‘ನನಗೆ ಇರುವ ಮಾಹಿತಿ ಪ್ರಕಾರ ಅಧಿಕಾರ ಹಂಚಿಕೆಯ ಸೂತ್ರವೇ ರಚನೆಯಾಗಿಲ್ಲ. ನಮ್ಮ ತಂದೆಯವರಾಗಲಿ, ಕೆಲ ಹಿರಿಯ ಸಚಿವರಾಗಲಿ ಈ ಬಗ್ಗೆ ಯಾವತ್ತೂ ಮಾತನಾಡಿಲ್ಲ. ಅಲ್ಲಿಗೆ ಅಧಿಕಾರ ಹಂಚಿಕೆ ಮಾತುಕತೆ ನಡೆದಿಲ್ಲ ಎಂದರ್ಥ ತಾನೇ?’ ಎಂದು ವಿಧಾನಪರಿಷತ್ ಸದಸ್ಯ, ಸಿಎಂ ಪುತ್ರ ಡಾ। ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

‘ನನಗೆ ಇರುವ ಮಾಹಿತಿ ಪ್ರಕಾರ ಅಧಿಕಾರ ಹಂಚಿಕೆಯ ಸೂತ್ರವೇ ರಚನೆಯಾಗಿಲ್ಲ. ನಮ್ಮ ತಂದೆಯವರಾಗಲಿ, ಕೆಲ ಹಿರಿಯ ಸಚಿವರಾಗಲಿ ಈ ಬಗ್ಗೆ ಯಾವತ್ತೂ ಮಾತನಾಡಿಲ್ಲ. ಅಲ್ಲಿಗೆ ಅಧಿಕಾರ ಹಂಚಿಕೆ ಮಾತುಕತೆ ನಡೆದಿಲ್ಲ ಎಂದರ್ಥ ತಾನೇ?’ ಎಂದು ವಿಧಾನಪರಿಷತ್ ಸದಸ್ಯ, ಸಿಎಂ ಪುತ್ರ ಡಾ। ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಪೂರ್ಣಾವಧಿಗೆ ಸಿಎಂ ಆಗಿರುತ್ತಾರೆ. ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಯಾವ ಕಾರಣಗಳೂ ಇಲ್ಲ. ಸಿದ್ದರಾಮಯ್ಯ ಅವರ ಮೇಲೆ ಯಾವ ಆರೋಪವೂ ಇಲ್ಲ. ಇಂತಹ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ಚರ್ಚೆಯೇ ಬರಬಾರದಿತ್ತು. ಆದರೂ, ಯಾರೋ ಕೆಲವರು ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ಹೈಕಮಾಂಡ್ ಎಲ್ಲೂ ಕೂಡ ಬದಲಾವಣೆ ಮಾಡುತ್ತೇವೆ ಎಂದು ಹೇಳಿಲ್ಲ. ಈ ಬಗ್ಗೆ ಹೈಕಮಾಂಡ್ ತೀರ್ಮಾನವೇ ಅಂತಿಮ. ನನಗೆ ವಿಶ್ವಾಸ ಇದೆ, ಇನ್ನೂ ಎರಡೂವರೆ ವರ್ಷ ನಮ್ಮ ತಂದೆಯೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಅವರು ತಿಳಿಸಿದರು.

ಚುಂಚನಗಿರಿ ಮಠದ ಸ್ವಾಮೀಜಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಡಾ.ಯತೀಂದ್ರ ಸಿದ್ದರಾಮಯ್ಯ, ಯಾರನ್ನು ಸಿಎಂ ಮಾಡಬೇಕು, ಯಾರನ್ನು ಮಾಡಬಾರದು ಎಂಬುದು ನಮ್ಮ ಪಕ್ಷದ ಆಂತರಿಕ ವಿಚಾರ. ಅದು ನಮ್ಮ ಶಾಸಕರಿಗೆ ಮತ್ತು ನಮ್ಮ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಅದರ ಬಗ್ಗೆ ಬೇರೆಯವರ ಅಭಿಪ್ರಾಯ ಅನಗತ್ಯ ಎಂದು ತಿರುಗೇಟು ನೀಡಿದರು.ಶಾಸಕರ ಬೆಂಬಲ ಕುರಿತ ಪ್ರಶ್ನೆಗೆ, ಯಾರಿಗೆ ಎಷ್ಟು ಶಾಸಕರ ಬೆಂಬಲ ಇದೆ ಎನ್ನುವಂತಹ ಚರ್ಚೆ ಮಾಡುವುದು ಬೇಡ. ಅದು ನಮ್ಮ ಪಕ್ಷದ ಆಂತರಿಕ ವಿಚಾರ. ಮತ್ತೆ, ಮತ್ತೆ ಆ ಅಂಕಿ ಸಂಖ್ಯೆ ಕೇಳಬೇಡಿ. ಎಲ್ಲಾ ಶಾಸಕರ ಬೆಂಬಲ ನಮ್ಮ ತಂದೆಗೆ ಇದೆ ಎಂದರು.ಡಿಕೆಗೆ ಕೊಟ್ಟ ಮಾತಿಗೆ ಬೆಂಗಳೂರು, ದೆಹಲಿಯಲ್ಲಿ ಉತ್ತರ; ಜಾರಕಿಹೊಳಿ:

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಕೊಟ್ಟ ಮಾತಿನ ಬಗ್ಗೆ ಬೆಂಗಳೂರು ಹಾಗೂ ದೆಹಲಿಯಲ್ಲಿ ಉತ್ತರ ಸಿಗುತ್ತದೆ. ನಾವು ಕೂಡ ಆದಷ್ಟು ಬೇಗ ಪಕ್ಷದಲ್ಲಿ ಉಂಟಾಗಿರುವ ಗೊಂದಲ ಸರಿಪಡಿಸುವಂತೆ ವರಿಷ್ಠರಿಗೆ ಮನವಿ ಮಾಡಿದ್ದೇವೆ. ಪಕ್ಷಕ್ಕಾಗಿ ದುಡಿದಿರುವ ಡಿ.ಕೆ.ಶಿವಕುಮಾರ ಅವರು ಕೂಲಿ ಕೇಳುವ ಸಂದರ್ಭ ಬಂದಾಗ ಚರ್ಚೆ ಮಾಡೋಣ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.

ಹಾವೇರಿಯಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿ, ಹಲವರ ಪ್ರಯತ್ನದಿಂದ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಆದರೆ, ಪಕ್ಷಕ್ಕಾಗಿ ದುಡಿದ ಎಲ್ಲರಿಗೂ ಅಧಿಕಾರ ಸಿಗಲ್ಲ. ಅಧಿಕಾರ ಕೆಲವರಿಗೆ ಮಾತ್ರ ಸಿಗುತ್ತದೆ, ಕೆಲವರಿಗೆ ಸಿಗಲ್ಲ, ಕಾಯಬೇಕಷ್ಟೆ ಎಂದು ಮಾರ್ಮಿಕವಾಗಿ ನುಡಿದರು.ನೀವು ಮುಖ್ಯಮಂತ್ರಿ ಆಕಾಂಕ್ಷಿಯಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಪಕ್ಷದ ವೇದಿಕೆಯಲ್ಲಿ ಎಲ್ಲವನ್ನೂ ಹೇಳ್ತೀವಿ, ಆ ಚರ್ಚೆ ಈಗ ಬರಲ್ಲ. ಮುಂದೆ ಚುನಾವಣೆ ಆಗಲಿ, ಆಗ ಚರ್ಚೆ ಮಾಡೋಣ. 2028ಕ್ಕೆ ನಮ್ಮದು, ಈಗ ನಮ್ಮದೇನಿಲ್ಲ ಎಂದು ಸ್ಪಷ್ಟಪಡಿಸಿದರು. ಡಿಕೆಶಿ ಪರ ಸ್ವಾಮೀಜಿಗಳ ಬ್ಯಾಟಿಂಗ್‌ ಕುರಿತು ಪ್ರತಿಕ್ರಿಯಿಸಿ, ಸಮುದಾಯದ ಪರವಾಗಿ ಸ್ವಾಮೀಜಿ ಮಾತನಾಡೋದು ಹೊಸದಲ್ಲ. ಈ ಹಿಂದೆ ಕೂಡ ಸ್ವಾಮೀಜಿಗಳು ಆ ಸಮುದಾಯದ ಪರವಾಗಿ ಹೇಳಿಕೆ ನೀಡಿದ್ದಾರೆ ಎಂದರು.ಸಿಎಂ ಹುದ್ದೆ ಎರಡು ದಿನದಲ್ಲಿ ಬಗೆಹರಿಯುತ್ತೆ; ಶಿವಾನಂದ:ಮುಖ್ಯಮಂತ್ರಿ ಹುದ್ದೆ ಬಗ್ಗೆ ನಮ್ಮ ನಾಯಕರು ಒಮ್ಮತದಿಂದ ರಾಜಕೀಯ ನಿರ್ಣಯ ಮಾಡುತ್ತಾರೆ. ಇನ್ನು ಎರಡು ದಿನಗಳಲ್ಲಿ ಎಲ್ಲವೂ ಬಗೆಹರಿಯುತ್ತದೆ ಎಂಬ ವಿಶ್ವಾಸವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು. ಹಾವೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಎಲ್ಲರೂ ದುಡಿದ್ದಾರೆ. ಎಲ್ಲರಿಗೂ ಸಾಮರ್ಥ್ಯವಿದೆ. ಪರಮೇಶ್ವರ ಅವರಿಗೂ ಆದ್ಯತೆಯಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಈ ಹಿಂದೆ ಮುಖ್ಯಮಂತ್ರಿ ಆಗಬೇಕಿತ್ತು. ಆದರೆ ತಪ್ಪಿಹೋಗಿದೆ. ಎಚ್.ಡಿ.ದೇವೇಗೌಡ ಅವರು ಆಸೆ ಪಟ್ಟಿರಲಿಲ್ಲ, ಆದರೆ ಪ್ರಧಾನಮಂತ್ರಿಯಾದರು. ಡಿ.ಕೆ.ಶಿವಕುಮಾರ ಅವರಿಗೂ ಅಧಿಕಾರ ಸಿಗಲಿ ಎಂದು ನೀವು ಹಾರೈಸಿ, ನಾನು ಹಾರೈಸ್ತೀನಿ. ಸ್ವಾಮೀಜಿಗಳು ಆಶೀರ್ವಾದ ಮಾಡಬೇಕು ಆದರೆ ರಾಜಕಾರಣದಿಂದ ದೂರ ಇದ್ದರೆ ಬಹಳ ಒಳ್ಳೆಯದು ಎಂದರು.