Population control is essential for building a healthy society.

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಜನಸಂಖ್ಯೆ ನಿಯಂತ್ರಣ ಅತ್ಯಗತ್ಯ: ಡಾ. ಮಹೇಶ ಬಿರಾದರ

---

ಕನ್ನಡಪ್ರಭ ವಾರ್ತೆಸುರಪುರ

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಜನಸಂಖ್ಯೆ ನಿಯಂತ್ರಣ ಅತ್ಯಗತ್ಯವಾಗಿದ್ದು, ಇದು ಸರ್ಕಾರದ ಜವಾಬ್ದಾರಿ ಮಾತ್ರವಲ್ಲದೆ ಪ್ರತಿಯೊಬ್ಬ ನಾಗರಿಕನ ಸಾಮಾಜಿಕ ಹೊಣೆಗಾರಿಕೆಯೂ ಆಗಿದೆ ಎಂದು ಯಾದಗಿರಿಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ ಬಿರಾದರ ಹೇಳಿದರು.

ಸುರಪುರ ಸಮೀಪದ ವೆಂಕಟಾಪುರದ ಶೆಟ್ಟಿ ಕಾಲೇಜಿನಲ್ಲಿ ಬುಧವಾರ ವಿಶ್ವ ಜನಸಂಖ್ಯೆ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಜನಸಂಖ್ಯೆಯಿಂದ ಬಡತನ, ಅಜ್ಞಾನ, ಮಾಹಿತಿಯ ಕೊರತೆ, ಮೂಢನಂಬಿಕೆ, ಬಾಲ್ಯವಿವಾಹ ಹಾಗೂ ಕಡಿಮೆ ಸಾಕ್ಷರತೆಯಂತಹ ಸಮಸ್ಯೆಗಳು ಉಲ್ಬಣಿಸುತ್ತಿವೆ. ಈ ಹಿನ್ನೆಲೆಯಲ್ಲಿ ಕುಟುಂಬ ಕಲ್ಯಾಣ ಯೋಜನೆಗಳನ್ನು ಎಲ್ಲ ಸಮುದಾಯದ ಜನರು ಯಾವುದೇ ಹಿಂಜರಿಕೆಯಿಲ್ಲದೆ ಸ್ವಯಂಪ್ರೇರಿತವಾಗಿ ಅಳವಡಿಸಿಕೊಳ್ಳಬೇಕು.ಇದೇ ವಿಶ್ವ ಜನಸಂಖ್ಯೆ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರಾಜಾ ವೆಂಕಪ್ಪ ನಾಯಕ ಮಾತನಾಡಿ, "ಹೆಣ್ಣಾಗಲಿ, ಗಂಡಾಗಲಿ , ಮನೆಗೊಂದೇ ಮಗು ಇರಲಿ " ಎಂಬ ಧ್ಯೇಯವಾಕ್ಯದಡಿ ರಾಷ್ಟ್ರೀಯ ಆರೋಗ್ಯ ಯೋಜನೆಗಳಿಂದ ತಾಯಿ ಮತ್ತು ಮಗು ಮರಣ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದೆ ಎಂದರು. ಆರೋಗ್ಯಕರ ಕುಟುಂಬಕ್ಕಾಗಿ ಗಂಡು 21 ಹಾಗೂ ಹೆಣ್ಣು 18 ವರ್ಷ ಪೂರ್ಣಗೊಂಡ ಬಳಿಕವೇ ವಿವಾಹವಾಗಬೇಕು. ಮೊದಲ ಮಗುವಿಗೆ ಕನಿಷ್ಠ ಮೂರು ವರ್ಷ ಹಾಗೂ ಎರಡು ಮಕ್ಕಳ ನಡುವೆ ನಾಲ್ಕು ವರ್ಷಗಳ ಅಂತರ ಕಾಪಾಡುವುದು ಆರೋಗ್ಯದ ದೃಷ್ಟಿಯಿಂದ ಅಗತ್ಯವಾಗಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ಇದುವರೆಗೆ ಸುಮಾರು 2.60 ಕೋಟಿಗೂ ಅಧಿಕ ಜನನಗಳನ್ನು ತಡೆಗಟ್ಟಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಜ್ಯೋತಿ ಕಟ್ಟಿಮನಿ ಮಾತನಾಡಿ, ಜನಸಂಖ್ಯೆ ಸ್ಫೋಟದಿಂದ ಆಹಾರ, ನೀರು, ವಸತಿ, ಶಿಕ್ಷಣ, ಆರೋಗ್ಯ ಸೇವೆಗಳು ಹಾಗೂ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಒತ್ತಡ ಹೆಚ್ಚುತ್ತಿದ್ದು, ಪರಿಸರ ಮಾಲಿನ್ಯ, ನಿರುದ್ಯೋಗ ಮತ್ತು ಸಾಮಾಜಿಕ ಅಸಮಾನತೆ ವೃದ್ದಿಯಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಲಕ್ಷ್ಮೀ ಮುಂಡಾಸ್ ಮಾತನಾಡಿ ,ಕುಟುಂಬ ಕಲ್ಯಾಣ ಕುರಿತು ಜನರಲ್ಲಿ ಅರಿವು ಮೂಡಿಸುವ ಅತ್ಯಗತ್ಯ. ಕುಟುಂಬ ಕಲ್ಯಾಣ ಕ್ರಮಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳುವ ಮೂಲಕ ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶೆಟ್ಟಿ ಕಾಲೇಜಿನ ಪ್ರಾಂಶುಪಾಲ ಬೂದಪ್ಪ ಶೆಟ್ಟಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಿಕ್ಷಕರು, ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಉಪನ್ಯಾಸಕ ಶಿವಕುಮಾರ ಸ್ವಾಗತಿಸಿದರು. ಬಿ.ಎಚ್.ಇ.ಒ. ನಿಂಗಮ್ಮ ನಿರೂಪಿಸಿ, ವಂದಿಸಿದರು.

-----

ಫೋಟೋ: ಸುರಪುರ ಸಮೀಪದ ವೆಂಕಟಾಪುರದ ಶೆಟ್ಟಿ ಕಾಲೇಜಿನಲ್ಲಿ ಬುಧವಾರ ವಿಶ್ವ ಜನಸಂಖ್ಯೆ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ ಬಿರಾದರ ಉದ್ಘಾಟಿಸಿದರು.ಡಾ.ಆರ್.ವಿ.ಎನ್ ಹಾಗೂ ಡಾ.ಜ್ಯೋತಿ ಕಟ್ಟಿಮನಿ ಸೇರಿದಂತೆ ಇತರರು ಇದ್ದರು.