ಧಾರವಾಡ:
ಕಳಪೆ ಗುಣಮಟ್ಟದ ಗೋವಿನ ಜೋಳದ ಬೀಜ ವಿತರಿಸಿದ ವಿತರಕರಿಗೆ ಇಲ್ಲಿಯ ಜಿಲ್ಲಾ ಗ್ರಾಹಕರ ಆಯೋಗವು ₹ 5 ಲಕ್ಷ ದಂಡ ಮತ್ತು ಪರಿಹಾರ ನೀಡಲು ಆದೇಶಿಸಿದೆ.ತಾಲೂಕಿನ ಪುಡಕಲಕಟ್ಟಿಯ ರೈತ ಬಸವರಾಜ ಚಂದರಗಿ 2022ರಲ್ಲಿ 35 ಎಕರೆಯಲ್ಲಿ ಗೋವಿನ ಜೋಳ ಬಿತ್ತಲು ತೆಲಂಗಾಣದ ಸತ್ಯಕಾಮ್ ದುಡಿಗಳ್ಳ ಸಂಸ್ಥೆ ತಯಾರಿಸಿದ 42 ಗೋವಿನ ಜೋಳದ ಬೀಜಗಳ ಪ್ಯಾಕೇಟ್ ಖರೀದಿಸಿದ್ದರು. ₹ 56 ಸಾವಿರಕ್ಕೆ ಹುಬ್ಬಳ್ಳಿಯ ಅಮರಗೋಳದ ಸಿದ್ದೇಶ್ವರ ಆಗ್ರೋ ಟ್ರೇಡರ್ಸ್ ಹಾಗೂ ಧಾರವಾಡದ ಕಾಯಕಯೋಗಿ ತೋಟಗಾರಿಕಾ ಸಂಸ್ಥೆಯಿಂದ ಈ ಬೀಜ ಖರೀದಿಸಿದ್ದರು.
ಬೇಕಾದ ಗೊಬ್ಬರ ಇತ್ಯಾದಿ ಉಪಯೋಗಿಸಿ 35 ಎಕರೆಯಲ್ಲಿ ಗೋವಿನ ಜೋಳದ ಬೀಜ ಹಾಕಿಸಿದ್ದರು. ಅದು ಮೊಳಕೆಯೊಡೆದು ಗಿಡ ಬೆಳೆದರೂ ಗೋವಿನ ಜೋಳದ ತೆನೆ ಸರಿಯಾಗಿ ಕಾಳಾಗಿ ಮಾರ್ಪಾಟಾಗದೇ ತನಗೆ ನಿರೀಕ್ಷಿತ ಇಳುವರಿ ಬಂದಿರಲಿಲ್ಲ. ಈ ಬಗ್ಗೆ ಕೃಷಿ ಇಲಾಖೆಗೆ ದೂರು ಸಲ್ಲಿಸಿದ್ದರು. ಕೃಷಿ ಅಧಿಕಾರಿಗಳ ಸೂಚನೆಯಂತೆ ಗರಗದ ರೈತ ಸಂಪರ್ಕ ಕೇಂದ್ರದ ಅಧಿಕಾರಿ ದೂರುದಾರರ ಜಮೀನಿಗೆ ಭೇಟಿಕೊಟ್ಟು ಬೆಳೆ ಪರಿಶೀಲಿಸಿ ತೆನೆಯಲ್ಲಿ ಕಾಳು ಸರಿಯಾಗಿ ಆಗದೇ ದೂರುದಾರರಿಗೆ ಬೆಳೆ ನಷ್ಟವಾಗಿದೆ ಎಂದು ವರದಿ ಸಹ ನೀಡಿದ್ದರು.ಆ ವರದಿ ಆಧರಿಸಿ ಮತ್ತು ತನಗೆ ಕಳಪೆ ಗುಣಮಟ್ಟದ ಬೀಜ ಮಾರಿದ್ದರಿಂದ ಆರ್ಥಿಕವಾಗಿ ನಷ್ಟವಾಗಿದೆ ಎಂದು ಗೋವಿನ ಜೋಳದ ಬೀಜದ ಉತ್ಪಾದಕರು ಹಾಗೂ ವಿತರಕರ ಮೇಲೆ ಕ್ರಮಕೈಗೊಳ್ಳುವಂತೆ ಬಸವರಾಜ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ದೂರಿನ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ, ಕಳಪೆ ಗುಣಮಟ್ಟದ ಬೀಜವನ್ನು ರೈತರಿಗೆ ಮಾರಾಟ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಈ ಗೋವಿನ ಜೋಳದ ಬೀಜ ಉತ್ಪಾದಿಸಿ ದೂರುದಾರರಿಗೆ ಮಾರಾಟ ಮಾಡಿದ ಮೂವರು ಸೇರಿ ₹5 ಲಕ್ಷ ಪರಿಹಾರ ಕೊಡುವಂತೆ ಆಯೋಗ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ತೊಂದರೆಗಾಗಿ ₹ 50,000 ಪರಿಹಾರ ಮತ್ತು ₹ 10 ಸಾವಿರ ಪ್ರಕರಣದ ಖರ್ಚು-ವೆಚ್ಚ ಕೊಡುವಂತೆ ಆಯೋಗ ಆದೇಶಿಸಿದೆ.