ಮಿತಿ ಮೀರಿದ ಮಾಲಿನ್ಯ: ಕಡೇಚೂರಿಗೆ ಕೇಡುಗಾಲ..!

| Published : Aug 07 2025, 12:45 AM IST

ಮಿತಿ ಮೀರಿದ ಮಾಲಿನ್ಯ: ಕಡೇಚೂರಿಗೆ ಕೇಡುಗಾಲ..!
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳವಾರ (ಆ.5) ತಡರಾತ್ರಿ ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದ ಹವಾಮಾನ ಅತ್ಯಂತ ಹೀನಾಯವಾಗಿತ್ತು. ಇಲ್ಲಿನ ಕೆಮಿಕಲ್‌ ಕಂಪನಿಗಳ ಕಳ್ಳಾಟದ ಮುಂದುವರೆದ ಭಾಗವಾಗಿ, ವಾಯು ಗುಣಮಟ್ಟ ಸೂಚ್ಯಂಕ 121 ಕ್ಕೇರುವ ಮೂಲಕ, ಇಡೀ ಪ್ರದೇಶದಲ್ಲಿ "ಅನಾರೋಗ್ಯಕರ " ವಾತಾವರಣದ ಎಚ್ಚರಿಕೆಯ ಗಂಟೆ ಬಾರಿಸಿದಂತಿತ್ತು.

- ಕನ್ನಡಪ್ರಭ ಸರಣಿ ವರದಿ ಭಾಗ : 121

ಆನಂದ್‌ ಎಂ. ಸೌದಿ

ಕನ್ನಡಪ್ರಭ ವಾರ್ತೆ ಯಾದಗಿರಿ

ಮಂಗಳವಾರ (ಆ.5) ತಡರಾತ್ರಿ ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದ ಹವಾಮಾನ ಅತ್ಯಂತ ಹೀನಾಯವಾಗಿತ್ತು. ಇಲ್ಲಿನ ಕೆಮಿಕಲ್‌ ಕಂಪನಿಗಳ ಕಳ್ಳಾಟದ ಮುಂದುವರೆದ ಭಾಗವಾಗಿ, ವಾಯು ಗುಣಮಟ್ಟ ಸೂಚ್ಯಂಕ 121 ಕ್ಕೇರುವ ಮೂಲಕ, ಇಡೀ ಪ್ರದೇಶದಲ್ಲಿ "ಅನಾರೋಗ್ಯಕರ " ವಾತಾವರಣದ ಎಚ್ಚರಿಕೆಯ ಗಂಟೆ ಬಾರಿಸಿದಂತಿತ್ತು.

ಸಾರ್ವಜನಿಕವಾಗಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ, ಸ್ವಲ್ಪ ದಿನ ಮೆತ್ತಗಾಗಿದ್ದ ಕೆಮಿಕಲ್‌ ಕಂಪನಿಗಳು, ಕಳೆದ ಕೆಲವು ದಿನಗಳಿಂದ ಮಳೆ ಬಂದಂತಹ ಸಂದರ್ಭಗಳಲ್ಲಿ ದಟ್ಟವಾದ ಕಪ್ಪು ಹೊಗೆಯನ್ನು ಆಗಸಕ್ಕೆ ಬಿಡುತ್ತಿದ್ದರೆ, ದ್ರವ-ಘನ ತ್ಯಾಜ್ಯವನ್ನು ಚರಂಡಿಗಳಿಗೆ ಬಿಡುವ ಮೂಲಕ, ಎಂದಿನಂತೆ ಪರಿಸರ- ಜನ-ಜಲ ಜೀವ ಆಪೋಷನ ಪಡೆಯತ್ತಿರುವಂತಿದೆ.

ಇದೇ ತರಹದ ಅನಾರೋಗ್ಯಕರ ವಾತಾವರಣದಿಂದಾಗಿ ಈ ಭಾಗದ ಜನರ ಹೃದಯ ಹಾಗೂ ಶ್ವಾಸಕೋಶಗಳಿಗೆ ಮಾರಕ ಕಾಯಲೆಗಳು ಆವರಿಸುವ ಭಾರಿ ಆತಂಕ ಎದುರಾಗಿದೆ. ಇದೇ ಜನವರಿ 1ರಿಂದ ಸತತ ಈವರೆಗೆ ದಿನಂಪ್ರತಿ 2-3 ಬಾರಿ ವಿವಿಧ ಸಮಯಗಳಲ್ಲಿ "ಕನ್ನಡಪ್ರಭ " ಈ ಪ್ರದೇಶದ ವಾಯು ಗುಣಮಟ್ಟ ಸೂಚ್ಯಂಕ (ಏರ್‌ ಕ್ವಾಲಿಟಿ ಇಂಡೆಕ್ಸ್‌) ದ ವರದಿ ಸಂಗ್ರಹಿಸುತ್ತಿದ್ದು, ಈ ಸೂಚ್ಯಂಕಗಳು ಆಘಾತಕಾರಿ ಅಂಶಗಳ ಹೊರಹೊಮ್ಮುತ್ತಿವೆ.

ರಾತ್ರಿ 9 ರ ನಂತರದಿಂದ ಬೆಳಿಗ್ಗೆ 8 ಗಂಟೆವರೆಗಿನ ಅವಧಿಯಲ್ಲಿ "ಅನಾರೋಗ್ಯಕರ " ವಾತಾವರಣದ ಸೂಚ್ಯಂಕ (121 ಮಿತಿಗಿಂತ ಹೆಚ್ಚು) ಕಂಡು ಬಂದಿದೆ. ವಾಯು ಗುಣಮಟ್ಟ ಸೂಚ್ಯಂಕದ ಮಾಹಿತಿಯಂತೆ, ದಿನಕ್ಕೆ ಬಹುತೇಕ ಸಂದರ್ಭಗಳಲ್ಲಿ 121-124 ರವರೆಗೂ ಮಿತಿ ತಲುಪುವ ಸಾಧ್ಯತೆ ಕಂಡು ಬಂದಿದೆ. ಅಂದರೆ, 100ಕ್ಕಿಂತ ಹೆಚ್ಚು, 150ಕ್ಕಿಂತ ಕಡಮೆ ಪ್ರಮಾಣದಲ್ಲಿ ಸೂಚ್ಯಂಕ ಕಂಡು ಬಂದರೆ, ಆ ವೇಳೆ, ಈ ಪ್ರದೇಶದ ಜನರ ಮೇಲೆ "ಅನಾರೋಗ್ಯಕರ " ಅಂಶಗಳನ್ನು ಬೀರುವ ಗಾಳಿಯ ವಾತಾವರಣ ಇದ್ದಂತೆ.

ರಾಸಾಯನಿಕ ತಗುಲಿ ಮತ್ತೋರ್ವನಿಗೆ ಗಾಯ !

ಸೈದಾಪುರ: ಈ ಮಧ್ಯೆ, ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್‌ ಕಂಪನಿಯೊಂದರಲ್ಲಿ ಅಪಾಯಕಾರಿ ರಾಸಾಯನಿಕ ತಗುಲಿ, ಕಾರ್ಮಿಕರಿಬ್ಬರು ಗಾಯಗೊಂಡ ಘಟನೆ ನಡೆದಿದೆ. ಒಬ್ಬಾತನ ಮರ್ಮಾಂಗಕ್ಕೆ, ಮತ್ತೊಬ್ಬನ ಕೈ- ಕಾಲು, ಕಣ್ಣು ಮುಖಕ್ಕೆ ಗಾಯಗಳಾಗಿವೆ. ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ರಾಸಾಯನಿಕ ಕಂಪನಿಯೊಂದರಲ್ಲಿ ರಾಸಾಯನಿಕ ಅವಘಡ. ತಡವಾಗಿ ಬೆಳಕಿಗೆ ಬಂದಿದೆ.

ಪಶ್ಚಿಮ ಬಂಗಾಳದಿಂದ ಬಂದಿದ್ದಾರೆಂದು ಹೇಳುವ ಇಯಂಪಾದ್ ಡೋಲಿ ಎಂಬಾತನ ಕಣ್ಣಿಗೆ ಗಾಯ, ಮತ್ತೋರ್ವ ಕಾರ್ಮಿಕ ನಿರ್ಪೆನ್‌ ದಾಸ್ (50)ನ ಎರಡೂ ಕೈಗಳು ಕೆಮಿಕಲ್ ಅವಘಡದಿಂದ ಸುಟ್ಟಿವೆ. ಮರ್ಮಾಂಗಕ್ಕೆ ಗಾಯಗಳಾಗಿವೆ. "ನಾವು ಅನೇಕ ದಿನಗಳಿಂದ ಇಲ್ಲಿ ಕೆಲಸ ಮಾಡುತ್ತಿರುವೆ, ಕಂಪನಿ ಹೆಸರು ಹಾಗೂ ತಮ್ಮ ಮೂಲ ಊರಿನ ಹೆಸರು ಯಾರಿಗೂ ಹೇಳದಂತೆ ಮುಖ್ಯಸ್ಥರು ನಮಗೆ ಎಚ್ಚರಿಸಿದ್ದಾರೆ.. " ಎಂದು ಗಾಯಗೊಂಡ ನ್ರಿಪೆನ್‌ ದಾಸ್‌ ತಿಳಿಸಿದ. ಸೈದಾಪುರ ಸಮುದಾಯದ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆಯಲು ಗಾಯಾಳುಗಳು ತೆರಳಿದರಾದರೂ, ಕಂಪನಿಯ ಕೆಲವರು ಬಂದು ಆತನನ್ನು ಕರೆದುಕೊಂಡು ಹೋಗಿದ್ದಾರೆ. ಇವರುಗಳಿಗೆ ರಾಸಾಯನಿಕ ಸಿಡಿತದಿಂದ ದೇಹದ ಅನೇಕ ಭಾಗಗಳಿಗೆ ಗಾಯಗಳಾಗಿವೆ. ಹೆಚ್ಚಿನ ಚಿಕಿತ್ಸೆಗೆಂದು ಜಿಲ್ಲಾಸ್ಪತ್ರೆಗೆ ಹೋಗಿ ಎಂದು ತಿಳಿಸಿದರಾದರೂ, ಕಂಪನಿಯ ಕೆಲವರು ತರಾತುರಿಯಲ್ಲಿ ಕಾರ್ಮಿಕರನ್ನು ಗೌಪ್ಯವಾಗಿ ಕರೆದುಕೊಂಡು ಹೋಗಿರುವುದು ಅನುಮಾನ ಮೂಡಿಸುತ್ತಿದೆ ಎನ್ನಲಾಗುತ್ತಿದೆ.

100-150 ಸೂಚ್ಯಂಕದ ಮಿತಿ ತಲುಪಿದಾಗ...

ಈ ಸಂದರ್ಭಗಳಲ್ಲಿ 2.5 ಮೈಕ್ರೋಮೀಟರ್‌ಗಳಿಗಿಂತ ಕಡಿಮೆ ವ್ಯಾಸವನ್ನು ಹೊಂದಿರುವ, ಉಸಿರಾಡಬಹುದಾದ ಪೊಲ್ಯಾಕ್ಟಿಕ್ ಕಣಗಳು ಶ್ವಾಸಕೋಶ ಮತ್ತು ರಕ್ತನಾಳಗಳನ್ನು ಪ್ರವೇಶಿಸಬಹುದು. ಇದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅತ್ಯಂತ ತೀವ್ರವಾದ ಪರಿಣಾಮಗಳು ಶ್ವಾಸಕೋಶ ಮತ್ತು ಹೃದಯದ ಮೇಲೆ ಬೀರುತ್ತವೆ. ವಾತಾವರಣಕ್ಕೆ ಈ ವೇಳೆ ಒಡ್ಡಿಕೊಳ್ಳುವುದರಿಂದ ಕೆಮ್ಮು ಅಥವಾ ಉಸಿರಾಟದ ತೊಂದರೆ ಆಸ್ತಮಾ ಉಲ್ಬಣಗೊಳ್ಳುವುದು ಮತ್ತು ದೀರ್ಘಕಾಲದ ಉಸಿರಾಟದ ಕಾಯಿಲೆಯ ಬೆಳವಣಿಗೆಗೆ ಕಾರಣವಾಗಬಹುದು. ಸೂಕ್ಷ್ಮ ಗುಂಪುಗಳು ಆರೋಗ್ಯದ ಪರಿಣಾಮಗಳನ್ನು ತಕ್ಷಣವೇ ಅನುಭವಿಸಬಹುದು. ಆರೋಗ್ಯವಂತ ವ್ಯಕ್ತಿಗಳು ದೀರ್ಘಕಾಲದವರೆಗೆ ಇಂತಹ ವಾತಾವರಣದಲ್ಲಿ ಒಡ್ಡಿಕೊಂಡಾಗ, ಉಸಿರಾಟದ ತೊಂದರೆ, ಗಂಟಲು ಕಿರಿಕಿರಿಯನ್ನು ಅನುಭವಿಸಬಹುದು. ಹೀಗಾಗಿ, ಈ ವೇಳೆ, ಹೊರಾಂಗಣ ಚಟುವಟಿಕೆಯನ್ನು ಮಿತಿಗೊಳಿಸಬೇಕು ಎಂಬುದಾಗಿ ಮುಂಜಾಗ್ರತಾ ಎಚ್ಚರಿಕೆಯ ಮಾಹಿತಿ ಇದಾಗಿರುತ್ತದೆ.

70-90 ರ ಮಿತಿಯೊಳಗೆ ಇದ್ದಾಗ...

ಇನ್ನು, ವಾಯು ಗುಣಮಟ್ಟದ ಸೂಚ್ಯಂಕ 70 ರಿಂದ 99ರ ಸೂಚ್ಯಂಕ ತಲುಪಿದ್ದರೆ, ವಾಯುಮಾಲಿನ್ಯದ ಮಟ್ಟವು ಅತ್ಯಧಿಕ ಮಟ್ಟವನ್ನು ತಲುಪಿದೆ ಮತ್ತು ಸೂಕ್ಷ್ಮ ಗುಂಪುಗಳಿಗೆ ಅನಾರೋಗ್ಯಕರವಾಗಿದೆ. ಉಸಿರಾಟದ ತೊಂದರೆ ಅಥವಾ ಗಂಟಲು ಕಿರಿಕಿರಿಯಂತಹ ಲಕ್ಷಣಗಳು ಕಂಡು ಬಂದರೆ, ಹೊರಗೆ ಕಳೆಯುವ ಸಮಯವನ್ನು ಕಡಿಮೆ ಮಾಡಿ ಎಂಬ ಎಚ್ಚರಿಕೆ ಸಂದೇಶ ಆಗಿರುತ್ತದೆ.

ಏನಿದು ಏರ್‌ ಕ್ವಾಲಿಟಿ ಇಂಡೆಕ್ಸ್‌ ?

ಮಾಲಿನ್ಯಕಾರಕ ಸಾಂದ್ರತೆಯ ಅಳತೆಗಳಿಂದ ಲೆಕ್ಕ ಹಾಕಲಾದ ವಾಯು ಗುಣಮಟ್ಟ ಸೂಚ್ಯಂಕ (ಏರ್‌ ಕ್ವಾಲಿಟಿ ಇಂಡೆಕ್ಸ್‌) ಬಳಸಿ ಗಾಳಿಯ ಗುಣಮಟ್ಟವನ್ನು ಅಳೆಯಲಾಗುತ್ತದೆ. ಸೊನ್ನೆಯಿಂದ 500 ರವರೆಗಿನ ಮಾಪಕವನ್ನು ಆಧರಿಸಿದ್ದು, ಹೆಚ್ಚಿನ ಮೌಲ್ಯಗಳು ಕೆಟ್ಟ ಗಾಳಿಯ ಗುಣಮಟ್ಟವನ್ನು ಸೂಚಿಸುತ್ತವೆ.