ಬರದ ಗಾಯಕ್ಕೆ ವಿದ್ಯುತ್ ಕ್ಷಾಮದ ಬರೆ

| Published : Oct 18 2023, 01:00 AM IST

ಸಾರಾಂಶ

ಏಳು ಗಂಟೆ ಕೊಡುವಾಗಲೇ ಒಣಗುತ್ತಿರುವ ಬೆಳೆಗಳನ್ನು ಐದು ಗಂಟೆಯಲ್ಲಿ ಕಾಪಾಡಿಕೊಳ್ಳುವುದು ಹೇಗೆ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಕಡಿತ, ರೈತ ಸಮುದಾಯ ತಲ್ಲಣ ಮಧ್ಯರಾತ್ರಿ ವಿದ್ಯುತ್ ಪೂರೈಕೆಗೆ ಆಕ್ರೋಶ

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಬರದ ಗಾಯಕ್ಕೆ ವಿದ್ಯುತ್ ಕ್ಷಾಮ ಬರೆ ಎಳೆದಿದೆ. ಇದರಿಂದ ರೈತ ಸಮುದಾಯ ಕಣ್ಣೀರು ಹಾಕುವಂತಾಗಿದೆ. ಏಳು ಗಂಟೆಯ ಬದಲಿಗೆ ಕೇವಲ ಐದು ಗಂಟೆ ವಿದ್ಯುತ್ ಪೂರೈಕೆ ಮಾಡುತ್ತಿರುವುದರಿಂದ ಬೆಳೆಗಳು ಒಣಗಿ ಹೋಗುತ್ತಿವೆ ಎನ್ನುವುದು ರೈತರ ಕೊರಗು.

ಈಗಾಗಲೇ ಕಳೆದ 10 ವರ್ಷಗಳಲ್ಲಿಯೇ ಎದುರಾಗಿರುವ ಭೀಕರ ಬರದಿಂದಲೇ ನಮಗೆ ದಿಕ್ಕು ತೋಚದಂತಾಗಿದೆ. ಈಗ ಹೇಗೋ ಪಂಪ್‌ಸೆಟ್ ಆಧರಿತ ನೀರಾವರಿ ಪ್ರದೇಶದಲ್ಲಿನ ಬೆಳೆಯಿಂದಾದರೂ ಬದುಕು ಕಟ್ಟಿಕೊಳ್ಳಬಹುದು ಎನ್ನುವಾಗಲೇ ರಾಜ್ಯ ಸರ್ಕಾರ ರೈತರ ಪಂಪ್‌ಸೆಟ್‌ಗೆ ಕೇವಲ ಐದು ಗಂಟೆ ವಿದ್ಯುತ್ ಎನ್ನುವುದು ರೈತ ಸಮುದಾಯಕ್ಕೆ ಬರಸಿಡಿಲಾಗಿದೆ.

ತಾಲೂಕಿನ ಹ್ಯಾಟಿ ಗ್ರಾಮದ ಯಂಕಪ್ಪ ರೊಡ್ಡರ, ತಮ್ಮ ಎರಡು ಎಕರೆ ಹೊಲದಲ್ಲಿ ಹಾಕಿರುವ ಮೆಕ್ಕೆಜೋಳ ಬೆಳೆ ತೆನೆ ಕಟ್ಟುವ ವೇಳೆ ಮಿತಿ ಮೀರಿದ ಲೋಡ್‌ ಶೆಡ್ಡಿಂಗ್‌ನಿಂದ ಒಣಗುತ್ತಿದೆ. ಬರದಿಂದ ಬೋರ್‌ವೆಲ್‌ನಲ್ಲಿ ನೀರು ಕ್ಷೀಣಿಸಿದೆ. ಕಡಿಮೆಯಾದ ನೀರನ್ನು ಈಗ ಇರುವ ವಿದ್ಯುತ್‌ನಲ್ಲಿ ಹೊಲಕ್ಕೆ ಹಾಯಿಸಲು ಆಗುತ್ತಿಲ್ಲ. ಹೀಗಾಗಿ, ತೀವ್ರ ಸಮಸ್ಯೆಯಾಗಿದೆ ಎಂದು ಅಲವತ್ತುಕೊಂಡರು.

ಮೆಳ್ಳಿಕೇರಿ ಗ್ರಾಮದ ರಾಮಣ್ಣ ಮಾಳಗಿ ಎಂಟು ಎಕರೆ ಭೂಮಿಯನ್ನು ಲಾವಣಿ (ಗುತ್ತಿಗೆ) ಆಧಾರದಲ್ಲಿ ಮಾಡುತ್ತಿದ್ದಾರೆ. ಆದರೆ, ಈಗ ವಿದ್ಯುತ್ ಅಭಾವದಿಂದ ಹೊಲಕ್ಕೆ ನೀರು ಕಟ್ಟಲು ಆಗುತ್ತಿಲ್ಲ. ಪರಿಣಾಮ ಬೆಳೆ ಸಂಪೂರ್ಣ ಒಣಗಲಾರಂಭಿಸಿದೆ. ಮಾಡಿದ ಖರ್ಚು ಬಾರದಂತಾಗಿದೆ.

ಇವು ಕೇವಲ ಉದಾಹರಣೆ ಅಷ್ಟೇ. ಹಾಕಿದ ದಾಳಿಂಬೆ, ಪಪ್ಪಾಯಿ, ಹತ್ತಿ, ಮೆಣಸಿನಕಾಯಿ ಸೇರಿದಂತೆ ಹತ್ತಾರು ಬೆಳೆಗಳು ವಿದ್ಯುತ್ ಕ್ಷಾಮದಿಂದ ನೀರಿಲ್ಲದೇ ಬಾಡಿ ಬೆಂಡಾಗಿವೆ. ಮಾಡಿದ ಖರ್ಚು ಬಾರದಂತಾಗಿದೆ. ಹಾಗೆ ಹೊಲದಲ್ಲಿ ಸುತ್ತಾಡಿದರೆ ಸಾಕು ರೈತರು ತಮ್ಮ ಗೋಳು ತೋಡಿಕೊಳ್ಳುತ್ತಾರೆ.

ಇದೊಂದು ರೀತಿಯಲ್ಲಿ ಬರದ ಗಾಯಕ್ಕೆ ವಿದ್ಯುತ್ ಕ್ಷಾಮದ ಬರೆ ಎಳೆದಂತಾಗಿದೆ.

ರೈತರು ತಮ್ಮ ಬೆಳೆ ಕಾಪಾಡಿಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವುದು, ಬೆಳೆಗೆ ಸಾಲು ಬಿಟ್ಟು ಸಾಲು ನೀರು ಕಟ್ಟುವ ಮೂಲಕ ಕಾಪಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇದೆಲ್ಲವೂ ಏಳುಗಂಟೆಯ ವಿದ್ಯುತ್ ಪೂರೈಕೆಯಲ್ಲಿ ಹೇಗೋ ನಡೆಯುತ್ತಿತ್ತು. ಆದರೆ, ಈಗ ಕೇವಲ ಐದು ಗಂಟೆಯಲ್ಲಿ ಇದ್ಯಾವುದೂ ಸಾಧ್ಯವೇ ಇಲ್ಲ. ನಮ್ಮನ್ನು ದೇವರೆ ಬಂದರೂ ಕಾಪಾಡಲು ಸಾಧ್ಯವಿಲ್ಲ ಎಂದು ನೊಂದು ನುಡಿಯುತ್ತಾರೆ ರೈತ ಭೀಮರಡ್ಡಿ ಹ್ಯಾಟಿ.

ತಿಗರಿ ಗ್ರಾಮದಲ್ಲಿ ಜಂಬಣ್ಣ ಅವರ ಹೊಲದಲ್ಲಿ ಹಾಕಿದ ಬೆಳೆಗಳು ಒಣಗುತ್ತಿವೆ. ಪಂಪ್‌ಸೆಟ್ ಆಧಾರಿತ ಹೊಲಗಳಲ್ಲಿ ಎಲ್ಲಿಯೇ ಹೋದರೂ ಈಗ ರಾಜ್ಯ ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಾವೇನು ಪಾಪ ಮಾಡಿದ್ದೇವೆ?: ಚಿತ್ರಮಂದಿರ, ಕಾರ್ಖಾನೆ, ನಗರ ಪ್ರದೇಶದಲ್ಲಿ ಹಗಲು ವೇಳೆಯಲ್ಲಿ ವಿದ್ಯುತ್ ಪೂರೈಕೆ ಮಾಡುವ ರಾಜ್ಯ ಸರ್ಕಾರ ರೈತರ ಪಂಪ್‌ಸೆಟ್‌ಗಳಿಗೆ ಮಾತ್ರ ಮಧ್ಯರಾತ್ರಿ ವಿದ್ಯುತ್ ಪೂರೈಕೆ ಮಾಡಿದರೆ ಹೇಗೆ? ನಾವೇನು ಪಾಪ ಮಾಡಿದ್ದೇವೆ? ಎಂದು ಮದ್ದಾಬಳ್ಳಿಯ ರೈತ ಯಲ್ಲಪ್ಪ ಪ್ರಶ್ನಿಸುತ್ತಾರೆ. ಕೇವಲ 5 ಗಂಟೆಯ ವಿದ್ಯುತ್ ಪೂರೈಕೆಯಿಂದ ರೈತರು ಬೆಳೆ ಕಾಪಾಡಿಕೊಳ್ಳುವುದು ಕಷ್ಟಸಾಧ್ಯ. ಸರ್ಕಾರ ಕನಿಷ್ಠ ಏಳು ಗಂಟೆಯಾದರೂ ವಿದ್ಯುತ್ ಪೂರೈಕೆ ಮಾಡಬೇಕು ಎನ್ನುತ್ತಾರೆ ರೈತ ಸಿದ್ದಪ್ಪ ಯಡ್ರಮ್ಮನಳ್ಳಿ.