ಸಾರಾಂಶ
ಪ್ರವಾಹದಿಂದ ಮುಳುಗಡೆ ಆಗಲಿದ್ದ ಟಿಸಿಯ ವಿದ್ಯುತ್ ಕಟ್ ಮಾಡಿ ಲೈನ್‌ಮೆನ್ ಸಾಹಸ ಮೆರೆದು ಅನಾಹುತ ತಪ್ಪಿಸಿದ ಘಟನೆ ಕಾಗವಾಡ ತಾಲೂಕಿನ ಜುಗೂಳ ಗ್ರಾಮದ ನದಿ ತೀರದಲ್ಲಿ ಸಂಭವಿಸಿದೆ.
ಕನ್ನಡಪ್ರಭ ವಾರ್ತೆ ಕಾಗವಾಡ
ಪ್ರವಾಹದಿಂದ ಮುಳುಗಡೆ ಆಗಲಿದ್ದ ಟಿಸಿಯ ವಿದ್ಯುತ್ ಕಟ್ ಮಾಡಿ ಲೈನ್‌ಮೆನ್ ಸಾಹಸ ಮೆರೆದು ಅನಾಹುತ ತಪ್ಪಿಸಿದ ಘಟನೆ ಕಾಗವಾಡ ತಾಲೂಕಿನ ಜುಗೂಳ ಗ್ರಾಮದ ನದಿ ತೀರದಲ್ಲಿ ಸಂಭವಿಸಿದೆ.ಆನಂದ ಹೆರವಾಡಿ ಕರ್ತವ್ಯ ನಿಷ್ಠೆ ಮೆರೆದ ಹೆಸ್ಕಾಂ ಸಿಬ್ಬಂದಿ. ಜುಗೂಳ ಗ್ರಾಮದಲ್ಲಿ ವಿದ್ಯುತ್ ಟಿಸಿವರೆಗೆ ನದಿಯ ನೀರು ನುಗ್ಗತೊಡಗಿತ್ತು. ನೀರಿನಿಂದ ಟಿಸಿ ಹಾಳಾಗಿ ವಿದ್ಯುತ್ ಅವಘಡ ಸಂಭವಿಸುವ ಭೀತಿ ಎದುರಾಗಿತ್ತು. ಅಲ್ಲದೆ, ಗ್ರಾಮಕ್ಕೆ ವಿದ್ಯುತ್ ಸಮಸ್ಯೆ ಎದುರಾಗುವ ಸಾಧ್ಯತೆ ಇತ್ತು. ಇದನ್ನು ಗಮನಿಸಿದ ಲೈನ್‌ಮೆನ್ ತಡಮಾಡದೇ ಅಪಾಯ ಲೆಕ್ಕಿಸದೇ ನೀರಿಗೆ ಇಳಿದು ಕಂಬವೇರಿ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದಾರೆ. ಇದರಿಂದ ದೊಡ್ಡ ಅನಾಹುತ ತಪ್ಪಿದೆ. ಹೆಸ್ಕಾಂ ಸಿಬ್ಬಂದಿಯ ಈ ಸಾಹಸ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಜೀವದ ಹಂಗು ತೊರೆದು ಸಾಹಸ ಮಾಡಿದ ಆನಂದ ಹೆರವಾಡಿ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಸನ್ಮಾನ: ಕರ್ತವ್ಯ ನಿಷ್ಠೆ ಮೆರೆದ ಆನಂದ ಹೆರವಾಡೆಗೆ ಕಾಗವಾಡ ಶಾಸಕ ರಾಜು ಕಾಗೆ, ಪಿಕೆಪಿಎಸ್ ಅಧ್ಯಕ್ಷ ಅಣ್ಣಾಸಾಹೇಬ ಪಾಟೀಲ, ಗ್ರಾಪಂ ಅಧ್ಯಕ್ಷ ಕಾಕಾ ಪಾಟೀಲ, ರವೀಂದ್ರ ವ್ಹಾಂಟೆ ಸೇರಿದಂತೆ ಅನೇಕರು ಸನ್ಮಾನಿಸಿದರು.