ದೇಶದಲ್ಲಿ ಬಡತನ, ನಿರುದ್ಯೋಗ, ಸಾಮಾಜಿಕ ಅಸಮಾನತೆ ಜೀವಂತ

| Published : Dec 02 2024, 01:19 AM IST

ದೇಶದಲ್ಲಿ ಬಡತನ, ನಿರುದ್ಯೋಗ, ಸಾಮಾಜಿಕ ಅಸಮಾನತೆ ಜೀವಂತ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲಿಂದು ಪ್ರತಿವರ್ಷ 1.20 ಕೋಟಿ ಮಕ್ಕಳು ಪದವೀಧರರಾಗಿ ಹೊರಬರುತ್ತಿದ್ದಾರೆ. ಆದರೆ, ಕಳೆದ ವರ್ಷಗಳಲ್ಲಿ ಕೇವಲ 1.65 ಕೋಟಿ ಉದ್ಯೋಗಗಳು ಮಾತ್ರ ಸೃಷ್ಟಿಯಾಗಿವೆ. ಕೃತಕ ಬುದ್ದಿಮತ್ತೆ ಪ್ರಯೋಗಗಳು ಮತ್ತು ಆಧುನಿಕ ತಂತ್ರಜ್ಞಾನಗಳು ನಮ್ಮ ಯುವಕರ ಉದ್ಯೋಗ ಸೃಷ್ಟಿಗೆ ಬಂಡೆಗಲ್ಲಾಗಿವೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಮಹಾತ್ಮ ಗಾಂಧಿಯವರ ಗ್ರಾಮ ಸ್ವರಾಜ್ಯ ಮತ್ತು ಅಂತ್ಯೋದಯ ಪರಿಕಲ್ಪನೆಯಿಂದ ನಾವು ಹೊರಬಂದಿದ್ದರಿಂದ ದೇಶದಲ್ಲಿಂದು ಬಡತನ, ನಿರುದ್ಯೋಗ ಮತ್ತು ಸಾಮಾಜಿಕ ಅಸಮಾನತೆ ಜೀವಂತವಾಗಿಯೇ ಉಳಿದಿದೆ ಎಂದು ರಾಜ್ಯ ರೈತಸಂಘದ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ನಂದಿನಿ ಜಯರಾಂ ಅಭಿಪ್ರಾಯಪಟ್ಟರು.

ಪಟ್ಟಣದ ಗ್ರಾಮ ಭಾರತಿ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಬೆಂಗಳೂರಿನ ಗಾಂಧಿ ಸ್ಮಾರಕ ನಿಧಿ, ಮಂಡ್ಯದ ಕರ್ನಾಟಕ ಸಂಘ, ತಾಲೂಕು ರೈತಸಂಘ ಸೇರಿ ವಿವಿಧ ಸಂಘಟನೆಗಳು ಆಯೋಜಿಸಿರುವ ಮಹಾತ್ಮ ಗಾಂಧಿಯವರ ಬದುಕು ಮತ್ತು ಹೋರಾಟ ಕುರಿತ ಎರಡು ದಿನಗಳ ವಿಚಾರ ಸಂಕಿರಣದಲ್ಲಿ ಪರಿಸರ-ಕೃಷಿ ಮತ್ತು ಗಾಂಧಿ ಕುರಿತು ವಿಚಾರ ಮಂಡಿಸಿದರು.

ದೇಶದಲ್ಲಿಂದು ಪ್ರತಿವರ್ಷ 1.20 ಕೋಟಿ ಮಕ್ಕಳು ಪದವೀಧರರಾಗಿ ಹೊರಬರುತ್ತಿದ್ದಾರೆ. ಆದರೆ, ಕಳೆದ ವರ್ಷಗಳಲ್ಲಿ ಕೇವಲ 1.65 ಕೋಟಿ ಉದ್ಯೋಗಗಳು ಮಾತ್ರ ಸೃಷ್ಟಿಯಾಗಿವೆ. ಕೃತಕ ಬುದ್ದಿಮತ್ತೆ ಪ್ರಯೋಗಗಳು ಮತ್ತು ಆಧುನಿಕ ತಂತ್ರಜ್ಞಾನಗಳು ನಮ್ಮ ಯುವಕರ ಉದ್ಯೋಗ ಸೃಷ್ಟಿಗೆ ಬಂಡೆಗಲ್ಲಾಗಿವೆ ಎಂದರು.

ಉದ್ಯೋಗ ಕಸಿದುಕೊಳ್ಳುವ ಯಾಂತ್ರೀಕರಣಕ್ಕೆ ಗಾಂಧಿ ವಿರುದ್ಧವಾಗಿದ್ದರು. ಮಾನವ ಸಂಪನ್ಮೂಲ ಸದ್ಬಳಕೆಯಾಗದಿದ್ದರೆ ದೇಶದಲ್ಲಿ ಆರ್ಥಿಕ ಅಸಮಾನತೆ ಉಂಟಾಗುತ್ತದೆ. ಇದರಿಂದ ಶ್ರೀಮಂತರು ಮತ್ತಷ್ಟು ಶ್ರೀಮಂತರಾದರೆ ಬಡವರು ಬದುಕು ಕಳೆದುಕೊಂಡು ಶ್ರೀಮಂತರ ಜೀತದಾಳುಗಳಂತೆ ಬದುಕಬೇಕಾದ ವ್ಯವಸ್ಥೆ ನಿರ್ಮಾಣವಾಗುತ್ತದೆ ಎಂದು ಎಚ್ಚರಿಸಿದರು.

ಭೂಮಿತಿ ಮತ್ತು ಸಾವಯವ ಕೃಷಿ ಪದ್ಧತಿಯ ಬಗ್ಗೆ ಗಾಂಧಿ ಒಲವು ಹೊಂದಿದ್ದರು. ಒಂದು ಕುಟುಂಬಕ್ಕೆ ಬದುಕಲು ಎಷ್ಟು ಭೂಮಿ ಬೇಕೋ, ಅಷ್ಟು ಮಾತ್ರ ಆ ಕುಟುಂಬದ ಹೆಸರಿನಲ್ಲಿ ಭೂಮಿ ಇರಬೇಕು ಎಂದು ಗಾಂಧಿ ಹೇಳುತ್ತಿದ್ದರು. ಆದರೆ, ಇಂದು ಅದು ವಿರುದ್ಧವಾಗಿದೆ ಎಂದರು.

ಗಾಂಧಿ ಮಾತನ್ನು ಮೀರಿ ನಾವು ರಾಸಾಯನಿಕ ಕೃಷಿ ಪದ್ಧತಿಗೆ ಜೋತುಬಿದ್ದ ಕಾರಣ ಮಣ್ಣಿನ ಫಲವತ್ತತೆ ನಾಶವಾಗಿದ್ದು, ಇಳುವರಿ ಕುಂಠಿತಗೊಂಡಿದೆ. ಅತಿಯಾದ ರಾಸಾಯನಿಕ ಔಷಧಿ ಬಳಕೆಯಿಂದ ನಾವು ಬೆಳೆಯುತ್ತಿರುವ ಆಹಾರವೇ ವಿಷವಾಗಿ, ಭೂಮಿ ಮತ್ತು ನಮ್ಮ ಆರೋಗ್ಯ ಎರಡನ್ನೂ ನಾವು ಕಳೆದುಕೊಳ್ಳುತ್ತಿದ್ದೇವೆ ಎಂದು ಹೇಳಿದರು.

ಭೂಮಿತಿ ಕಾಯ್ದೆ ರದ್ದುಗೊಂಡಿರುವುದರಿಂದ ಭೂಮಿ ಒಡೆತನ ಉಳ್ಳವರ ಪಾಲಾಗುತ್ತಿದೆ. ಬಂಡವಾಳ ಶಾಹಿ ವ್ಯವಸ್ಥೆ ಬಲಿಷ್ಠಗೊಂಡರೆ ಸಮಾನ ಸಾಮಾಜಿಕ ವ್ಯವಸ್ಥೆ ನಾಶವಾಗುತ್ತದೆ. ದುಡಿಯುವ ವರ್ಗ ಉಳ್ಳವರ ಅಡಿಯಾಳಾಗಿ ಬದುಕಬೇಕಾಗುತ್ತದೆಂದು ಎಚ್ಚರಿಕೆ ನೀಡಿದರು.

ಹಳ್ಳಿಗಳ ವ್ಯಾಪ್ತಿಯಲ್ಲಿ ಬೆಳೆಯುವ ಬೆಳೆಗಳ ಮಾರುಕಟ್ಟೆ ನಿಯಂತ್ರಣ ರೈತರ ಕೈಯಲ್ಲಿಯೇ ಇರಬೇಕು ಎಂಬುದು ಗಾಂಧೀಜಿ ಆಶಯವಾಗಿತ್ತು. ಆದರೆ, ಇಂದು ನಮ್ಮ ರೈತನ ಗೋಧಿಯನ್ನು ಕೊಂಡು ಆಹಾರ ಉತ್ಪನ್ನ ಘಟಕಗಳನ್ನು ಸ್ಥಾಪಿಸಿರುವ ನೆಸ್ಲೆ ಕಂಪನಿ ಕೋಟ್ಯಂತರ ರು. ಲಾಭ ಮಾಡಿಕೊಳ್ಳುತ್ತಿದೆ. ಇಂತಹ ನೂರಾರು ವಿದೇಶಿ ಕಂಪನಿಗಳು ದೇಶದಲ್ಲಿಂದು ಬಂಡವಾಳ ಹೂಡಿಕೆ ಮಾಡಿ ಅಭಿವೃದ್ಧಿ ಹೆಸರಿನಲ್ಲಿ ದೇಶದ ಸಂಪತ್ತನ್ನು ಲೂಟಿ ಮಾಡುತ್ತಿವೆ ಎಂದು ಎಚ್ಚರಿಸಿದರು.

ಗಾಂಧೀಜಿಯವರ ಚಿಂತನೆಗಳಿಂದ ದೂರ ಸರಿದಿರುವ ನಮ್ಮ ಪ್ರಭುತ್ವ ವಿದೇಶಿ ಕಂಪನಿಗಳಿಗೆ ಮುಕ್ತ ಆಹ್ವಾನ ನೀಡಿ, ನಮ್ಮ ನೆಲ, ಜಲ ಎಲ್ಲವನ್ನೂ ಬಹು ರಾಷ್ಟ್ರೀಯ ಕಂಪನಿಗಳಿಗೆ ಅಡವಿಡುತ್ತಿವೆ. ರೈತನ ಹಿಡಿತದಲ್ಲಿರಬೇಕಾದ ಮಾರುಕಟ್ಟೆ ಮತ್ತು ಆಹಾರ ಭದ್ರತೆ ವಿದೇಶಿ ಕಂಪನಿಗಳ ಹಿಡಿತಕ್ಕೆ ಸಿಲುಕಿವೆ. ಸರ್ಕಾರಗಳು ರೈತನನ್ನು ಬೇಡುವ ಸ್ಥಾನದಲ್ಲಿಯೇ ನಿಲ್ಲಿಸಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು ಉಪನ್ಯಾಸಕರ ಸಂಘದ ಅಧ್ಯಕ್ಷ ಬಿ.ಎಲ್.ಮಂಜುನಾಥ್, ಉಪನ್ಯಾಸಕ ಡಿ.ಮಂಜುನಾಥ್, ಪ್ರಗತಿಪರ ಚಿಂತಕ ಗಂಗಾಧರ್, ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷ ಗೂಡೇಹೊಸಹಳ್ಳಿ ಜವರಾಯಿಗೌಡ, ಶಫಿ ಮತ್ತಿತರರಿದ್ದರು.