ಸಾರಾಂಶ
ನಂದಿ ಮುಖವಾಡ ಧರಿಸಿದ ಎರುಕೋಲ ದೈವವು ದೇವರನ್ನು ಪೂಕರೆ ಕಟ್ಟೆಗೆ ಕರೆದು ಕೊಂಡು ದೇವರ ಬಲಿ ಹೊರಟು ದೇಗುಲದ ಪಶ್ಚಿಮ ದ್ವಾರದಿಂದ ರಾಜಮಾರ್ಗದಲ್ಲಿ ಭಂಡಾರದ ಬಿರುದಾವಳಿ, ಛತ್ರ ಚಾಮರ, ಬೇತಾಳ, ಹಸ್ರಕೊಡೆ, ದಂಡುಶಿಲಾಲು, ವಾದ್ಯ ಘೋಷ, ದೇಗುಲದ ಬಸವ, ಬೇತಾಳ, ಸಕಲ ಬಿರುದಾವಳಿ ನಿಶಾನಿ ಸಹಿತ ನಂದಿ ಮುಖವಾಡದ ದೈವದೊಂದಿಗೆ ದೇವರು ನೇರವಾಗಿ ಪೂಕರೆ ಕಟ್ಟೆಗೆ ತೆರಳುತ್ತದೆ.
ಕನ್ನಡಪ್ರಭ ವಾರ್ತೆ ಪುತ್ತೂರು
ಇತಿಹಾಸ ಪ್ರಸಿದ್ಧ ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಪೂಕರೆ ಉತ್ಸವವು ಕಾರ್ತಿಕ ಮಾಸದ ಹಸ್ತಾ ನಕ್ಷತ್ರದ ದಿನದಂದುಮಂಗಳವಾರ ರಾತ್ರಿ ವೇದಮೂರ್ತಿ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ನಡೆಯಿತು. ಬ್ರಹ್ಮಶ್ರೀ ಶ್ರೀಧರ್ ತಂತ್ರಿ ಮತ್ತು ಪ್ರಧಾನ ಅರ್ಚಕ ವೇದಮೂರ್ತಿ ವಸಂತ ಕೆದಿಲಾಯ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ತುಳುನಾಡಿನಲ್ಲಿ ಭತ್ತವನ್ನು ಬೇಸಾಯ ಮಾಡುವ ರೈತಾಪಿ ಜನರು ಆರಾಧಿಸುತ್ತಾ ಬಂದಿರುವ ಆಚರಣೆಯಲ್ಲಿ ಪೂಕರೆ ಹಾಕುವ ಪದ್ಧತಿಯೂ ಒಂದಾಗಿದೆ. ಫಲವಂತಿಕೆಯ ಹಿನ್ನೆಲೆಯಲ್ಲಿ ಸುಗ್ಗಿ ಪೂಕರೆಯ ವೇಳೆ ಬೇಸಾಯದ ದೈವವಾಗಿ ಎರುಕೋಲ ದೈವದ ಆರಾಧನೆ ನಡೆಯುತ್ತದೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಮುಂಭಾಗದಲಿರುವ ದೇವರಮಾರು ಗದ್ದೆಯಲ್ಲಿ ಪ್ರತಿ ವರ್ಷ ನಡೆಯುತ್ತಿರುವ ಪೂಕರೆ ಉತ್ಸವದ ಆಚರಣೆಯೂ ಇಲ್ಲಿನ ಸಂಪ್ರದಾಯಕ್ಕೆ ಸೇರಿದೆ. ಈ ದೇವಸ್ಥಾನದಲ್ಲಿ ಕ್ಷೇತ್ರದ ಪೂರ್ವಶಿಷ್ಟ ಸಂಪ್ರದಾಯದಂತೆ ದೀಪಾವಳಿಯ ಬಲೀಂದ್ರಪೂಜೆಯಂದು ಬಲಿಹೊರಟು, ದೇವರ ವರ್ಷದ ಪ್ರಥಮ ಸವಾರಿಯಾಗಿ ಪೂಕರೆ ಉತ್ಸವವು ನಡೆಯುತ್ತದೆ.ನಂದಿ ಮುಖವಾಡ ಧರಿಸಿದ ಎರುಕೋಲ ದೈವವು ದೇವರನ್ನು ಪೂಕರೆ ಕಟ್ಟೆಗೆ ಕರೆದು ಕೊಂಡು ದೇವರ ಬಲಿ ಹೊರಟು ದೇಗುಲದ ಪಶ್ಚಿಮ ದ್ವಾರದಿಂದ ರಾಜಮಾರ್ಗದಲ್ಲಿ ಭಂಡಾರದ ಬಿರುದಾವಳಿ, ಛತ್ರ ಚಾಮರ, ಬೇತಾಳ, ಹಸ್ರಕೊಡೆ, ದಂಡುಶಿಲಾಲು, ವಾದ್ಯ ಘೋಷ, ದೇಗುಲದ ಬಸವ, ಬೇತಾಳ, ಸಕಲ ಬಿರುದಾವಳಿ ನಿಶಾನಿ ಸಹಿತ ನಂದಿ ಮುಖವಾಡದ ದೈವದೊಂದಿಗೆ ದೇವರು ನೇರವಾಗಿ ಪೂಕರೆ ಕಟ್ಟೆಗೆ ತೆರಳುತ್ತದೆ.
ಪೂಕರೆ ಕಟ್ಟೆಯಿಂದ ದೇವಳದ ಗದ್ದೆಯನ್ನು ನೋಡಿದ ಬಳಿಕ ದೇವರು ಕಟ್ಟೆಯಲ್ಲಿ ವಿರಾಜಮಾನರಾದರು. ವೇ.ಮೂ .ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಬ್ರಹ್ಮಶ್ರೀ ಶ್ರೀಧರ್ ತಂತ್ರಿ ಮತ್ತು ಪ್ರಧಾನ ಅರ್ಚಕ ವೇದಮೂರ್ತಿ ವಸಂತ ಕೆದಿಲಾಯ ಅವರು ಮೂಲ ನಾಗ ಸನ್ನಿಧಿಗೆ ತೆರಳಿ ತಂತ್ರಿಗಳು ಪೂಕರೆ ಗದ್ದೆಗೆ ಪ್ರಾರ್ಥನೆ ಮಾಡಿದರು. ಪ್ರಧಾನ ಅರ್ಚಕ ವೇ ಮೂ ವಿ.ಎಸ್. ಭಟ್ ಮೂಲನಾಗನದಲ್ಲಿ ತಂಬಿಲ ಸೇವೆ ನೆರವೇರಿಸಿದರು. ಪೂಕರೆಯ ವಿಧಿ ವಿಧಾನಗಳು ಜರುಗಿ ಕಟ್ಟೆಪೂಜೆ ನೆರವೇರಿದ ಬಳಿಕ ದೇವರು ದಾರಿಯಲ್ಲಿ ಆರತಿ, ಹಣ್ಣುಕಾಯಿ ಸ್ವೀಕರಿಸುತ್ತಾ ದೇಗುಲಕ್ಕೆ ಹಿಂತಿರುಗಿದರು. ಪೂಕರೆ ಸಿದ್ಧಪಡಿಸಿದ ಸ್ಥಳದಲ್ಲಿ ಹಿರಿಯರಾದ ಕಿಟ್ಟಣ್ಣ ಗೌಡ ಅವರ ನೇತೃತ್ವದಲ್ಲಿ ದೈವ ಮಧ್ಯಸ್ಥ ನ್ಯಾಯವಾದಿ ತೇಜಸ್ ಅವರು ನುಡಿಗಟ್ಟಿನೊಂದಿಗೆ ಪ್ರಾರ್ಥಿಸಿದದರು. ಪೂಕರೆ ಉತ್ಸವಕ್ಕೆ ಸಂಬಂಧಿಸಿದವರು ಜೋಡು ಪೂಕರೆಯನ್ನು ದೇವರಮಾರು ಗದ್ದೆ ಮತ್ತು ಬಾಕಿತಮಾರು ಗದ್ದೆಯಲ್ಲಿ ಇಟ್ಟು ಪ್ರಾರ್ಥನೆ ಮಾಡಿದರು. ಬಳಿಕ ಪೂಕರೆ ಕಟ್ಟೆಯಲ್ಲಿ ದೇವರಿಗೆ ದೀವಟಿಕೆ ಪ್ರಣಾಮ, ಕಟ್ಟೆಪೂಜೆ ನಡೆದು, ಬುಲೆಕಾಣಿಕೆಯನ್ನು ಸಂಪ್ರದಾಯದಂತೆ ಸೀಮಿತ ಭಕ್ತರಿಗೆ ಸೀಯಾಳ ವಿತರಿಸಲಾಯಿತು. ಈ ಸಂದರ್ಭದಲ್ಲಿ ದೇವಳದ ಆಡಳಿತಾಧಿಕಾರಿ ನವೀನ್ ಭಂಡಾರಿ, ಕಾರ್ಯನಿರ್ವಹಣಾಧಿಕಾರಿ ಕೆ.ವಿ. ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಸಿಬ್ಬಂದಿ ರವೀಂದ್ರ, ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಸದಸ್ಯರಾದ ಶೇಖರ್ ನಾರಾವಿ, ರಾಮ್‌ದಾಸ್ ಗೌಡ, ರವೀಂದ್ರನಾಥ ರೈ ಬಳ್ಳಮಜಲು, ರಾಮಚಂದ್ರ ಕಾಮತ್, ಮಾಜಿ ಆಡಳಿತ ಮೊಕ್ತೇಸರ ಎನ್.ಕೆ. ಜಗನ್ನಿವಾಸ ರಾವ್, ಮಾಜಿ ಮೊಕ್ತೇಸರ ಚಿದಾನಂದ ಬೈಲಾಡಿ, ನಗರಸಭಾ ಸದಸ್ಯರಾದ ದೇವಳದ ವಾಸ್ತು ಎಂಜಿನಿಯರ್ ಪಿ.ಜಿ. ಜಗನ್ನಿವಾಸ್ ರಾವ್, ಪುರಸಭಾ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು ಮೊದಲಾದವರು ಉಪಸ್ಥಿತರಿದ್ದರು.