ನವಂಬರ್ ತಿಂಗಳಲ್ಲಿ ಖಾತೆ ತೆರೆಯುವ ಅಭಿಯಾನದಲ್ಲಿ ಕರ್ನಾಟಕ ಅಂಚೆ ವೃತ್ತದಲ್ಲಿ ಅತಿ ಹೆಚ್ಚು ಖಾತೆಗಳನ್ನು ತೆರೆದು ಪ್ರಥಮ ಸ್ಥಾನಗಳಿಸಿರುವ ನಾಗಮಂಗಲ ಅಂಚೆ ವಿಭಾಗ,

ಕನ್ನಡಪ್ರಭ ವಾರ್ತೆ ನಾಗಮಂಗಲ

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಅಂಚೆ ಇಲಾಖೆಯಿಂದ ಆಯೋಜಿಸಿದ್ದ ಅಭಿಯಾನದಲ್ಲಿ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಪರಿಶ್ರಮದಿಂದಾಗಿ ನಾಗಮಂಗಲ ಅಂಚೆ ಉಪ ವಿಭಾಗ ಕಚೇರಿಯು ಅತಿ ಹೆಚ್ಚು ಖಾತೆ ತೆರೆದು ರಾಜ್ಯದಲ್ಲಿಯೇ ಪ್ರಥಮ ಸ್ಥಾನಗಳಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದು ಜಿಲ್ಲಾ ಅಂಚೆ ಅಧೀಕ್ಷಕ ಲೋಕನಾಥ್ ಬಣ್ಣಿಸಿದರು.

ಪಟ್ಟಣದ ಅಂಚೆ ಉಪ ವಿಭಾಗ ಕಚೇರಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನವಂಬರ್ ತಿಂಗಳಲ್ಲಿ ಖಾತೆ ತೆರೆಯುವ ಅಭಿಯಾನದಲ್ಲಿ ಕರ್ನಾಟಕ ಅಂಚೆ ವೃತ್ತದಲ್ಲಿ ಅತಿ ಹೆಚ್ಚು ಖಾತೆಗಳನ್ನು ತೆರೆದು ಪ್ರಥಮ ಸ್ಥಾನಗಳಿಸಿರುವ ನಾಗಮಂಗಲ ಅಂಚೆ ಉಪ ವಿಭಾಗ ವ್ಯಾಪ್ತಿಯ ಉಪ ಅಂಚೆ ಕಚೇರಿಗಳ ಹಾಗೂ ಶಾಖಾ ಅಂಚೆ ಕಚೇರಿಗಳ ಸಿಬ್ಬಂದಿಗೆ ಪ್ರಶಸ್ತಿಪತ್ರ ಮತ್ತು ಬಹುಮಾನ ವಿತರಿಸಿ ಮಾತನಾಡಿದರು.

ನವಂಬರ್ ತಿಂಗಳಲ್ಲಿ ಒಂದು ತಿಂಗಳ ಕಾಲ ಮಂಡ್ಯ ಅಂಚೆ ವಿಭಾಗದಲ್ಲಿ ಕನ್ನಡ ರಾಜ್ಯೋತ್ಸವ ಅಭಿಯಾನವನ್ನು ಅದ್ಧೂರಿಯಾಗಿ ನಡೆಸಿದ್ದಕ್ಕಾಗಿ ಅದರ ಪ್ರತಿಫಲ ಈಗ ಕಾಣುತ್ತಿದ್ದೇವೆ. ರಾಜ್ಯೋತ್ಸವ ಅಭಿಯಾನದಲ್ಲಿ 20 ಸಾವಿರ ಖಾತೆ ತೆರೆಯುವ ಗುರಿ ಹೊಂದಲಾಗಿತ್ತು. ಆದರೆ, ನಿರೀಕ್ಷೆಗೂ ಮೀರಿ ನಾವು 31 ಸಾವಿರ ಖಾತೆಗಳನ್ನು ತೆರೆಯುವ ಮೂಲಕ ಶೇ.125ರಷ್ಟು ಹೆಚ್ಚು ಸಾಧನೆ ಮಾಡಿದ್ದೇವೆ. ಕಳೆದ ವರ್ಷ ನಡೆಸಿದ ಅಭಿಯಾನದಲ್ಲಿ ಜಿಲ್ಲೆಯ ಶ್ರೀರಂಗಪಟ್ಟಣ ಅಂಚೆ ಉಪ ವಿಭಾಗ ಮೊದಲ ಸ್ಥಾನ ಪಡೆದುಕೊಂಡಿತ್ತು ಎಂದರು.

ಅಂಚೆ ಗ್ರಾಹಕರಿಗೆ ಮತ್ತಷ್ಟು ಜನಪರ ಯೋಜನೆ ತಲುಪಿಸುವ ಉದ್ದೇಶದಿಂದ 2026ಕ್ಕೆ ಸ್ವಾಗತ ಸ್ಪರ್ಧೆ ಜಾರಿಯಾಗುತ್ತಿದ್ದು, ಡಿ.18ರಿಂದ 2026ರ ಜ.10ರವರೆಗೆ ಉಳಿತಾಯ ಉತ್ಸವ ಹಮ್ಮಿಕೊಳ್ಳಲಾಗಿದೆ. ಈ ಅವಧಿಯಲ್ಲಿ ಅತಿ ಹೆಚ್ಚು ಉಳಿತಾಯ ಖಾತೆ ತೆರೆಸುವ ಸಿಬ್ಬಂದಿಗೆ ವೃತ್ತ ಮಟ್ಟದಲ್ಲಿ ಅವಾರ್ಡ್ ನೀಡಲಾಗುವುದು. ಇದರ ಜೊತೆಗೆ ಜನವರಿ ಅಂತ್ಯದೊಳಗೆ ಹೆಚ್ಚು ಆರ್‌ಪಿಎಲ್‌ಐ ಮತ್ತು ಪಿಎಲ್‌ಐ ಮಾಡುವವರಿಗೂ ಸಹ ವಿಶೇಷ ಪುರಸ್ಕಾರ ನೀಡಲಾಗುವುದು. ಹಾಗಾಗಿ ಅಧಿಕಾರಿ ಮತ್ತು ಸಿಬ್ಬಂದಿ ಇಲಾಖೆಯಲ್ಲಿ ಸಿಗುವ ಯೋಜನೆಗಳ ಕುರಿತು ಜನರಲ್ಲಿ ಅರಿವು ಮೂಡಿಸಬೇಕು ಎಂದರು.

ಇಲಾಖೆ ಮಾರ್ಕೆಟಿಂಗ್ ಕಾರ್ಯನಿರ್ವಾಹಕ ಅಧಿಕಾರಿ ತಿಮ್ಮರಾಯಿಗೌಡ, ನಾಗಮಂಗಲ ಅಂಚೆ ಉಪ ವಿಭಾಗ ಕಚೇರಿ ಅಂಚೆ ಉಪ ನಿರೀಕ್ಷಕ ಭೀಮಪ್ಪ ಪವಾರ್ ಹಾಗೂ ಪೋಸ್ಟ್ ಮಾಸ್ಟರ್ ಸಿದ್ದೇಗೌಡ ಕಾರ್ಯಕ್ರಮ ಕುರಿತು ಮಾತನಾಡಿದರು.

ಪ್ರಶಸ್ತಿ ಸ್ವೀಕರಿಸಿದ ಉಪ ಅಂಚೆ ಕಚೇರಿ ಹಾಗೂ ಶಾಖಾ ಅಂಚೆ ಕಚೇರಿಗಳ ಸಿಬ್ಬಂದಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಕಚೇರಿಯ ಯೋಗೇಶ, ರಾಘವೇಂದ್ರ, ಶಂಸಜೂರು, ರಾಹುಲ್, ಶ್ವೇತ, ಭಾಗ್ಯಲಕ್ಷ್ಮಿ, ಚಂದ್ರಶೇಖರ್, ರಂಗನಾಥ್, ನವೀನ್ ಸೇರಿದಂತೆ ಅಂಚೆ ಕಚೇರಿ ಸಿಬ್ಬಂದಿ ಇದ್ದರು.

--------

21ಕೆಎಂಎನ್ ಡಿ13

ನಾಗಮಂಗಲ ಅಂಚೆ ಉಪ ವಿಭಾಗ ಕಚೇರಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಅಭಿಯಾನದಲ್ಲಿ ಅತಿ ಹೆಚ್ಚು ಖಾತೆಗಳನ್ನು ತೆರೆದು ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದ ಅಂಚೆ ಉಪ ವಿಭಾಗ ವ್ಯಾಪ್ತಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪ್ರಶಸ್ತಿಪತ್ರ ಮತ್ತು ಬಹುಮಾನ ನೀಡಿ ಗೌರವಿಸಲಾಯಿತು.