ಸಾರಾಂಶ
ರಾಜಕೀಯ ಜೀವನಕ್ಕಿಂತ ರಾಜಕೀಯದಲ್ಲಿ ಇದ್ದು ನಾವು ಎಷ್ಟು ಜನಪರ ಕೆಲಸ ಮಾಡಿದ್ದೇವೆ ಎನ್ನುವುದರ ಮೂಲಕ ನಮ್ಮನ್ನು ಜನ ಉಳಿಸಿಕೊಳ್ಳುತ್ತಾರೆ.
ದಾಂಡೇಲಿ:
ರಾಜಕೀಯ ಜೀವನಕ್ಕಿಂತ ರಾಜಕೀಯದಲ್ಲಿ ಇದ್ದು ನಾವು ಎಷ್ಟು ಜನಪರ ಕೆಲಸ ಮಾಡಿದ್ದೇವೆ ಎನ್ನುವುದರ ಮೂಲಕ ನಮ್ಮನ್ನು ಜನ ಉಳಿಸಿಕೊಳ್ಳುತ್ತಾರೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.ನಗರದ ವೆಸ್ಟ್‌ಕೋಸ್ಟ್ ಕಾಗದ ಕಾರ್ಖಾನೆಯ ಡಿಲಕ್ಸ್ ಮೈದಾನದಲ್ಲಿ ಸಮಾನ ಮನಸ್ಕ ಗೆಳೆಯರ ಬಳಗದಿಂದ ನಡೆದ ಮಾತು ಮಂಥನ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.ದಾಂಡೇಲಿ ಏನು ಅಭಿವೃದ್ಧಿಯಾಗಿದೆ, ಎಷ್ಟು ಅಭಿವೃದ್ಧಿಯಾಗಿದೆ ಎನ್ನುವುದರ ಬಗ್ಗೆಯೂ ಜನರು ತಿಳಿದುಕೊಳ್ಳಬೇಕು. ಕೈಗಾರಿಕೆಗಳ ಉಳಿವಿಗಾಗಿ ಹಲವು ಪ್ರಯತ್ನ ಮಾಡಿದ್ದೇನೆ. ಕೈಗಾರಿಕೆಗಳು ಸ್ಥಗಿತಗೊಳ್ಳಲು ಸರ್ಕಾರದ ನೀತಿಗಳು ಕಾರಣ ಎಂದ ಅವರು, ದಾಂಡೇಳಿ ಆಸ್ಪತ್ರೆಯನ್ನು ನೂರು ಹಾಸಿಗೆಯ ಆಸ್ಪತ್ರೆಯನ್ನಾಗಿ ಮಾಡುವ ಪ್ರಯತ್ನದಲ್ಲಿ ಇದ್ದೇನೆ. ೨೪ ಗಂಟೆ ಕಾಲ ಕುಡಿಯುವ ನೀರು ಸರಬರಾಜು ಯೋಜನೆ ಜಾರಿಯಾಗಿದೆ. ರೈಲು ಟ್ರ್ಯಾಕ್‌ನ್ನು ಬ್ರಾಡ್ ಗೇಜ್ ಪರಿವರ್ತನೆಗಾಗಿ ಪತ್ರ ವ್ಯವಹಾರ ನಡೆಸಿದ್ದೆ, ಅದು ಆಗಿದೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ತಿಳಿಸಿದರು.9 ಬಾರಿ ಸದನದ ಮೆಟ್ಟಿಲು ಹತ್ತಿದ್ದೇನೆ. ರಾಜಕೀಯವಾಗಿ ಭಿನ್ನಾಭಿಪ್ರಾಯ ಏನೇ ಇದ್ದರೂ ಬದ್ಧತೆಯಿಂದ ರಾಜಕೀಯದಲ್ಲಿ ಇದ್ದೇನೆ ಎಂದರು.ರಾಜ್ಯ ಮಾನವ ಹಕ್ಕುಗಳ ಆಯೋಗ ನಿರ್ದೇಶಕ ಫಿರೋಜ್ ಪೀರಜಾದೆ, ಸತೀಶ ನಾಯ್ಕ, ರಂಗ ಕಲಾವಿದ ಮುರ್ತುಜಾ ಹುಸೇನ ಆನೆಹೊಸೂರ ಮುಂತಾದವರು ಬಸ್‌ನಿಲ್ದಾಣ ಮೇಲ್ದರ್ಜೆಗೆ ಏರಿಸುವ, ಸ್ಥಗಿತಗೊಂಡಿರುವ ಪ್ರಯಾಣಿಕರ ರೈಲು ಪುನರಾರಂಭ, ತಾಲೂಕು ಆಸ್ಪತ್ರೆ, ಕಲಾವಿದರಿಗೆ ಕಲಾಮಂದಿರ, ಹಳೆದಾಂಡೇಲಿ ಭಾಗದಲ್ಲಿ ಕಾಳಿ ನದಿಯ ತಟದಲ್ಲಿ ನಿರ್ಮಾಣಗೊಳ್ಳುತ್ತಿರುವ ರೀವರ್ ಪಾರ್ಕ್ ನಿರ್ಮಾಣ, ಪ್ರವಾಸೋದ್ಯಮ ಬೆಳವಣಿಗೆ ಕುರಿತು ಶಾಸಕರಲ್ಲಿ ಪ್ರಶ್ನೆ ಕೇಳಿದರು.ಈ ವೇಳೆ ವೆಸ್ಟ್ ಕೊಸ್ಟ್ ಕಾಗದ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಜೈನ್, ದಾಂಡೇಲಿ ಹಿರಿಯ ವೈದ್ಯ ಡಾ. ಜಿ.ವಿ. ಭಟ್, ಕಸಾಪ ಜಿಲ್ಲಾ ಅಧ್ಯಕ್ಷ ಬಿ.ಎನ್. ವಾಸರೆ ಇದ್ದರು. ಕಾರ್ಯಕ್ರಮದಲ್ಲಿ ಸಮಾನ ಮನಸ್ಕ ಗೆಳೆಯರ ಬಳಗದ ಕೀರ್ತಿ ಗಾಂವಕರ, ಮೋಹನ ಹಲವಾಯಿ, ಅನಿಲ ದಂಡಗಲ, ಅನಿಲ ನಾಯ್ಕರ ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಸಂಘಟಿಸಿ ನಿರ್ವಹಿಸಿದರು. ನಗರದ ದಾಂಡೇಲಿ ಪ್ರೆಸ್ ಕ್ಲಬ್ ಸೇರಿದಂತೆ ೩೦ಕ್ಕೂ ಹೆಚ್ಚು ವಿವಿಧ ಸಂಘಟನೆಗಳು ಹಾಗೂ ನಗರದ ಪ್ರಮುಖರು ಶಾಸಕರನ್ನು ಅಭಿನಂದಿಸಿ ಸನ್ಮಾನಿಸಿದರು.