ಪ್ರತಿಯೊಬ್ಬರಿಗೂ ಬದಲಾವಣೆ ಕಾಣುವ ಹಕ್ಕಿದೆ: ಗೀತಾ

| Published : Jan 28 2024, 01:22 AM IST

ಸಾರಾಂಶ

ಸಮಾಜ ಪರಿವರ್ತನೆಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಿ, ಬದಲಾವಣೆ ಕಾಣುವ ಹಕ್ಕು ಪ್ರತಿಯೊಬ್ಬರಿಗೂ ಇದೆ ಎಂದು ರೋಟರಿ 3182 ಜಿಲ್ಲಾ ರಾಜ್ಯಪಾಲೆ ಬಿ.ಸಿ.ಗೀತಾ ಹೇಳಿದರು.

- ಜಿಲ್ಲಾ ರೋಟರಿ ರಾಜ್ಯಪಾಲರ ಅಧಿಕೃತ ಭೇಟಿ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸಮಾಜ ಪರಿವರ್ತನೆಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಿ, ಬದಲಾವಣೆ ಕಾಣುವ ಹಕ್ಕು ಪ್ರತಿಯೊಬ್ಬರಿಗೂ ಇದೆ ಎಂದು ರೋಟರಿ 3182 ಜಿಲ್ಲಾ ರಾಜ್ಯಪಾಲೆ ಬಿ.ಸಿ.ಗೀತಾ ಹೇಳಿದರು.ಚಿಕ್ಕಮಗಳೂರು ರೋಟರಿ ಕ್ಲಬ್‌ಗೆ ಅಧಿಕೃತ ಭೇಟಿ ನೀಡಿದ್ದ ಅವರು ಎಂಎಲ್‌ವಿ ರೋಟರಿ ಸಭಾಂಗಣದಲ್ಲಿ ಮಾತನಾಡಿ ದರು. ವಿಶ್ವದಲ್ಲಿ ಭರವಸೆ ಮೂಡಿಸುವುದು, ಸಕಾರಾತ್ಮಕ ಪರಿವರ್ತನೆ ತರುವುದು ರೋಟರಿ ಆಶಯ. ಈ ಹಿನ್ನಲೆಯಲ್ಲಿ ವಿವಿಧ ಯೋಜನೆಗಳನ್ನು ತಂದಿದ್ದು ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದ ಅವರು, ಈ ನಿಟ್ಟಿನಲ್ಲಿ ಜೀವನಸಂಧ್ಯಾ ವೃದ್ಧಾಶ್ರಮ ದೇಶದಲ್ಲೆ ಉತ್ತಮ ಯೋಜನೆ ಎಂದು ಶ್ಲಾಘಿಸಿದರು. ಸಮಾಜದಲ್ಲಿ ಬದಲಾವಣೆ ಕಾಣಲು ಮೌಲ್ಯಧಾರಿತ ಶಿಕ್ಷಣ ಅಗತ್ಯ. ಸಮಾಜದಲ್ಲಿಂದು ಸಂಸ್ಕೃತಿ, ಸಂಸ್ಕಾರ, ಸನ್ನಡತೆ, ಸದ್ಭಾವಗಳು ಕಡಿಮೆಯಾಗುತ್ತಿವೆ. ಹಿಂದೆ ಕಲಿಕೆಯಲ್ಲಿ ಇರುತ್ತಿದ್ದ ನೀತಿ ಬೋಧೆ ಈಗ ಇಲ್ಲ. ಶಿಕ್ಷಣ ಸಂಸ್ಥೆಗಳಿಗೆ ತೆರಳಿ ಉತ್ತಮ ಮೌಲ್ಯ ಸ್ಮರಿಸುವ ಮೂಲಕ ಕೊಂಚ ಬದಲಾವಣೆ ತರಬಹುದೆಂಬ ಹಿನ್ನಲೆಯಲ್ಲಿ ಜಿಲ್ಲಾ ಯೋಜನೆಯಲ್ಲಿ ಇದಕ್ಕೆ ಆದ್ಯತೆ ನೀಡಲಾಗಿದೆ ಎಂದರು. ಸುರಕ್ಷತಾ ಚಾಲನೆ, ಮಣ್ಣಿನ ಫಲವತ್ತತೆ, ಸಂರಕ್ಷಣೆ ಜೊತೆಗೆ ಇ-ತ್ಯಾಜ್ಯ ನಿರ್ವಹಣೆ ಈ ವರ್ಷದ ಜಿಲ್ಲಾ ಯೋಜನೆ ಪ್ರಮುಖ ಅಂಶ ಎಂದ ಗೀತಾ ಅವರು, ಈ ನಿಟ್ಟಿನಲ್ಲಿ ಕ್ಲಬ್‌ಗಳು ಉತ್ತಮ ಸ್ಪಂದನೆ ಮಾಡಿವೆ ಎಂದು ಹೇಳಿದರು. ಜಿಲ್ಲೆಯಲ್ಲೆ ಪ್ರತಿಷ್ಠಿತ ಎನಿಸಿಕೊಂಡಿರುವ ಚಿಕ್ಕಮಗಳೂರು ರೋಟರಿಗೆ ಮಹಿಳಾ ಸದಸ್ಯರನ್ನು ಸೇರ್ಪಡೆ ಮಾಡಿ ಕೊಳ್ಳಬೇಕೆಂದು ಆಗ್ರಹಿಸಿದ ಅವರು, ಶಿಸ್ತುಬದ್ಧತೆ ಅಚ್ಚುಕಟ್ಟುತನ, ದಾಖಲಾತಿಗಳ ಸಂರಕ್ಷಣೆ, ಜಿಲ್ಲಾಯೋಜನೆಗಳ ಸಮರ್ಪಕ ಜಾರಿ ನಿಟ್ಟಿನಲ್ಲಿ ಉತ್ತಮ ಸಾಧನೆಯಾಗಿದೆ. ಹಿರಿಯರ ಮಾರ್ಗದರ್ಶನದಲ್ಲಿ ಯುವಪಡೆ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದೆ ಎಂದರು. ರೋಟರಿ ಜಿಲ್ಲಾ ಸಮ್ಮೇಳನ ’ನಿಸರ್ಗ’ ಚಿಕ್ಕಮಗಳೂರಿನಲ್ಲಿ ಆಯೋಜಿಸುತ್ತಿದ್ದು, ಅದರ ಯಶಸ್ಸಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹೇಳಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಚಿಕ್ಕಮಗಳೂರು ರೋಟರಿಕ್ಲಬ್ ಅಧ್ಯಕ್ಷ ಎನ್.ಶ್ರೀವತ್ಸವ್ , 66ನೆಯ ವರ್ಷದಲ್ಲಿ ಮುನ್ನಡೆಯುತ್ತಿರುವ ಚಿಕ್ಕಮಗಳೂರು ರೋಟರಿ ಹಲವು ಸಮುದಾಯ ಸೇವಾ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸಿದೆ. ಶಾಲಾ ಸಬಲೀಕರಣ, ಆರೋಗ್ಯಸ್ವಚ್ಛತೆಗೆ ಆದ್ಯತೆ ನೀಡಿದ್ದು ಪ್ರತಿಭಾ ಸಂಭ್ರಮ ಉತ್ತಮವಾಗಿ ಸಂಘಟಿಸಲಾಗಿತ್ತೆಂದರು. ಕಾರ್‍ಯದರ್ಶಿ ಎಂ.ಎಲ್.ಸುಜಿತ್ ಪವರ್‌ಪಾಯಿಂಟ್ ಮೂಲಕ ವಾರ್ಷಿಕ ವರದಿ ಪ್ರಸ್ತುತಪಡಿಸಿ ವಂದಿಸಿದರು. ’ಕ್ರಿಸ್ಪ್’ ವಿವರ ಗಳನ್ನು ಸಂಪಾದಕ ಬಿ.ಎಚ್.ಸಮೃದ್ಧ ಪೈ ತಿಳಿಸಿದರು. ನಂದಿತಾ ಶ್ರೀವತ್ಸವ್ ಪ್ರಾರ್ಥಿಸಿ, ಶ್ರೇಯಸ್ ಅತಿಥಿ ಪರಿಚಯಿಸಿದರು. ರೋಟರಿ ಫೌಂಡೇಶನ್‌ಗೆ ಸದಸ್ಯರ ಕೊಡುಗೆಯನ್ನು ಟಿಆರ್‌ಎಫ್ ಛೇರ್‍ಮನ್ ಕೆ.ಪಿ.ಪ್ರವೀಣ್ ಹಸ್ತಾಂತರಿಸಿದರು. ನೂತನವಾಗಿ ಸೇರ್ಪಡೆಗೊಂಡ ನಾಲ್ವರು ಸದಸ್ಯರನ್ನು ಎಂ.ಎಸ್. ಸುಧೀರ್ ಪರಿಚಯಿಸಿದರು. 27 ಕೆಸಿಕೆಎಂ 1ಚಿಕ್ಕಮಗಳೂರಿನ ಎಂಎಲ್‌ವಿ ರೋಟರಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಬಿ.ಸಿ. ಗೀತಾ ಅವರು ಸ್ಮರಣಾ ಸಂಚಿಕೆಯನ್ನು ಬಿಡುಗಡೆ ಮಾಡಿದರು.