ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಬಡತನ, ಅನಕ್ಷರತೆ ಬಾಲ್ಯ ವಿವಾಹಕ್ಕೆ ಮೂಲ ಕಾರಣವಾಗಿದ್ದು, ಈ ಸಾಮಾಜಿಕ ಪಿಡುಗು ತೊಲಗಿಸಲು ಎಲ್ಲಾ ಸರ್ಕಾರಿ ಅಧಿಕಾರಿಗಳು ಕೈ ಜೋಡಿಸಿ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಚಿತ್ರದುರ್ಗ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಆರ್.ನಟರಾಜ್ ಕರೆ ನೀಡಿದರು.ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ಬಾಲ್ಯ ವಿವಾಹ ಮತ್ತು ಬಾಲ್ಯ ಗರ್ಭಾವಸ್ಥೆ ತಡೆಗಟ್ಟುವ ಕುರಿತು ನಡೆದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಬಾಲ್ಯ ವಿವಾಹ ಎಂಬ ಪಿಡುಗು ಬಹುಕಾಲದಿಂದಲೂ ಭಾರತ ಸೇರಿದಂತೆ ಪ್ರಪಂಚದ ವಿವಿಧ ರಾಷ್ಟ್ರಗಳಲ್ಲಿ ಅಸ್ತಿತ್ವದಲ್ಲಿದೆ. ನಾನಾ ಕಾರಣಗಳಿಂದ ಬಾಲ್ಯ ವಿವಾಹ ಪದ್ಧತಿ ಬೆಳೆದು ಬಂದಿದೆ ಎಂದು ತಿಳಿಸಿದರು.
ದೇಶದಲ್ಲಿ ಮದುವೆಗೆ ಹೆಣ್ಣುಮಕ್ಕಳ ಸಮ್ಮತಿ ಪಡೆಯುವ ವಯಸ್ಸನ್ನು ಕಾಲ ಕಾಲಕ್ಕೆ ಹೆಚ್ಚಿಸುತ್ತಾ ಬರಲಾಗಿದೆ. ಸ್ವಾತಂತ್ರ ಪೂರ್ವದಲ್ಲಿ ಸಮಾಜ ಸುಧಾರಕರ ಪ್ರಯತ್ನದಿಂದಾಗಿ 1929ರಲ್ಲಿ ಬಾಲ್ಯ ವಿವಾಹ ನಿರ್ಬಂಧ ಕಾಯ್ದೆ ಜಾರಿಗೊಳಿಸಲಾಯಿತು. 2006ರಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಜಾರಿ ಮಾಡುವ ಮೂಲಕ ಬಾಲ್ಯ ವಿವಾಹ ತಡೆ ಹೆಚ್ಚಿನ ಕಾನೂನಿನ ಬಲ ನೀಡಲಾಗಿದೆ ಎಂದರು.ಸರ್ವೋಚ್ಛ ನ್ಯಾಯಾಲಯಕ್ಕೆ ಕೇಂದ್ರ ಸರ್ಕಾರ ನೀಡಿದ ಮಾಹಿತಿಯಂತೆ ದೇಶದಲ್ಲಿ 2.30 ಕೋಟಿ ಬಾಲ ವಧುಗಳಿದ್ದು, ಕರ್ನಾಟಕದಲ್ಲಿ 1.33 ಲಕ್ಷ ಬಾಲ ವಧುಗಳು ಇರುವುದು ತಿಳಿದು ಬಂದಿದೆ. ಈ ಸಂಖ್ಯೆಗಳು ಬಾಲ್ಯ ವಿವಾಹ ಎಂಬ ಪಿಡುಗಿನ ವ್ಯಾಪಕತೆಯನ್ನು ಸ್ಪಷ್ಟಪಡಿಸುತ್ತವೆ.
ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು ಬಾಲ್ಯ ವಿವಾಹ ತಡೆಗಟ್ಟುವ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಸೇರಿದಂತೆ ಹಳ್ಳಿಗಳಲ್ಲಿ ಕೆಲಸ ಮಾಡುವ ಎಲ್ಲಾ ಇಲಾಖೆ ನೌಕರರು ಬಾಲ್ಯ ವಿವಾಹದ ಬಗ್ಗೆ ಮಾಹಿತಿ ತಿಳಿದ ತಕ್ಷಣವೇ ಅದರ ತಡೆಗೆ ಪ್ರಯತ್ನಿಸಬೇಕು. ಬಾಲ್ಯವಿವಾಹದ ಕುರಿತು ಸಹಾಯವಾಣಿಗೆ ಬಂದ ದೂರುಗಳಿಗೆ ಜಿಲ್ಲಾಡಳಿತ ತಕ್ಷಣ ಸ್ಪಂದಿಸಿ ಬಾಲ್ಯ ವಿವಾಹ ತಡೆಗಟ್ಟಿದೆ. ಆದರೂ ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಕಂಡುಬಂದಿದೆ ಎಂದು ಹೇಳಿದರು.ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾಗಳ ಪ್ರಾಧಿಕಾರದ ಅಧ್ಯಕ್ಷ ರೋಣ ವಾಸುದೇವ ಮಾತನಾಡಿ, ಬಾಲ್ಯ ವಿವಾಹ ಹಾಗೂ ಬಾಲ್ಯ ಗರ್ಭಾವಸ್ಥೆ ಪ್ರಕರಣಗಳಲ್ಲಿ ಚಿತ್ರದುರ್ಗ ಜಿಲ್ಲೆ ರಾಜ್ಯದಲ್ಲಿ 5ನೇ ಸ್ಥಾನದಲ್ಲಿದೆ. ಬಾಲ್ಯವಿವಾಹ ತಡೆಯುವುದು ಕೇವಲ ಒಂದು ಇಲಾಖೆ ಜವಾಬ್ದಾರಿ ಮಾತ್ರ ಅಲ್ಲ. ಎಲ್ಲ ಇಲಾಖೆಗಳು ಸೇರಿ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿ ಬಾಲ್ಯ ವಿವಾಹಗಳನ್ನು ತಡೆಗಟ್ಟೋಣ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಸಾಮಾಜಿಕ ಪಿಡುಗಾಗಿರುವ ಬಾಲ್ಯವಿವಾಹ ತಡೆಯುವ ನಿಟ್ಟಿನಲ್ಲಿ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ನಿತ್ಯವೂ ಮಕ್ಕಳ ಹಾಜರಾತಿ ಟ್ರಾಕಿಂಗ್ ಮಾಡಲಾಗುತ್ತಿದ್ದು, ದೀರ್ಘಕಾಲದ ಗೈರು ಹಾಜರಿ ಆಗುವ ಹೆಣ್ಣು ಮಕ್ಕಳ ಮನೆಗಳಿಗೆ ಶಿಕ್ಷಕರು ಭೇಟಿ ನೀಡಿ ಪರಿಶೀಲನೆ ನಡೆಸಿ ಮಕ್ಕಳ ಮೇಲೆ ನಿಗಾವಹಿಸಲಾಗುತ್ತಿದೆ ಎಂದು ತಿಳಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಮಾತನಾಡಿ, ಬಾಲ್ಯವಿವಾಹ ಹಾಗೂ ಬಾಲ್ಯ ಗರ್ಭಾವಸ್ಥೆ ಪ್ರಕರಣಗಳನ್ನು ಸವಾಲಾಗಿ ಸ್ವೀಕರಿಸಿ ಕಾರ್ಯ ನಿರ್ವಹಿಸಲಾಗುವುದು. ಈ ಪಿಡುಗುಗಳು ಮಕ್ಕಳ ಮೇಲೆ ಬಹಳಷ್ಟು ದುಷ್ಪಾರಿಣಾಮ ಬೀರಲಿದೆ. ಇದರಿಂದ ಮೂಲಭೂತ ಹಕ್ಕುಗಳ ಉಲ್ಲಂಘನೆಯೂ ಹೌದು. ಹಾಗಾಗಿ ನಾವೆಲ್ಲರೂ ಸಮನ್ವಯತೆ, ಬದ್ಧತೆ ಹಾಗೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದರು.
ಈ ವೇಳೆ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್, ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ ಸೇರಿದಂತೆ ಶಾಲಾ ಮುಖ್ಯ ಶಿಕ್ಷಕರು, ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ಮಕ್ಕಳ ದೌರ್ಜನ್ಯ ಕಂಡರೆ ತಕ್ಷಣ ದೂರು:ಬಾಲ್ಯ ವಿವಾಹ ಮಾದರಿಯಲ್ಲಿ ಬಾಲ ಗರ್ಭಾವಸ್ಥೆಯೂ ಕೂಡ ಪಿಡುಗಾಗಿ ಪರಿಣಮಿಸಿದೆ. ಹದಿಹರೆಯದ ಯುವಕ ಯುವತಿಯರು ದೈಹಿಕ ತುಡಿತ, ಕುತೂಹಲ ಹಾಗೂ ಆಸೆಗೆ ಒಳಗಾಗಿ ಇಂತಹ ದುಸ್ಥಿತಿ ತಲುಪುತ್ತಾರೆ. ದೈಹಿಕ ಹಾಗೂ ಮಾನಸಿಕವಾಗಿ ಸಧೃಡವಾಗಿರದ ಬಾಲಕಿಯರು ಗರ್ಭಧಾರಣೆ ಒಳಗಾಗಿ ಹಲವು ಸಂಕಷ್ಟಗಳಿಗೆ ತುತ್ತಾಗುತ್ತಾರೆ. 18 ವರ್ಷ ಒಳಗಿನ ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಪೋಕ್ಸೋ ಕಾಯ್ದೆ ಜಾರಿ ಮಾಡಲಾಗಿದೆ. ಮಕ್ಕಳ ದೌರ್ಜನ್ಯದ ಸಂಗತಿಗಳು ಕಂಡುಬಂದರೆ ತಕ್ಷಣವೇ ದೂರು ದಾಖಲಿಸಬೇಕು ಎಂದು ನ್ಯಾಯಮೂರ್ತಿ ಆರ್.ನಟರಾಜ್ ತಿಳಿಸಿದರು.