ದಸರಾ ನಾಡಹಬ್ಬಕ್ಕೆ ಮೆರುಗು ನೀಡುವ ಪ್ರಖ್ಯಾತ ಜಾನಪದ ಕ್ರೀಡೆಗಳು

| Published : Oct 10 2024, 02:18 AM IST

ದಸರಾ ನಾಡಹಬ್ಬಕ್ಕೆ ಮೆರುಗು ನೀಡುವ ಪ್ರಖ್ಯಾತ ಜಾನಪದ ಕ್ರೀಡೆಗಳು
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ನಾಡಹಬ್ಬ ದಸರಾದಲ್ಲಿ ವಿಜಯ ದಶಮಿ ಆಯುಧಪೂಜೆ ಹಬ್ಬಗಳು ಬಂತೆಂದರೆ ತರೀಕೆರೆ ಪಟ್ಟಣದ ಜನತೆಗೆ ಸಡಗರವೋ ಸಡಗರ, ಕಾರಣ ಹಬ್ಬದ ದಿನಗಳಲ್ಲಿ ಊರಿನ ಗ್ರಾಮ ದೇವತೆಗಳಿಗೆ ಪ್ರತಿ ನಿತ್ಯ ವಿಶೇಷ ಅಲಂಕಾರ, ಪೂಜೆ ವಿಜಯದಶಮಿಯಂದು ಊರಿನ ಗ್ರಾಮ ದೇವತೆಗೆ ಸಾಲು ಸಾಲು ಅದ್ಧೂರಿ ಮೆರವಣಿಗೆ, ಅಂಬು ಹೊಡೆಯುವ ಕಾರ್ಯಕ್ರಮ ಇದಕ್ಕೆಲ್ಲಾ ಮೆರಗು ಕೊಡುವಂತೆ ಯುವ ಕ್ರೀಡಾಭಿಮಾನಿಗಳ ಅಚ್ಚುಮೆಚ್ಚಾದ ಶ್ರೀ ಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘದಿಂದ ಅನೂಚಾನವಾಗಿ ನಡೆದುಕೊಂಡು ಬರುತ್ತಿರುವ ರಾಜ್ಯ ಮಟ್ಟದ ಬಯಲು ಜಂಗಿ ಕುಸ್ತಿ ಸ್ಪರ್ಧೆಗಳು.

- ತರೀಕೆರೆಯಲ್ಲಿ ಶತಮಾನದ ಇತಿಹಾಸ ಸಾರುವ ರಾಜ್ಯ ಮಟ್ಟದ ಬಯಲು ಜಂಗಿ ಕುಸ್ತಿ ಸ್ಪರ್ಧೆ

ಅನಂತ ನಾಡಿಗ್ಕನ್ನಡಪ್ರಭ ವಾರ್ತೆ, ತರೀಕೆರೆ

ನಾಡಹಬ್ಬ ದಸರಾದಲ್ಲಿ ವಿಜಯ ದಶಮಿ ಆಯುಧಪೂಜೆ ಹಬ್ಬಗಳು ಬಂತೆಂದರೆ ತರೀಕೆರೆ ಪಟ್ಟಣದ ಜನತೆಗೆ ಸಡಗರವೋ ಸಡಗರ, ಕಾರಣ ಹಬ್ಬದ ದಿನಗಳಲ್ಲಿ ಊರಿನ ಗ್ರಾಮ ದೇವತೆಗಳಿಗೆ ಪ್ರತಿ ನಿತ್ಯ ವಿಶೇಷ ಅಲಂಕಾರ, ಪೂಜೆ ವಿಜಯದಶಮಿಯಂದು ಊರಿನ ಗ್ರಾಮ ದೇವತೆಗೆ ಸಾಲು ಸಾಲು ಅದ್ಧೂರಿ ಮೆರವಣಿಗೆ, ಅಂಬು ಹೊಡೆಯುವ ಕಾರ್ಯಕ್ರಮ ಇದಕ್ಕೆಲ್ಲಾ ಮೆರಗು ಕೊಡುವಂತೆ ಯುವ ಕ್ರೀಡಾಭಿಮಾನಿಗಳ ಅಚ್ಚುಮೆಚ್ಚಾದ ಶ್ರೀ ಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘದಿಂದ ಅನೂಚಾನವಾಗಿ ನಡೆದುಕೊಂಡು ಬರುತ್ತಿರುವ ರಾಜ್ಯ ಮಟ್ಟದ ಬಯಲು ಜಂಗಿ ಕುಸ್ತಿ ಸ್ಪರ್ಧೆಗಳು. ಮೈಸೂರಿನಲ್ಲಿ ನಡೆಯುವ ನಾಡಹಬ್ಬದ ದಸರಾ ಕುಸ್ತಿ ಪಂದ್ಯಗಳಷ್ಟೆ ತರೀಕೆರೆಯಲ್ಲಿ ಮೂರು ದಿನಗಳ ಕಾಲ ಶ್ರೀ ಗುರು ರೇವಣಸಿದ್ದೇಶ್ವರ ಕುರುಬ ಸಮಾಜ ನೇತೃತ್ವದಲ್ಲಿ ನಡೆಯುವ ಬಯಲು ಜಂಗಿ ಕುಸ್ತಿ ಸ್ಪರ್ಧೆ ರಾಜ್ಯ ಮಟ್ಟದಲ್ಲಿ ಪ್ರಖ್ಯಾತಿ ಪಡೆದಿವೆ. ಮೈಸೂರು ದಸರಾ, ರಾಜ್ಯ ಮತ್ತು ಹೊರ ರಾಜ್ಯಗಳಿಂದ ಬರುವ ಹೆಸರಾಂತ ಕುಸ್ತಿ ಪಟುಗಳು ತರೀಕೆರೆ ಬಯಲು ಜಂಗಿ ಕುಸ್ತಿ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ.

ಅಚ್ಚುಕಟ್ಟಾಗಿ ಬಹಳ ಶಿಸ್ತಿನಿಂದ ಗರಡಿ ಮನೆಗಳ ನೀತಿ ನಿಯಮಗಳಿಗೆ ಅನುಸಾರವಾಗಿ ತರೀಕೆರೆಯಲ್ಲಿ ನಡೆಯುವ ಕುಸ್ತಿ ಪಂದ್ಯಗಳು ಮತ್ತು ಹಿರಿಯ ಪೈಲ್ವಾನರು ನೀಡುವ ನ್ಯಾಯ ಸಮ್ಮತ ತೀರ್ಪು ತರೀಕೆರೆ ಕುಸ್ತಿ ಅಖಾಡದ ಜನಪ್ರಿಯತೆ ಉಳಿಸಿ, ಬೆಳೆಸಿಕೊಂಡು ಬಂದಿರುವ ಕಾರಣ ಯುವ ಪೈಲ್ವಾನರಿಂದ ಹಿಡಿದು ಸಾಕಷ್ಟು ಅನುಭವ ಪಡೆದ ಕುಸ್ತಿ ಪಟುಗಳು, ಜಗಜಟ್ಟಿಗಳು, ಪ್ರಸಿದ್ಧ ಮಲ್ಲರು ತರೀಕೆರೆ ಕುಸ್ತಿ ಅಖಾಡದಲ್ಲಿ ಪಾಲ್ಗೊಳ್ಳುವುದು ಇಲ್ಲಿನ ವಿಶೇಷ.

ಕುಸ್ತಿ ಪಟುಗಳು ಅಖಾಡದಲ್ಲಿ ಬಳಸುವ ಪಟ್ಟುಗಳು, ಆ ಪಟ್ಟುಗಳನ್ನು ಬಿಡಿಸಿಕೊಳ್ಳಲು ತೋರುವ ಜಾಣ್ಮೆ, ಕೌಶಲ್ಯ ಇವುಗಳನ್ನು ಪ್ರತ್ಯಕ್ಷ ವೀಕ್ಷಿಸುವುದೇ ಒಂದು ಕೌತುಕ, ತರೀಕೆರೆ ಕುಸ್ತಿ ಪಂದ್ಯಗಳಲ್ಲಿ ಭಾಗವಹಿಸುವುದೆಂದರೆ ಅದೊಂದು ವಿಶೇಷ ಅನುಭವವೇ ಸರಿ.

ರಾಜ ಮಹಾರಾಜರು, ತರೀಕೆರೆ ವೀರ ಪಾಳೆಗಾರರು ಮತ್ತು ದಾನಿ ಸರ್ಜಾ ಹನುಮಪ್ಪ ನಾಯಕ ಅವರ ಕಾಲದಿಂದಲೂ ಪಟ್ಟಣದಲ್ಲಿ ನಿರಂತರವಾಗಿ ಅರಮನೆಯಿಂದ ಗುರುಮನೆ ತನಕ, ಜನರಿಂದ ಜನರಿಗೆ ಹರಡಿ ಬಂದ ಕುಸ್ತಿ ಪಂದ್ಯಗಳಿಗೂ ತರೀಕೆರೆ ಪಟ್ಟಣಕ್ಕೂ ಅವಿನಾಭಾವ ಸಂಬಂದ ಇದೆ. ಗರಡಿ ಮನೆ ಕುಸ್ತಿ ಪಟುಗಳಿಗೆ ದೇವರ ಮನೆ ಇದ್ದ ಹಾಗೆ. ಕಟ್ಟು ಮಸ್ತಾದ ಸದೃಢ ಸ್ನಾಯುಗಳು, ಫಳ ಫಳ ಹೊಳೆಯುವ ಭುಜ-ತೋಳುಗಳು, ನಿತ್ಯ ವ್ಯಾಯಾಮದಿಂದ ಮಿರ ಮಿರ ಮಿಂಚುವ ಶರೀರ, ತೇಜಸ್ಸಿನಿಂದ ಕೂಡಿದ ಕಾಂತಿಯುತ ಮುಖ ಕಣ್ಣು, ಕುಸ್ತಿ ಪಟುವಿನ ಈ ಸಹಜ ದೇಹದಾರ್ಡ್ಯ ಕ್ರೀಡಾಭಿಮಾನಿಗಳನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ.ಗರಡಿ ಮನೆಯ ಹಿರಿಯ ಪೈಲ್ವಾನರು ಕಿರಿಯರಿಗೆ ಕಲಿಸುವ ಕೈಸಾಮು, ಮೂಲೆ ಸಾಮು, ಉಟ್ ಬೈಸ್, ಗದೆ ತಿರಿಗಿಸುವುದು, ಕುಸ್ತಿ ವಿವಿಧ ಪಟ್ಟುಗಳು, ಉಪಾಯದಿಂದ ಪಟ್ಟು ಬಿಡಿಸಿಕೊಳ್ಳುವ ರೀತಿ, ರಾಶಿಪೂಜೆ ಇತ್ಯಾದಿ ಕುಸ್ತಿ ತರಬೇತಿ ವಿವಿಧ ಆಯಾಮಗಳನ್ನು ನೋಡುವುದೇ ಒಂದು ವಿಶೇಷ.

-- ಬಾಕ್ಸ್--

ಬೆಳ್ಳಿ ಗದೆ - ಬಂಗಾರದ ಬಳೆ ಕುಸ್ತಿ ಸ್ಪರ್ಧೆ:

ಪಟ್ಟಣದ ಬಯಲು ರಂಗ ಮಂದಿರದ ವಿಶಾಲ ಮೈದಾನದಲ್ಲಿ ಸಾವಿರಾರು ಮಂದಿ ಕುಸ್ತಿ ಮತ್ತು ಕ್ರೀಡಾಭಿಮಾನಿಗಳು ವೀಕ್ಷಿಸಲು ಶ್ರೀ ಗುರು ರೇವಣ ಸಿದ್ದೇಶ್ವರ ಗರಡಿ ಕುಸ್ತಿ ಸಂಘ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿದ್ದು ಅ.13, 14 ಮತ್ತು15 ರಂದು ಈ 3 ದಿನಗಳು ನಡೆಯುವ ರಾಜ್ಯ ಮಟ್ಟದ ಬಯಲು ಜಂಗಿ ಕುಸ್ತಿಗಳ ಉದ್ಘಾಟನೆ, ಅಖಾಡದ ಪೂಜೆ, ಹಿರಿಯ ಮಾಜಿ ಪೈಲ್ವಾನರಿಗೆ ಸನ್ಮಾನ ಇತ್ಯಾದಿ ಕಾರ್ಯಕ್ರಮ ನಡೆಯುತ್ತದೆ.

ತರೀಕೆರೆ ಪುರಸಭೆ ನೀಡುತ್ತ ಬಂದಿರುವ ಪ್ರತಿಷ್ಟಿತ ಬೆಳ್ಳಿ ಗಧೆ ಸ್ಪರ್ಧೆ, ಪಾಳೆಗಾರ ವಂಶಸ್ಥರು ನೀಡುವ ಬಂಗಾರದ ಬಳೆ ಹಾಗೂ ಬೆಳ್ಳಿ ಕಿರೀಟ ಬಹುಮಾನಗಳನ್ನು ಗೆಲ್ಲಲು ಕುಸ್ತಿ ಸ್ಪರ್ಧೆಗಳ ರೋಚಕ ಪಟ್ಟುಗಳನ್ನು ಇದರಲ್ಲಿ ಭಾಗವಹಿಸುವ ನಾಡಿನ ಪ್ರತಿಷ್ಠಿತ ಕುಸ್ತಿ ಪಟುಗಳು, ಜಗಜಟ್ಟಿಗಳು, ಪ್ರಖ್ಯಾತ ಕುಸ್ತಿ ಮಲ್ಲರು ನಿರ್ವಹಿಸುತ್ತಾರೆ. ಇದನ್ನು ನೋಡಲು ಅಪಾರ ಅಭಿಮಾನಿಗಳ ದಂಡೇ ನೆರೆಯುವುದು ಈ ಪಂದ್ಯಾವಳಿಗೆ ಇರುವ ಖ್ಯಾತಿಗೆ ಹಿಡಿದ ಕನ್ನಡಿ

9ಕೆಟಿಆರ್.ಕೆ.4ಃ

ತರೀಕೆರೆಯಲ್ಲಿ ಬಯಲು ರಂಗ ಮಂದಿರದಲ್ಲಿ ನಡೆಯುವ ರಾಜ್ಯ ಮಟ್ಟದ ಬಯಲು ಜಂಗಿ ಕುಸ್ತಿ ಸ್ಪರ್ಧೆಗಳು.