ಸಾರಾಂಶ
ರಾಜ್ಯದ ಅಂಗನವಾಡಿಗಳಲ್ಲಿ ನೀಡುತ್ತಿರುವ ಆಹಾರದ ಗುಣಮಟ್ಟ ಕಳಪೆ ಆಗಿದೆ ಎಂದು ರಾಜ್ಯ ಕಾನೂನು ಪ್ರಾಧಿಕಾರ ಹೇಳಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಅಂಗನವಾಡಿ ಮಕ್ಕಳಿಗೆ ಪೂರೈಸುತ್ತಿರುವ ಆಹಾರ ಪದಾರ್ಥ ಕಳಪೆ ಗುಣಮಟ್ಟದಿಂದ ಕೂಡಿರುವುದು, ಜತೆಗೆ ಮೂಲಸೌಕರ್ಯ ಕೊರತೆ, ಅನುದಾನ ಸದ್ಬಳಕೆ ಆಗದಿರುವುದು ಕಂಡು ಬಂದಿದ್ದು, ಇವುಗಳ ಬಗ್ಗೆ ಹೈಕೋರ್ಟ್‌ಗೆ ವರದಿ ಸಲ್ಲಿಸುವುದಾಗಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಕೆಎಸ್‌ಎಲ್‌ಎಸ್ಎ) ತಿಳಿಸಿದೆ.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಲ್.ರಘುನಾಥ್, ಬೆಂಗಳೂರು ರಾಜ್ಯದಲ್ಲಿ ಒಟ್ಟು 65,911 ಅಂಗನವಾಡಿಗಳಿದ್ದು, ಈ ಪೈಕಿ 1,500 ಅಂಗನವಾಡಿಗಳಿಗೆ ಭೇಟಿ ನೀಡಲಾಗಿದ್ದು, ಇನ್ನಷ್ಟು ಅಂಗನವಾಡಿಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿ ಬಗ್ಗೆ ಹೈಕೋರ್ಟ್‌ಗೆ ವರದಿ ನೀಡುತ್ತೇವೆ ಎಂದು ಹೇಳಿದರು.
ಅಂಗನವಾಡಿಗೆ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿದ ವೇಳೆ ಅನ್ನ, ಸಾರು ಹೊರತುಪಡಿಸಿ ಉಳಿದಂತೆ ಪ್ಯಾಕೆಟ್ ಮೂಲಕ ಪೂರೈಸುವ ಕಿಚಡಿ, ಉಪ್ಪಿಟ್ಟು ಮತ್ತಿತರ ಆಹಾರ ಕಳಪೆಯಾಗಿವೆ ಎಂಬ ಅನುಮಾನ ಬಂದಿದೆ. ಹೀಗಾಗಿ ಅವುಗಳ ಮಾದರಿ ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿದ್ದು, ವರದಿ ನಿರೀಕ್ಷಿಸಲಾಗಿದೆ. ಜತೆಗೆ ಸರ್ಕಾರದ ಪ. ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿ ನಿಲಯ, ಸರ್ಕಾರಿ ಆಸ್ಪತ್ರೆ ಸೇರಿ ಇತರೆಡೆ ಭೇಟಿ ನೀಡಿ ಗುಣಮಟ್ಟ ಪರಿಶೀಲಿಸಲಿದ್ದೇವೆ ಎಂದರು.ಮೂಲಸೌಕರ್ಯ ಕೊರತೆ
ಅಂಗನವಾಡಿಗಳಲ್ಲಿ ಮೂಲಸೌಕರ್ಯ ಸಮಸ್ಯೆ ಇದೆ. ಅನುದಾನ ಸದ್ಬಳಕೆ ಆಗುತ್ತಿಲ್ಲ. ಕುಡಿವ ನೀರಿನ ಸಮಸ್ಯೆ ಇದೆ. ಚಿಕ್ಕ ಕೋಣೆಯಲ್ಲಿ ಒಂದೆಡೆ ಮಕ್ಕಳು, ಇನ್ನೊಂದೆಡೆ ಗ್ಯಾಸ್ ಸಿಲಿಂಡರ್ ಇಟ್ಟು ಅಡುಗೆ ಮಾಡಲಾಗುತ್ತಿದ್ದು ಮಕ್ಕಳ ಸುರಕ್ಷತೆಗೂ ಅಪಾಯವಿದೆ. ಮಕ್ಕಳಿಗೆ ಸರ್ಕಾರ ಒದಗಿಸಿದ ಆಟಿಕೆಗಳು ಬಳಕೆಯಾಗಿಲ್ಲ. ನಿಯಮದಂತೆ ಮೇಲ್ವಿಚಾರಕರು ವಾರಕ್ಕೆ ಕನಿಷ್ಠ ಎರಡು ಬಾರಿ ಭೇಟಿ ನೀಡಿ ಪರಿಶೀಲಿಸದೆ ನಾಮ್ ಕೇ ವಾಸ್ತೆಗೆ ಬಂದು ಹೋಗುತ್ತಿದ್ದಾರೆ. ಅಧಿಕಾರಿಗಳಿಗೆ ಕ್ರಿಯಾಯೋಜನೆ ಸಮರ್ಪಕವಾಗಿಲ್ಲ ಎಂದು ಹೇಳಿದರು.ಕೆಎಸ್‌ಎಲ್‌ಎಸ್‌ಎ ಸಹ ಕಾರ್ಯದರ್ಶಿ ಶರತ್ ಚಂದ್ರ ಎನ್., ಉಪ ಕಾರ್ಯದರ್ಶಿ ಶ್ರೀಧರ್ ಎಂ. ಹಾಗೂ ಪಿ.ಎಂ.ಬಾಲಸುಬ್ರಮಣಿ ಇದ್ದರು.ಅರ್ಜಿ ಇತ್ಯರ್ಥಕ್ಕೆ ಲೋಕ ಅದಾಲತ್
ಜುಲೈ 29ರಿಂದ ಆ.3ರವರೆಗೂ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಉಳಿದಿರುವ ಅರ್ಜಿಗಳ ತ್ವರಿತ ಇತ್ಯರ್ಥಕ್ಕೆ ವಿಶೇಷ ಲೋಕ ಅದಾಲತ್ ನಡೆಯಲಿದೆ. ರಾಜ್ಯದ ಎಲ್ಲ ಜಿಲ್ಲಾ ಹಂತದಲ್ಲಿ ವಿಡಿಯೋ ಕಾನ್ಪೆರೆನ್ಸ್ ಆಯೋಜಿಸಿದ್ದು, ಕಕ್ಷಿದಾರರು ಭಾಗಿಯಾಗಬಹುದು.ರಾಜಿ ಸಂಧಾನದ ಮೂಲಕ ಇತ್ಯರ್ಥ ಆಗಬಹುದಾದ ಪ್ರಕರಣಗಳ ಕಕ್ಷಿದಾರರಿಗೆ ಈಗಾಗಲೇ ನೋಟಿಸ್ ನೀಡುವ ಮೂಲಕ ಅದಾಲತ್ನಲ್ಲಿ ಭಾಗಿಯಾಗಲು ಸೂಚಿಸಲಾಗಿದೆ. ಜು.13ರಂದು ರಾಜ್ಯಾದ್ಯಂತ ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದೆ. ಕಕ್ಷಿದಾರರು ತಮ್ಮ ಪ್ರಕರಣಗಳ ಇತ್ಯರ್ಥ ಪಡಿಸಿಕೊಳ್ಳಬಹುದು ಎಂದು ಪ್ರಾಧಿಕಾರ ತಿಳಿಸಿದೆ.