ಸಾರಾಂಶ
ಹಳಿಯಾಳ:
ಹಳಿಯಾಳದ ಶ್ರೀ ಶಿವಾಜಿ ವಿದ್ಯಾಲಯ ಶತಮಾನೋತ್ಸವ ಸಂಭ್ರಮದಲ್ಲಿದ್ದು ಅದ್ಧೂರಿ ಕಾರ್ಯಕ್ರಮ ನಡೆಸುವ ಕುರಿತು ಶನಿವಾರ ಹಳೆಯ ವಿದ್ಯಾರ್ಥಿಗಳ ಪೂರ್ವಭಾವಿ ಸಭೆ ನಡೆಯಿತು.ಹಳೆಯ ವಿದ್ಯಾರ್ಥಿಗಳಾದ ವಿಪ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ, ಮಹಾದೇವ ಭದ್ರಿ, ಬಸವರಾಜ, ಡಾ. ಮೋಹನ ಪಾಟೀಲ, ಸುಭಾನಿ ಹುಬ್ಬಳ್ಳಿ, ಬಿ.ಡಿ. ಚೌಗಲೆ, ಎಂ.ಎಸ್. ತೋರಸ್ಕರ, ಖಲೀದ ದುಸಗಿ, ಲಿಂಗರಾಜ ಹಿರೇಮಠ, ಕಲಮ ಸಿಕ್ವೇರಾ, ಯು.ವೈ. ರಾಥೋಡ, ಇಬ್ರಾಹಿಂ ಮುಲ್ಲಾ ಶತಮಾನೋತ್ಸವ ಆಚರಣೆಯ ಬಗ್ಗೆ ಸಲಹೆ-ಸೂಚನೆ ನೀಡಿದರು.ಶತಮಾನೋತ್ಸವ ಆಚರಣೆಗೆ ವಿವಿಧ ಸಮಿತಿಗ ರಚನೆ, ಶತಮಾನೋತ್ಸವದ ನೆನಪು ಶಾಶ್ವತವಾಗಿರಸಲು ಸ್ಮಾರಕ ಕಟ್ಟಡ, ಭವನ ಅಥವಾ ಶೈಕ್ಷಣಿಕ ಸೌಲಭ್ಯಗಳ ಭವನ ನಿರ್ಮಾಣ, 1921ರಿಂದ ಈ ವರೆಗಿನ ಎಲ್ಲ ವಿದ್ಯಾರ್ಥಿಗಳ ಮಾಹಿತಿ ಮತ್ತು ವಿದ್ಯಾಲಯ ನಡೆದು ಬಂದ ದಾರಿಯನ್ನು ಇತಿಹಾಸ ಹೇಳುವ ಸ್ಮರಣ ಸಂಚಿಕೆ ಬಿಡುಗಡೆ, ವಿದ್ಯಾಲಯದ ಬಗ್ಗೆ ಸಾಕ್ಷ್ಯಚಿತ್ರದ ನಿರ್ಮಾಣ, ಹಳೆಯ ಕಟ್ಟಡದ ನವೀಕರಣ ಕಾರ್ಯ ಅಥವಾ ಸುಣ್ಣ ಬಣ್ಣ ಹಚ್ಚುವುದು, ಹಿರಿಯ ಶಿಕ್ಷಕರಿಗೆ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ, ಹಳೆಯ ವಿದ್ಯಾರ್ಥಿಗಳಿಂದಲೇ ಶತಮಾನೋತ್ಸವದ ಖರ್ಚು ವೆಚ್ಚ, ದಿನವಿಡಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಕುರಿತು ತೀರ್ಮಾನಿಸಲಾಯಿತು.ಜ್ಞಾನದ ದೀವಿಗೆ ಬೆಳಗಿಸಿದ ವಿದ್ಯಾಲಯ:ವಿದ್ಯಾಲಯದ ಹಳೆ ವಿದ್ಯಾರ್ಥಿ, ಶಾಸಕ ಆರ್.ವಿ. ದೇಶಪಾಂಡೆ, ಹಳಿಯಾಳ ತಾಲೂಕು ಸೇರಿದಂತೆ ಅಕ್ಕಪಕ್ಕದ ಪಟ್ಟಣಗಳಿಗೆ ಅಕ್ಷರದ ಬೆಳಕು ನೀಡಿ ಶಿಕ್ಷಣ ಜ್ಞಾನದ ದೀವಿಗೆ ಬೆಳಗಿಸಿದ ಶ್ರೀ ಶಿವಾಜಿ ವಿದ್ಯಾಲಯವು ಶತಮಾನೋತ್ಸವ ಆಚರಿಸುತ್ತಿರುವುದು ತಾಲೂಕಿಗೆ ಅಭಿಮಾನದ ವಿಷಯವಾಗಿದೆ. ಈ ವಿದ್ಯಾಲಯದ ಕಲಿತ ಹಲವಾರು ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದು, ಉನ್ನತ ಹುದ್ದೆಯಲ್ಲಿದ್ದಾರೆ. ಅವರೆಲ್ಲರನ್ನು ಸೇರಿಸಿಕೊಂಡು ಹಾಗೂ ಸಭೆಯಲ್ಲಿ ನೀಡಿರುವ ಸಲಹೆ-ಸೂಚನೆ ಆಧರಿಸಿಕೊಂಡು ಎಲ್ಲರ ಸಹಕಾರ, ಮಾರ್ಗದರ್ಶನದಲ್ಲಿ ಐತಿಹಾಸಿಕ ಶತಮಾನೋತ್ಸವ ಸಮಾರಂಭ ಆಚರಿಸೋಣ ಎಂದರು.ಸರ್ಕಾರದ ಅನುದಾನ ಹಾಗೂ ನನ್ನ ಸ್ವಂತ ಖರ್ಚಿನಲ್ಲಿ ವಿದ್ಯಾಲಯದ ಅಭಿವೃದ್ಧಿಗಾಗಿ ಬೇಕಾದ ಮೂಲಭೂತ ಸೌಲಭ್ಯ ಒದಗಿಸಲು ಬದ್ಧನಾಗಿದ್ದೇನೆ ಎಂದರು.ಸಭೆಯಲ್ಲಿ ತಾಪಂ ಇಒ ಪರಶುರಾಮ ಘಸ್ತೆ, ತಹಸೀಲ್ದಾರ್ ಆರ್.ಎಚ್. ಬಾಗವಾನ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಕವಿತಾ ನೆಲಗೊಂಡ, ಡಾ. ಚಂದ್ರಶೇಖರ ಓಶೀಮಠ, ವಿದ್ಯಾಲಯದ ಪ್ರಾಚಾರ್ಯ ಅಮಿನ ಮಮದಾಪುರ ಇದ್ದರು. ಶತಮಾನೋತ್ಸವ ಆಚರಣೆಯ ಸಂಚಾಲಕ ಸತ್ಯಜಿತ ಗಿರಿ ಪ್ರಾಸ್ತಾವಿಕವಾಗಿ ಮಾತನಾಡಿದರು.