ಪೌತಿ ಖಾತೆ ಮತ್ತು ನಕಾಶೆ ದಾರಿ ಆಂದೋಲನ

| Published : Sep 06 2024, 01:02 AM IST

ಸಾರಾಂಶ

ಪೌತಿ ಖಾತೆ ಮತ್ತು ನಕಾಶೆ ದಾರಿ ಆಂದೋಲನ

ಕನ್ನಡಪ್ರಭ ವಾರ್ತೆ ಮಾಗಡಿ

ತಾಲೂಕಿನ ನಾಗರೀಕರು ಹಾಗೂ ರೈತರು ತಾಲೂಕು ಆಡಳಿತ ಆಯೋಜಿಸಿರುವ ಪೌತಿ ಖಾತೆ ಮತ್ತು ನಕಾಶೆ ದಾರಿ ಆಂದೋಲನವನ್ನು ಸದುಪಯೋಗ ಪಡಿಸಿಕೊಳ್ಳಲು ತಹಶೀಲ್ದಾರ್ ಶರತ್ ಕುಮಾರ್ ಮನವಿ ಮಾಡಿದರು.

ಪಟ್ಟಣದ ತಾಲೂಕು ಕಚೇರಿಯ ಆವರಣದಲ್ಲಿ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಬುಧವಾರ ಆಯೋಜಿಸಿದ್ದ ಪೌತಿ ಖಾತೆ ಮತ್ತು ನಕಾಶೆ ದಾರಿ ಆಂದೋಲನಕ್ಕೆ ಚಾಲನೆ ಕೊಟ್ಟು ಮಾತನಾಡಿದ ಅವರು ತಾಲೂಕಿನಲ್ಲಿ ಈ ಸಮಸ್ಯೆಗಳು ಹೆಚ್ಚಾಗಿದ್ದು, ಇದರಿಂದ ರೈತರಿಗೆ ಹಾಗೂ ನಾಗರೀಕರಿಗೆ ಹೆಚ್ಚಿನ ಸಮಸ್ಯೆಯಾಗಬಾರದೆಂಬ ಉದ್ದೇಶದಿಂದ ತಾಲೂಕು ಕಚೇರಿಯಲ್ಲಿ ಪ್ರತಿ ಬುಧವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಪೌತಿ ಖಾತೆ ಮತ್ತು ನಕಾಶೆ ದಾರಿಯ ಸಮಸ್ಯೆಗಳ ಬಗ್ಗೆ ವಿಶೇಷ ಆಂದೋಲನವನ್ನು ಆಯೋಜಿಸಿದ್ದೇವೆ. ಈ ಸಮಸ್ಯೆಗಳ ವಿಚಾರವಾಗಿ ಅರ್ಜಿಗಳನ್ನು ಸಲ್ಲಿಸಿದರೆ ತ್ವರಿತ ಗತಿಯಲ್ಲಿ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಹೇಳಿದರು.

30 ಅರ್ಜಿಗಳು ಸ್ವೀಕಾರ:

ಪೌತಿ ಖಾತೆ ವಿಚಾರವಾಗಿ ಯಾವುದೇ ಅರ್ಜಿಗಳು ಇಂದಿನ ಆಂದೋಲನದಲ್ಲಿ ಬಂದಿರುವುದಿಲ್ಲ. ನಕಾಶೆ ದಾರಿ ಸಮಸ್ಯೆಗಳ ವಿಚಾರವಾಗಿ 30 ಅರ್ಜಿಗಳು ಬಂದಿದ್ದು. ಈ ಹಿಂದೆ ಬಂದಿರುವ ಪೌತಿ ಖಾತೆ ಮತ್ತು ನಕಾಶೆ ರಸ್ತೆಯ ಸಮಸ್ಯೆಗಳ ಅರ್ಜಿಗಳನ್ನು ಗಣನೆಗೆ ತೆಗೆದುಕೊಂಡು ಸರ್ವೆಯರ್ಸ್ ಮತ್ತು ರೆವಿನ್ಯೂ ಇನ್ಸ್‌ಪೆಕ್ಟರ್ ಅವರುಗಳ ವರದಿಯನ್ನು ಪರಿಶೀಲಿಸಿ ಕಾನೂನು ರೀತಿಯ ಪ್ರಕಾರ ಹದಿನೈದು ದಿನಗಳೊಳಗಾಗಿ ಕ್ರಮಗಳನ್ನು ಕೈಗೊಂಡು ಸೂಕ್ತ ಪರಿಹಾರ ಅಥವಾ ಹಿಂಬರಹವನ್ನು ಕಲ್ಪಿಸುತ್ತೇವೆ ಎಂದರು.

ಈ ವೇಳೆ ಆರ್.ಆರ್.ಟಿ ಶಿರಸ್ತೇದಾರ್ ರಶ್ಮಿ, ಮಂಜುಳ, ರೈತರಾದ ಕುಂಬಳಕಾಯಿ ಗಂಗಣ್ಣ ಸೇರಿದಂತೆ ತಾಲ್ಲೂಕಿನ ಹಲವು ಭಾಗದ ರೈತರು ಹಾಗೂ ನಾಗರೀಕರು ಉಪಸ್ಥಿತರಿದ್ದರು.