ಸಾರಾಂಶ
ರಾಮನಗರ: ಜಿಲ್ಲಾ ಕೇಂದ್ರ ರೇಷ್ಮೆನಗರಿ ರಾಮನಗರಕ್ಕೆ ಕುಡಿಯುವ ನೀರು ಪೂರೈಸುವ ನೆಟ್ಕಲ್ ಯೋಜನೆ ಕಾಮಗಾರಿ ಪೂರ್ಣಗೊಂಡು 7 ತಿಂಗಳಿಂದ ಪ್ರಾಯೋಗಿಕ ನೀರಿನ ಸರಬರಾಜು (ಟ್ರಯಲ್ ರನ್) ನಡೆಯುತ್ತಿರುವ ಬೆನ್ನ ಹಿಂದೆಯೇ ಕಳಪೆ ಕಾಮಗಾರಿಯ ಗಂಭೀರ ಆರೋಪ ಕೇಳಿ ಬಂದಿದೆ.
ನೆಟ್ಕಲ್ ಯೋಜನೆಯಲ್ಲಿ ಪೈಪ್ ಲೈನ್‌ನಿಂದ ಹಿಡಿದು ಕೊಳಾಯಿ(ನಳ)ಗಳ ಅಳವಡಿಕೆವರೆಗೂ ಕಳಪೆ ಕಾಮಗಾರಿ ನಡೆದಿದೆ ಎನ್ನಲಾಗಿದೆ. ಈ ಕಾರಣದಿಂದಾಗಿ 465 ಕೋಟಿ ರು. ವೆಚ್ಚದ ಈ ಯೋಜನೆ ಅನುಷ್ಠಾನದ ಜವಾಬ್ದಾರಿ ಹೊತ್ತ ಜಲ ಮಂಡಳಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮೇಲೆ ಅನುಮಾನ ಮೂಡುವಂತೆ ಮಾಡಿದೆ.ಈ ಯೋಜನೆಗಾಗಿ ಅಳವಡಿಸಿರುವ ಪೈಪ್ ಲೈನ್ ಗಳು ಕಳಪೆ ಗುಣಮಟ್ಟದಿಂದ ಕೂಡಿದೆ. ಚೇಂಬರ್ ನಿರ್ಮಾಣವೂ ಕಳಪೆಯಾಗಿದ್ದರೆ, ಮನೆಗಳಿಗೆ ಅಳವಡಿಸಿರುವ ಕೊಳಾಯಿ ಮತ್ತು ಮೀಟರ್‌ಗಳು ಗುಣಮಟ್ಟದಿಂದ ಕೂಡಿಲ್ಲ. ಇನ್ನು ರೋಡ್ ರೆಸ್ಟೋರೇಷನ್ ಹೆಸರಿನಲ್ಲಿ 6.50 ಕೋಟಿ ರು. ದುರುಪಯೋಗ ಆಗಿರುವ ಆರೋಪಗಳು ಬಲವಾಗಿ ಕೇಳಿ ಬಂದಿವೆ.
ಲೋಕಾಯುಕ್ತರಿಗೆ ದೂರು ಸಲ್ಲಿಸಲು ಸಿದ್ಧತೆ :ಇಷ್ಟೆಲ್ಲ ಕಳಪೆ ಕಾಮಗಾರಿಯ ಕಾರಣ ಬೇಸರಗೊಂಡಿರುವ ಸ್ವತಃ ಶಾಸಕರಾದ ಇಕ್ಬಾಲ್ ಹುಸೇನ್ ಅವರೇ ಸಮಗ್ರ ದಾಖಲೆಗಳ ಸಮೇತ ನೆಟ್ಕಲ್ ಯೋಜನೆ ಅನುಷ್ಠಾನದಲ್ಲಿ ಕಳಪೆ ಕಾಮಗಾರಿ ನಡೆಸಿ ಕೋಟ್ಯಂತರ ರುಪಾಯಿ ದುರುಪಯೋಗ ಪಡಿಸಿಕೊಂಡಿರುವ ಕುರಿತು ಜಲ ಮಂಡಳಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಲೋಕಾಯುಕ್ತರಿಗೆ ದೂರು ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಪೈಪ್‌ಲೈನ್ ಕಾಮಗಾರಿ ನಿರ್ವಹಿಸುವಾಗ ಬಗೆದಿರುವ ರೋಡ್ ರೆಸ್ಟೋರೇಷನ್ ಒಂದು ಅಡಿಯೂ ಮಾಡಿಲ್ಲ. ಇದಕ್ಕಾಗಿ 12 ಕೋಟಿ ರು. ಬಂದಿದೆ. ಆದರೆ, ಅಧಿಕಾರಿಗಳು 6.50 ಕೋಟಿ ರು. ರೆಸ್ಟೋರೇಷನ್‌ಗೆ ಖರ್ಚು ಮಾಡಲಾಗಿದೆ ಎಂದು ಜಲ ಮಂಡಳಿ ಅಧಿಕಾರಿಗಳು ಸ್ಪಷ್ಟೀಕರಣ ಕೊಡುತ್ತಿರುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.ನಗರಸಭೆ ಅಧಿಕಾರಿಗಳು ರಸ್ತೆಯಲ್ಲಿ ಸರಿಯಾದ ರೆಸ್ಟೋರೇಷನ್ ಮಾಡಿಲ್ಲ, ಕೆಲವೆಡೆ ಮಾತ್ರ ಬಗೆದಿರುವ ರಸ್ತೆಗಳಲ್ಲಿ ಸಿಲ್ಟ್ ಹಾಕಿ ಮುಚ್ಚಿದ್ದಾರೆ. ಇದಕ್ಕೆ 25 ಲಕ್ಷ ರುಪಾಯಿ ಸಹ ವೆಚ್ಚ ತಗಲುವುದಿಲ್ಲ ಎಂದು ತಿಳಿಸಿದ್ದಾರೆ. ಹಾಗಾಗಿ ಕ್ರಿಯಾ ಯೋಜನೆಯಂತೆ ನೆಟ್ಕಲ್ ಯೋಜನೆ ಕಾಮಗಾರಿ ನಡೆದಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸುವಂತೆಯೂ ಲೋಕಾಯುಕ್ತರಿಗೆ ಬರೆಯುವ ಪತ್ರದಲ್ಲಿ ಉಲ್ಲೇಖಿಸಲು ಶಾಸಕ ಇಕ್ಬಾಲ್ ಹುಸೇನ್ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ದಿನದ 24 ಗಂಟೆಯೂ ಕುಡಿಯುವ ನೀರು ಪೂರೈಸಲು ಜಲ ಮಂಡಳಿ ಜೋನ್ ಗಳನ್ನು ಮಾಡಿಕೊಂಡಿದೆ. ಎಲ್ಲ ವಾರ್ಡುಗಳಿಗೆ ನೀರು ಸುಗಮವಾಗಿ ಹರಿದು ಹೋಗವಂತಾಗಬೇಕು. ಮನೆಗಳಿಗೆ ಮೀಟರ್ ಅಳವಡಿಕೆ, ನೀರು ಸೋರುವಿಕೆ ಪರಿಶೀಲನೆ ಮಾಡಬೇಕು. ಜೊತೆಗೆ ಹೊಸ ಲೇ-ಔಟ್ ಗಳಿಗೂ ಸಹ ನೀರು ಪೂರೈಸಬೇಕಿದೆ. ಎಲ್ಲ ಮನೆಗಳಿಗೂ ಕೊಳಾಯಿ ಸಂಪರ್ಕ ಕಲ್ಪಿಸಬೇಕಿದೆ. ಇವೆಲ್ಲ ಕೆಲಸಗಳು ಗುಣಮಟ್ಟದಿಂದ ನಡೆದಾಗ ಮಾತ್ರ ಯೋಜನೆ ಸಾರ್ಥಕವಾಗಲಿದೆ.ಬಾಕ್ಸ್ ..................
ಪೈಪ್ ಲೈನ್ ಒಡೆದು ನೀರು ಸೋರಿಕೆ :ಕನಕಪುರ ಮತ್ತು ಮಳವಳ್ಳಿ ಗಡಿ ಪ್ರದೇಶದಲ್ಲಿರುವ ನೆಟ್ಕಲ್ (ಬ್ಯಾಲೆನ್ಸಿಂಗ್ ರಿಸರ್ವ್ ವೈರ್) ಸಮತೋಲನ ಜಲಾಶಯದಿಂದ ರಾಮನಗರ ಸುಮಾರು 68 ಕಿ.ಮೀ. ದೂರದಲ್ಲಿದೆ. ಈ ಯೋಜನೆಯಲ್ಲಿ ಪೈಪ್ ಲೈನ್ , ಕೊಳಾಯಿ ಅಳವಡಿಕೆ ಮುಗಿದಿದೆ. ಕಳೆದ 7 ತಿಂಗಳಿಂದ ಟ್ರೈಯಲ್ ರನ್ ಕೂಡ ನಡೆಯುತ್ತಿದ್ದು, ಅಲ್ಲಲ್ಲಿ ರಸ್ತೆಗಳಲ್ಲಿ ಪೈಪ್ ಲೈನ್ ಒಡೆದು ನೀರು ಸೋರಿಕೆಯಾಗುತ್ತಲೇ ಇದೆ.
ನೆಟಕಲ್ ಜಲಾಶಯದಿಂದ ಟಿ.ಕೆ. ಹಳ್ಳಿ ನೀರು ಸಂಸ್ಕರಣ ಘಟಕಕ್ಕೆ ಹರಿಯುವ ಕಾವೇರಿ ನೀರು, ಅಲ್ಲಿಂದ ಅರಳಾಳುಸಂದ್ರ ಪಂಪಿಂಗ್ ಘಟಕ ಪೈಪ್‌ಲೈನ್ ಮೂಲಕ ರಾಮನಗರದ ಬೋಳಪ್ಪನಹಳ್ಳಿ ಮತ್ತು ಕೊತ್ತಿಪುರದಲ್ಲಿರುವ ಜಲ ಸಂಗ್ರಹಗಾರವನ್ನು ಯಶಸ್ವಿಯಾಗಿ ತಲುಪುತ್ತಿದೆ. ಟ್ರಯಲ್ ರನ್ ನಲ್ಲಿಯೇ ಕಾವೇರಿ ನೀರು ಮನೆ ಮನೆಗಳಿಗೆ ಹರಿಯುತ್ತಿದೆ.ಬಾಕ್ಸ್ ..............
2052ರವರೆಗೆ ಸಮಸ್ಯೆ ಇಲ್ಲ2052ರವರೆಗೆ ರಾಮನಗರದ ನೀರಿನ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ನೆಟ್ಕಲ್ ಯೋಜನೆಯನ್ನು ರೂಪಿಸಲಾಗಿದೆ. ತೊರೆಕಾಡನಹಳ್ಳಿಯಿಂದ ಪೂರೈಕೆಯಾಗುವ ನೀರಿನ ಸಂಗ್ರಹಕ್ಕಾಗಿ ರಾಮನಗರದ ಕೊತ್ತೀಪುರದಲ್ಲಿ 200 ಲಕ್ಷ ಲೀಟರ್ ಹಾಗೂ ಬೋಳಪ್ಪನಹಳ್ಳಿಯಲ್ಲಿ 100 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್‌ಗಳನ್ನು ನಿರ್ಮಿಸಲಾಗಿದೆ. ನೀರನ್ನು ಪಂಪ್ ಮಾಡಲು 800 ಎಚ್.ಪಿ ಯಂತ್ರಗಳನ್ನು ಅಳವಡಿಸಲಾಗಿದೆ.
ಕೋಟ್ ..............ಲೋಕಾಯುಕ್ತರಿಗೆ ದೂರು ಸಲ್ಲಿಸುವೆ
ರಾಮನಗರ ವ್ಯಾಪ್ತಿಯ 31 ವಾರ್ಡುಗಳಿಗೆ 24*7 ಕುಡಿಯುವ ನೀರಿನ ಪೂರೈಸುವ ನೆಟ್ಕಲ್ ಯೋಜನೆ ಕಾಮಗಾರಿ ನನಗೆ ತೃಪ್ತಿ ತಂದಿಲ್ಲ, ಕಾಮಗಾರಿಯ ಸಮಗ್ರ ತನಿಖೆ ನಡೆಸುವಂತೆ ಲೋಕಾಯುಕ್ತರಿಗೆ ನಾನೇ ಪತ್ರ ಬರೆಯುತ್ತಿದ್ದೇನೆ. ನನ್ನ ಅವಧಿಯಲ್ಲಿಯೇ ಕಾಮಗಾರಿ ನಡೆದಿರಬಹುದು. ಹಾಗೆಂದು ಕಳಪೆ ಕಾಮಗಾರಿ ಮಾಡಿರುವುದನ್ನು ಒಪ್ಪಿಕೊಂಡು ಸುಮ್ಮನಿರಲು ಆಗುವುದಿಲ್ಲ. ಅದು ಜನರ ತೆರಿಗೆ ಹಣದಲ್ಲಿ ನಡೆದಿರುವ ಕಾಮಗಾರಿ. ಹಣ ಪೋಲಾಗಲು ಬಿಡುವುದಿಲ್ಲ.-ಇಕ್ಬಾಲ್ ಹುಸೇನ್, ಶಾಸಕರು, ರಾಮನಗರ ಕ್ಷೇತ್ರ
ಕೋಟ್ .............ನೆಟ್ಕಲ್ ಸಮನಾಂತರ ಜಲಾಶಯದಿಂದ ಸುಮಾರು 68 ಕಿ.ಮೀ. ದೂರವಿರುವ ರಾಮನಗರಕ್ಕೆ ನೀರು ಪೂರೈಸುವಾಗ ಎದುರಾಗುವ ತೊಂದರೆಗಳನ್ನು ಪ್ರಾಯೋಗಿಕ ಹಂತದಲ್ಲಿ ಸರಿಪಡಿಸಲಾಗುತ್ತಿದೆ. ನೀರು ಸೋರಿಕೆ ಯಂತ್ರದಲ್ಲಿ ದೋಷ ಸೇರಿದಂತೆ ವಿವಿಧ ರೀತಿಯ ಸಮಸ್ಯೆಗಳನ್ನು ಪಟ್ಟಿ ಮಾಡಿ ಪರಿಹರಿಸಲಾಗುತ್ತಿದೆ. ಎಲ್ಲವೂ ಸರಿ ಹೋದ ಬಳಿಕ ಸದ್ಯದಲ್ಲೇ ಮನೆ ಮನೆಗೆ ನೀರು ಹರಿಯಲಿದೆ.
- ಜಲ ಮಂಡಳಿ ಅಧಿಕಾರಿಗಳು, ರಾಮನಗರ-------------------------------
3ಕೆಆರ್ ಎಂಎನ್ 1,2,3.ಜೆಪಿಜಿ1.ರಾಮನಗರಕ್ಕೆ ನೀರು ಪೂರೈಕೆ ಮಾಡುವುದಕ್ಕಾಗಿ ಮಂಡ್ಯ ಜಿಲ್ಲೆಯ ಟಿ.ಕೆ. ಹಳ್ಳಿಯಲ್ಲಿ ನಿರ್ಮಿಸಿರುವ ನೀರು ಶುದ್ಧೀಕರಣ ಮತ್ತು ಪೂರೈಕೆ ಘಟಕ
2.ಮನೆಗಳಿಗೆ ಅಳವಡಿಸಿರುವ ಕಳಪೆ ಗುಣಮಟ್ಟದ ಕೊಳಾಯಿ.3.ಶಾಸಕ ಇಕ್ಬಾಲ್ ಹುಸೇನ್.