ಬಡವರ ಪ್ರಿಡ್ಜ್; ಮಣ್ಣ ಮಡಿಕೆಗೆ ಹೆಚ್ಚಿದ ಬೇಡಿಕೆ

| Published : Mar 23 2024, 01:00 AM IST

ಸಾರಾಂಶ

ಸಾವಿರಾರು ಕುಟುಂಬಗಳಿಗೆ ಆಸರೆಯಾಗಿದ್ದ ಕುಂಬಾರಿಕೆ ಇಂದು ಸಫಲತೆಯೊಂದಿಗೆ ಎಲ್ಲಾ ವರ್ಗದವರೂ ಖರೀದಿಗೆ ಮುಂದಾಗುತ್ತಿದ್ದು, ಕುಂಬಾರರ ಮೊಗದಲ್ಲಿ ಮಂದಹಾಸ ಮೂಡುವಂತಾಗಿದೆ.

ಬಿಜಿಕೆರೆ ಬಸವರಾಜ

ಕನ್ನಡ ಪ್ರಭ ವಾರ್ತೆ, ಮೊಳಕಾಲ್ಮುರು

ದಿನೇದಿನೆ ಬಿರು ಬೇಸಿಗೆ ಅಧಿಕವಾಗಿದ್ದು, ಇದರ ಮಧ್ಯೆ ದಿನೋಪಯೋಗಿ ವಸ್ತುಗಳ ಬೆಲೆಯೂ ತಾಪದಂತೆ ಏರುತ್ತಿದೆ. ಇದರ ನಡುವೆಯೂ ಬಡವರ ಪ್ರಿಡ್ಜ್ (ಮಣ್ಣಿನ ಮಡಿಕೆ)ಗಳಿಗೆ ತಾಲೂಕಿನಾದ್ಯಂತ ಬಾರಿ ಬೇಡಿಕೆ ವ್ಯಕ್ತವಾಗಿದ್ದು, ಕುಂಬಾರರ ಮೊಗದಲ್ಲಿ ಮಂದಹಾಸ ಮೂಡುವಂತಾಗಿದೆ.

ಬೇಸಿಗೆ ಬಂತೆಂದರೆ ದೇಹದ ದಣಿವನ್ನು ನಿವಾರಿಸಿಕೊಳ್ಳಲು ಜನರು ಮಣ್ಣಿನ ಮಡಿಕೆಗಳತ್ತ ಮೊರೆ ಹೋಗುವುದು ಸಹಜ. ಇದರಿಂದಾಗಿ ವರ್ಷಪೂರ ವ್ಯಾಪಾರ ವಿಲ್ಲದೆ ಬಳಲಿದ್ದ ಕುಂಬಾರರಿಗೆ ಇದೀಗ ನಿರಾಳ, ಹಾಗಾಗಿ ಉತ್ಪಾದನೆ ಕಾರ್ಯವೂ ಭರ್ಜರಿಯಾಗಿ ಸಾಗುತ್ತಿದೆ. ಹಾಗೆ ತಯಾರಾದ ಮಣ್ಣಿನ ಪಾತ್ರೆ, ಪರಿಕರಗಳು ಸಂತೆ, ಜಾತ್ರೆ, ರಸ್ತೆಬದಿ ಸೇರಿದಂತೆ ಇತರೆ ಸ್ಥಳಗಳಲ್ಲಿ ಯಥೇಚ್ಛ ಮಾರಾಟವಾಗುತ್ತಿವೆ.

ಸಾವಿರಾರು ವರ್ಷಗಳಿಂದ ತನ್ನದೇ ಆದ ಇತಿಹಾಸ ಹೊಂದಿರುವ, ಆರೋಗ್ಯದ ಕಾರಣಕ್ಕಾಗಿಯೂ ಮಣ್ಣಿನ ಮಡಿಕೆಗಳಿಗೆ ಈಗ ಬೇಡಿಕೆ ಹೆಚ್ಚಾಗುತ್ತಿದೆ. ಅದರಲ್ಲೂ ಕೊರೋನಾ ನಂತರದಲ್ಲಿ ಜನರು ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸುತ್ತಿರುವ ಪರಿಣಾಮ ಬಡವರು, ಶ್ರಿಮಂತರು ಎನ್ನುವ ಬೇಧ ಇಲ್ಲದೆ ಬೇಸಿಗೆ ದಣಿ ವನ್ನು ತಣಿಸಿಕೊಳ್ಳಲು ಮಣ್ಣಿನ ಮಡಿಕೆಗಳತ್ತ ಎಲ್ಲರೂ ಮೊರೆ ಹೋಗುತ್ತಿದ್ದಾರೆ.

ಆಧುನಿಕ ಜೀವನ ಶೈಲಿಯ ಸ್ಟೀಲ್, ಅಲ್ಯುಮಿನಿಯಂ ಪ್ಲಾಸ್ಟಿಕ್, ಫೈಬರ್ ಸೇರಿದಂತೆ ವಿದ್ಯುತ್ ಸಂಪರ್ಕದ ಹವಾ ನಿಯಂತ್ರಿತ ಮಿಷನರಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟ ಕಾಲಕ್ರಮೇಣ ಮಣ್ಣಿನ ಕುಡಿಕೆಗಳಿಗೆ ಬೇಡಿಕೆ ಕುಸಿದು, ಅದರ ವಹಿವಾಟಿಗೂ ಹೊಡೆತ ಬಿದ್ದಿತ್ತು. ಕೊರೋನಾ ಮಹಾಮಾರಿಯ ನಂತರ ಜನರು ದೇಸಿ ಉತ್ಪನ್ನಗಳತ್ತ ಮುಖ ಮಾಡಿದ್ದು, ಈ ಸುಡು ಬೇಸಿಗೆಯ ಕಾರಣಕ್ಕೆ ಕುಂಬಾರಿಕೆ ಉತ್ಪಾದನೆಯೂ ಚುರುಕಾಗಿದೆ.

ಪಟ್ಟಣ ಸೇರಿದಂತೆ ತಾಲೂಕಿನ ಬಿಜಿಕೆರೆ, ಕೊಂಡ್ಲಹಳ್ಳಿ, ಕೋಸನಾಗರ, ನಾಗಸಮುದ್ರ, ರಾಂಪುರ ದೇವಸಮುದ್ರ ಸೇರಿದಂತೆ ಹಲವು ಗ್ರಾಮಗಳಲ್ಲಿ ಮಣ್ಣಿನ ಪಾತ್ರೆಗಳ ಉತ್ಪಾದನೆಯಲ್ಲಿ ಹೆಚ್ಚು ತೊಡಗಿದ್ದು, ಪಾತ್ರೆ, ಕೊಡ, ಮಡಿಕೆ, ಮುಚ್ಚಳ ತಯಾರಿಸಲಾಗುತ್ತಿದೆ. ದಿನವೊಂದಕ್ಕೆ100ಕ್ಕೂ ಹೆಚ್ಚಿನ ಮಡಿಕೆ ಮತ್ತು ಮುಚ್ಚಳ ಸೇರಿದಂತೆ ಇತರೆ ಪರಿಕರಗಳನ್ನು ಉತ್ಪಾದಿಸುತ್ತಿದ್ದಾರೆ.

ಸಾವಿರಾರು ಕುಟುಂಬಗಳಿಗೆ ಆಸರೆಯಾಗಿದ್ದ ಕುಂಬಾರಿಕೆ ಇಂದು ಸಫಲತೆಯೊಂದಿಗೆ ಎಲ್ಲಾ ವರ್ಗದವರೂ ಖರೀದಿಗೆ ಮುಂದಾಗುತ್ತಿದ್ದು, ಕುಂಬಾರರ ಮೊಗದಲ್ಲಿ ಮಂದಹಾಸ ಮೂಡುವಂತಾಗಿದೆ.ಆಧುನಿಕತೆಗೆ ತಕ್ಕಂತೆ ಕುಸುರಿ: ಪ್ರಸ್ತುತ ದಿನಗಳಲ್ಲಿ ಮಡಿಕೆಗಳ ಟ್ರೆಂಡ್ ಕೂಡ ಬದಲಾಗಿದೆ. ಬಾಟಲ್, ಜಗ್, ಟ್ಯಾಪ್ ಇರುವ ಮಡಿಕೆ ಸೇರಿದಂತೆ ಆಧುನಿಕತೆಗೆ ತಕ್ಕಂತೆ ಮಡಿಕೆಗಳನ್ನು ತಯಾರಿಸಲಾಗುತ್ತಿದೆ. ಇನ್ನು, ಒಂದು ಎತ್ತಿನಗಾಡಿ ಜೇಡಿ ಮಣ್ಣಿಗೆ 50ಕ್ಕೂ ಹೆಚ್ಚಿನ ಮಡಿಕೆಗಳನ್ನು ತಯಾರಿಸುತ್ತಾರೆ. ಮೂರು ಜನರು ವಾರದಲ್ಲಿ ಕನಿಷ್ಟ 100 ರಿಂದ 150 ಮಡಿಕೆಗಳನ್ನು ತಯಾರಿಸುತ್ತಿದ್ದು, ಪ್ರತಿ ಮಡಿಕೆ ಸೇರಿದಂತೆ ಇತರೆ ವಸ್ತುಗಳಿಗೆ 100 ರಿಂದ 120 ರು. ಆದಾಯ ಸಿಗುತ್ತದೆ ಎನ್ನುತ್ತಾರೆ ಕುಂಬಾರಿಕೆ ಕೆಲಸಗಾರರು. ಇನ್ನು, ಬಿಜಿಕೆರೆಯ ಕುಂಬಾರಿಕೆ ವಿರುಪಾಕ್ಷಪ್ಪ ಮಾತನಾಡಿ, ಕೊರೋನಾ ಸೇರಿದಂತೆ ಹಲವು ಕಾರಣಗಳಿಂದಾಗಿ ನಷ್ಟದಲ್ಲಿದ್ದ ನಮಗೆ ಈ ವರ್ಷ ಉತ್ತಮ ಬೇಡಿಕೆ ಶುರುವಾಗಿದೆ. ಗುಡಿ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಸರ್ಕಾರ ಕುಂಬಾರರಿಗೆ ಹಲವು ಸೌಲಭ್ಯಗಳನ್ನು ನೀಡಿ ಕುಲಕಸಬನ್ನು ಉತ್ತೇಜಿಸಬೇಕು. ಇದರಿಂದ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗಲು ಪ್ರೇರಣೆಯಾಗಲಿದೆ ಎಂದು ಹೇಳಿದರು.