ಶಿಕ್ಷಣಾರ್ಜನೆಗೆ ಬಡತನ ಅಡ್ಡಿಯಲ್ಲ: ಸೋಮಲಿಂಗಯ್ಯ

| Published : Sep 01 2025, 01:03 AM IST

ಸಾರಾಂಶ

ರಾಮನಗರ: ಶಿಕ್ಷಣಾರ್ಜನೆಗೆ ಬಡತನ, ಸಿರಿತನ ಮುಖ್ಯವಲ್ಲ, ಜಾತಿ, ಧರ್ಮಗಳ ಅಡ್ಡಿಯಲ್ಲ. ಸಾಧನೆಯ ಗುರಿ ಮತ್ತು ನಿರಂತರ ಪರಿಶ್ರಮ, ಅಭ್ಯಾಸ ರೂಢಿಸಿಕೊಂಡರೆ ಸಾಧನೆ ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗಯ್ಯ ಕರೆ ನೀಡಿದರು.

ರಾಮನಗರ: ಶಿಕ್ಷಣಾರ್ಜನೆಗೆ ಬಡತನ, ಸಿರಿತನ ಮುಖ್ಯವಲ್ಲ, ಜಾತಿ, ಧರ್ಮಗಳ ಅಡ್ಡಿಯಲ್ಲ. ಸಾಧನೆಯ ಗುರಿ ಮತ್ತು ನಿರಂತರ ಪರಿಶ್ರಮ, ಅಭ್ಯಾಸ ರೂಢಿಸಿಕೊಂಡರೆ ಸಾಧನೆ ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗಯ್ಯ ಕರೆ ನೀಡಿದರು.

ನಗರದ ಛತ್ರದ ಬೀದಿಯಲ್ಲಿರುವ ಸರ್ಕಾರಿ ಮೇಯಿನ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಬಿಎನ್ ನೆಟ್‌ವರ್ಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಕೊಡುಗೆ ನೀಡಿದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಿ ಮತ್ತು ಬೆಂಗಳೂರು ಶೇಷಾದ್ರಿಪುರಂ ಲಯನ್ಸ್ ಸಂಸ್ಥೆ ನೀಡಿದ ಸ್ಟೀಲ್ ತಟ್ಟೆ ಮತ್ತು ಲೋಟಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಅವರು ಮಾತನಾಡಿದರು.

ಶಿಕ್ಷಣಕ್ಕೆ ಬಡತನ ಅಡ್ಡಿಯಾಗುವುದಿಲ್ಲ. ಪಡವಣಗೆರೆ ಗ್ರಾಮದ ಬಡ ಕುಟುಂಬದ ಬಾಲಕಿಯೊಬ್ಬಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದಿದ್ದಳು. ಕನ್ನಡ ಮಾಧ್ಯಮದಲ್ಲಿ ಇಡೀ ರಾಜ್ಯಕ್ಕೆ ಅತಿ ಹೆಚ್ಚು ಅಂಕ ಗಳಿಸಿದ ಕೀರ್ತಿಗೆ ಪಾತ್ರಳಾಗಿದ್ದಳು. ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂದಿನ ಮುಖ್ಯಮಂತ್ರಿಗಳು ಆಕೆಯನ್ನು ಗೌರವಿಸಿದ್ದರು. ಈ ಹಿನ್ನೆಲೆಯಲ್ಲಿ ತಾವು ಬಾಲಕಿಯ ಮನೆಗೆ ಭೇಟಿ ಕೊಟ್ಟಿದ್ದಾಗ, ಮನೆಯಲ್ಲಿ ತೀರಾ ಕನಿಷ್ಠ ಸೌಲಭ್ಯಗಳಿದ್ದವು. ಆಕೆಯ ಸಾಧನೆಯ ಬಗ್ಗೆ ಕೇಳಿದಾಗ, ಆಕೆ ನಿರಂತರ ನಡೆಸಿದ ಅಭ್ಯಾಸದ ಹಾಳೆಗಳನ್ನು ತೋರಿಸಿದಳು. ಪೇಪರ್ ಕೊಳ್ಳಲು ಆಗದಿದ್ದಾಗ, ಮದುವೆಯ ಆಹ್ವಾನ ಪತ್ರಿಕೆಗಳನ್ನೇ ಬಳಸಿ ಅಭ್ಯಾಸ ಮಾಡಿದ್ದಳು. ಆಕೆಯ ನಿರಂತರ ಅಭ್ಯಾಸ ಆಕೆಯ ಸಾಧನೆಗೆ ಕಾರಣವಾಯಿತು, ಸಾಮರ್ಥ್ಯ ಎಲ್ಲರಲ್ಲೂ ಇರುತ್ತದೆ. ಆದನ್ನು ಬಳಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ತುಂಬಿದರು.

ಸರ್ಕಾರಿ ಶಾಲೆಗಳಿಗೆ ಸರ್ಕಾರ ಮೂಲ ಸೌಕರ್ಯಗಳನ್ನು ಒದಗಿಸುತ್ತಿದೆ. ಆದರೆ ಎಲ್ಲವನ್ನು ಸರ್ಕಾರವೇ ಮಾಡಲು ಕಷ್ಟಸಾಧ್ಯ. ದಾನಿಗಳು ಸಹ ಕೈಜೋಡಿಸಿದರೆ ಸರ್ಕಾರಿ ಶಾಲೆಗಳನ್ನು ಇನ್ನಷ್ಟು ಉತ್ತಮ ಪಡಿಸಬಹುದು. ಎಬಿಎನ್ ನೆಟ್‌ವರ್ಕ್ ಮತ್ತು ಶೇಷಾದ್ರಿಪುರಂ ಲಯನ್ಸ್ ಸಂಸ್ಥೆಗಳ ಕೊಡಗೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಎಬಿಎನ್ ನೆಟ್‌ವರ್ಕ್ ಪ್ರೈ.ಲಿ ನ ಪ್ರಮುಖರಾದ ಸಂತೋಷ್ ಮಾತನಾಡಿ, ಮನಸ್ಸು ಚಂಚಲವಾಗಲು ಬಿಡಬಾರದು, ಓದುವ ಗುರಿ ಮಾತ್ರ ಇರಬೇಕು. ಜೀವನದ ಸುಧಾರಣೆಗೆ ಶಿಕ್ಷಣ ಅತಿ ಮುಖ್ಯ. ಮೊಬೈಲ್, ಟೀವಿ ಗೀಳು ಹೆಚ್ಚಿಸಿಕೊಳ್ಳಬೇಡಿ ಎಂದು ಕಿವಿಮಾತು ಹೇಳಿದರು.

ಸಮಾನ ಮನಸ್ಕರೆಲ್ಲರು ಜೊತೆಗೂಡಿ ರಚಿಸಿಕೊಂಡಿರುವ ಎಬಿಎನ್ ನೆಟ್‌ವರ್ಕ್ ಪ್ರೈ.ಲಿ ಮೂಲಕ ಸುಗ್ಗನಹಳ್ಳಿ ಸರ್ಕಾರಿ ಶಾಲೆ, ಎರೇಹಳ್ಳಿ ಸರ್ಕಾರಿ ಶಾಲೆ ಹಾಗೂ ಸರ್ಕಾರಿ ಮೇಯಿನ್ ಶಾಲೆಗೆ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಕೊಡುಗೆ ನೀಡಲಾಗಿದೆ. ಶೇಷಾದ್ರಿಪುರಂ ಲಯನ್ಸ್ ಸಂಸ್ಥೆ ವತಿಯಿಂದ ತಟ್ಟೆ, ಲೋಟಗಳನ್ನು ಕೊಡುಗೆ ನೀಡಿದೆ. ಇವುಗಳ ಸದುಪಯೋಗ ಪಡಿಸಿಕೊಳ್ಳಿ ಎಂದು ಕರೆ ನೀಡಿದರು.

ಈ ವೇಳೆ ಉದ್ಯಮಿ ಎಂ.ಬಿ.ನವೀನ್ ಕುಮಾರ್, ಶೇಷಾದ್ರಿಪುರಂ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಶುಭಕರ್ ದೋತಿ, ಲಯನ್ಸ್ ಪದಾಧಿಕಾರಿಗಳಾದ ಸೀತಾರಾಮ ಗುಪ್ತ, ವೆಂಕಟ್, ನಾಗೇಶ್, ರಾಧಾ ಶುಭಕರ್, ರಾಜೇಶ್ವರಿ ಮತ್ತು ರಾಮನಗರದ ಶರ್ವರಿ ಜ್ಯೂಯೆರ‍್ಸ್ ಮಾಲೀಕ ಕೆ.ವಿ.ಉಮೇಶ್, ಸಿಆರ್‌ಪಿ ಮುನಿಯಪ್ಪ, ಮೇಯಿನ್ ಶಾಲೆಯ ಮುಖ್ಯ ಶಿಕ್ಷಕ ಮರೀಗೌಡ, ಎಸ್‌ಡಿಎಂಸಿ ಸದಸ್ಯ ಜಯರಾಂ ಉಪಸ್ಥಿತರಿದ್ದರು.

31ಕೆಆರ್ ಎಂಎನ್ 3.ಜೆಪಿಜಿ

ರಾಮನಗರದ ಛತ್ರದ ಬೀದಿಯಲ್ಲಿರುವ ಸರ್ಕಾರಿ ಮೇಯಿನ್ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗಯ್ಯ ತಟ್ಟೆ ಮತ್ತು ಲೋಟ ವಿತರಿಸಿದರು.