ಸಿಂಗಟಾಲೂರು ನೀರಾವರಿ ಯೋಜನೆಯ ಟಿಸಿ ಬಳಿ ವಿದ್ಯುತ್‌ ಅವಘಡ

| Published : Aug 16 2024, 12:51 AM IST

ಸಿಂಗಟಾಲೂರು ನೀರಾವರಿ ಯೋಜನೆಯ ಟಿಸಿ ಬಳಿ ವಿದ್ಯುತ್‌ ಅವಘಡ
Share this Article
  • FB
  • TW
  • Linkdin
  • Email

ಸಾರಾಂಶ

ಘಟನಾ ಸ್ಥಳಕ್ಕೆ ಆಗಮಿಸಿದ ವಿದ್ಯುತ್‌ ತಾಂತ್ರಿಕ ತಜ್ಞರ ತಂಡವು ಪರಿಶೀಲಿಸುತ್ತಿದೆ.

ಹೂವಿನಹಡಗಲಿ: ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬಲದಂಡೆ ಭಾಗಕ್ಕೆ ನೀರೆತ್ತುವ ಮೋಟರ್‌ಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿದ 6 ಎಂವಿಎ ಸಾಮರ್ಥ್ಯದ ಟಿಸಿ ಬಳಿ ವಿದ್ಯುತ್‌ ಅವಘಡ ಸಂಭವಿಸಿ ಬಾಸ್‌ ಬಾರ್‌ಗಳು (ಟಿಸಿ ಸಂಪರ್ಕಿಸುವ ವೈರ್) ಭಸ್ಮವಾದ ಘಟನೆ ಬುಧವಾರ ಸಂಜೆ ನಡೆದಿದೆ. ಬಲದಂಡೆ ಭಾಗದ ಮುಖ್ಯ ಕಾಲುವೆಗಳಿಗೆ ನೀರೆತ್ತುವ ಮೋಟರ್‌ಗಳ ವಿದ್ಯುತ್‌ ಓವರ್‌ ಲೋಡ್‌ನಿಂದ ಅವಘಡ ಸಂಭವಿಸಿದೆ. ಟಿಸಿಗೆ ಅಳವಡಿಸಿದ ಬಾಸ್‌ ಬಾರ್‌ಗಳು ಸುಟ್ಟು ಕರಕಲಾಗಿವೆ ಎಂದು ಹೇಳವಾಗುತ್ತಿದೆ. ಈ ಕುರಿತು ಯೋಜನೆಯ ಕಾರ್ಯಪಾಲಕ ಎಂಜಿನಿಯರ್‌ ಹೊಸಪೇಟೆಗೆ ವರದಿಯೊಂದಿಗೆ ತೆರಳಿದ್ದಾರೆ.

ಘಟನಾ ಸ್ಥಳಕ್ಕೆ ಆಗಮಿಸಿದ ವಿದ್ಯುತ್‌ ತಾಂತ್ರಿಕ ತಜ್ಞರ ತಂಡವು ಪರಿಶೀಲಿಸುತ್ತಿದೆ. ಸಣ್ಣ ಪ್ರಮಾಣದ ದೋಷವಿದ್ದರೆ 3 ದಿನಗಳಲ್ಲೇ ದುರಸ್ತಿಯಾಗಬಹುದು. ಆದರೆ ದೊಡ್ಡ ಪ್ರಮಾಣದಲ್ಲಿದ್ದರೆ ತಿಂಗಳು ಕಾಲ ಹಿಡಿಯಬಹುದು ಎಂದು ಅಂದಾಜಿಸಲಾಗುತ್ತಿದೆ.

ನಿರ್ವಹಣೆಗಿಲ್ಲ ಅನುದಾನ?:

ಈ ಹಿಂದೆ ಸಿಂಗಟಾಲೂರು ಬ್ಯಾರೇಜ್‌ನ ನಿರ್ವಹಣೆ ಕೊರತೆಯಿಂದ ರಬ್ಬಲ್‌ ಸೀಲ್‌, ರೋಪ್‌, ಗೇಟ್‌ಗಳ ನಿರ್ವಹಣೆಗೆ ಅನುದಾನದ ಕೊರತೆಯಿಂದ ನಿತ್ಯ ಸಾವಿರಾರು ಕ್ಯುಸೆಕ್‌ ನೀರು ನದಿಗೆ ಹರಿದು ವ್ಯರ್ಥವಾಗಿತ್ತು. ಅದಕ್ಕೆ 12 ವರ್ಷದಲ್ಲೇ ಮೊದಲ ಬಾರಿಗೆ ಅಲ್ಪ ಅನುದಾನ ನೀಡಿ ನಿರ್ವಹಣೆ ಮಾಡಲಾಗುತ್ತಿದೆ.

ವಿದ್ಯುತ್‌ ವ್ಯವಸ್ಥೆಯ ನಿರ್ವಹಣೆಗೂ ಸಮರ್ಪಕ ಅನುದಾನವಿಲ್ಲ. ಇದರ ನಿರ್ವಹಣೆಯನ್ನು ವೆಂಕಟಚಲಯ್ಯ ಎಂಬವರ ಏಜೆನ್ಸಿಗೆ ನೀಡಲಾಗಿತ್ತು. ಅವರ ಅವಧಿ ಮುಗಿದು ವರ್ಷ ಕಳೆದರೂ ನೀರಾವರಿ ನಿಗಮದಿಂದ ನಿರ್ವಹಣೆಗೆ ಹೊಸ ಏಜೆನ್ಸಿ ನೀಡಿಲ್ಲ. ಜತೆಗೆ ಅನುದಾನವೂ ಇಲ್ಲ. ಇದರಿಂದ 6 ಎಂವಿಎ ಸಾಮರ್ಥ್ಯದ ಟಿಸಿಗೆ ಅಳವಸಿದ ಬಾಸ್‌ ಬಾರ್‌ಗಳಲ್ಲಿ ತಾಂತ್ರಿಕ ದೋಷ ಕಂಡು ಸುಟ್ಟಿವೆ.

ಬಲದಂಡೆ ರೈತರಿಗೆ ಎದುರಾಯ್ತು ಸಂಕಷ್ಟ:

ಬಲದಂಡೆ ಭಾಗದ 35 ಸಾವಿರ ಎಕರೆ ಪ್ರದೇಶಕ್ಕೆ ನೀರುಣಿಸಬೇಕಿದ್ದ ಯೋಜನೆಯಲ್ಲಿ ವಿದ್ಯುತ್‌ ಅವಘಡ ಸಂಭವಿಸಿದ ಹಿನ್ನೆಲೆಯಲ್ಲಿ ಹೂವಿನಹಡಗಲಿ, ಕೆ.ಅಯ್ಯನಹಳ್ಳಿ, ರಾಜವಾಳ, ಹೊಳಗುಂದಿ ಮತ್ತು ಮಾಗಳ ಮುಖ್ಯ ಕಾಲುವೆಗಳಿಗೆ ನೀರು ಬಂದ್‌ ಆಗಲಿದೆ. ಇದರಿಂದ ರೈತರ ಬೆಳೆಗಳಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಕಾಲುವೆ ನೀರು ನೆಚ್ಚಿಕೊಂಡು ಸಾವಿರಾರು ರೈತರು ಮೆಕ್ಕೆಜೋಳ ಸೇರಿದಂತೆ ಇತರೆ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ. ಈಗಾಗಲೇ ಕಾಳು ಕಟ್ಟುವ ಹಂತದಲ್ಲಿವೆ. ಆದರೆ ಪೂರ್ಣ ಪ್ರಮಾಣದಲ್ಲಿ ಮಳೆಯೂ ಬೀಳುತ್ತಿಲ್ಲ. ಇದರಿಂದ ರೈತರು ಚಿಂತೆಗೀಡಾಗಿದ್ದಾರೆ.

3 ಟಿಎಂಸಿ ನೀರು ಬಳಕೆಗೂ ಅಡ್ಡಿ:

ಸಿಂಗಟಾಲೂರು ಏತ ನೀರಾವರಿ ಯೋಜನೆಯು 16 ಟಿಎಂಸಿ ನೀರು ಬಳಕೆಗೆ ಅವಕಾಶವಿದೆ. ಇದರಲ್ಲಿ ಎಡದಂಡೆ ಭಾಗಕ್ಕೆ 13 ಟಿಎಂಸಿ, ಬಲದಂಡೆ ಭಾಗಕ್ಕೆ ಕೇವಲ 3 ಟಿಎಂಸಿ ನೀರು ಮಾತ್ರ ದಕ್ಕಿದೆ. ಇರುವಷ್ಟು ಅಲ್ಪ ಪ್ರಮಾಣದ ನೀರು ಬಳಕೆಗೆ ಪದೇ ಪದೇ ಮೋಟರ್‌ ದುರಸ್ತಿ, ವಿದ್ಯುತ್‌ ಅವಘಡ, ಬ್ಯಾರೇಜ್‌ ನಿರ್ವಹಣೆಯಿಂದ ನೀರು ಬಳಕೆ ಮಾಡಿಕೊಳ್ಳದೇ ಈಗ 23 ಸಾವಿರ ಕ್ಯುಸೆಕ್‌ ನೀರು ನದಿಗೆ ವ್ಯರ್ಥವಾಗಿ ಹರಿದು ಹೋಗುತ್ತಿದೆ.

ನೀರಾವರಿ ಯೋಜನೆಗಳ ನಿರ್ವಹಣೆಗೆ ಅನುದಾನದ ಕೊರತೆ ಕಾಡುತ್ತಿದೆ. ಇಂತಹ ಸಮಸ್ಯೆಗಳು ನಿರಂತರವಾಗಿ ಎದುರಾಗುತ್ತಿವೆ. ಕೂಡಲೇ ಸರ್ಕಾರ ಯೋಜನೆಗಳನ್ನು ಸುಸ್ಥಿತಿಯಲ್ಲಿಟ್ಟು ರೈತರ ಜಮೀನುಗಳಿಗೆ ನೀರುಣಿಸುವ ಕೆಲಸ ಮಾಡಬೇಕಿದೆ ಎನ್ನುತ್ತಾರೆ ಅಖಂಡ ಕರ್ನಾಟಕ ರೈತ ಸಂಘ ಪ್ರಧಾನ ಕಾರ್ಯದರ್ಶಿ ಶಿವರಾಜ ಹೊಳಗುಂದಿ.

ಯೋಜನೆಯ ಬಲದಂಡೆ ಭಾಗದಲ್ಲಿ ಟಿಸಿಯಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿ, ವಿದ್ಯುತ್‌ ತಾಂತ್ರಿಕ ತಜ್ಞರೊಂದಿಗೆ ದುರಸ್ತಿ ಮಾಡಿಸಲಾಗುವುದು ಎನ್ನುತ್ತಾರೆ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಇಇ ಶಿವಮೂರ್ತಿ.