಿಯ 528 ಮತದಾರರು, ಪಡಸಲನಾಥ ಪೋಡಿನ 298 ಮತದಾರರು ಮತದಾನದಿಂದ ದೂರವಿದ್ದರೂ ತಮಗೆ ಗ್ರಾಮಗಳಿಗೆ ಕುಡಿಯುವ ನೀರು, ರಸ್ತೆ ಮತ್ತು ವಿದ್ಯುತ್ ಸೌಲಭ್ಯ ಕಲ್ಪಿಸುವವರೆಗೂ ಮತದಾನ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ವಿಚಾರ ತಿಳಿಯುತ್ತಿದ್ದಂತೆ ಜಿಲ್ಲಾಡಳಿತ ಹಾಗೂ ಚುನಾವಣಾ ಅಧಿಕಾರಿಗಳು ಮತ್ತು ತಾಲೂಕು ದಂಡಾಧಿಕಾರಿ ಗುರುಪ್ರಸಾದ್ ಮತ್ತು ಮಲೆ ಮಾದೇಶ್ವರ ಬೆಟ್ಟದ ಇನ್ಸ್‌ಪೆಕ್ಟರ್ ಜಗದೀಶ್ ಸಿಬ್ಬಂದಿ ವರ್ಗದವರು ಇಂಡಿಗನತ್ತ ಗ್ರಾಮಕ್ಕೆ ತೆರಳಿ ಮೆದರೆ ಗ್ರಾಮದ ಕೆಲವರನ್ನು ಮತದಾನ ಮಾಡಲು ಮನವೊಲಿಸಿ ಮತಗಟ್ಟೆಗೆ ಕರತಂದಾಗ ವಿಚಾರ ತಿಳಿದ ಗ್ರಾಮಸ್ಥರ ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದು ಬಿಗುವಿನ ವಾತಾವರಣ ಉಂಟಾಗಿದೆ. ವಾತಾವರಣ ತಿಳಿಗೊಳಿಸಲು ಪೊಲೀಸರಿಂದ ಲಾಟಿ ಪ್ರಹಾರ ನಡೆಸಿದಾಗ ರೊಚ್ಚಿಗೆದ್ದ ಇಂಡಿಗನತ್ತ ಗ್ರಾಮಸ್ಥರಿಂದ ಕಲ್ಲುತೂರಾಟ ನಡೆಸಿ ಮತಗಟ್ಟೆ ಧ್ವಂಸಗೊಳಿಸಿದ್ದಾರೆ. ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದ ಪರಿಣಾಮ ಘಟನೆಯಲ್ಲಿ ತಾಲೂಕು ದಂಡಾಧಿಕಾರಿ ಗುರುಪ್ರಸಾದ್ ಹಣೆಗೆ ತೀವ್ರವಾಗಿ ಪೆಟ್ಟಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಮಲೆ ಮಾದೇಶ್ವರ ಬೆಟ್ಟದಲ್ಲಿ ದಾಖಲಾಗಿದ್ದಾರೆ. ಪೊಲೀಸ್ ಅಧಿಕಾರಿ, ಮತಗಟ್ಟೆಯ ಸಿಬ್ಬಂದಿ ವರ್ಗದವರು, ಗ್ರಾಮಸ್ಥರು ಸಹ ಘಟನೆಯಲ್ಲಿ ಗಾಯಗೊಂಡಿದ್ದಾರೆ.

ಹಿರಿಯ ಅಧಿಕಾರಿಗಳು ಭೇಟಿ: ತಾಲೂಕಿನಾದ್ಯಂತ ಉತ್ತಮವಾಗಿ ಮತದಾನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮತದಾನ ಬಹಿಷ್ಕಾರ ಮಾಡಿದ್ದ ಗ್ರಾಮದಲ್ಲಿ ಮತಗಟ್ಟೆ ಧ್ವಂಸಗೊಳಿಸಿದ ವಿಷಯ ತಿಳಿದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ತುಳಸಿಕೆರೆ ಗ್ರಾಮದಲ್ಲಿ ಬಹಿಷ್ಕಾರ: ಲೋಕಸಭಾ ಚುನಾವಣೆ ಮತದಾನ ಹಿನ್ನೆಲೆಯಲ್ಲಿ ತುಳಸಿಕೆರೆ ಗ್ರಾಮದಲ್ಲಿಯೂ ವಿದ್ಯುತ್, ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಜನಪ್ರತಿನಿಧಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಮತದಾನ ಬಹಿಷ್ಕರಿಸಿ ಗ್ರಾಮಕ್ಕೆ ತೆರಳಿದ್ದ ಅಧಿಕಾರಿಗಳು ಮನವೊಲಿಸಲು ವಿಫಲರಾಗಿ ಬರಿಗೈಯಲ್ಲಿ ವಾಪಸ್ ಆಗಿದ್ದಾರೆ. ಮಲೆ ಮಾದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಗೆ ಒಳಪಡುವ ಪಡಸಲತ್ತ ಗ್ರಾಮದಲ್ಲಿ ಬೆಳಗ್ಗೆ ಇಬ್ಬರು ಮತದಾನ ಮಾಡಿದರೆ ಉಳಿದಂತೆ ಗ್ರಾಮಸ್ಥರಿಂದ ಸಂಪೂರ್ಣವಾಗಿ ಮತದಾನವನ್ನು ಬಹಿಷ್ಕಾರ ಮಾಡಿರುವ ವರದಿಯಾಗಿದೆ. ಮತದಾನ ವಿಳಂಬ: ತಾಲೂಕಿನ ಕೆರೆದಿಂಬ ಗೊಂಬೆಗಲ್ಲು ಗ್ರಾಮದಲ್ಲಿ ಗ್ರಾಮಸ್ಥರು ಮೂಲಭೂತ ಸೌಲಭ್ಯಗಳ ಕಲ್ಪಿಸುವವರೆಗೂ ಮತದಾನ ಮಾಡುವುದಿಲ್ಲ ಎಂದು ತಿಳಿಸಿದ ಹಿನ್ನೆಲೆಯಲ್ಲಿ ವಿಚಾರ ತಿಳಿದ ಚುನಾವಣಾ ಅಧಿಕಾರಿಗಳು ತಕ್ಷಣ ಗ್ರಾಮಕ್ಕೆ ತೆರಳಿ ಗ್ರಾಮಸ್ಥರನ್ನು ಮತದಾನ ಮಾಡಲು ಮನವೊಲಿಸಿ ಮಧ್ಯಾಹ್ನ 12ರ ನಂತರ ಮತದಾನ ನಡೆದಿರುವ ಬಗ್ಗೆ ವರದಿಯಾಗಿದೆ.