ಸಾರಾಂಶ
ಚನ್ನಪಟ್ಟಣ: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ನಡೆಸುವ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಲಿ, ಅವರು ಆದಷ್ಟು ಬೇಗ ಗುಣಮುಖರಾಗಿ ದೇಶಕ್ಕೆ ಮರಳಲಿ ಎಂದು ಶಿವರಾಜ್ ಕುಮಾರ್ ಅಭಿಮಾನಿಗಳು ತಾಲೂಕಿನ ಇತಿಹಾಸ ಪ್ರಸಿದ್ಧ ಕೆಂಗಲ್ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಶಿವಣ್ಣನ ಹೆಸರಿನಲ್ಲಿ ದೇವಸ್ಥಾನದಲ್ಲಿ ಅರ್ಚನೆ ಮಾಡಿಸಿ ಪ್ರಸಾದ ಹಂಚಿದ ಅಭಿಮಾನಿಗಳು, ೧೦೧ ಈಡುಗಾಯಿ ಒಡೆದು ಶಿವರಾಜ್‌ಕುಮಾರ್ ಪೋಟೋ ಹಿಡಿದು ಶುಭಹಾರೈಸಿದ್ದಾರೆ. ಈ ವೇಳೆ ಮಾತನಾಡಿದ ಮತ್ತಿಕೆರೆ ಚನ್ನೇಗೌಡ, ವರನಟ ಡಾ.ರಾಜ್ ಕುಮಾರ್ ಅವರ ಹಾದಿಯಲ್ಲಿ ಅವರ ಮಗ ಶಿವರಾಜ್ ಕುಮಾರ್ ಅವರು ತಂದೆಯ ಹೆಸರನ್ನು ಉಳಿಸಿಕೊಂಡು ನಟನೆ ಮಾಡಿಕೊಂಡು ಬರುತ್ತಿದ್ದಾರೆ. ಇವರಿಗೆ ಅಮೆರಿಕಾದಲ್ಲಿ ಶಸ್ತ್ರ ಚಿಕಿತ್ಸೆ ನಡೆಯುತ್ತಿದ್ದು ಚಿಕಿತ್ಸೆ ಯಶಸ್ವಿಯಾಗಿ ಆದಷ್ಟು ಬೇಗ ಗುಣಮುಖರಾಗಿ ಬಂದು ಮೊದಲಿನಂತೆ ಲವಲವಿಕೆಯಿಂದ ಇನ್ನಷ್ಟು ಕನ್ನಡ ಚಲನಚಿತ್ರಗಳಲ್ಲಿ ನಟನೆ ಮಾಡಬೇಕಿದೆ. ಹಾಗಾಗಿ ಅವರ ಮೇಲೆ ದೇವರ ಅನುಗ್ರಹ ಇರಲಿ ಎಂದು ಪೂಜೆ ಮಾಡಿಸಲಾಗಿದೆ ಎಂದರು. ಡಾ.ರಾಜ್ ಕುಮಾರ್ ಮನೆತನದ ಒಡನಾಡಿಯಾದ ತಗೆಚಗೆರೆ ನಾಗೇಶ್, ಸಂತೋಷ, ಕಾರ್ತಿಕ್, ಸಿದ್ದೇಗೌಡನದೊಡ್ಡಿ ಕುಮಾರ್, ವಿನು, ಕುಮಾರ್, ಸಂಜು, ಚಂದ್ರು, ಹರೀಶ್, ಗುಂಡ, ಶ್ರೀನಿವಾಸ್, ರಮೇಶ್, ನರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.