ಸಾರಾಂಶ
ಕನ್ನಡಪ್ರಭ ವಾರ್ತೆ ಬಂಟ್ವಾಳ
ದ.ಕ. ಜಿಲ್ಲಾಡಳಿತ ಮಂಗಳೂರು ನಗರಕ್ಕೆ ಕುಡಿಯುವ ನೀರು ಕೊರತೆಯಾಗುತ್ತಿದೆ ಎಂದು ನೇತ್ರಾವತಿ ನದಿ ಪಾತ್ರದ ಕೃಷಿ ಪಂಪ್‌ಸೆಟ್‌ಗಳ ವಿದ್ಯುತ್ ಕಡಿತ ಮಾಡಿರುವ ವಿರುದ್ಧ ರೈತರು ಬಂಟ್ವಾಳ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.ರೈತರ ಮನವಿ ಮೇರೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಪ್ರತಿಭಟನಾ ಸ್ಥಳಕ್ಕಾಗಮಿಸಿ, ರೈತರ ಬೇಡಿಕೆಗಳನ್ನು ಆಲಿಸಿ, ಮಂಗಳೂರು ಸಹಾಯಕ ಆಯುಕ್ತರಿಗೆ ಕರೆ ಮಾಡಿ ರೈತರ ಸಮಸ್ಯೆಯನ್ನು ಗಮನಕ್ಕೆ ತಂದರು. ಬಳಿಕ ತಹಸೀಲ್ದಾರ್ ಅರ್ಚನಾ ಭಟ್ ಅವರು ಸ್ಥಳಕ್ಕೆ ಬಂದು ಶಾಸಕರ ಜೊತೆ ಸಮಾಲೋಚನೆ ನಡೆಸಿದರು. ಈ ವೇಳೆ ಜಿಲ್ಲಾಡಳಿತಕ್ಕೆ ಸ್ಪಷ್ಟ ನಿರ್ದೇಶನ ನೀಡಿದ ಶಾಸಕರು, ಮಂಗಳೂರು ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವುದರಲ್ಲಿ ಯಾವುದೇ ಆಕ್ಷೇಪವಿಲ್ಲ, ಆದರೆ ಬಂಟ್ವಾಳ ಭಾಗದ ರೈತರನ್ನು ಬಲಿ ಕೊಡುವ ಅಸಮಂಜಸ ತೀರ್ಮಾನ ಕೈಗೊಂಡಿರುವುದಕ್ಕೆ ನಮ್ಮ ಸ್ಪಷ್ಟ ವಿರೋಧವಿದೆ. ರೈತರು ನೀರು ಉಪಯೋಗಿಸಬಾರದು ಎಂದಾದರೆ, ಮಂಗಳೂರು ನಗರದಲ್ಲಿ ಕುಡಿಯುವ ನೀರು ಹೊರತು ಪಡಿಸಿ ಉಳಿದ ಎಲ್ಲ ನೀರಿನ ಸಂಪರ್ಕಗಳನ್ನು ನಿಯಂತ್ರಿಸಬೇಕಲ್ಲವೇ ಎಂದು ಪ್ರಶ್ನಿಸಿದರು.
ನಾವು ಒಂದು ದಿನ ಕಾಯುತ್ತೇವೆ. ಜಿಲ್ಲಾಧಿಕಾರಿಗಳಿಗೆ ಪರಿಸ್ಥಿತಿಯನ್ನು ವಿವರಿಸಿ ರೈತರ ಪರವಾಗಿ ತೀರ್ಮಾನ ಕೈಗೊಳ್ಳುವಂತೆ ತಿಳಿಸಿ. ಇಲ್ಲದಿದ್ದರೆ ನಾವು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ, ನಾನು ಈಗಾಗಲೇ ಜಿಲ್ಲಾಧಿಕಾರಿಯ ಜೊತೆಯೂ ಮಾತನಾಡಿ, ಪರಿಸ್ಥಿತಿಯನ್ನು ವಿವರಿಸಿದ್ದೇನೆ ಎಂದು ತಹಸೀಲ್ದಾರ್‌ಗೆ ನಿರ್ದೇಶಿಸಿದ್ದಾರೆ.ಬಿಜೆಪಿ ಮಂಡಲ ಅಧ್ಯಕ್ಷ ಚೆನ್ನಪ್ಪ ಆರ್. ಕೋಟ್ಯಾನ್, ಪ್ರಮುಖರಾದ ಸುದರ್ಶನ ಬಜ, ದೇವಪ್ಪ ಪೂಜಾರಿ, ಗಣೇಶ್ ರೈ ಮಾಣಿ, ರಾಮ್‌ದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ಸುರೇಶ್ ಕೋಟ್ಯಾನ್, ಎ. ಗೋವಿಂದ ಪ್ರಭು, ವಿಠಲ ಅಲ್ಲಿಪಾದೆ, ಸದಾನಂದ ನಾವೂರ, ರೊನಾಲ್ಡ್ ಡಿಸೋಜ, ಶಶಿಕಾಂತ್ ಶೆಟ್ಟಿ ಮತ್ತಿರರು ಉಪಸ್ಥಿತರಿದ್ದರು.