ಸಾರಾಂಶ
ಬಿಜೆಪಿಯನ್ನು ಬೆಂಬಲಿಸುವ ಮೂಲಕ ನಿಮ್ಮೆಲ್ಲರ ಪ್ರತಿನಿಧಿಯಾಗಿ ದೆಹಲಿಗೆ ಹೋಗಲು ನನಗೊಂದು ಅವಕಾಶ ಮಾಡಿಕೊಡಬೇಕೆಂದು ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜು ಮನವಿ ಮಾಡಿದರು.
ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಅವರನ್ನು ಪ್ರಧಾನಿ ಮಾಡಲು ಕ್ಷೇತ್ರದ ಮತದಾರರು ಬಿಜೆಪಿಯನ್ನು ಬೆಂಬಲಿಸುವ ಮೂಲಕ ನಿಮ್ಮೆಲ್ಲರ ಪ್ರತಿನಿಧಿಯಾಗಿ ದೆಹಲಿಗೆ ಹೋಗಲು ನನಗೊಂದು ಅವಕಾಶ ಮಾಡಿಕೊಡಬೇಕೆಂದು ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜು ಮನವಿ ಮಾಡಿದರು.
ತಾಲೂಕಿನ ಮಾದಾಪುರ, ಅಲೂರು, ಚಂದಕವಾಡಿ ಹಾಗೂ ಹರದನಹಳ್ಳಿ ಶಕ್ತಿ ಕೇಂದ್ರಗಳಲ್ಲಿ ನಡೆದ ಬಿಜೆಪಿ ಚುನಾವಣೆ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಕಳೆದ ಚುನಾವಣೆಯಲ್ಲಿ ಆ ಕುಟುಂಬಕ್ಕೆ ಅಧಿಕಾರ ನೀಡಿ ಮಹದೇವಪ್ಪ ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿದ್ದಾರೆ. ಮತ್ತೊಮ್ಮೆ ಅವರ ಕುಟುಂಬದವರಿಗೆ ಮತ ಹಾಕುವುದು ಯಾವ ನ್ಯಾಯ? ಅಪ್ಪ ಸಚಿವರಾಗಿ ಸಾಕಷ್ಟು ಸಂಪಾದನೆ ಮಾಡಿದ್ದಾರೆ.
ಇನ್ನು ಮಗನಿಗೂ ಅಧಿಕಾರ ಬೇಕು ಎನ್ನುತ್ತಿದ್ದಾರೆ. ಪ್ರಬುದ್ಧ ಮತದಾರರು ಅರ್ಥೈಯಿಸಿಕೊಂಡಿದ್ದು, ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದರು. ಸಾಮಾನ್ಯ ಕಾರ್ಯಕರ್ತನಾಗಿ ನಿಮ್ಮ ಸೇವೆ ಮಾಡಲು ಸಿದ್ದನಿದ್ದೇನೆ. ಸದಾ ನಿಮ್ಮೊಂದಿಗೆ ಬೆರತು ಕ್ಷೇತ್ರದ ಅಭಿವೃದ್ದಿಗೆ ದುಡಿಯಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಕಾರ್ಯಕ್ರಮಗಳನ್ನು ಪ್ರತಿ ಹಳ್ಳಿ ಹಳ್ಳಿಗೂ ತಲುಪಿಸಲು ಈ ಬಾರಿ ಬಿಜೆಪಿಗೆ ಅವಕಾಶ ನೀಡಿ. ನನ್ನನ್ನು ಅರ್ಶೀವದಿಸಬೇಕು. ಸಂಸದರಾಗಿದ್ದ ನಮ್ಮೆಲ್ಲರ ನಾಯಕ ವಿ.ಶ್ರೀನಿವಾಸಪ್ರಸಾದ್ ಅವರು ಇನ್ನು ಒಂದುವರೆ ತಿಂಗಳು ನಮ್ಮ ಪಕ್ಷದ ಸಂಸದರಾಗಿರುತ್ತಾರೆ. ಅವರ ಬೆಂಬಲ ಸದಾ ಬಿಜೆಪಿ ಹಾಗೂ ನರೇಂದ್ರ ಮೋದಿ ಅವರಿಗಿದೆ. ಕಾಂಗ್ರೆಸ್ ಪಕ್ಷದವರಿಗೆ ಸೋಲಿನ ಹತಾಶೆಯಿಂದ ನಿವೃತ್ತಿ ಘೊಷಣೆ ಮಾಡಿರುವ ವಿ.ಶ್ರೀನಿವಾಸಪ್ರಸಾದ್ ಅವರ ಮನೆಗೆ ಹೋಗುತ್ತಿದ್ದಾರೆ.
ಈಗಾಗಲೇ ಒಂದಲ್ಲ ನಾಲ್ಕು ಬಾರಿ ನನ್ನ ಬೆಂಬಲ ಪ್ರಧಾನಿ ಮೋದಿಗೆ. ನನ್ನ ಮತ ಬಿಜೆಪಿಗೆ ಎಂದು ಹೇಳಿದ್ದಾರೆ. ಅದರೂ ಸಹ ಮಹದೇವಪ್ಪ ತನ್ನ ಮಗನನ್ನು ಗೆಲ್ಲಿಸಿಕೊಳ್ಳಲು ಹಿಂದೆ ನೀಡಿದ್ದ ಎಲ್ಲಾ ನೋವು, ತೊಂದರೆಗಳನ್ನು ಮರೆತು ಶ್ರೀನಿವಾಸಪ್ರಸಾದ್ ಅವರ ಮುಂದೆ ನಿಂತಿದ್ದಾರೆ. ಸಾಲದು ಎಂಬಂತೆ ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಸಾದ್ ಮನೆಗೆ ಕರೆದ್ಯೊಯ್ದಿರುವುದು ದುರಂತವೇ ಸರಿ. ಜನರು ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಹೀಗಾಗಿ ಮೈಸೂರು ಹಾಗೂ ಚಾಮರಾಜನಗರ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು. ಸಭೆಯಲ್ಲಿ ಚಾಮುಲ್ ನಿರ್ದೇಶಕ ಎಚ್.ಎಸ್. ಬಸವರಾಜು, ಸುಂದ್ರಪ್ಪ, ಕೋಡಿ ಮೋಳೆ ರಾಜಶೇಖರ್, ಚಂದಕವಾಡಿ ಶಕ್ತಿ ಕೇಂದ್ರ ಅಧ್ಯಕ್ಷ ಅಯ್ಯನಪುರ ವಿಜಯೇಂದ್ರ, ಆಲೂರು ಶಕ್ತಿ ಕೇಂದ್ರದ ಅಧ್ಯಕ್ಷ ಶಿವಾನಂದ, ಶಿವಾಂಲಕಾರಪ್ಪ, ಚಿನ್ನಮುತ್ತು, ದಡದಹಳ್ಳಿ ಗೋವಿಂದರಾಜು ಇತರರು ಇದ್ದರು.