ಮತದಾನ ಕಾರ್ಯಕ್ಕೆ ತೆರಳಿದ ಮತಗಟ್ಟೆ ಅಧಿಕಾರಿಗಳು

| Published : Apr 26 2024, 12:53 AM IST

ಸಾರಾಂಶ

ಲೋಕಸಭಾ ಚುನಾವಣೆಗೆ ಮೊದಲ ಹಂತದಲ್ಲಿ ಶುಕ್ರವಾರ ನಡೆಯುವ ಮತದಾನಕ್ಕೆ ಕರ್ತವ್ಯ ನಿರ್ವಹಿಸುವ ಮತಗಟ್ಟೆ ಅಧಿಕಾರಿಗಳು ವಿದ್ಯುನ್ಮಾನ ಮತಯಂತ್ರಗಳ ಪಡೆದು ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಬಿಗಿ ಭದ್ರತೆಯಲ್ಲಿ ತೆರಳಿದರು.

ಮೊಳಕಾಲ್ಮುರು: ಲೋಕಸಭಾ ಚುನಾವಣೆಗೆ ಮೊದಲ ಹಂತದಲ್ಲಿ ಶುಕ್ರವಾರ ನಡೆಯುವ ಮತದಾನಕ್ಕೆ ಕರ್ತವ್ಯ ನಿರ್ವಹಿಸುವ ಮತಗಟ್ಟೆ ಅಧಿಕಾರಿಗಳು ವಿದ್ಯುನ್ಮಾನ ಮತಯಂತ್ರಗಳ ಪಡೆದು ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಬಿಗಿ ಭದ್ರತೆಯಲ್ಲಿ ತೆರಳಿದರು.

ಇಲ್ಲಿನ ಜ್ಯೂನಿಯರ್ ಕಾಲೇಜು ಆವರಣದಲ್ಲಿ ಗುರುವಾರ ಸಹಾಯಕ ಚುನಾವಣಾಧಿಕಾರಿ ಬಸನಗೌಡ ಕೋಟೂರ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಮತಗಟ್ಟೆ ಅಧಿಕಾರಿಗಳಿಗೆ ಇವಿಎಂ ಯಂತ್ರಗಳನ್ನು ನೀಡಿ ನಿಗದಿ ಪಡಿಸಿದ ವಾಹನಗಳಲ್ಲಿ ಬಿಗಿ ಭದ್ರತೆಯಲ್ಲಿ ಕಳಿಸಲಾಯಿತು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರ ವ್ಯಾಪ್ತಿಯ ವಿವಿಧ ಕಡೆ ಒಟ್ಟು 285 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಬೂತ್‌ಗೆ 4 ಜನರಂತೆ ಕಾಯ್ದಿರಿಸಿದ ಅಧಿಕಾರಿಯೂ ಸೇರಿದಂತೆ ಒಟ್ಟು 1316 ಸಿಬ್ಬಂದಿ ಕರ್ತವ್ಯಕ್ಕೆ ನೇಮಿಸಲಾಗಿದೆ. ಮೈಕ್ರೋ ಅಬ್ಸರ್‌ವರ್, ಕ್ರಿಟಿಕಲ್ ಮತ್ತು ವಲ್ಲರ ಬಲ್ ಮತಗಟ್ಟೆಗಳಿಗೆ ಹೆಚ್ಚುವರಿಯಾಗಿ 15 ಸಿಬ್ಬಂದಿಯನ್ನು ಬಳಕೆ ಮಾಡಿಕೊಳ್ಳಲಾಗಿದೆ.

ಕ್ಷೇತ್ರದಲ್ಲಿ 125730 ಪುರುಷ, 124968 ಮಹಿಳಾ, ಇತರೆ 13 ಸೇರಿದಂತೆ ಈ ಬಾರಿ 250711 ಒಟ್ಟು ಮತದಾರರಿದ್ದಾರೆ. ಮತದಾನ ಕಾರ್ಯಕ್ಕೆ 25 ಬಸ್ 11 ಜೀಪ್‌, 3 ಮಿನಿ ಗಾಡಿಗಳನ್ನು ಬಳಸಿಕೊಳ್ಳಲಾಗಿದೆ. ಮಾರ್ಗವಾರು ಕಾಯ್ದಿರಿಸಿದ ವಾಹನಗಳಲ್ಲಿ ಮತಗಟ್ಟೆ ಅಧಿಕಾರಿಗಳನ್ನು ಕಳಿಸಲಾಯಿತು.

ರಾಂಪುರ 12, ಕೋನಾಪುರ 32, ಮೇಗಳ ಹಟ್ಟಿ74, ಮೊಳಕಾಲ್ಮುರು 84, ಕೊಂಡ್ಲಹಳ್ಳಿ 120 ನಂಬರ್ ಮತಗಟ್ಟೆಗಳನ್ನು ಪಿಂಕ್ ಮತ ಗಟ್ಟೆಗಳನ್ನಾಗಿ ಗುರುತಿಸಲಾಗಿದೆ. ಪಟ್ಟಣ ವ್ಯಾಪ್ತಿಯ ಆಂಧ್ರ ಗಡಿ ಭಾಗದ ಎದ್ದಲ ಬೊಮ್ಮಯ್ಯನ ಹಟ್ಟಿ ಮತಗಟ್ಟೆಯನ್ನು ವಿಕಲ ಚೇತನರ ಮತಗಟ್ಟೆಯಾಗಿದ್ದು, ವಿಕಲ ಚೇತನರ ಮತದಾನಕ್ಕೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇದರೊಟ್ಟಿಗೆ ಮೊಳಕಾಲ್ಮುರು ಪಟ್ಟಣದ ಬೂತ್ 87 ಯುವ ಮತಗಟ್ಟೆ, ಬೂತ್ 85 ಮಾದರಿ ಮತಗಟ್ಟೆಯನ್ನಾಗಿಸಲಾಗಿದೆ. ಬಹುತೇಕ ಪರಿಶಿಷ್ಟ ಜನಾಂಗವೇ ಹೆಚ್ಚಾಗಿ ವಾಸಿಸುವ ಕೆಳಗಳ ಕಣಿವೆ ಗ್ರಾಮದಲ್ಲಿ ಗಿರಿಜನ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ.

ಮತದಾನ ಕಾರ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಕ್ಷೇತ್ರ ವ್ಯಾಪ್ತಿಯಲ್ಲಿ ಬಿಗಿ ಪೋಲೀಸ್ ಬಂದೋಬಸ್ತು ಕೈಗೊಳ್ಳಲಾಗಿದೆ. 1 ಡಿವೈಎಸ್‌ಪಿ 4 ಸಿಪಿಐ, 10 ಪಿಎಸ್ಐ, 21 ಎಎಸ್ಐ, 52 ಹೆಡ್ ಕಾನ್ಸ್ ಟೇಬಲ್, 241 ಕಾನ್ಸ್‌ಟೇಬಲ್, 20 ಕೆಎಸ್ಆರ್‌ಪಿ 20 ಅರೆಸೇನಾ ಪಡೆ, 128 ಹೋಂ ಗಾರ್ಡ್ಸ್ ಸೇರಿದಂತೆ 497ಕ್ಕೂ ಹೆಚ್ಚಿನ ಸಿಬ್ಬಂದಿಯನ್ನು ನೇಮಿಸಲಾಗಿದೆ.